Friday, April 26, 2024

ಸತ್ಯ | ನ್ಯಾಯ |ಧರ್ಮ

ಚಿಕ್ಕಮಗಳೂರು | ಹುಲಿಯುಗುರಿನ ವ್ಯವಹಾರ: ಇಬ್ಬರ ಬಂಧನ

ಚಿಕ್ಕಮಗಳೂರು: ಅತ್ತ ಬಿಗ್‌ ಬಾಸ್‌ ಮನೆಯಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವರ್ತೂರ್‌ ಸಂತೋಷ್ ಬಂಧನ ಆಗಿ ದಿನವೊಂದು ಕಳೆಯುತ್ತಿರುವಾಗಲೇ ಇತ್ತ ಚಿಕ್ಕಮಗಳೂರಿನಲ್ಲಿ ಇನ್ನಿಬ್ಬರನ್ನು ಹುಲಿಯುಗುರು ಖರೀದಿ ಆರೋಪದ ಅಡಿ ಬಂಧಿಸಲಾಗಿದೆ.

ಬಂಧಿತರನ್ನು ಭಾರತಿ ಬೈಲು ಬಳಿಯ ಕುಂಡ್ರ ಗ್ರಾಮದ ನಿವಾಸಿಯಾದ ಸತೀಶ್ ಹಾಗೂ ಹಲ್ಲೇಮನೆ ಕುಂದೂರು ನಿವಾಸಿ ಕೆ.ಎಸ್.ರಂಜಿತ್ ಎಂದು ಗುರುತಿಸಲಾಗಿದೆ.

ಅವರಿಗೆ ಹುಲಿ ಉಗುರು ಮಾರುತ್ತಿದ್ದ ಆರೋಪಿಗಳು ಸದ್ಯ ತಪ್ಪಿಸಿಕೊಂಡಿದ್ದು, ಅವರ ಬಂಧನಕ್ಕಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಮೂಡಿಗೆರೆ ತಾಲೂಕಿನ ಕುಂಡ್ರ, ಹಲ್ಲೇಮನೆ ಗ್ರಾಮದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಸ್ಥಳದಿಂದ ಒಂದು ಹುಲಿಯುಗುರು ಇರುವ ಡಾಲರ್‌ ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಈ ನಡುವೆ ಬಿಗ್‌ ಬಾಸ್‌ ಸ್ಪರ್ಧಿ ಸಂತೋಷ್‌ ಅವರನ್ನು ಮುಂದಿನ ವಿಚಾರಣೆಗಾಗಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 

ವಿಚಾರಣೆ ವೇಳೆ ವರ್ತೂರು ಸಂತೋಷ ತನ್ನ ಬಳಿಯಿರುವುದು ನಿಜವಾದ ಹುಲಿಯ ಉಗುರಾಗಿದ್ದು ತಾನು ಅದನ್ನು ಒಬ್ಬ ವ್ಯಕ್ತಿಯಿಂದ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನುವುದು ಸುದ್ದಿಯಾಗುತ್ತಿದೆ. ಈ ನಡುವೆ ಈ ಉಗುರನ್ನು ಮಾರಿರಬಹುದಾದ ಆರೋಪಿಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಬಂಧಿತನಾಗಿರುವ ಸಂತೋಷ್ ಮೇಲಿನ ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. 10,000ರಿಂದ 25,000ದವರೆಗೆ ದಂಡ ತೆರಬೇಕಾಗಿಯೂ ಬರಬಹುದು.

Related Articles

ಇತ್ತೀಚಿನ ಸುದ್ದಿಗಳು