ತುಮಕೂರು : ಪಾವಗಡ ತಾಲೂಕಿನ ತಿರುಮಣಿ ಸಮೀಪದ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಬಂಡೆ ಬ್ಲಾಸ್ಟ್ ಮಾಡುವಾಗ ಬ್ಲಾಸ್ಟ್ ಆಗಿದ್ದು, ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ರಾಯಚೂರು ಮೂಲದ ಬಸವರಾಜು ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ. ಸೋಲಾರ್ ಪಾರ್ಕ್ ನಿರ್ಮಿಸುವ ಸಲುವಾಗಿ ಇಲ್ಲಿನ ಕೆಪಿಡಿಸಿಎಲ್ ವತಿಯಿಂದ ತಾಲೂಕಿನ ತಿರುಮಣಿ ವ್ಯಾಪ್ತಿಯ ರೈತರಿಗೆ ಸೇರಿದ್ದ 1,002 ಎಕರೆ ಜಮೀನು ಗುತ್ತಿಗೆ ಅಧಾರದ ಮೇಲೆ ಜೆಎಸ್‌ಡ್ಲೂ ಕಂಪನಿಗೆ ನೀಡಲಾಗಿತ್ತು.
ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಏಕಾಏಕಿ ಸ್ಫೋಟಕಗಳು ಬ್ಲಾಸ್ಟ್ ಆಗಿದ್ದು, ಈ ವೇಳೆ ಅಲ್ಲೇ ಸಮೀಪದಲ್ಲಿದ್ದ ಬಸವರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಪಾವಗಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.