Home ಅಂಕಣ ಕನ್ನಡನಾಡು ವಿದ್ಯಾರ್ಥಿ ಸಂಘಗಳ ಚುನಾವಣೆಯ ನೋಟ – ಸಚಿನ್ ಒಕ್ಕಲಿಗ

ಕನ್ನಡನಾಡು ವಿದ್ಯಾರ್ಥಿ ಸಂಘಗಳ ಚುನಾವಣೆಯ ನೋಟ – ಸಚಿನ್ ಒಕ್ಕಲಿಗ

0

ಕನ್ನಡನಾಡಿನ ಕಾಲೇಜುಗಳು ಮತ್ತು ಯೂನಿವರ್ಸಿಟಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರವು ಇತ್ತೀಚೆಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಅದರ ಆಗೂ ಹೋಗುಗಳನ್ನು ನೋಡುವುದಾದರೆ ಈ ಕೆಳಗಿನನಂತೆ ನೋಡಬಹುದು. ಇನ್ನು 1990ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರವು ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸಿದ ನಂತರ, ಕಳೆದ 37 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಪುನರಾರಂಭಿಸಲು ಮುಂದಾಗಿದೆ ಇನ್ನು ಮೊದಲ ಹಂತದಲ್ಲಿ, ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಚುನಾವಣೆಗಳು ನಡೆಸಲಾಗುವದ್ದು ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಸಂಘದ ಕಾರ್ಯಕಾರಿ ಸಮಿತಿಯು ಆರು ಸದಸ್ಯರನ್ನು ಹೊಂದಿರಬೇಕು, ಸಹ-ಶಿಕ್ಷಣ ಸಂಸ್ಥೆಗಳಲ್ಲಿ ಇಬ್ಬರು ಮಹಿಳೆ ಸದಸ್ಯರಿಗಾಗಿ ಮೀಸಲು ಇರಬೇಕು. ಸಮಿತಿಯು ಒಬ್ಬ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು (ಒಬ್ಬರು ಮಹಿಳೆ), ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮತ್ತು ಇಬ್ಬರು ಜಂಟಿ ಕಾರ್ಯದರ್ಶಿಗಳನ್ನು (ಒಬ್ಬರು ಮಹಿಳೆ) ಹೊಂದಿರಬೇಕು ಎಂದು ಸರ್ಕಾರ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.

ಇನ್ನು ಈ ಚುನಾವಣೆಯನ್ನು ಉನ್ನತ ಶಿಕ್ಷಣ, ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕೃಷಿ, ಪಶುಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಗಳ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ(ಸೇರಿರುವ) ಕಾಲೇಜುಗಳು ಹಾಗೂ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸಲಾಗುವುದರ ಜೊತೆಗೆ ಶೈಕ್ಷಣಿಕ ವರ್ಷ ಪ್ರಾರಂಭವಾದ ಐದು ವಾರಗಳೊಳಗೆ ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಮತ್ತು ಪ್ರಕ್ರಿಯೆ ಆರಂಭವಾದ 10 ದಿನಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ಸಹ ಸರ್ಕಾರ ಹೇಳಿದೆ.

ಇನ್ನು ಸರ್ಕಾರದ ಸಚಿವರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ವಿದ್ಯಾರ್ಥಿ ಸಂಘಟನೆಗಳು, ಬೋಧಕ ಸಿಬ್ಬಂದಿ ಹಾಗೂ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಜನರೊಂದಿಗೆ ಚರ್ಚೆ ನಡೆಸಲಾಗಿದ್ದು, ಯಾವದೇ ಅಡಚಣೆ ಆಗದಂತೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಜೊತೆಗೆ ಚುನಾವಣೆಗಳನ್ನು ವ್ಯವಸ್ಥಿತವಾಗಿ ಮತ್ತು ಯಾವುದೇ ಗೊಂದಲವಿಲ್ಲದೆ ನಡೆಸಲು ಇಲಾಖೆಯು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಹ ಅವರು ತಿಳಿಸಿದ್ದಾರೆ. ಬಣ ಬಣ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ. ಈ ಕಾರ್ಯಕ್ರಮವೂ ಭವಿಷ್ಯದ ರಾಜಕೀಯ ನಾಯಕರನ್ನು ರೂಪಿಸುವ ಗುರಿಯನ್ನು ಹೊಂದಿದ್ದು ಇನ್ನು ವಿದ್ಯಾರ್ಥಿ ಸಂಘದ ಚುನಾವಣೆಗಳು ನಾಯಕತ್ವದ ಗುಣಗಳು ಬೆಳವಣಿಗೆಗೆ ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಧ್ವನಿಗೂಡಿಸಲು ಸಹಕಾರಿಯಾಗಿವೆ. ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದಲ್ಲದೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿ ಸಮುದಾಯದಲ್ಲಿ ಜಾತಿ ಪ್ರಜ್ಞೆ ಮೂಡುವುದನ್ನು ತಡೆಯುವ ಉದ್ದೇಶದಿಂದ ಇಲ್ಲಿ ಯಾವುದೇ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ, ಎಂದು ಸಚಿವರು ಹೇಳಿದ್ದಾರೆ.

