Home ಅಂಕಣ ಸ್ಮಶಾನವಾಗಿರುವ ಗಾಜಾದಲ್ಲಿ ಅಮೃತ ತಂದ ಜಮೀಲ್‌ ಮತ್ತು ಕತ್ತೆ!

ಸ್ಮಶಾನವಾಗಿರುವ ಗಾಜಾದಲ್ಲಿ ಅಮೃತ ತಂದ ಜಮೀಲ್‌ ಮತ್ತು ಕತ್ತೆ!

0

ಸ್ಮಶಾನ ಸದೃಶವಾಗಿರುವ ಗಾಜಾದಲ್ಲಿ ಜನರ ಬಾಯಾರಿಕಯನ್ನು ತಣಿಸಲಿ ತನ್ನ ಕತ್ತೆ ಅಲ್ಮಂಡನ ಜೊತೆಗೆ ಬೀದಿ ಸುತ್ತುವ ʼಜಮೀಲ್‌ʼ ಎಂಬ ʼಮನುಷ್ಯʼನೊಬ್ಬನ ಕಥೆ!

ಅಲ್‌ಜಝೀರಾದಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿದೆ

ಇಸ್ರೇಲ್‌ನ ದಾಳಿಗೆ ಗಾಜಾ ಪಟ್ಟಣ ಸ್ಮಶಾನವಾಗಿ ಬದಲಾಗಿತ್ತು. ಯುಧ್ಧ ಭೀತಿ, ಸಾವು, ರಕ್ತ…ಯಾವಾಗ ಜೀವ ಬಿಡುತ್ತೇವೋ ಎಂಬ ಭಯದಿಂದ ಅಳುವ ಪುಟ್ಟ ಪುಟ್ಟ ಮಕ್ಕಳ ಆಕ್ರಂದನವೇ ಸಾಕು, ಇಡೀ ಜಗತ್ತು ಎಂದೆಂದೂ ಕ್ಷಮೆಯಿಲ್ಲದ ಪಾಪದಿಂದ ತುಂಬಿ ಹೋಗಲು.

ರಕ್ತಸಿಕ್ತವಾಗಿರುವ ಗಾಜಾದ ಬೀದಿಯಲ್ಲಿ ವ್ಯಕ್ತಿಯೋರ್ವ ತನ್ನ ಕತ್ತೆಯ ಜೊತಗೆ ಓಡಾಡುತ್ತಿರುತ್ತಾನೆ. ಇಸ್ರೇಲ್‌ ಗಾಜಾದ ನೀರು, ವಿದ್ಯುತ್‌ ಸಂಪರ್ಕವನ್ನು ಕಡಿದ ಹಾಕಿ ಯುದ್ಧದಿಂದ ನೊಂದು ಬಳಲಿದೆ ಜನರಿಗೆ ಮತ್ತಷ್ಟೂ ಘನಘೋರ ಹಿಂಸೆಯನ್ನು ನೀಡಿತ್ತು.

ಇದ್ಯಾವುದೂ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ನಾಯಕರಿಗೆ ಕಾಣಲಿಲ್ಲ. ಇಸ್ರೇಲ್‌ ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದ ತನ್ನ ಪ್ರೊಪಗಾಂಡವನ್ನು ಮುಂದಿಟ್ಟು, ಇವರೆಲ್ಲರೂ ಇಸ್ರೇಲ್‌ನ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದರು.

ಇನ್ನೊಂದು ಕಡೆ ಗಾಜಾದ ಜನತೆ ನೀರು-ಅನ್ನ ಆಹಾರ ಇಲ್ಲದೆ, ಜೀವವನ್ನು ಕೈಯಲ್ಲಿ ಹಿಡಿದು ಸಾವನ್ನು ಎದುರು ನೋಡುತ್ತಿದ್ದರು. ಇದಕ್ಕೆ ಕರಗದ ಹೃದಯಗಳನ್ನು ಎಂದಿಗೂ ದೇವರು ಕ್ಷಮಿಸಲು ಸಾಧ್ಯವಿಲ್ಲ.

