Home ಅಂಕಣ “ಧೂಳು ಮೆತ್ತದ ಉರುಳುವ ಬಂಡೆ: ಕೆ. ರಾಮಯ್ಯ” : ಡಾ. ಕೆ. ಪುಟ್ಟಸ್ವಾಮಿ

“ಧೂಳು ಮೆತ್ತದ ಉರುಳುವ ಬಂಡೆ: ಕೆ. ರಾಮಯ್ಯ” : ಡಾ. ಕೆ. ಪುಟ್ಟಸ್ವಾಮಿ

0

“..ನಾವೆಲ್ಲ ಪ್ರೀತಿಸುವ ಪ್ರೊ. ಎಚ್ ಎಲ್ ಕೇಶವಮೂರ್ತಿ ಟ್ರಸ್ಟ್ ಕೊಡಮಾಡುವ ಪ್ರಶಸ್ತಿಗೆ ಕೋಟಿಗಾನಹಳ್ಳಿ ರಾಮಯ್ಯ ಭಾಜನರಾಗಿದ್ದಾರೆ. ಎಚ್ಚೆಲ್ಕೆ ಬದುಕಿದ್ದು ರಾಮಯ್ಯನವರಿಗೆ ಪ್ರಶಸ್ತಿ ಘೋಷಿಸಿದ್ದರೆ ಎಲ್ಲರಿಗಿಂತ ಹೆಚ್ಚು ಖುಶಿ ಅವರಿಗಾಗುತ್ತಿತ್ತು..” ಕೆ ಪುಟ್ಟಸ್ವಾಮಿಯವರು ಬರೆದ ಆಪ್ತ ಬರಹ

ಈಗ ಕೋಟಿಗಾನಹಳ್ಳಿ ರಾಮಯ್ಯ ಎಂದೇ ಪರಿಚಿತವಾಗಿರುವ ರಾಮಯ್ಯ ನನ್ನ ಪಾಲಿಗೆ ಯಾವಾಗಲೂ ಕೆ. ರಾಮಯ್ಯ. ಈ ಲೇಖನದಲ್ಲಿ ರಾಮಯ್ಯನಿಗೆ  ಬಹುವಚನ ಬಳಸಿ ಬರೆದೆ. ಓದಿದ ನಂತರ ಕೃತಕವೆನಿಸಿ ನನ್ನ ಸಲುಗೆಯನ್ನು ಬಳಸಿ ಬರೆದಿರುವುದನ್ನು ಅನ್ಯಥಾ ಭಾವಿಸಬಾರದು. ಬಹುವಚನ ಬಳಸಿದ್ದರೆ ರಾಮಯ್ಯನಿಗೇ ಪಥ್ಯವಾಗುತ್ತಿರಲಿಲ್ಲ.

