Saturday, April 27, 2024

ಸತ್ಯ | ನ್ಯಾಯ |ಧರ್ಮ

ಮಹಾನಗರವೊಂದರ ಜೀವನ ಕಥನ

ದಶಕವೊಂದರಲ್ಲಿ ಮಹಾನಗರಿಗಳು ಬೆಳೆಯುವ ವೇಗವು ಕಮ್ಮಿಯೇನಲ್ಲ. ನಮ್ಮ ದೇಶದ ಬಹಳಷ್ಟು ಮಹಾನಗರಿಗಳು ನಗರೀಕರಣದ ಈ ಗರಿಷ್ಠಮಿತಿಯನ್ನು ತಲುಪಿದ್ದೂ ಆಗಿ, ಸುತ್ತಲಿನ ಪ್ರದೇಶಗಳನ್ನು ನಿಧಾನವಾಗಿ ತಮ್ಮೊಳಗೆ ಆವಾಹಿಸಿಕೊಳ್ಳುತ್ತಿವೆ. ಗದ್ದೆಗಳಿದ್ದ ಜಾಗಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತುತ್ತವೆ. ಮೇಲೇರಲು ಜಾಗವಿಲ್ಲ ಎಂದಾದಾಗ ಇದ್ದಲ್ಲೇ ಅಗೆದು ಸಬ್-ವೇ ಗಳು ಸೃಷ್ಟಿಯಾಗುತ್ತವೆ – ಪ್ರಸಾದ್‌ ನಾಯ್ಕ್‌, ದೆಹಲಿ

“ಮಹಾನಗರಗಳು ಮಲಗುವುದಿಲ್ಲ!

ಈ ಮಾತನ್ನು ಮೊದಲ ಬಾರಿ ಕೇಳಿದಾಗ ನಾನು ಮಹಾನಗರಗಳನ್ನು ಕಂಡಿರಲಿಲ್ಲ. ಆದರೆ ಆ ಹೇಳಿಕೆಯಲ್ಲಿ ಅದೆಂಥದ್ದೋ ಬಗೆಯ ಒಂದು ಥ್ರಿಲ್ ಇತ್ತು. ಅಸಲಿಗೆ ಈ ಮಾತನ್ನು ಮೊದಲ ಬಾರಿಗೆ ಯಾರು ಹೇಳಿದ್ದು, ಎಲ್ಲಿ ಓದಿದ್ದು, ಎಲ್ಲಿ ಕೇಳಿದ್ದು ಎಂಬುದೂ ಕೂಡ ಸರಿಯಾಗಿ ನೆನಪಿಲ್ಲ. ಆದರೆ ಸುಮ್ಮನೆ ಕುತೂಹಲಕ್ಕೆಂಬಂತೆ ಇದರ ಬೆನ್ನಟ್ಟಿ ಹೋದಾಗ ವಿಶ್ವವಿಖ್ಯಾತ ಅಮೆರಿಕನ್ ಗಾಯಕ ಫ್ರಾಂಕ್ ಸಿನಾತ್ರಾ ಥಟ್ಟನೆ ಎದುರಾಗಿ ಬಿಟ್ಟಿದ್ದ. “ಯಾವತ್ತೂ ನಿದ್ರಿಸದ ಶಹರವೊಂದರಲ್ಲಿ ನನಗೆ ಏಳುವ ಆಸೆ…”, ಅಂತೆಲ್ಲ ನ್ಯೂಯಾರ್ಕ್ ನಗರದ ಬಗ್ಗೆ ಒಂದು ಚಂದದ ಹಾಡನ್ನೇ ಬರೆದಿದ್ದ ಈ ಸಿನಾತ್ರಾ.

