ತುಮಕೂರು : ಎಸ್‌ಐಆರ್ (SIR) ಕರ್ತವ್ಯದ ನಿಮಿತ್ತ ಮನೆ ಮನೆ ಸಮೀಕ್ಷೆಗೆ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮ ಆಡಳಿತಾಧಿಕಾರಿ (VA) ಭುವನಾ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ. ಕಂದಾಯ ನೌಕರರ ಸಂಘದ ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅವರು ಮೃತರ ಕುಟುಂಬಕ್ಕೆ ಭರಪೂರ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೃತ ಭುವನಾ ಅವರು ಎಸ್‌ಐಆರ್‌ನ ಬಿಎಲ್‌ಒ (BLO) ಸೂಪರ್‌ವೈಸರ್ ಆಗಿ ನಿಯೋಜನೆಗೊಂಡಿದ್ದರು. ಗೂಳೂರು ಹೋಬಳಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮನೆ ಮನೆ ಸಮೀಕ್ಷೆ ನಡೆಸಲು ತೆರಳುತ್ತಿದ್ದಾಗ ದುರದೃಷ್ಟವಶಾತ್ ಭೀಕರ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂದಾಯ ಸಚಿವರು ನೀಡಿದ ಪ್ರಮುಖ ಭರವಸೆಗಳು:
ಭುವನಾ ಅವರ ನಿಧನಕ್ಕೆ ನ್ಯಾಯ ಸಿಗಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಂದಾಯ ನೌಕರರ ಸಂಘವು ಬೃಹತ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಡಿಸಿಎಂ ಪರಮೇಶ್ವರ್, ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಮೃತ ಅಧಿಕಾರಿಯ ಕುಟುಂಬಕ್ಕೆ ಮುಂದಿನ 15 ದಿನಗಳ ಒಳಗಾಗಿ 1 ಕೋಟಿ ರೂಪಾಯಿ ವಿಮಾ ಮೊತ್ತ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಭುವನಾ ಅವರ ಕುಟುಂಬದ ಸದ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ತಕ್ಷಣವೇ ಕ್ರಮ ವಹಿಸಲಾಗುವುದು. ಅವರು ಚುನಾವಣಾ ಕರ್ತವ್ಯದಲ್ಲಿದ್ದ ಕಾರಣ, ಚುನಾವಣಾ ಆಯೋಗದಿಂದ ಹೆಚ್ಚುವರಿಯಾಗಿ 30 ಲಕ್ಷ ರೂ. ಮಂಜೂರು ಮಾಡಿಸಿಕೊಡುವುದಾಗಿ ಸಚಿವರು ಸ್ಪಷ್ಟಪಡಿಸಿದರು.
ಪ್ರತಿಭಟನೆ ಹಿಂಪಡೆದ ನೌಕರರು:
ಸರ್ಕಾರದ ವತಿಯಿಂದ ಸಚಿವರು ಇಷ್ಟೂ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಂದಾಯ ನೌಕರರ ಸಂಘವು ತನ್ನ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆದಿದೆ.