ಇವೆಲ್ಲದರ ಮಧ್ಯೆ, ಗಾಜಾ ನಗರದ ಬೀದಿಯಲ್ಲಿ ವ್ಯಕ್ತಿಯೋರ್ವ ತನ್ನ ಕತ್ತೆಯೊಂದಿಗೆ ಅಲ್ಲಿಲ್ಲಿ ಓಡಾಡುತ್ತಿದ್ದ.  ಹೆಸರಿಗೆ ಸರಿಯಾಗಿ ಸುಂದರ ಹೃದಯವಂತ  ಜಮೀಲ್ ಅಲ್ ಕರೂಬಿ. ಅವರು ತಮ್ಮ ಕತ್ತೆ ಅಲ್ಮಂಡ್‌ ಜೊತೆಗೆ  ಕಳೆದ ಒಂಬತ್ತು ದಿನಗಳಿಂದ ನರಕ ಸದೃಶವಾದ ಈ ನಗರದಲ್ಲಿ ʼದೇವರ ಕೆಲಸಕ್ಕೆʼ ಇಳಿದ್ದಿದ್ದಾರೆ.

ಪ್ರತಿದಿನ, ಸೂರ್ಯ ಹುಟ್ಟುವ ಮೊದಲು ಎದ್ದು ತಮ್ಮ ಮನೆಯವರಿಗೆ ಬೇಕಾದದ್ದನ್ನು ಮಾಡಿಕೊಟ್ಟು ಜಮೀಲ್‌ ನೀರು ವಿತರಿಸಲು ಹೊರಡುತ್ತಾರೆ.  ಗುಂಡಿಗಳಿಂದ ತುಂಬಿರುವ ಬೀದಿಗಳಲ್ಲಿ ಅಲ್ಮಂಡನು ಗಾಡಿಯನ್ನು ಎಳೆಯುತ್ತಾ ನೆರೆಹೊರೆಯ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡಲು ಜಮೀಲ್‌ ಅವರಿಗೆ ನೆರವಾಗುತ್ತಾನೆ.

ಅಕ್ಟೋಬರ್ 14, 2023, ದಕ್ಷಿಣ ಗಾಜಾ ಪಟ್ಟಿಯಲ್ಲಿರುವ ಖಾನ್ ಯೂನಿಸ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ-ಪ್ಯಾಲೆಸ್ಟಿನಿಯನ್ ಸಂಘರ್ಷದ ಮಧ್ಯೆ ಪ್ಯಾಲೆಸ್ಟೀನಿಯಾದವರು ನೀರನ್ನು ಸಂಗ್ರಹಿಸುತ್ತಿರುವುದು.
ಫೋಟೋ: REUTERS/Ahmed Zakot

“ನಾನು ಮತ್ತು ನನ್ನ ಮಿತ್ರ ಆಲ್ಮಂಡನ ನಡುವೆ ಒಂದು ಒಪ್ಪಂದವಾಗಿದೆ.  ಅವನು ಪ್ರತಿದಿನ ಬೇಗನೆ ಎದ್ದು, ನೀರಿನ ತೊಟ್ಟಿಯನ್ನು ತುಂಬಲು ಮತ್ತು ಅದನ್ನು ನೆರೆಹೊರೆಯವರಿಗೆ ವಿತರಿಸಲು ಸಹಾಯ ಮಾಡಿದರೆ, ನಾನು ಅವನಿಗೆ ಪ್ರತಿದಿನ ತಿನ್ನಲು ಹೆಚ್ಚು ಆಹಾರ ಕೊಡುತ್ತೇನೆ ಎಂದು ಮಾತುಕೊಟ್ಟಿದ್ದೇನೆ” ಎನ್ನುತ್ತಾರೆ ಜಮೀಲ್. ತನ್ನ ಪ್ರೀತಿಯ ಕತ್ತೆಗೆ ಕೊಟ್ಟ ಮಾತನ್ನು ಜಮೀಲ್‌ ಎಂದಿಗೂ ತಪ್ಪಲಿಲ್ಲ.

ಯುದ್ಧ ಆರಂಭವಾಗುವ ಮೊದಲು ಮೂವತ್ತನಾಲ್ಕು ವರ್ಷದ ಜಮೀಲ್‌ ತನ್ನ ಗಾಡಿಯಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಮಾರುತ್ತಿದ್ದರು. ಬಾಂಬು ದಾಳಿ ಆರಂಭವಾದಾಗಿನಿಂದ, ಗಾಜಾದ ತುಂಬಾ ನೋವು-ಆಕ್ರಂದನ, ರಕ್ತದ ಕೋಡಿ ಹರಿಯಲು ಶುರುವಾದಾಗ ಆಲ್ಮಂಡನ ಜೊತೆಗೆ ಜನರಿಗಾಗಿ ತಾನು ಏನು ಮಾಡಬಹುದು ಎಂದು ಜಮೀಲ್‌ ಯೋಚಿಸಲು ಶುರು ಮಾಡಿದರು.