ಈ ಮಾತು ಹಲವು ವರ್ಷಗಳ ಕಾಲ ನನ್ನ ಮಟ್ಟಿಗೆ ಸತ್ಯವೂ ಆಗಿತ್ತು. ಮುಂಬೈ, ದೆಹಲಿ, ಗುರ್ಗಾಂವ್ ನಂತಹ ಮಹಾನಗರಗಳು ನಿದ್ರಿಸಿದ್ದನ್ನು ನನ್ನಂಥವರು ನೋಡಿಯೇ ಇರಲಿಲ್ಲ. ದಿಲ್ಲಿಯಂತಹ ದಿಲ್ಲಿಯಲ್ಲಿ ನಾನು ಅಪರಾತ್ರಿಗಳಲ್ಲಿ ಅಲೆದಾಡುತ್ತಿದ್ದ ದಿನಗಳಿಗೆ ಲೆಕ್ಕವೇ ಇಲ್ಲ. ಉದ್ಯೋಗ ನಿಮಿತ್ತದ ಪ್ರವಾಸಗಳ ಅವಧಿಯಲ್ಲಂತೂ ಇದು ಸರ್ವೇಸಾಮಾನ್ಯವಾಗಿತ್ತು. ಆದರೆ ಆ ಅವಧಿಯಲ್ಲೂ ತಕ್ಕಮಟ್ಟಿನ ಜನಸಂದಣಿಯನ್ನು ನಾನು ದಿಲ್ಲಿಯ ಬೀದಿಗಳಲ್ಲಿ ನೋಡುತ್ತಿದ್ದೆ. ವಾಹನಗಳು ಆಗೊಮ್ಮೆ ಈಗೊಮ್ಮೆ ಓಡಾಡುತ್ತಾ ಕತ್ತಲಿನ ಏಕತಾನತೆಯನ್ನು ಒದ್ದೋಡಿಸುತ್ತಿದ್ದವು. ಅಗಲ ರಸ್ತೆಗಳಿಗೆ ಈಗಾಗಲೇ ಬೆಳಕು ಚೆಲ್ಲುತ್ತಿರುವ ಸುಂದರ ಬೀದಿ ದೀಪಗಳಿಗೆ ಜೊತೆ ನೀಡುತ್ತಿದ್ದವು. ಇನ್ನು ಈ ನೈಟ್ ಲೈಫ್ ಎಂಬುದು ಶಹರದ ಮೆರುಗನ್ನಷ್ಟೇ ಹೆಚ್ಚಿಸುತ್ತಿರಲಿಲ್ಲ. ತನ್ನೊಳಗಿರುವ ಹಲವು ಸೋಜಿಗದ ಅಂಶಗಳಿಂದ ಮಹಾನಗರಕ್ಕೊಂದು ವಿಚಿತ್ರ ನಿಗೂಢತೆಯನ್ನೂ ತರುತ್ತಿದ್ದವು. ಇವುಗಳನ್ನೆಲ್ಲಾ ಆಗ ಬೆರಗಿನಿಂದ ನೋಡುತ್ತಿದ್ದರೆ, ಅರೇ ಹೌದಲ್ಲ… ಈ ಮಹಾನಗರಗಳೆಂಬ ಮುಗಿಯದ ಮಹಾಭಾರತಕ್ಕೆ ಪೂರ್ಣವಿರಾಮವಾದರೂ ಎಲ್ಲಿ ಅಂತೆಲ್ಲ ಅನ್ನಿಸೋದು.

ಆದರೆ, ಈ ಶತಮಾನದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದು ಇವೆಲ್ಲವನ್ನು ಅಡಿಮೇಲು ಮಾಡಿಹಾಕಿತ್ತು. ದೇಶದಾದ್ಯಂತ ನಮ್ಮ ಮಹಾನಗರಗಳು ಮೊಟ್ಟ ಮೊದಲ ಬಾರಿಗೆ ಮಕಾಡೆ ಮಲಗಿದ್ದವು. ಇದೇನು ಕರ್ಫ್ಯೂ ಹೇರಿಕೆಯೋ ಅಥವಾ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವಿದೆಯೋ ಎಂದು ಅಚ್ಚರಿಪಡುವಂತೆ, ಎಂದಿನ ಜನನಿರತ ಬೀದಿಗಳು ಅಚಾನಕ್ಕಾಗಿ ಹಾಡಹಗಲೇ ನಿರ್ಜನವಾಗಿ ಬಿಟ್ಟವು. ಸಾಮಾನ್ಯವಾಗಿ ದೇಶದ ಎಲ್ಲಾ ಮೂಲೆಗಳಿಂದ ಜನಸಾಮಾನ್ಯರು ಮಹಾನಗರಗಳತ್ತ ದಾಪುಗಾಲಿಕ್ಕಿ ಬರುತ್ತಿದ್ದರೆ, ಈ ಬಾರಿ ಆಟವು ಉಲ್ಟಾಪಲ್ಟಾ ಆಗಿಹೋಗಿತ್ತು. ಅದು ಬೇರೇನೂ ಇಲ್ಲ. ಕಾಡ್ಗಿಚ್ಚಿನ ವೇಗದಲ್ಲಿ ಎಲ್ಲೆಡೆ ವ್ಯಾಪಿಸಿ ಜಗತ್ತನ್ನೇ ನಡುಗಿಸಿಬಿಟ್ಟ ಕೋವಿಡ್.

