ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ (gruha jyoti scheme) ಉಚಿತ ವಿದ್ಯುತ್ ಪಡೆಯುತ್ತಿರುವ ರಾಜ್ಯದ ಸಾವಿರಾರು ಬಾಡಿಗೆದಾರರಲ್ಲಿ ಮೂಡಿದ್ದ ಆತಂಕ ಮತ್ತು ಗೊಂದಲಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತೆರೆ ಎಳೆದಿದೆ.
ಜುಲೈ 1ರಿಂದ ರಾಜ್ಯಾದ್ಯಂತ ಆರಂಭವಾಗಿರುವ ಮನೆ-ಮನೆ ತಪಾಸಣೆಯಿಂದಾಗಿ ತಮಗೆ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಎಲ್ಲಿ ಕೈತಪ್ಪಿ ಹೋಗುತ್ತದೆಯೋ ಎಂದು ಆತಂಕಗೊಂಡಿದ್ದ ಬಾಡಿಗೆದಾರರಿಗೆ ಬೆಸ್ಕಾಂ ಬಿಗ್ ರಿಲೀಫ್ ನೀಡಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವ ನಾಗರಿಕರು ಯಾವುದೇ ಕಾರಣಕ್ಕೂ ಭೀತಿ ಪಡಬೇಕಾಗಿಲ್ಲ ಮತ್ತು ತಮ್ಮ ದಾಖಲೆಗಳ ಬದಲಾವಣೆಗಾಗಿ ಯಾವುದೇ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
ಮನೆಗೆ ಬರಲಿದ್ದಾರೆ ಬೆಸ್ಕಾಂ ಮೀಟರ್ ರೀಡರ್‌ಗಳು!
ಸಾರ್ವಜನಿಕರ ಗೊಂದಲಗಳಿಗೆ ವಿವರಣೆ ನೀಡಿರುವ ಬೆಸ್ಕಾಂ, ಪ್ರಸ್ತುತ ನಡೆಯುತ್ತಿರುವ ಪರಿಶೀಲನೆಯು ಕೇವಲ ಫಲಾನುಭವಿಗಳ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ. ಅನೇಕ ಬಾಡಿಗೆ ಮನೆಗಳಲ್ಲಿ ಹಳೆಯ ಬಾಡಿಗೆದಾರರು ಖಾಲಿ ಮಾಡಿ ಹೋದ ಮೇಲೆಯೂ ಅವರದೇ ಆಧಾರ್ ವಿವರಗಳು ವಿದ್ಯುತ್ ಮೀಟರ್ ಸಂಖ್ಯೆಗೆ (ಆರ್‌ಆರ್ ನಂಬರ್) ಜೋಡಣೆಯಾಗಿ ಉಳಿದುಕೊಂಡಿವೆ. ಇದರಿಂದ ಹೊಸದಾಗಿ ಬಂದಿರುವ ಬಾಡಿಗೆದಾರರಿಗೆ ತಮ್ಮ ವಿವರಗಳನ್ನು ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಬೆಸ್ಕಾಂ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಯ ತಂಡವೇ ಫಲಾನುಭವಿಗಳ ಮನೆ ಬಾಗಿಲಿಗೆ ಬರಲಿದೆ.
ಸಮೀಕ್ಷೆಯ ವೇಳೆಯಲ್ಲೇ ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ಸಿಸ್ಟಮ್‌ನಿಂದ ತೆಗೆದುಹಾಕಿ, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ಮತ್ತು ಬಾಡಿಗೆ ಅಥವಾ ಲೀಸ್ ಕರಾರು ಒಪ್ಪಂದದ (ರೆಂಟ್ ಅಗ್ರಿಮೆಂಟ್) ವಿವರಗಳನ್ನು ಸ್ಥಳದಲ್ಲೇ ಅಪ್ಡೇಟ್ ಮಾಡಿಕೊಡಲಾಗುವುದು ಎಂದು ಇಲಾಖೆ ಹೇಳಿದೆ. ಹೀಗಾಗಿ, ಗ್ರಾಹಕರು ಯಾವುದೇ ಆತಂಕವಿಲ್ಲದೆ ತಮ್ಮ ಮನೆಗೆ ಬರುವ ಬೆಸ್ಕಾಂ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಕೋರಲಾಗಿದೆ. ಇದೇ ವೇಳೆ ಮನೆ ಮಾಲೀಕರಿಗೂ ಕಟ್ಟುನಿಟ್ಟಿನ ತಾಕೀತು ಮಾಡಿರುವ ಇಲಾಖೆಯು, ತಮ್ಮ ಮನೆಗಳಲ್ಲಿ ವಾಸವಿರುವ ಬಾಡಿಗೆದಾರರಿಗೆ ಈ ದಾಖಲಾತಿ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕು ಎಂದು ತಿಳಿಸಿದೆ. ಈ ಮಹತ್ವದ ಬದಲಾವಣೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಯಾವುದೇ ಹಂತದಲ್ಲೂ ಉಚಿತ ವಿದ್ಯುತ್ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂಬ ಭರವಸೆಯನ್ನು ಬೆಸ್ಕಾಂ ನೀಡಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ!
ಇನ್ನು ಈ ಭೌತಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಏನಾದರೂ ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ, ಗ್ರಾಹಕರು ತಕ್ಷಣವೇ ತಮ್ಮ ಹತ್ತಿರದ ಬೆಸ್ಕಾಂ ಉಪ-ವಿಭಾಗದ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ತನ್ನ ಸಹಾಯವಾಣಿ ಸಂಖ್ಯೆ 1912 ಅನ್ನು ಪ್ರಕಟಿಸಿದೆ. ಇದರ ಜೊತೆಗೆ ಸಾರ್ವಜನಿಕರು ತಮ್ಮ ದೂರು ಅಥವಾ ಸಂದೇಶಗಳನ್ನು ಕಳುಹಿಸಲು ವಿಶೇಷ ವಾಟ್ಸಾಪ್ (WhatsApp) ಸಂಖ್ಯೆಗಳಾದ 9480816111, 9480816112, 9480816113 ಹಾಗೂ 9480816114 ಅನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಸಹಾಯವಾಣಿ ಕೇಂದ್ರಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಿರಲಿವೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