ರಾಮಯ್ಯ ಮತ್ತು ನನ್ನ ಪರಿಚಯ ನಲವತ್ತನಾಲ್ಕು ವರ್ಷ ಹಳೆಯದು. ಒಡನಾಟಕ್ಕೆ ಮೂವತ್ತೆಂಟು ವರ್ಷ ಇತಿಹಾಸವಿದೆ. ಈ  ಅವಧಿಯಲ್ಲಿ ಅವನ ಅನೇಕ ಮುಖಗಳ ದರ್ಶನವಾಗಿದೆ. ಮಾತುಕತೆಗಳಾಗಿವೆ. ನಾನು ಅವರನ್ನು ಛೆಡಿಸಿದ್ದೇನೆ. ಗೋಳು ಹುಯ್ದುಕೊಂಡಿದ್ದೇನೆ. ಹೆದರಿದ್ದೇನೆ. ನ್ನ ನಡೆಯನ್ನು ಆತ ಅನೇಕಬಾರಿ ಟೀಕಿಸಿದ್ದಾನೆ. ಆತನ ಚಿಂತನೆಗಳು, ವಾದ ಕಂಡು ಗೌರವ ತಾಳಿದ್ದೇನೆ. ಅಪ್ಪಿಕೊಂಡಿದ್ದೇನೆ. ಮುದ್ದು ಮಾಡಿದ್ದೇನೆ. ನಮ್ಮ ನಡುವೆ ಎಷ್ಟು ಭಯಂಕರ ಸ್ನೇಹ ಎಂದರೆ ಒಮ್ಮೆ “ರಾಮಯ್ಯ ನೀನು ನಿಧನವಾದರೆ ಸರಿಯಾಗಿ ನಿನಗೊಂದು ಸೂಕ್ತವಾದ ಅಬಿಚುರಿ-ಶ್ರದ್ದಾಂಜಲಿ- ಬರೆಯುವ ಸಾಮರ್ಥ್ಯ ನನ್ನ ಬಿಟ್ಟರೆ ಯಾರಿಗೂ ಇಲ್ಲ. ನಿನಗಿಂತ ಮೊದಲು ನಾನು ಹೋದರೆ ಯಾರೂ ಇರುವುದಿಲ್ಲ. ಈಗಲೇ ಒಂದು ಬರೆದಿಟ್ಟುಬಿಡುತ್ತೇನೆ” ಎಂದಿದ್ದೆ. ಅದು ಮುಂಗಾರು ದಿನಗಳ ಕಾಲ. ಅಂದಿನ ಹುಡುಗಾಟದ ದಿನಗಳವು. ಆದರೆ ರಾಮಯ್ಯ “ಪುಟ್ಟಾ ಬರೀ ನೋಡೋಣ. ನನಗೊಪ್ಪಿಯಾಗಬೇಕು ಅಷ್ಟೆ” ಎಂದ, ನಗುತ್ತಾ. ರಾಮಯ್ಯ ನನ್ನನ್ನು ಯಾವಾಗಲೂ ಕರೆಯೋದು ಪುಟ್ಟಾ…., ಪುಟ್ಟು… ಎಂದೇ. ಅದು ವಡ್ಡರ್ಸೆ ಅವರು ಕರೆದು ಮಾಡಿದ ರೂಢಿ. ವಿಚಿತ್ರವೇನೆಂದರೆ ನಾನು ಅಂದು ಶತಾಯುಷಿಯಾದ ರಾಮಯ್ಯನ ಕುರಿತು ತಮಾಷೆಯಾದ ಶ್ರದ್ಧಾಂಜಲಿ ಬರೆದದ್ದು. ಅದನ್ನು ರಾಮಯ್ಯ ಮೆಚ್ಚಿಕೊಂಡದ್ದು. ಮುಂಗಾರಿನ ಬಳಗದ ಮುಂದೆ ಓದಿ ನಗಾಡಿದ್ದು. ಕೊನೆಗೆ ಈ ಜೋಕು ಇಲ್ಲಿಗೇ ಮುಕ್ತಾಯವಾಗಲಿ ಎಂದು ಹರಿದು ಹಾಕಿದ್ದು. ಈ ಘಟನೆಯ ವೈಚಿತ್ರ್ಯವೇನೇ ಇರಲಿ ಬೇರೆ ಯಾರಾದರೂ ರಾಮಯ್ಯನಿಗೆ ಈ ಪ್ರಸ್ತಾವ ಮಾಡಿದ್ದರೆ ಬುಂಡೆಗೆ ಬಿಸಿನೀರು ಕಾಯಿಸುತ್ತಿದ್ದ. ನನ್ನ ಅವನ ನಡುವಿನ ಸಲುಗೆ, ಪ್ರೀತಿ ಅಷ್ಟಿತ್ತು ಎಂದು ಹೇಳಲಷ್ಟೆ ಇದನ್ನು  ಪ್ರಸ್ತಾಪಿಸಿದ್ದು.

