Home ರಾಜ್ಯ ಮಂಡ್ಯ ಮಂಡ್ಯದಲ್ಲಿ ಕುಮಾರಸ್ವಾಮಿ ಯಾಕೆ ಸೋಲಬೇಕು?: ಜಾಗೃತ ಮತದಾರರ ವೇದಿಕೆ ಹೇಳೋದೇನು?

ಮಂಡ್ಯದಲ್ಲಿ ಕುಮಾರಸ್ವಾಮಿ ಯಾಕೆ ಸೋಲಬೇಕು?: ಜಾಗೃತ ಮತದಾರರ ವೇದಿಕೆ ಹೇಳೋದೇನು?

0

ದೇಶದ ಭವಿಷ್ಯ ನಿರ್ಧಾರವಾಗುವ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ, ಮಂಡ್ಯದಲ್ಲಿ ಜಾಗೃತ ಮತದಾರರ ವೇದಿಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಅವರನ್ನು ಸೋಲಿಸಲು ಕರೆ ನೀಡಿದೆ. ಸುಮಾರು 12 ಕಾರಣಗಳನ್ನು ಕೊಟ್ಟಿರುವ ಈ ವೇದಿಕೆ ಕುಮಾರಸ್ವಾಮಿ ಸೋಲಿಸಲು ಕುಮಾರಸ್ವಾಮಿಯವರ ಜಾತ್ಯತೀತತೆಯ ಮುಖವಾಡ ಮಂಡ್ಯಕ್ಕೆ ಅದೆಂತಹ ಆಪತ್ತು ತರಬಹುದು ಎಂದು ತನ್ನ ಆತಂಕ ವ್ಯಕ್ತಪಡಿಸಿದೆ.

12 ಕಾರಣಗಳಿವು
1. ಒಕ್ಕಲಿಗ ಸಮುದಾಯದ ಜೀತ ವಿಮುಕ್ತಿಗಾಗಿ ಕುಮಾರಸ್ವಾಮಿ ಸೋಲಬೇಕು

ಮಂಡ್ಯ ಒಕ್ಕಲಿಗ ಸಮುದಾಯ ಸತತವಾಗಿ ಕುಮಾರಸ್ವಾಮಿ ಮತ್ತು ಅವರ ಕುಟುಂಬವನ್ನು ರಾಜಕೀಯ ಕಷ್ಟಕ್ಕೆ ಸಿಲುಕಿದಾಗೆಲ್ಲಾ ಸದಾ ಬೆಂಬಲಿಸುತ್ತಾ ಬಂದಿದೆ. ಮಂಡ್ಯದ ಒಕ್ಕಲಿಗ ಸಮುದಾಯ ಅವರ ಕೈಹಿಡಿದಿದೆ. ಆದರೆ ಮಂಡ್ಯದ ಒಕ್ಕಲಿಗ ನಾಯಕರನ್ನು ತುಳಿದು ಮೂಲೆಗುಂಪು ಮಾಡುವುದರಲ್ಲೇ ಕುಮಾರಸ್ವಾಮಿ ರವರ ಪೂಜ್ಯ ತಂದೆಯವರು ಮತ್ತು ಸ್ವತಃ ಕುಮಾರಸ್ವಾಮಿಯವರು ನಿರತರಾಗಿದ್ದಾರೆ. ಅಸಂಖ್ಯಾ ಉದಾಹರಣೆಗಳಲ್ಲಿ ಒಂದಾದ ಮಾನ್ಯ ಎಸ್.ಎಂ.ಕೃಷ್ಣ ರವರು ಎರಡನೇ ಬಾರಿ ಮುಖ್ಯಮಂತ್ರಿಯಾಗಬಹುದಾಗಿದ್ದ ಸುವರ್ಣ ಅವಕಾಶವನ್ನು ಹಾಳುಗೆಡವಿದ್ದನ್ನು ನೋಡಬಹುದು. ಮಂಡ್ಯದ ಒಕ್ಕಲಿಗ ಸಮುದಾಯ ನಾವು ಏನೇ ಮಾಡಿದರೂ ಜೀತದಾಳುಗಳಂತೆ ನಮ್ಮ ಜೊತೆ ಇರುತ್ತಾರೆ, ನಾವು ಹೇಳಿದಂತೆ ಕೇಳುತ್ತಾರೆ ಎಂಬ ಭಾವನೆಯಿಂದಲೇ ಒಕ್ಕಲಿಗ ಸಮುದಾಯವನ್ನು ಕಾಲಕಸದಂತೆ ಕಡೆಗಣಿಸಿದ್ದಾರೆ. ಇಲ್ಲಿಯ ಸ್ಥಳಿಯ ಒಕ್ಕಲಿಗ ನಾಯಕತ್ವವನ್ನು ಬೆಳೆಯಲು ಅವಕಾಶ ನೀಡದೆ ಮಂಡ್ಯದ ಅಭಿವೃದ್ಧಿಗೆ ಒತ್ತು ನೀಡದೆ ಮಂಡ್ಯದ ಒಕ್ಕಲಿಗರ ಪ್ರಾಮಾಣಿಕವಾದ ಪ್ರೀತಿ ವಿಶ್ವಾಸಗಳನ್ನು ಅಡವಿಟ್ಟಿದ್ದಾರೆ. ಮಂಡ್ಯ ಒಕ್ಕಲಿಗರ ‘ಜೀತ ವಿಮುಕ್ತಿ’ ಆಗಬೇಕೆಂದರೆ, ಇಲ್ಲಿಯ ಸ್ಥಳೀಯ ನಾಯಕತ್ವ ಬೆಳೆಯಬೇಕಾದರೆ, ಮಂಡ್ಯದ ಅಭಿವೃದ್ಧಿ ಆಗಬೇಕೆಂದರೆ ಕುಮಾರಸ್ವಾಮಿ ಈ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕು.