ಆಗಾಗಲೇ ಇಸ್ರೇಲ್‌ ನೊಂದಿರುವ ಗಾಜಾ ಪಟ್ಟಣಕ್ಕೆ ನೀರಿನ ಪೂರೈಕೆಯನ್ನು ನಿಲ್ಲಿಸಿತ್ತು. ಜನ ಹಸಿವು ಬಾಯಾರಿಕೆಯಿಂದ ತತ್ತರಿಸಿ ಹೋಗಿದ್ದರು. ಆಗ ಜಮೀಲ್‌ ಕಣ್ಣ ಮುಂದೆ ಬಂದದ್ದು ತನ್ನ ತಂದೆ ಸಾಯುವ ಮುನ್ನ ತನಗೆ ಕೊಟ್ಟು ಹೋದ ಒಂದು ಬಾವಿ. ಈ ಬಾವಿಯ ನೀರಿನಿಂದ ಜನರ ಬಾಯಾರಿಕೆಯನ್ನು ನೀಗಿಸಬಹುದು ಎಂದು ತನ್ನ ಮಿತ್ರ  ಕತ್ತೆ ಅಲ್ಮಂಡನ ಜೊತೆಗೆ ಯೋಜನೆ ಹಾಕಿಕೊಂಡರು.

ತನ್ನ ಮನೆಯವರ ನೀರಿನ ಅಗತ್ಯವನ್ನು ಪೂರೈಸಿದ ನಂತರ, ಜಮೀಲ್‌ ಎರಡು ದೊಡ್ಡ ಟ್ಯಾಂಕ್‌ಗಳಲ್ಲಿ ನೀರನ್ನು ತುಂಬಿಸಿ ನೆರೆಹೊರೆಯವರಿಗೆ ನೀರನ್ನು ಹಂಚುತ್ತಾರೆ. ನೀರು ಖಾಲಿಯಾದಾಗ ಮತ್ತೆ ಬಂದು ತುಂಬಿಸುತ್ತಾರೆ. ಇದಕ್ಕೆ ಅಲ್ಮಂಡನೂ ಜೊತೆಗೂಡುತ್ತಾನೆ.

ಜಮೀಲ್‌ ಅವರದ್ದು ತಾಯಿ, ಹೆಂಡತಿ ಮತ್ತು ನಾಲ್ಕು ಮಕ್ಕಳಿರುವ ಏಳು ಜನರ ಕುಟುಂಬ. ಒಂದು ವಾರದ ಹಿಂದೆ ಇಸ್ರೇಲ್‌ ಪಡೆ ನೀರು-ವಿದ್ಯುತ್ತಿನ ಸರಬರಾಜು ನಿಲ್ಲಿಸುವಾಗ ನೆರೆಹೊರೆಯವರಿಗೆ ನೀರು ಕೊಟ್ಟು ಧೈರ್ಯ ತುಂಬಿದ್ದು ಇದೇ ಮನೆ.  ಕತ್ತೆಯ ಗಾಡಿಯೊಂದಿಗೆ ಜನರು ಅಗತ್ಯವಿರುವವರಿಗೆ ನೀರು ಹಂಚುತ್ತಿದ್ದಾರೆ

ಈ ಸಂಕಷ್ಟದ ಸಂದರ್ಭದಲ್ಲಿ ಜಮೀಲ್‌ರ ಈ ಕೆಲಸ ಜನರು ಒಂದಾಗಿ ನಿಲ್ಲಬೇಕು ಎಂಬುದರ ದೊಡ್ಡ ಸಂದೇಶವಾಗಿ ಕಾಣುತ್ತದೆ. ಕಾರ್ಮಿಕ ವರ್ಗದ ಕುಟುಂಬವೊಂದು ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಕೆಲಸವನ್ನು ಮಾಡುತ್ತಿದೆ.  

