ಕರ್ನಾಟಕಕ್ಕೆ ಬರ ಪರಿಹಾರ ನಿಧಿ ಬಿಡುಗಡೆ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ನೀಡಿದ ಭರವಸೆ ರಾಜ್ಯದ ರೈತರ ವಿಜಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಹೇಳಿದ್ದಾರೆ.
ರಾಜ್ಯವು, ರೈತರಿಗೆ ಪರಿಹಾರವಾಗಿ 5,662 ಕೋಟಿ ಸೇರಿದಂತೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರದಿಂದ 18,172 ಕೋಟಿ ರೂ. ಬಿಡುಗಡೆ ಮಾಡಬೇಕು. ಜೊತೆಗೆ ಕೇಂದ್ರವು ಕೂಡಲೇ ಆದ್ಯತೆ ಮೇರೆಗೆ ರಾಜ್ಯದ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಕೃಷ್ಣ ಬೈರೇ ಗೌಡ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ಕೇಂದ್ರವನ್ನು ಒತ್ತಾಯಿಸುತ್ತಿದೆ ಎಂದರು. ಆದರೆ ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ಇದರಿಂದ ರಾಜ್ಯವು ನ್ಯಾಯ ಕೋರಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವಂತೆ ಮಾಡಿದೆ ಎಂದು ಗೌಡ ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಭರವಸೆ ರೈತರಿಗೆ ದೊಡ್ಡ ಭರವಸೆಯನ್ನು ತಂದಿದ್ದರೂ, ರಾಜ್ಯವು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ, ರೈತರಿಗೆ ಪರಿಹಾರ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.
ಈ ಘಟನೆಯು ರಾಜ್ಯದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸಚಿವರು ಕಿಡಿಕಾರಿದರು.