ಕಳೆದೊಂದು ದಶಕದ ಅವಧಿಯಲ್ಲಿ ಮಹಾನಗರಗಳ ಬದುಕಿನ ಹಾದಿಯನ್ನು ಗಮನಿಸುತ್ತಾ ಬಂದರೆ ಖಂಡಿತವಾಗಿಯೂ ಕೋವಿಡ್ ಒಂದು ಪ್ರಮುಖ ಮೈಲುಗಲ್ಲಾಗಿ ನಿಲ್ಲುತ್ತದೆ. ಇದರಂತೆ ಈ ಅವಧಿಯಲ್ಲಿ ನಡೆದ ಬೆಳವಣಿಗೆಗಳನ್ನು “ಕೋವಿಡ್ ಪೂರ್ವದಲ್ಲಿ” ಮತ್ತು “ಕೋವಿಡ್ ನಂತರದಲ್ಲಿ” ಎಂದು ಗೆರೆಯೆಳೆದು ವಿಂಗಡಿಸಬಹುದು. ಸಾವಿರಾರು ಕಾರ್ಮಿಕರ ನಿಲ್ಲದ ನಡಿಗೆ, ಪ್ರೀತಿಪಾತ್ರರು ಕೋವಿಡ್ ಗೆ ಬಲಿಯಾದಾಗ ಅಂತಿಮ ದರ್ಶನವನ್ನೂ ಪಡೆಯಲಾಗದ ದೌರ್ಭಾಗ್ಯ… ಹೀಗೆ ಒಂದೆರಡಲ್ಲ. ರಾಷ್ಟ್ರ ರಾಜಧಾನಿಯಲ್ಲಿ ವರ್ಕ್ ಫ್ರಂ ಹೋಮ್ ಆಯ್ಕೆಗಳಿರದಿದ್ದ ನಮ್ಮಂಥವರು ಈ ದಿನಗಳಲ್ಲೇ ನಾಲ್ಕು ಜನ್ಮಗಳಿಗಾಗುವಷ್ಟು ನೋಡಿದೆವು. ಮಹಾನಗರವಂತೂ ಏಕಾಏಕಿ ತಣ್ಣಗಾಗಿಬಿಟ್ಟು ತನ್ನ ಗುರುತನ್ನೇ ಕಳೆದುಕೊಂಡು ಮಂಕಾಗಿಬಿಟ್ಟಿತ್ತು.

