ಗೋಣಿಕೊಪ್ಪ (ಕೊಡಗು): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಿಭಾಗದ ಗಣಗೂರು ಅರಣ್ಯ ಪ್ರದೇಶದ ಕೆರೆಯಲ್ಲಿ ಸೋಮವಾರ ಏಳು ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಇತರ ಪ್ರಾಣಿಗಳೊಂದಿಗೆ ಕಾದಾಟದಲ್ಲಿ ಗಾಯಗೊಂಡು ಹುಲಿ ಸಾವನ್ನಪ್ಪಿದ್ದು, ಕೆರೆಯಲ್ಲಿ ಬಾಯಾರಿಕೆ ನೀಗಿಸಲು ಬಂದಾಗ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮೃತದೇಹದ ಒಂದು ಭಾಗ ಕೊಳೆತಿತ್ತು. ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯ ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳಕ್ಕೆ ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಡಿ.ಎಸ್.ದಯಾನಂದ್, ಬಾಳೆಲೆ ಪಶು ವೈದ್ಯ ಭವಿಷ್ಯಕುಮಾರ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಕುಂಞಗಂಡ ಬೋಸ್ ಮಾದಪ್ಪ ಭೇಟಿ ನೀಡಿದರು.