Monday, April 29, 2024

ಸತ್ಯ | ನ್ಯಾಯ |ಧರ್ಮ

ಕೋಲಾರ | ಕಾಂಗ್ರೆಸ್‌ ಮುಖಂಡನ ಹತ್ಯೆ: ಆರೋಪಿಗಳತ್ತ ಗುಂಡು ಹಾರಿಸಿದ ಪೊಲೀಸರು

ಕೋಲಾರ: ನಿನ್ನೆ ಕೋಲಾರದಲ್ಲಿ ನಡೆದ ಕಾಂಗ್ರೆಸ್‌ ನಾಯಕ ಎಮ್‌ ಶ್ರೀನಿವಾಸ್‌ ಅವರ ಹತ್ಯೆ ಆರೋಪಿಗಳ ಪೈಕಿ ಮೂರು ಜನರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅವರು ನಿನ್ನೆ ಶ್ರೀನಿವಾಸಪುರದ ಹೊರವಲಯದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಬಾರ್‌ ಒಂದರ ಕೆಲಸ ನೋಡಲೆಂದು ಹೋಗಿದ್ದ ಸಂದರ್ಭದಲ್ಲಿ ಅವರ ಆರು ಜನ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ನಂತರ ಅವರನ್ನು ಆರ್‌ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್‌ ಮರಣ ಹೊಂದಿದ್ದರು.

ಘಟನೆಯ ಕುರಿತು ಸ್ಥಳದಲ್ಲಿದ್ದ ಅಮರ್‌ ಎನ್ನುವವರು ಮಾಹಿತಿ ನೀಡಿದ್ದು ಬಾರ್‌ ಕೆಲಸದ ಪ್ರಗತಿ ನೋಡಿಕೊಂಡು ತೋಟದ ಮನೆಗೆ ಬಂದಿದ್ದೆವು. ಅಲ್ಲಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ʼಅಂಕಲ್‌ ಚೆನ್ನಾಗಿದ್ದೀರಾʼ ಎಂದು ಶೇಕ್‌ ಹ್ಯಾಂಡ್‌ ಕೊಡುವ ನೆಪದಲ್ಲಿ ಅವರ ಮೇಲೆ ತಲ್ವಾರುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವೇಣುಗೋಪಾಲ್‌, ಮನೀಂದ್ರ ಮತ್ತು ಸಂತೋಷ್‌ ಎನ್ನುವಾತನನ್ನು ಬಂಧಿಸಲಾಗಿದೆ. ಬಂಧಿಸಿ ಕರೆ ತರುವ ವೇಳೆ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ ಹಾಗೂ ನಾಗೇಶ್‌ ಎನ್ನುವವರ ಮೇಲೆ ಹಲ್ಲೆಗೆ ಯತ್ನಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ವೆಂಕಟೇಶ್‌ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ.

ಮೃತ ಎಂ ಶ್ರೀನಿವಾಸ್ ಅಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಅವರು ಶ್ರೀನಿವಾಸಪುರದ ಕಾಂಗ್ರೆಸ್ ನಾಯಕರಾಗಿದ್ದರು ಮತ್ತು ಮಾಜಿ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ನಿಕಟವರ್ತಿಯಾಗಿದ್ದರು.

ರಮೇಶ್ ಕುಮಾರ್ ಅವರು ಕೋಲಾರದ ಆಸ್ಪತ್ರೆಗೆ ಭೇಟಿ ನೀಡಿ ಶ್ರೀನಿವಾಸ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಶ್ರೀನಿವಾಸಪುರ ಮಾಜಿ ಶಾಸಕರಾದ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಪ್ರಕರಣದ ಪ್ರಗತಿಯನ್ನು ವಿಚಾರಿಸಿದರು.

Related Articles

ಇತ್ತೀಚಿನ ಸುದ್ದಿಗಳು