ಹಾಗಂತ ಕೋವಿಡ್ ಭೂತವು ಕಾಡಿದ್ದು ನಮ್ಮ ಮಹಾನಗರಗಳನ್ನಷ್ಟೇ ಏನು? ಖಂಡಿತ ಅಲ್ಲ. ಆದರೆ ಮಹಾನಗರಗಳು ಕೊಂಚ ನಡುಗಿತೆಂದರೆ ಅದರ ಕಂಪನಗಳು ಬೇರೆಡೆಯಲ್ಲೂ ಸಾಕಷ್ಟು ಸದ್ದು ಮಾಡುತ್ತವೆ. ಏಕೆಂದರೆ ಮಹಾನಗರಗಳು ಆಯಾ ರಾಜ್ಯಗಳ ರೆವೆನ್ಯೂ ಕೇಂದ್ರಗಳೂ ಕೂಡ ಹೌದು. ಹರಿಯಾಣ ರಾಜ್ಯದ ಅಂದಾಜು 65% ರಷ್ಟು ಟ್ಯಾಕ್ಸ್ ರೆವೆನ್ಯೂ ಗುರುಗ್ರಾಮ ಒಂದರಿಂದಲೇ ಬರುತ್ತದೆ ಎಂದು ಕೇಂದ್ರ ಮಂತ್ರಿಯಾದ ಇಂದರ್ಜಿತ್ ಸಿಂಗ್ ಕಳೆದ ಬಾರಿ ಹೇಳಿಕೆಯನ್ನು ನೀಡಿದ್ದರು. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ಇದು ಸುಮಾರು 48,000 ಕೋಟಿಯಷ್ಟಾಗುತ್ತದೆ. ಆದರೆ ಕೋವಿಡ್ ಮಹಾಮ್ಮಾರಿಯು ಕನ್ವೆನ್ಷನಲ್ ಶೈಲಿಯ ಉದ್ಯೋಗಗಳಿಂದ ಹಿಡಿದು ಸ್ಟಾರ್ಟ್-ಅಪ್ ಗಳವರೆಗೂ ರಾಕ್ಷಸ ಹೊಡೆತವನ್ನು ನೀಡಿದಾಗ ಗುರುಗ್ರಾಮದಂತಹ ಮಹಾನಗರಗಳೂ ದಂಗುಬಡಿದಿದ್ದು ಸುಳ್ಳಲ್ಲ. ಹೀಗೆ ಭಾರತದ ಶಾಂಘೈ, ಮಿಲೇನಿಯಮ್ ಸಿಟಿ… ಅಂತೆಲ್ಲ ಹೆಮ್ಮೆಯಿಂದ ಕರೆಯಲ್ಪಡುವ ಗುರುಗ್ರಾಮವೂ ಸಹಜವಾಗಿ ದೇಶದ ಉಳಿದ ಮಹಾನಗರಗಳಂತೆ ಕೆಲ ತಿಂಗಳುಗಳ ಕಾಲ ಅಕ್ಷರಶಃ ಸ್ತಬ್ಧವಾಗಿಬಿಟ್ಟಿತ್ತು.

ಇವಿಷ್ಟರ ಹೊರತಾಗಿಯೂ ಶಹರವೊಂದು ಈ ಸಂಕಷ್ಟದ ಹಂತಗಳನ್ನು ದಾಟಿ, ಮೈಕೊಡವಿಕೊಂಡು ಅದ್ಯಾವ ಪರಿ ಎದ್ದೇಳುತ್ತದೆ ಎನ್ನುವುದೇ ಒಂದು ಕುತೂಹಲಕಾರಿ ಸಂಗತಿ. ಈ ಬಗ್ಗೆ ಪ್ರಸ್ತಾಪಿಸುವಾಗಲೆಲ್ಲಾ ನಮಗೆ ಥಟ್ಟನೆ ನೆನಪಾಗುವುದು ಮುಂಬೈ. ಬಹುಷಃ ಈ ದೇಶದಲ್ಲಿ ಮುಂಬೈ ತಾಳಿಕೊಂಡಷ್ಟು ಭಯಾನಕ ಆಘಾತಗಳನ್ನು ಬೇರ್ಯಾವ ಮಹಾನಗರವೂ ಅನುಭವಿಸಿರಲಿಕ್ಕಿಲ್ಲ. 1993 ರ ಸರಣಿ ಸ್ಫೋಟಗಳಿಂದ ಹಿಡಿದು 26/11 ಘಟನೆಯವರೆಗೆ, ಶಹರದ ಆತ್ಮಬಲವನ್ನು ಒಂದರೆಕ್ಷಣ ನಡುಗಿಸಿಬಿಡುವ ಭೀಕರ ಭಯೋತ್ಪಾದಕ ದಾಳಿಗಳು ಮುಂಬೈ ಮಹಾನಗರಿಗೆ ಹೊಸದೇನಲ್ಲ. ಭಯೋತ್ಪಾದಕ ದಾಳಿಗೆಂದು ಭಾರತದ ಹಲವು ಶಹರಗಳನ್ನು ಸರ್ವೇ ಮಾಡಿದ್ದ ಮಾಸ್ಟರ್ ಮೈಂಡ್ ಹೆಡ್ಲಿ ಕೊನೆಗೆ ಮುಂಬೈ ನಗರವನ್ನೇ ಏಕೆ ಆರಿಸಿಕೊಂಡ ಎಂಬ ಬಗ್ಗೆ ಲೇಖಕ ಹುಸೇನ್ ಝಾಯ್ದಿ ತಮ್ಮ ಕೃತಿಯೊಂದರಲ್ಲಿ ಅದ್ಭುತವಾಗಿ ಬರೆಯುತ್ತಾರೆ. ತಾನು ದಯಪಾಲಿಸುವ ಅನಾಮಿಕತೆಯು ಕೊನೆಗೆ ತನಗೇ ಮುಳುವಾಗಲಿದೆ ಎನ್ನುವ ಕಹಿಸತ್ಯವು ಮಹಾನಗರಿಗಾದರೂ ಹೇಗೆ ತಿಳಿಯಬೇಕು!

