ತುಮಕೂರು: ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾನಿಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ರೋಸ್ಟರ್ (ಮೀಸಲಾತಿ) ರೂಪಿಸಲು ರಾಜ್ಯ ಸಚಿವ ಸಂಪುಟದ ಉಪಸಮಿತಿಯು ನೀಡಿರುವ ತಾತ್ವಿಕ ಒಪ್ಪಿಗೆ ಅಸಂವಿಧಾನಿಕ ಕ್ರಮವಾಗಿದ್ದು, ಇದು ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ಎಂದು ‘ತುಮಕೂರು ವಿಶ್ವವಿದ್ಯಾನಿಲಯದ ಸಾಮಾಜಿಕ ನ್ಯಾಯ ಪರ ವಿದ್ಯಾರ್ಥಿಗಳ ಒಕ್ಕೂಟ’ ತೀವ್ರವಾಗಿ ಖಂಡಿಸಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ದುಂಡುಮೇಜಿನ ತುರ್ತು ಸಭೆಯಲ್ಲಿ ಈ ಕುರಿತು ಚರ್ಚಿಸಿ, ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಕ್ರಾಂತಿಕಾರಿ ಹೋರಾಟ ನಡೆಸುವುದಾಗಿ ಒಕ್ಕೂಟ ಎಚ್ಚರಿಸಿದೆ.
ಸಭೆಯಲ್ಲಿ ವಿಷಯ ಮಂಡಿಸಿದ ಅಡ್ವೋಕೇಟ್ ರಂಗಧಾಮಯ್ಯ ಮಾತನಾಡಿ, “ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಘಟಕವನ್ನಾಗಿ ಪರಿಗಣಿಸುವುದು ಸಂವಿಧಾನದ ವಿಧಿ 14(1) ಮತ್ತು 16(4)ರ ಸ್ಪಷ್ಟ ಉಲ್ಲಂಘನೆ. 2017ರಲ್ಲಿ ಅಲಹಾಬಾದ್ ಹೈಕೋರ್ಟ್ ಹಾಗೂ ನಂತರ ಸುಪ್ರೀಂಕೋರ್ಟ್ ಕೂಡ ವಿಶ್ವವಿದ್ಯಾನಿಲಯವನ್ನು ಘಟಕವಾಗಿ ಪರಿಗಣಿಸುವುದು ಅಸಂವಿಧಾನಿಕ ಎಂದು ತೀರ್ಪು ನೀಡಿವೆ. ಇಂತಹ ತೀರ್ಪುಗಳಿದ್ದರೂ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ,” ಎಂದು ಹೇಳಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ. ಬಾಲಕೃಷ್ಣ ಮಾತನಾಡಿ, “ಸಂವಿಧಾನದ ಆಶಯಗಳಿಗೆ ಬದ್ಧವಾಗಿರಬೇಕಾದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರೇ ಮೀಸಲಾತಿ ವಿರೋಧಿ ನೀತಿಗೆ ಉತ್ತೇಜನ ನೀಡುತ್ತಿರುವುದು ದುರಂತ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಶೋಷಿತ ಮತ್ತು ಹಿಂದುಳಿದ ವರ್ಗಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಜಾಗೃತರಾಗಬೇಕು,” ಎಂದು ಕರೆ ನೀಡಿದರು.
ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಗಂಗಾಧರ್ ಬಾಣಸಂದ್ರ, ನವೀನ್ ಕುಮಾರ್ ಪಿ.ಆರ್., ಧರ್ಮಣ್ಣ ಎಂ. ರಂಗನಾಥ್, ಭೀಮ್‌ಶಿ ರಮೇಶ್ ಎಂ.ಟಿ., ಮಾರುತೇಶ್ ಹಾಗೂ ಸುರೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಹಿರಿಯ ಹೋರಾಟಗಾರರಾದ ಪ್ರೊ. ದೊರೈರಾಜು, ಡಾ. ಬಸವರಾಜು, ಕೊಟ್ಟ ಶಂಕರ್, ವೈ.ಹೆಚ್. ಹುಚ್ಚಯ್ಯ, ಚಿಂತಕ ಡಾ. ರವಿಕುಮಾರ್ ನೀಹ, ಪಿ. ರಾಮಯ್ಯ, ಹೆತ್ತೇನಹಳ್ಳಿ ಮಂಜುನಾಥ್, ಪವನ್, ಶಿವಣ್ಣ ತಿಮ್ಮಲಾಪುರ, ಜಯರಾಮ್, ನಟರಾಜ್ ಹಾಗೂ ಶ್ರೀನಿವಾಸ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡು ವಿದ್ಯಾರ್ಥಿಗಳ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.