“ನಾನು ನೀರನ್ನು ಮಾರಾಟ ಮಾಡುತ್ತಿಲ್ಲ, ಉಚಿತವಾಗಿ ನೀಡುತ್ತಿದ್ದೇನೆ. ನಾನು ನನ್ನ ಜನರಿಗೆ ಸಹಾಯ ಮಾಡದಿದ್ದರೆ, ಬೇರೆ ಯಾರು ಸಹಾಯ ಮಾಡುತ್ತಾರೆ? ಇಸ್ರೇಲ್? ನನಗೆ ಅನುಮಾನವಿದೆ,” ಎನ್ನುತ್ತಾರೆ ಜಮೀಲ್.

ಜನರು ವಿದ್ಯುತ್‌, ಇಂಟರ್‌ನೆಟ್‌ ಇಲ್ಲದದೆ ಬದುಕಬಹುದು, ನೀರಿಲ್ಲದೆ ಬದುಕಲು ಸಾಧ್ಯವೇ?

“ಜಮೀಲ್ ಇಲ್ಲದಿದ್ದರೆ ನಾವು ಏನು ಮಾಡಬೇಕೆಂದೇ ನಮಗೆ ತಿಳಿದಿಲ್ಲ. ನಾವು ನೀರಿಗಾಗಿ ಏಜೆನ್ಸಿಗಳ ಬಳಿಗೆ ಹೋದರೆ, ಜನ ಕಿಕ್ಕಿರುದು ನಿಂತಿದ್ದಾರೆ.  ಅಲ್ಲಿನ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ,” ಶುದ್ಧ ರುಚಿಯನ್ನು ಹೊಂದಿಲ್ಲ,” ” ಎಂದು ಜನರು ಹೇಳುತ್ತಾರೆ.

ಜಮೀಲ್ ಅವರಿಗೆ ತನ್ನ ನೆರೆಹೊರೆಯವರಲ್ಲದೇ ಬೇರೆಯವರಿಗೂ ನೆರವು ನೀಡಬೇಕೆಂಬ ಇರಾದೆ ಇದೆ. ಆದರೆ ಇಸ್ರೇಲಿ ಕ್ಷಿಪಣಿಗಳ ದಾಳಿಯಿಂದ ಬೀದಿಗಳ ತುಂಬಾ ಬಿದ್ದಿರುವ ಅವಶೇಷಗಳು ಇವರ ಕತ್ತೆಯ ಗಾಡಿಯನ್ನು ಓಡಿಸಲು ಸಾಧ್ಯವಾಗುತ್ತಿಲ್ಲ.

ಜಮೀಲ್‌ ಹೀಗೆ ಭಯವಿಲ್ಲದೆ ತಮ್ಮ ಕತ್ತೆ ಅಲ್ಮಂಡನ ಜೊತೆಗೆ ಸುತ್ತಾಡುತ್ತಿರುವುದು ಅವರ  ಕುಟುಂಬಕ್ಕೆ ಆತಂಕವನ್ನುಂಟು ಮಾಡಿದೆ. ಆದರೆ ಜಮೀಲ್‌ರ ಈ ಸೇವೆಗೆ ಅಡ್ಡಿಬರಲು ಅವರಿಗೆ ಮನಸಿಲ್ಲ.  

ಜಮೀಲ್ ಅವರ ಕಿರಿಯ ಮಗ ಒಸಾಮಾ “ನನ್ನ ತಂದೆ ಅಪರಿಚಿತರೂ ಸೇರಿದಂತೆ ಎಲ್ಲಾ ಜನರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಜನರು ರಾತ್ರಿ ಬಾಯಾರಿಕೆ ತೀರಿಸಿಕೊಂಡು ಮಲಗಲು ಸಾಧ್ಯವಾಗುವುದು ಅವರಿಗೆ ನೆಮ್ಮದಿ ಮತ್ತು ಹೆಮ್ಮೆಯನ್ನುಂಟು ಮಾಡುತ್ತದೆ,” ಎನ್ನುತ್ತಾನೆ.  