ಈ ಮೇಲಿನ ಎಲ್ಲವೂ ಸಹ ಸರ್ಕಾರವೂ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದ್ದು, ಇವುಗಳು ಎಷ್ಟರ ಮಟ್ಟಿಗೆ ನ್ಯಾಯಯುತವಾಗಿ ಕಾನೂನು ಬದ್ಧವಾಗಿ ಜಾರಿಯಾಗುತ್ತವೆ ಅನ್ನೋದನ್ನು ಅರಿಯಬೇಕಿದೆ. ಇನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE 2023-24) ವರದಿಯ ಪ್ರಕಾರ, ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 27,59,933 (ಸುಮಾರು 27.6 ಲಕ್ಷ) ಆಗಿದೆ. ಮತ್ತೊಂದು ಸಮಗ್ರ ಅಂದಾಜಿನ ಪ್ರಕಾರ, ಸ್ವತಂತ್ರ ಸಂಸ್ಥೆಗಳನ್ನೂ ಒಳಗೊಂಡಂತೆ ರಾಜ್ಯದ ಒಟ್ಟು ಉನ್ನತ ಶಿಕ್ಷಣದ ದಾಖಲಾತಿಯು ಸುಮಾರು 29.9 ಲಕ್ಷ ವಿದ್ಯಾರ್ಥಿಗಳನ್ನು ತಲುಪುತ್ತದೆ. ರಾಜ್ಯದ ಒಟ್ಟು ಕಾಲೇಜು ಸಂಖ್ಯೆಗಳು 4,529 ಕಾಲೇಜುಗಳಲ್ಲಿ ಸುಮಾರು 23.2 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಲಿಂಗಾನುಪಾತ ಒಟ್ಟು ವಿದ್ಯಾರ್ಥಿಗಳಲ್ಲಿ ಅಂದಾಜು 12.5 ಲಕ್ಷ ಪುರುಷರು ಮತ್ತು 11.7 ಲಕ್ಷ ಮಹಿಳಾ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮೇಲಿನ ಎಲ್ಲವೂ ಸರಿ ಅಷ್ಟೇ ಆದ್ರೆ ವಾಸ್ತವವಾಗಿ ಕರ್ನಾಟಕ ರಾಜ್ಯದಲ್ಲಿ ಈ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆದರೆ ಏನಾಗಬಹುದು ಎಂಬ ಒಂದಾಲೋಚನೆ ನೋಡದಾದ್ರೆ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ನಡೆದರೆ ಅಲ್ಲಿ ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಮತ್ತು ಬಂಡವಾಳ ಶಾಹಿಗಳ ಮಕ್ಕಳ ಕಾರು ಬಾರು, ದುಡ್ಡಿನ ಮದ,ಅಧಿಕಾರದ ಮುಂದೆ ಸಾಮಾನ್ಯ ಜನರ ಮಕ್ಕಳ ಸ್ಥಿತಿಗತಿ ಏನು? ಇನ್ನು ಈ ವಿದ್ಯಾರ್ಥಿ ಸಂಘಗಳ ಚುನಾವಣೆಯ ಹೆಸರಿನಲ್ಲಿ ಜಾತಿವಾರು & ಧರ್ಮಧಾರಿತ ಗುಂಪುಗಳ ನಡುವೆ ಬಡಿದಾಟ, ಹೊಡೆದಾಟ, ಶುರುವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಡ್ರಗ್ಸ ಅಂತಹ ಮಾದಕ ವಸ್ತುಗಳು ಕಾಲೇಜು,ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗಲು ಇದು ಸಹ ಒಂದು ದಾರಿ ಮಾಡಿಕೊಡಬಹುದೇನೋ.