ಯಾಕೆಂದರೆ ರಾಮಯ್ಯನ ವ್ಯಕ್ತಿತ್ವ ನನಗಾಗಲೇ ಪರಿಚಯವಾಗಿ ಸಾಕಷ್ಟು ವರ್ಷಗಳಾಗಿತ್ತು. ೧೯೭೮ರಲ್ಲಿ ನಮ್ಮ ಕಾಲೇಜಿನಲ್ಲಿ ಜಾತಿ ವಿನಾಶ ವಿಚಾರ ಸಂಕಿರಣಕ್ಕೆ ಹೊರಗಡೆಯಿಂದ ಬಂದವರಲ್ಲಿ ಅತಿ ಹೆಚ್ಚು ಮಂದಿ ಕೋಲಾರದವರಾಗಿದ್ದರು. ನಮ್ಮ ಚಂದ್ರಶೇಖರ ನಂಗಲಿಯವರು ಹೇಳುವ ಹಾಗೆ ಕೋಲಾರದವರು ಸಾಕಷ್ಟು ’ತಲಕಿಂದ್ಲು’ ಪಾರ್ಟಿ. ಕೆವೈಎನ್ ಪ್ರಕಾರ ಕೋಲಾರವೇ ಒಂದು ಸೆಪರೇಟ್ ಯೂನಿವರ‍್ಸ್. (ಅವರ ಪ್ರಕಾರ ನನಗೆ ಬರವಣಿಗೆ ಬರಲು ನಾನು ನಾಲ್ಕು ವರ್ಷ ಕೆ.ಜಿ.ಎರ್ಫನಲ್ಲಿ ವ್ಯಾಸಂಗ ಮಾಡಿದ್ದಂತೆ!) ಹಾಗಾಗಿ ಅಲ್ಲಿಗೆ ಬಂದ ಕೋಲಾರದ ಜನರಲ್ಲಿ ರಾಮಯ್ಯ ಸಹ ಇದ್ದರು. ಕೃಷ್ಣನ ಬಣ್ಣದ ಸುಂದರ ಮುಖದಲ್ಲಿ ಉರಿಗಣ್ಣು ಹೊತ್ತ ನಮ್ಮ ಸಮಕಾಲೀನ (ನನಗಿಂತ ಮೂರು ವರ್ಷ ದೊಡ್ಡವ) ರಾಮಯ್ಯ ಸಂವಾದದಲ್ಲಿ ಎತ್ತುತ್ತಿದ್ದ ಪ್ರಶ್ನೆಗಳು ಎಲ್ಲರು ನಡುಗುವಷ್ಟು ಪ್ರಖರವಾಗಿದ್ದವು. ನಮ್ಮ ಕ್ಲಾಸ್ಮೇಟ್ ನಾರಾಯಣಸ್ವಾಮಿ ರಾಮಯ್ಯನನ್ನು ತೋರಿಸಿ ಕೋಲಾರದಲ್ಲಿ ಓದುವಾಗ ನನ್ನ ಸೀನಿಯರ್ ಎಂದ. ಅವನ ಪ್ರಕಾರ  ರಾಮಯ್ಯ ಹೈಸ್ಕೂಲು- ಕಾಲೇಜಿನಲ್ಲಿರುವಾಗಲೇ ವಿದ್ಯಾರ್ಥಿನಿಲಯಕ್ಕೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳ ತೊಳ್ಳೆನಡುಗಿಸಿದವನು. ಸವರ್ಣೀಯ ವಿದ್ಯಾರ್ಥಿಗಳ ಜಾತಿಕೊಬ್ಬಿಗೆ ಮದ್ದು ಅರೆದವನು. ಕೋಪಬಂದಾಗ ಒಬ್ಬನಿಗೆ ಚಪ್ಪಲಿಸೇವೆ ಮಾಡಿದ್ದ ಆ ಬೆಂಕಿಯ ಚಂಡಿನ ನುಡಿ ಚಿತ್ರ ಬಿಡಿಸಿ ಬೆಚ್ಚಿಬೀಳಿಸಿದ್ದ. ಜೊತೆಗೆ ಎಸ್ಸೆಲ್ಸಿಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡು ಅದನ್ನು ಮೊದಲ ದರ್ಜೆಯಲಿ ಪಾಸು ಮಾಡಿದ ಪ್ರತಿಭಾವಂತನೆಂದು ಹೇಳಿ ಮತ್ತಷ್ಟು ಅಚ್ಚರಿಪಡಿಸಿದ್ದ. ಅದ ಕೇಳಿ ಒಳಗೊಳಗೇ ಅಭಿಮಾನ ಮೂಡಿದ್ದು ಸುಳ್ಳಲ್ಲ. ಅಂದಿನ ವಿಚಾರ ಸಂಕಿರಣದ ಉಸ್ತುವಾರಿ ಹೊತ್ತವರಲ್ಲಿ ಒಬ್ಬನಾದ ನನಗೆ ಅನೇಕರು ಪರಿಚಯವಾದಂತೆಯೇ ಬೇರೊಂದು ಯೂನಿವರ್ಸ್‌ನ ಈ ತಲೆಕಿಂದ್ಲು ಪಾರ್ಟಿ ಸಹ ಪರಿಚಯವಾಯ್ತು.