“ಇದು ತುಂಬಾ ಅಪಾಯಕಾರಿ ಕೆಲಸ. ಕ್ಷಿಪಣಿಗಳು ಗಾಜಾದಾದ್ಯಂತ ಎಲ್ಲೆಂದರಲ್ಲಿ ದಾಳಿಮಾಡುತ್ತಿವೆ. ಆದರೆ ನಾವು ಅಪ್ಪನನ್ನು ತಡೆಯಲು ಸಾಧ್ಯವಿಲ್ಲ. ಜನರು ನಮ್ಮನ್ನು ಪ್ರೀತಿಸುತ್ತಾರೆ. ಅವರಿಗೆ ಬೇಕಾಗಿರುವುದು ಜನರ ಪ್ರೀತಿಯಷ್ಟೇ,” ಎನ್ನುತ್ತಾನೆ ಒಸಾಮಾ.

ನೀರಿನ ಜೊತೆಗೆ ಕೆಲವೊಮ್ಮೆ ಜಮೀಲ್ ಮತ್ತು ಆಲ್ಮಂಡ ನಿಂಬೆಹಣ್ಣು, ಆಲೂಗಡ್ಡೆಗಳಂತಹ ತರಕಾರಿಗಳನ್ನು ವಿತರಿಸುತ್ತಾರೆ. ಅವರ ತೋಟದಲ್ಲಿ ಬೆಳೆದ ತರಕಾರಿಗಳು ಮನೆಯ ಅಗತ್ಯದ ಬಳಕೆಯ ನಂತರ ಉಳಿದರೆ, ಅವನ್ನು ಜನರಿಗೆ ನೀಡುತ್ತಾರೆ.  

ಫೋಟೋ ಕೃಪೆ: Mohammed R Mhawish/Al Jazeera

“ನನ್ನಲ್ಲಿ ಹೆಚ್ಚು ತರಕಾರಿಗಳು ಇದ್ದಾಗ, ಅವನ್ನು ಹಂಚದೇ ಇರಲು ಸಾಧ್ಯವಿಲ್ಲ. ಇದರಿಂದ ನಾನೂ, ನನ್ನ ಜನ ನೆಮ್ಮದಿಯನ್ನು ಕಾಣುತ್ತಾರೆ,” ಎನ್ನುತ್ತಾರೆ ಜಮೀಲ್.

ಜಮೀಲ್‌ನ ನೆರೆಹೊರೆಯವರು ಆಗಾಗ ಆಲ್ಮಂಡನಿಗೆ ಆಹಾರವನ್ನು ನೀಡುತ್ತಾರೆ. ಅವನ್ನು ಸ್ವೀಕರಿಸುವಂತೆ ಜಮೀಲ್‌ರನ್ನು ಒತ್ತಾಯಿಸುತ್ತಾರೆ. ಜನರು ಜಮೀಲ್‌ರವರ ಸೇವೆಯನ್ನು, ಅವರ ಧೈರ್ಯವನ್ನು ಪ್ರಶಂಸಿಸುತ್ತಾರೆ.  

ಜಮೀಲ್‌ಗೆ ರಾಜಕೀಯ ಗೊತ್ತಿಲ್ಲ,  ಯುದ್ಧವು ಯಾವಾಗ ಕೊನೆಗೊಳ್ಳುತ್ತದೆ ಎಂಬುದು ತಿಳಿದಿಲ್ಲ. ತನ್ನ ನೆರೆಹೊರೆಯವರು ಬಾಯಾರಿಕೆಯಿಂದ ಬಳಲುತ್ತಿದ್ದಾರೆ ಎಂದು ಮಾತ್ರ ಅವನಿಗೆ ಮನಸ್ಸಿನಲ್ಲಿದೆ.

“ನನ್ನ ಜನರಿಗೆ ಅಗತ್ಯವಿರುವವರೆಗೂ, ನಾನು ಅವರ ಜೊತೆಗಿರುತ್ತೇನೆ, ನನಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ,” ಎಂದು ಜಮೀಲ್‌ ತನ್ನ ನೀರು ಹಂಚುವ ಕೆಲಸವನ್ನು ಮುಂದುವರಿಸಿದರು.

(ಈ ಕಥೆಯನ್ನು ಅಲ್‌ಜಝೀರಾದಲ್ಲಿ ಪ್ರಕಟಿಸಲಾದ A man and his donkey ensure Gaza people don’t go thirsty amid Israeli siege ವರದಿಯಿಂದ ಸ್ಪೂರ್ತಿಗೊಂಡಿದೆ)

You cannot copy content of this page

Exit mobile version