2) ಕುಲಗುರು ದ್ರೋಹಕ್ಕಾಗಿ ತಕ್ಕ ಶಿಕ್ಷೆ ಆಗಬೇಕೆಂದರೆ ಕುಮಾರಸ್ವಾಮಿ ಸೋಲಬೇಕು.
ಒಕ್ಕಲಿಗ ಏಕೈಕ ಮಠದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ, ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ದುಡಿದ ಒಕ್ಕಲಿಗರ ಆಧ್ಯಾತ್ಮ ಮಾರ್ಗದರ್ಶಕರು, ಕುಲಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಯವರನ್ನು ನೋಯಿಸಿ, ಮಠವನ್ನು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗಾಗಿ ಒಡೆಯಲು ಯತ್ನಿಸಿ, ಕುಲಗುರುಗಳನ್ನು ಮಾನಸಿಕವಾಗಿ ಘಾಸಿಗೊಳಿಸಿದ್ದಕ್ಕಾಗಿ ಶಿಕ್ಷೆಯಾಗಬೇಕು. 2019 ರ ಲೋಕಸಭಾ ಚುನಾವಣೆಯ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು, ಮೇಧಾವಿಗಳು, ಸುಜ್ಞಾನಿಗಳೂ ಆದ ಶ್ರೀಶ್ರೀಶ್ರೀ ನಿರ್ಮಲಾನಂದ ಸ್ವಾಮಿಜಿಯವರನ್ನು ಕಳ್ಳಸಾಗಾಣಿಕೆದಾರರ ಪಟ್ಟಿಗೆ ಸೇರಿಸಿ ಅವರ ದೂರವಾಣಿ ಕರೆಯನ್ನು ಕದ್ದಾಲಿಸಿದ ಗುರುದ್ರೋಹಕ್ಕಾಗಿ ಕುಮಾರಸ್ವಾಮಿ ಸೋಲಲೇಬೇಕು. (ಈ ಬಗ್ಗೆ ಸಿಬಿಐ ಬಳಿ ಇರುವ ದಾಖಲೆಗಳನ್ನು ಯಾರಾದರೂ ಪರಿಶೀಲಿಸಬಹುದು)

3) ಮಂಡ್ಯಕ್ಕೆ ನೀಡಿದ್ದ ₹8750 ಕೋಟಿ ಅನುದಾನ ಹಿಂಪಡೆದದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.
ಮಂಡ್ಯಕ್ಕೆ ತಾವೇ ಸ್ವತಃ ಘೋಷಣೆ ಮಾಡಿದ್ದ ರೂ. 8750 ಕೋಟಿ ಅನುದಾನನ್ನು ತಮ್ಮ ಸುಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದ ಜನ ಸೋಲಿಸಿದರು ಎಂಬ ದ್ವೇಷದಿಂದ ರದ್ದು ಮಾಡಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.