ಇನ್ನು ಕೋಮುಗಲಭೆ ಸೃಷ್ಟಿಸುವಂತಹ ಸಂಘಟನೆಗಳು ಸುಲಭವಾಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಒಳಗೆ ಪ್ರವೇಶಿಸಲು ಇದೊಂದು ಹೆಬ್ಬಾಗಿಲು ಆದಂತಾಗುತ್ತದೆ, ಜೊತೆಗೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಕೋಮುಗಲಭೆಯ ಭಾವನೆಯನ್ನು ಮೂಡಿಸುವ ಮೂಲಕ ಒಂದು ಶಾಂತಿಯ ಸುಂದರ ತೋಟದ ವಾತಾವರಣವನ್ನು ಹಾಳುಗಿಡುವುದರಲ್ಲಿ ಅನುಮಾನವೇ ಬೇಡ.

ಸರ್ಕಾರ ಭವಿಷ್ಯದ ರಾಜಕೀಯ ನಾಯಕರನ್ನು ಇಲ್ಲಿಂದಲೇ ಹುಟ್ಟು ಆಗುತ್ತೇವೆ ಎಂದು ಹೇಳುತ್ತಾ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ ಆದರೆ ಇಲ್ಲಿ ನೈಜವಾಗಿ ಎಂತಹ ನಾಯಕರನ್ನು ಮತ್ತು ಯಾರನ್ನು ಹುಟ್ಟು ಹಾಕುತ್ತಾರೆ ಎಂಬುದನ್ನು ಗಮನಿಸಬೇಕು ಯಾಕೆಂದರೆ ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಮತ್ತು ಬಂಡವಾಳ ಶಾಹಿಗಳ ಮಕ್ಕಳಿಗೆ ಕಾಲೇಜುಗಳ ಮಟ್ಟದಿಂದಲೇ ಜನರು ಇವರನ್ನು ಗುರುತಿಸವ ಜೊತೆಗೆ ಭವಿಷ್ಯದ ರಾಜಕೀಯ ಜೀವನಕ್ಕೆ ಒಂದು ವೇದಿಕೆ ಮಾಡಿ ಕೊಡಲು ಮತ್ತು ಇವರು ರಾಜ್ಯ ರಾಜಕಾರಣ ಅಥವಾ ಒಕ್ಕೂಟ ಇಂಡಿಯ ರಾಜಕಾರಣದತ್ತ ಮತ್ತು ಬೇರೆ ಬೇರೆ ಸಂಘ ಸಂಸ್ಥೆಗಳ ಚುನಾವಣೆಗಳಿಗೆ ಸುಲಭವಾಗಿ ಹೆಜ್ಜೆ ಇಡಲು ಅನುವು ಮಾಡಿಕೊಡುವ ಬಹುದೊಡ್ಡ ಉದ್ದೇಶ ಸರ್ಕಾರ ಮುನ್ನಡೆಸುತ್ತಿರುವ ಅಥವಾ ರಾಜಕೀಯದಲ್ಲಿರುವ ರಾಜಕೀಯ ನಾಯಕರ ಅಭಿಪ್ರಾಯ ಇರಬಹುದೇನೋ.

ಇನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಮೇಲು-ಕೀಳು, ಬಡವ ಶ್ರೀಮಂತ, ಹೆಣ್ಣು ಗಂಡು ಎಂಬ ಎಂಬ ಭೇದಭಾವ ಇಲ್ಲದೆ ಒಂದು ಸುಂದರವಾದ ವಾತಾವರಣದಲ್ಲಿ ಒಟ್ಟಾಗಿ ವಿದ್ಯಾಭ್ಯಾಸ ಕಲಿಯುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿದ್ಯಾರ್ಥಿಗಳ ಸಂಘಗಳ ಚುನಾವಣೆಯ ಹೆಸರಿನಲ್ಲಿ ಕೊಳಕು ಕಲುಷಿತ ವಿಚಾರಗಳನ್ನು ತುಂಬಿ ವಿದ್ಯಾರ್ಥಿಗಳ ಮನಸ್ಸನ್ನು ಹಾಳುಗೆಡುವ ಮೂಲಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಮಕ್ಕಳ ಭವಿಷ್ಯ ಜೊತೆಗೆ ವಿದ್ಯಾರ್ಥಿ ಜೀವನ, ಭವಿಷ್ಯ ಹಾಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಅದರಿಂದ ಒಟ್ಟಾರೆಯಾಗಿ ನಾನು ಏನು ಹೇಳೋದು ಏನು ಅಂದ್ರೆ ಕನ್ನಡನಾಡಿನ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಮಾಡುವುದನ್ನು ನಿಲ್ಲಿಸುವ ಮೂಲಕ ಯಥಾ ಸ್ಥಿತಿಯನ್ನು ಕಾಪಾಡುವುದು ಒಳ್ಳೆಯದು ಎಂದು ಹೇಳುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಬರೀ ಹೊಲಸು, ಕೊಳಚೆ ಇಲ್ಲಿಗೆ ಬಿದ್ದು ಬಡ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕೆ?? ನಮ್ಮ ಕಣ್ಣೆದುರಿಗೆ ದೆಹಲಿಯ ವಿವಿ, ಜೆಎನ್‌ಯು ಮತ್ತು ಕೇರಳದ ವಿ ವಿ ಹಾಗೂ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾನಿಲಯಗಳಲ್ಲಿ ಈಗಲ್ಲೂ ಸಹ ಆಗುತ್ತಿರುವ ಹಿಂಸಾಚಾರ, ಗಲಾಟೆಗಳು ನೋಡಿದ್ರೆ ತಿಳಿಯುತ್ತೆ ಈ ಚುನಾವಣೆಗಳ ಆಳ ಮತ್ತು ಅಗಲ ಎಂತದು ಎಂದು.

ಇನ್ನು ಹಿಂಸಾಚಾರ, ಗಲಾಟೆಗಳು ಕಾಲೇಜುಗಳಲ್ಲಿ ಜರುಗಿದ್ದ ಸಂದರ್ಭಗಳಲ್ಲಿ ಇಲ್ಲಿ ಸಾವು ನೋವುಗಳು, ಜೊತೆಗೆ ಪೊಲೀಸ್ ಅರೆಸ್ಟ್ ಅಂತಹ ಸಂದರ್ಭಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಡೇನು? ಇವರಿಗೆ ಜೈಲಿನಿಂದ ಬಿಡಿಸಲು ಸಹ ಯಾರು ಮುಂದಾಗಲು ಬರುವುದಿಲ್ಲ, ಜೊತೆಗೆ ಇವರ ಸಾವು ನೋವುಗಳು ಆದರೂ ಸಹ ಯಾರು ಸಹ ಕೇಳುವುದು ಇಲ್ಲ ಇದರಿಂದ ಇವರ ಕುಟುಂಬದ ಪಾಡೇನು ಮತ್ತು ಇವರ ಭವಿಷ್ಯವೇನು?

ಹಾಗಾದರೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಬೇಡವೇ ಅಂದ್ರೆ ಯಾರು ಬೇಡ ಅಂದ್ರು ರಾಜಕೀಯ ಪ್ರಜ್ಞೆ ಬೇಕು ಆದ್ರೆ ಆದರೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಒಳಗಡೆ ಬೇಡ, ಇದರಿಂದ ಆಚೆ ಇಚ್ಛೆ ಅನುಸಾರ ಪ್ರಜ್ಞೆ ಮೂಡಿಸಲಿ ಅಷ್ಟೇ. ಇನ್ನು ವಿದ್ಯಾರ್ಥಿಗಳ ಮನಸ್ಸಿನ ಎದೆಯಲ್ಲಿ ಒಂದು ಸುಂದರ ಶಾಂತಿ ತೋಟದ ಜೊತೆಗೆ ಸರ್ವಜನಾಂಗವ ಗೌರವಿಸುವ ಮತ್ತು ಒಳಗೊಳ್ಳುವಿಕೆಯು ನಿರ್ಮಾಣವಾಗಬೇಕಿದೆ ಇದನ್ನು ಬಿಟ್ಟು ವಿದ್ಯಾರ್ಥಿಗಳ ಎದೆಯಲ್ಲಿ ಗಬ್ಬೆಬ್ಬಿಸುವ ಕೊಳಚೆಯನ್ನ ನಿರ್ಮಾಣ ಮಾಡಬಾರದು ಅಷ್ಟೇ.

– ಸಚಿನ್ ಒಕ್ಕಲಿಗ
ಕಾನೂನು ವಿದ್ಯಾರ್ಥಿ

You cannot copy content of this page

Exit mobile version