ಇವುಗಳಲ್ಲದೆ 2017 ರ ಪ್ರವಾಹ ಪರಿಸ್ಥಿತಿಯಲ್ಲೂ ಮುಂಬೈ ಮಹಾನಗರಿಯು ಪಡಬಾರದ ಪಾಡನ್ನು ಅನುಭವಿಸಬೇಕಾಯಿತು. ಅದೂ ಕೂಡ ಅನಿರೀಕ್ಷಿತ ಹೊಡೆತ. ಆದರೆ ಮುಂಬೈ ನಿವಾಸಿಗಳು ಎಂದಿನಂತೆ ಈ ಬಾರಿಯೂ ಮೈಕೊಡವಿ ಎದ್ದಿದ್ದರು. ಇದು ಈ ನೆಲದ ಗುಣವೇನೋ ಎಂಬಂತೆ ಲೆಕ್ಕವಿಲ್ಲದಷ್ಟು ಮಂದಿ ಬೀದಿಗಿಳಿದು ಪರಸ್ಪರರ ನೆರವಿಗೆ ಧಾವಿಸಿದರು. ಸಂಕಷ್ಟದ ನಡುವಿನ ಕತ್ತಲಿನಲ್ಲೂ ಭರವಸೆಯ ಹಣತೆಯನ್ನು ಹಚ್ಚುತ್ತಿದ್ದ ಅಸಾಮಾನ್ಯರ ನಿಸ್ವಾರ್ಥ ಸೇವೆಯ ದೃಶ್ಯಗಳು ಮಾಧ್ಯಮಗಳಿಂದಾಗಿ ದೇಶದ ಇತರ ಮೂಲೆಗಳನ್ನೂ ತಲುಪಿದ್ದವು. ಒಟ್ಟಿನಲ್ಲಿ ಅದಷ್ಟು ಬಾರಿ ಮಣ್ಣುಮುಕ್ಕಿದರೂ ಮತ್ತೆ ಮೈಕೊಡವಿ ಎದ್ದುಬಿಡುವ ಈ ಹೋರಾಟದ ಗುಣದಿಂದಾಗಿ ಮನುಷ್ಯನೂ, ಮಹಾನಗರಿಯೂ ಹೆಚ್ಚೇನೂ ವಿಭಿನ್ನ ಎಂದನ್ನಿಸುವುದಿಲ್ಲ. ಮುಂದೆ ಸಾಗಲೇಬೇಕಾದ ಅನಿವಾರ್ಯತೆ ಮತ್ತು ಮಹಾತ್ವಾಕಾಂಕ್ಷೆಗಳು ಇಬ್ಬರದ್ದೂ ಹೌದು.