4) ಮಾತು ತಪ್ಪಿದ ಕುಮಾರಸ್ವಾಮಿ ಸೋಲಬೇಕು.
ಶ್ರೀ. ಬಿ.ಎಸ್.ಯಡಿಯೂರಪ್ಪನವರಿಗೆ ಮಾತಿನಂತೆ ಅಧಿಕಾರ ಹಸ್ತಾಂತರ ಮಾಡದೆ, ಒಕ್ಕಲಿಗ ಸಮುದಾಯ ಮಾತಿಗೆ ನಿಲ್ಲುವವರು. ಒಮ್ಮೆ ನುಡಿದರೆ ಅದರಂತೆ ನಡೆಯುವವರು ಎಂಬ ಹೆಗ್ಗಳಿಕೆಯನ್ನು ಅವಮಾನಿಸಿದ ಕುಮಾರಸ್ವಾಮಿ ಸೋಲಬೇಕು.

5) ಮೇಕೆದಾಟು ಹೋರಾಟ ವಿರೋಧಿಸಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.
ಕಾವೇರಿ ನೀರು ಹಂಚಿಕೆಯಲ್ಲಿ ಮಂಡ್ಯಕ್ಕೆ ಆಗುತ್ತಿರುವ ತೊಂದರೆ ನಿವಾರಣೆಗಾಗಿ ವೈಜ್ಞಾನಿಕವಾಗಿ ರೂಪಿತವಾದ ‘ಮೇಕೆದಾಟು ಯೋಜನೆ’ ಹೋರಾಟವನ್ನು ಕುಮಾರಸ್ವಾಮಿ ಸತತವಾಗಿ ವಿರೋಧಿಸಿರುವುದು ಈಗ ಇತಿಹಾಸ, ಚುನಾವಣೆ ವೇಳೆ ಕಾವೇರಿ ನೀರಿನ ಹಕ್ಕಿಗಾಗಿ ಹೋರಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರುತ್ತಿರುವುದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.

6) ಮೈಷುಗರ್ ಮುಚ್ಚಿಸಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೆಕು.
ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಡ್ಯದ ರೈತರ ಹೆಮ್ಮೆಯ ಮೈಷುಗರ್ ಫ್ಯಾಕ್ಟರಿ ಮುಚ್ಚಿದಂತೆ, ಕಬ್ಬು ಬೆಳೆಗಾರರು ಕಷ್ಟಕ್ಕೆ ಸಿಲುಕದಂತೆ ಮಾಡಲು ವಿಫಲರಾಗಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.

7) ಕುಮಾರಸ್ವಾಮಿ ಸೋಲು – ಶ್ರೀ ಬಸವಣ್ಣ ಮತ್ತು ಶ್ರೀ ಕುವೆಂಪು ರವರ ಗೆಲವು
ಬಸವಣ್ಣ-ಕುವೆಂಪು ವಿರೋಧಿಗಳ ಜೊತೆ ಕೈಜೋಡಿಸಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು. ಶ್ರೀ ಬಸವಣ್ಣನವರ ತತ್ವಾದರ್ಶದಲ್ಲಿ ತಮ್ಮ ವೈಚಾರಿಕತೆಯನ್ನು ನೆಲೆಗೊಳಿಸಿದ ಶ್ರೀ ಕುವೆಂಪುರವರಿಗೆ ಅತ್ಯುನ್ನತ ಸ್ಥಾನ ನೀಡಿ ಗೌರವಿಸಿದ್ದು ಮಂಡ್ಯದ ನೆಲ. ಈ ನೆಲವನ್ನು ಅವಮಾನಗೊಳಿಸಲು ಬ್ರಿಟಿಷರೊಡನೆ ಕೈ ಜೋಡಿಸಿದವರೆಂದು ಉರಿಗೌಡ-ನಂಜೇಗೌಡರನ್ನು ಕಲ್ಪಿಸಿ ಒಂದು ಸಮುದಾಯವನ್ನು ದೇಶದ್ರೋಹಿಗಳೆಂದು ಬಿಂಬಿಸಲು ಯತ್ನಿಸಿದವರ ಜೊತೆ ಇವತ್ತು ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ. ಶ್ರೀ ಕುವೆಂಪುರವರ ವೈಚಾರಿಕತೆಯನ್ನು ಅವಮಾನಿಸುತ್ತಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಸ್ವಾರ್ಥ ಸಾಧನೆಗಾಗಿ ಸಮುದಾಯ ನಡೆಯಬೇಕಾದ ಹಾದಿ ತೋರಿದ ಶ್ರೀ ಕುವೆಂಪುರವರನ್ನು ಜಿಲ್ಲೆಯಿಂದ ಮರೆಮಾಡುವವರ ಜೊತೆ ನಿಂತಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಶ್ರೀ ಬಸವಣ್ಣ ಮತ್ತು ಶ್ರೀ ಕುವೆಂಪುರವರನ್ನು ಗೆಲ್ಲಿಸಲು ಕುಮಾರಸ್ವಾಮಿಯನ್ನು ಸೋಲಿಸಬೇಕಿದೆ.

