ಒಂದೆಡೆ ಕರ್ನಾಟಕ ರಾಜ್ಯದಲ್ಲಿ ಮಂಗನ ಜ್ವರ ವಿಜೃಂಭಿಸುತ್ತಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ವೈರಸ್ ಜ್ವರ ಹರಡಿ ಆತಂಕ ಮೂಡಿಸಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಜ್ವರ ವ್ಯಾಪಕವಾಗಿ ಹರಡಿದೆ.
ಗ್ರಾಮದ ಅನೇಕ ಜನರು ಜ್ವರ ಮತ್ತು ತಲೆನೋವಿನ ಲಕ್ಷಣಗಳಿಂದ ಬಳಲುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಕುಷ್ಟಗಿ ತಹಸೀಲ್ದಾರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ತಕ್ಷಣ ಸ್ಪಂದಿಸಿದ ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿದ್ದಾರೆ.
ಗ್ರಾಮದ ದೇವಸ್ಥಾನವನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.. ರೋಗಿಗಳಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ಚರ್ಚೆಯಾಗುತ್ತಿದ್ದಂತೆ ಎಲ್ಲ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಉತ್ತಮ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
ಗ್ರಾಮಸ್ಥರು ಬಹಳ ದಿನಗಳಿಂದ ಜ್ವರ ಹಾಗೂ ತೀವ್ರ ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ವೈರಲ್ ಜ್ವರದಿಂದ ಬಳಲುತ್ತಿದ್ದವರನ್ನು ಕುಷ್ಟಗಿ ತಾಲೂಕಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಗ್ರಾಮದ ದೇವಸ್ಥಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಇದು ನಂತರ ಸುದ್ದಿಯಾದ ಕಾರಣ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ರೋಗಿಗಳನ್ನು ಸ್ಥಳಾಂತರಿಸಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.