ನನಗೂ ಮಹಾನಗರಿಗೂ ಇರುವ ನಂಟು ದಶಕದಷ್ಟು ಹಳೆಯದಾಗಿರುವುದರಿಂದ ಇಲ್ಲಿನ ಹಲವು ಅಂಕಿಅಂಶಗಳನ್ನು ನಾನು ದಶಕಗಳ ಪರಿಧಿಯಲ್ಲೇ ಹೆಣೆದು ಕೊಂಡಿದ್ದೇನೆ. ಈ ಒಂದು ದಶಕಗಳಲ್ಲಿ ಬಹಳಷ್ಟು ಸಂಗತಿಗಳು ನಡೆದಿವೆ. ದಿಲ್ಲಿ ಬದಲಾಗಿದೆ. ಯಮುನೆಯಲ್ಲಿ ಸಾಕಷ್ಟು ನೀರು ಹರಿದಿದೆ. ನಮ್ಮ ನಡುವಿನ ಮಹತ್ವದ ಲೇಖಕರೂ, ವಿದ್ವಾಂಸರೂ ಆಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಇತ್ತೀಚೆಗೆ ಭಾಷಣವೊಂದರಲ್ಲಿ ಮಾತನಾಡುತ್ತಾ ಇತಿಹಾಸದ ವೈಭವ ಮತ್ತು ವರ್ತಮಾನದ ಸೊಬಗುಗಳೆರಡನ್ನೂ ಹದವಾಗಿ ತನ್ನೊಳಗೆ ಇಟ್ಟುಕೊಂಡಿರುವ ಮಹಾನಗರವಿದು ಎಂದು ದೆಹಲಿಯನ್ನು ಬಣ್ಣಿಸಿದರು. ದಿಲ್ಲಿಯಂಥಾ ಅದ್ಭುತ ನಗರವನ್ನು ಇಷ್ಟು ಚಂದವಾಗಿ ಮತ್ತು ಸರಳವಾಗಿ ಪದಗಳಲ್ಲಿ ಕಟ್ಟಿಕೊಡುವುದು ಬಹುಷಃ ಅವರಿಗಷ್ಟೇ ಸಾಧ್ಯ.

ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯ ಸಾಮಾಜಿಕ ತಲ್ಲಣಗಳನ್ನು ಮತ್ತೊಮ್ಮೆ ದಶಕವೊಂದರ ಚಿಕ್ಕ ಆವರಣದಲ್ಲಿ ಅವಲೋಕಿಸಿದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಉದಾಹರಣೆಗೆ ದೆಹಲಿಯಲ್ಲಾದ ಕೆಲ ಮಹತ್ವದ ಚಳುವಳಿಗಳನ್ನೇ ನೋಡೋಣ. ನಿರ್ಭಯಾ ಪ್ರಕರಣದ ತರುವಾಯ ಸ್ಥಳೀಯ ಯುವಜನರಲ್ಲಿ ಹೊತ್ತಿಕೊಂಡ ಜನಾಕ್ರೋಶ, ದಿಲ್ಲಿಯ ಮರಗಟ್ಟುವ ಚಳಿಯಲ್ಲೂ ಕಲ್ಲಿನಂತೆ ದೃಢವಾಗಿ ನಿಂತಿದ್ದ ರೈತರ ಸಮೂಹ, ಶಾಹೀನ್ ಬಾಗ್ ನಲ್ಲಾದ ಸಂಚಲನಗಳು, ನಮ್ಮ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಮುಷ್ಕರವು ಹುಟ್ಟುಹಾಕಿದ ಚರ್ಚೆಗಳು… ಹೀಗೆ ಮಹಾನಗರಿಯಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯಾವುದೇ ಆಸಕ್ತನೊಬ್ಬನನ್ನು ಗಂಭೀರ ಚಿಂತನೆಗೆ ಹಚ್ಚುವಂತೆ ಪ್ರೇರೇಪಿಸಿದ ಗಮನಾರ್ಹ ಹೋರಾಟಗಳಿವು. ಇಂತಹ ಮೈಕ್ರೋ ಬೆಳವಣಿಗೆಗಳಲ್ಲೇ ದಿಲ್ಲಿಯ ಬಗೆಗಿರುವ ಹಲವು ಹಳೆಯ ಪೂರ್ವಾಗ್ರಹಗಳು ಕಳಚಿಕೊಂಡಿವೆ. ಜೊತೆಗೆ ಹೊಸ ಇಮೇಜುಗಳೂ ಸೃಷ್ಟಿಯಾಗುತ್ತಿವೆ. ಮಹಾನಗರಗಳ ವಿಕಾಸದ ಹಾದಿಯಲ್ಲಿ ಇದು ಸಹಜವೂ ಹೌದು.