8) ಮಂಡ್ಯದ ಅಭಿವೃದ್ಧಿಗೆ ಕೊಡುಗೆ ನೀಡದ ಕುಮಾರಸ್ವಾಮಿ ಸೋಲಬೇಕು :
ರಾಜಕೀಯಕ್ಕೆ ಮಂಡ್ಯದ ಜನ ಬೇಕು : ಅಭಿವೃದ್ಧಿಗೆ ಬೇಡ ಎಂಬ ಧೋರಣೆ ಕುಮಾರಸ್ವಾಮಿ ಕುಟುಂಬದವರದ್ದು. ಹಾಸನದ ಅಭಿವೃದ್ಧಿಯ ಜೊತೆ ಮಂಡ್ಯದ ಅಭಿವೃದ್ಧಿಯನ್ನು ಹೋಲಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮಂಡ್ಯದ ಜನರನ್ನು ಉಪಯೋಗಿಸಿ ಎಸೆಯುವ ಬಾಳೆ ಎಲೆ ಎಂದು ಭಾವಿಸಿರುವ ಕುಮಾರಸ್ವಾಮಿಯನ್ನು ಸೋಲಿಸಬೇಕಿದೆ.

9) ಗ್ಯಾರಂಟಿ ಯೋಜನೆಗಳ ವಿರೋಧಿ- ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿ ಸೋಲಬೇಕು:
ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗಗಳಿಗೆ ಸಂಜೀವಿನಿಯಂತಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳನ್ನು ವಿರೋಧಿಸುತ್ತಿರುವ, ಈ ಯೋಜನೆಗಳು ಹೆಣ್ಣು ಮಕ್ಕಳನ್ನು ದಾರಿತಪ್ಪಿಸುತ್ತಿವೆ ಎಂದು ಹೇಳುತ್ತಾ ಈ ಎಲ್ಲಾ ವರ್ಗಗಳನ್ನು ಕುಮಾರಸ್ವಾಮಿ ಅವಮಾನಿಸುತ್ತಿದ್ದಾರೆ. ಜಾತಿ, ಮತ, ವರ್ಗ ಮೀರಿದ ಈ ಯೋಜನೆಗಳ ವಿರೋಧಿಯಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಜೀವನದಲ್ಲಿ ನಮ್ಮ ತಾಯಂದಿರನ್ನು, ಅಕ್ಕತಂಗಿಯರನ್ನು ಸತತವಾಗಿ ಅವಮಾನಿಸುತ್ತಿರುವ ಕುಮಾರಸ್ವಾಮಿಯನ್ನು ಸೋಲಿಸಬೇಕಿದೆ.

10) ರೈತ ವಿರೋಧಿ ಕಾಯ್ದೆಗಳನ್ನು ಬೆಂಬಲಿಸಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ಬೆಳೆಗಳಿಗೆ ಕಾಯ್ದೆ ಬದ್ದ ಬೆಂಬಲ ಬೆಲೆಗೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ನಡೆದ ರೈತ ಹೋರಾಟದಲ್ಲಿ ನೂರಾರು ರೈತರು ಪ್ರಾಣ ಕಳೆದುಕೊಂಡಿದ್ದು, ಪೊಲೀಸರ ಲಾಟಿ, ಬೂಟು, ಗುಂಡಿನೇಟಿಗೆ ಬಲಿಯಾದದ್ದು ಭಾರತದ ಇತಿಹಾಸದ ಕರಾಳ ಅಧ್ಯಾಯ ಅಂತಹ ಕಾಯ್ದೆಗಳನ್ನು ಬೆಂಬಲಿಸಿ ವಿಧಾನಸಭೆಯಲ್ಲಿ ವಾದ ಮಂಡಿಸಿದ ಕುಮಾರಸ್ವಾಮಿ ಸೋಲಬೇಕು.

11) ಕುಟುಂಬ ರಾಜಕಾರಣದ ಪರಾಕಾಷ್ಠೆಗಾಗಿ ಕುಮಾರಸ್ವಾಮಿ ಸೋಲಬೇಕು.
ಪ್ರಾದೇಶಿಕ ಪಕ್ಷವೊಂದನ್ನು ಸ್ಥಳೀಯ ಮತ್ತು ಕನ್ನಡ ನಾಡಿನ ಹಿತಕಾಯಲು ಬೆಳಸಬಹುದಾಗಿದ್ದ ಸುವರ್ಣಾವಕಾಶವನ್ನು ತಮ್ಮ ಕುಟುಂಬದ ಸ್ವಾರ್ಥ ಸಾಧನೆಗಾಗಿ ಬಲಿಕೊಟ್ಟು, ಮೈತ್ರಿಯಿಂದ ಪಡೆದ ನಾಲ್ಕು ಸ್ಥಾನಗಳಲ್ಲಿ ಮೂರರಲ್ಲಿ (ಮಗ. ಮೊಮ್ಮಗ, ಅಳಿಯ ಇನ್ನೊಂದು ಸ್ಥಾನ ಅದೃಷ್ಟವಶಾತ್ ಮೀಸಲು ಸ್ಥಾನ) ತಮ್ಮ ಕುಟುಂಬದವರನ್ನೇ ನಿಲ್ಲಿಸಿ ಕನ್ನಡ, ಕನ್ನಡಿಗ, ಕರ್ನಾಟಕ ಎಂದು ಬೊಗಳೆ ಮಾತನಾಡಿ ಕನ್ನಡಿಗರನ್ನು ಮೋಸಗೊಳಿಸಿದ್ದಕ್ಕಾಗಿ ಕುಮಾರಸ್ವಾಮಿ ಸೋಲಬೇಕು.

12) ಅಲೆಮಾರಿ ರಾಜಕಾರಣ ಸ್ಥಳೀಯ ನಾಯಕತ್ವವನ್ನು ನಾಶ ಮಾಡುವ ಕುಮಾರಸ್ವಾಮಿ ಸೋಲಬೇಕು.
ಸಾತನೂರು, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಈಗ ಮಂಡ್ಯ ಎಂದು ಅಲೆಮಾರಿ ರಾಜಕಾರಣ ಮಾಡುತ್ತಾ, ನನ್ನ ಕರ್ಮ ಭೂಮಿ, ನನ್ನ ಹೃದಯ…. ಇತ್ಯಾದಿ ಸುಳ್ಳುಗಳ ಮಾಲೆ ಎಣೆಯುತ್ತಾ ಸ್ಥಳೀಯರನ್ನು ಮೋಸಗೊಳಿಸಿ. ಸ್ಥಳೀಯ ನಾಯಕತ್ವವನ್ನು ನಾಶಗೊಳಿಸುವ ಕುಮಾರಸ್ವಾಮಿಯವರಿಗೆ ಒಂದು ಸವಾಲು. ಹಾಸನದಿಂದ ನಿಮ್ಮ ಪಕ್ಷದಿಂದ ಹೊರಗಿನವರೊಬ್ಬರನ್ನು ವಿಧಾನಸಭೆ, ವಿಧಾನಪರಿಷತ್, ಲೋಕಸಭೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ವಿಶಾಲ ಹೃದಯ ನಿಮಗಿದೆಯೇ? ಖಂಡಿತಾ ಇಲ್ಲ ಎಂಬುದು ಸಾಬೀತಾಗಿದೆ. ಇಲ್ಲಿ ಬಂದು ನನ್ನನ್ನು ಗೆಲ್ಲಿಸಿ ಎಚಿದು ಕೇಳಲು ಯಾವ ನೈತಿಕತೆ ಅವರಿಗಿದೆ. ಇದಕ್ಕಾಗಿ ಕುಮಾರಸ್ವಾಮಿ ಸೋಲಬೇಕಿದೆ. ಹೀಗೆ ನೂರಾರು ಕಾರಣಗಳ ದೊಡ್ಡಪಟ್ಟಿಯನ್ನೇ ನೀಡುತ್ತಾ ಹೋಗಬಹುದು. ಒಟ್ಟಾರೆ ಕುಮಾರಸ್ವಾಮಿ ಏಕೆ ಸೋಲಬೇಕೆಂಬುದಕ್ಕೆ ನೂರಾರು ಕಾರಣಗಳಿವೆ ಆದರೆ ಗೆಲ್ಲಲು ಒಂದೇ ಕಾರಣ ಅವರ ಸ್ವಾರ್ಥ ಸಾಧನೆ.

ಈ ಎಲ್ಲಾ ಕಾರಣಗಳನ್ನು ಇಟ್ಟು ಕುಮಾರಸ್ವಾಮಿಯನ್ನು ಮಂಡ್ಯ ಜನತೆ ಸೋಲಿಸಬೇಕಿದೆ ಎಂದು ಜಾಗೃತ ಮತದಾರರ ವೇದಿಕೆ ಕರೆ ನೀಡಿದೆ.

You cannot copy content of this page

Exit mobile version