ಹಾಗೆ ನೋಡಿದರೆ ನನ್ನ ಬಾಲ್ಯಕಾಲದ ಕೆಲ ಬೀದಿಗಳು ಹೆಚ್ಚೇನೂ ಬದಲಾಗಿಲ್ಲ. ಆದರೆ ದಶಕವೊಂದರಲ್ಲಿ ಮಹಾನಗರಿಗಳು ಬೆಳೆಯುವ ವೇಗವು ಕಮ್ಮಿಯೇನಲ್ಲ. ನಮ್ಮ ದೇಶದ ಬಹಳಷ್ಟು ಮಹಾನಗರಿಗಳು ನಗರೀಕರಣದ ಈ ಗರಿಷ್ಠಮಿತಿಯನ್ನು ತಲುಪಿದ್ದೂ ಆಗಿ, ಸುತ್ತಲಿನ ಪ್ರದೇಶಗಳನ್ನು ನಿಧಾನವಾಗಿ ತಮ್ಮೊಳಗೆ ಆವಾಹಿಸಿಕೊಳ್ಳುತ್ತಿವೆ. ಗದ್ದೆಗಳಿದ್ದ ಜಾಗಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತುತ್ತವೆ. ಮೇಲೇರಲು ಜಾಗವಿಲ್ಲ ಎಂದಾದಾಗ ಇದ್ದಲ್ಲೇ ಅಗೆದು ಸಬ್-ವೇ ಗಳು ಸೃಷ್ಟಿಯಾಗುತ್ತವೆ. ಒಟ್ಟಿನಲ್ಲಿ ರಾಕ್ಷಸಗಾತ್ರದಲ್ಲಿ ಬೆಳೆಯುವುದೊಂದು ಬಿಟ್ಟರೆ ತನಗಿನ್ನೇನೂ ಗೊತ್ತಿಲ್ಲ ಎಂಬಂತೆ.

ಆದರೇನು ಮಾಡುವುದು? ವಯಸ್ಸು ಮನುಷ್ಯನಿಗೂ ಆಗುತ್ತದೆ. ಮಹಾನಗರಿಗೂ ಆಗುತ್ತದೆ. ಹಳೆಯದು ಇನ್ನೇನು ಮುಗಿದೇಹೋಯಿತು ಎಂಬಷ್ಟರಲ್ಲಿ ಮತ್ತೆ ಹೊಸದೇನೋ ಬರುತ್ತದೆ. ಮುಂದೇನು ಎಂಬ ಪ್ರಶ್ನೆಯು ಎಲ್ಲಾ ಪೀಳಿಗೆಯ ಪಾಲಿಗೂ ಉಳಿಯುತ್ತದೆ.

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇವುಗಳನ್ನೂ ಓದಿ-

ಬದುಕಿನ ಕೊಲಾಜ್ ಚಿತ್ರಪಟಗಳು” https://peepalmedia.com/collage-pictures-of-life/

“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ” https://peepalmedia.com/the-innovative-quest-of-networking/

ಮಹಾನಗರ Vs. ಮಹತ್ವಾಕಾಂಕ್ಷೆ”https://peepalmedia.com/metropolis-city-vs-ambition/

“ಒಂದು ಮಿನಿಮಳೆಯ ಕಥೆ”https://peepalmedia.com/the-story-of-a-mini-rain/

“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/

“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

Related Articles

ಇತ್ತೀಚಿನ ಸುದ್ದಿಗಳು