೧೯೮೦ರಲ್ಲಿ ಪದವಿ ಪರೀಕ್ಷೆ ಮುಗಿಸಿ ರಜಾ ಕಾಲದಲ್ಲಿ ಕೆ. ಜಿ.ಎಫ್‌ನ ಅಣ್ಣನ ಮನೆಯಲ್ಲಿದ್ದೆ. ಅದೇ ಸಮಯದಲ್ಲಿ ರಾಮಯ್ಯ ಅಲ್ಲಿನ ರಾಬರ‍್ಟ್‌ಸನ್ ಪೇಟೆಯ ಕೆನರಾ ಬ್ಯಾಂಕ್ನಲ್ಲಿ ಕ್ಯಾಷಿಯರ್ ಆಗಿದ್ದ. ಆ ಬ್ಯಾಂಕ್ ನಮ್ಮ ಬಾಡಿಗೆ ಮನೆಯ ಮುಂಭಾಗದಲ್ಲಿಯೇ ಇತ್ತು. ಬ್ಯಾಂಕಿನ ಸಮಯದಲ್ಲಿ ಭೇಟಿ ಮಾಡುತ್ತಿದ್ದೆ. ಆಕರ್ಷಕ ಮಾತಿನ ರಾಮಯ್ಯ ಅದಾಗಲೇ ಕವಿಯೂ ಆಗಿದ್ದ. ನಮಗೆಲ್ಲರಿಗಿಂತಲೂ ವೈಚಾರಿಕವಾಗಿ ಪ್ರಾಜ್ಞನಂತೆ ಮಾತನಾಡುತ್ತಿದ್ದ. ದಲಿತ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದ. ತುಷಾರ ಪತ್ರಿಕೆಯು ಆಗ ಚಿತ್ರ-ಕವನ ಸ್ಪರ್ಧೆ ಏರ‍್ಪಡಿಸುತ್ತಿತ್ತು. ಅವರು ಕೊಟ್ಟ ಚಿತ್ರಕ್ಕೆ ಕವನ ಬರೆಯುವ ಸವಾಲನ್ನು ರಾಮಯ್ಯ ಕೈಗೆತ್ತಿಕೊಂಡು ಕವನ ರಚಿಸುತ್ತಿದ್ದ. ವಿದ್ಯುತ್ ತಂತಿಯ ಮೇಲೆ ಸಾಲಾಗಿ ಕುಳಿತ ಹಕ್ಕಿಗಳಿರುವ ಚಿತ್ರಕ್ಕೆ ರಾಮಯ್ಯ ಬರೆದ ‘ಶಾಂತಿ ದೂತರ ಶೃಂಗ ಸಭೆ’ ಕವನಕ್ಕೆ ಬಹುಮಾನ ಬಂದಿತ್ತು. ಅದರ ಶೀರ್ಷಿಕೆ ಮಾತ್ರ ನನಗೆ ನೆನಪಿದೆ. ಆಗ ಅಜ್ಞಾತ ಎನ್ನುವ ಹೆಸರಲ್ಲಿ ರಾಮಯ್ಯ ಕವನ ರಚಿಸುತ್ತಿದ್ದರು.

ನನ್ನ ರಾಮಯ್ಯನ ಭೇಟಿ ಗಾಢವಾದದ್ದು ವಿಚಿತ್ರ ಸನ್ನಿವೇಶವೊಂದರಲ್ಲಿ.. ಆ ಕಾಲಕ್ಕೆ ಆಧುನಿಕ ಎನ್ನಬಹುದಾದ ಕೆ.ಜಿ.ಎಫ್.ನ ಎಂ.ಜಿ. ಮಾರ್ಕೆಟ್ ದಾಟಿ ಪೂರ್ವಾಭಿಮುಖವಾಗಿ ಪ್ರಿಚರ್ಡ್ಸ್ ರಸ್ತೆಯಲ್ಲಿ ನಡೆದರೆ ಎಡಬಾಗದಲ್ಲಿ ಓ ಕೆ ಹೇರ್ ಸ್ಟೈಲಿಸ್ಟ್ಸ್ ಎಂಬ ಸಲೂನ್ ಇತ್ತು. ಅದೊಂದು ವಿಶಾಲವಾದ ಸಲೂನ್. ಅಲ್ಲಿನ ಪ್ರಮುಖ ಆಕರ‍್ಷಣೆಯೆಂದರೆ ಪ್ರವೇಶದಲ್ಲಿಯೇ ವಿಶಾಲವಾದ ಅಂಗಳದಲ್ಲಿ ಜೋಡಿಸಿದ್ದ ಕುರ್ಚಿಗಳ ಮುಂಭಾಗದ ಟೀಪಾಯಿ ಮತ್ತು ಒಂದು ಪಕ್ಕದ ಗೋಡೆಗಗೆ ಆನಿಸಿದ ಮೇಜಿನ ಮೇಲೆ ಹರಡಿದ ತಮಿಳು, ತೆಲುಗು, ಇಂಗ್ಲಿಷ್ ದಿನಪತ್ರಿಕೆಗಳು, ಕಾರವಾನ್, ಸಂಡೆ, ಸುಧಾ, ಕುಮುದಮ್, ಕಲ್ಕಿಯಂಥ ನಿಯತಕಾಲಿಕೆಗಳು. ಬಾಬು ವಿಚಾರವಾದಿ. Poliglot.  ಮೂರು ನಾಲ್ಕು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ವ್ಯಕ್ತಿ. ನನ್ನ ಸರದಿ ಬರುವವರೆಗೆ, ಪತ್ರಿಕೆ, ಮ್ಯಾಗಜೈನ್‌ಗಳನ್ನು ಓದುತ್ತಾ ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸಂಗತಿಗಳ ಬಗ್ಗೆ ಬಾಬು ಮಾಡುತ್ತಿದ್ದ ವ್ಯಾಖ್ಯಾನಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಅಲ್ಲಿಗೆ ಬರುವವರೂ ಬಾಬುವಿನಂತ ಹರಟೆ ಮಲ್ಲರೇ!. ಹೇರ್‌ಸ್ಟೈಲ್ ಸಲೂನೊಂದು ಸಮಕಾಲೀನ ಸಂಗತಿಗಳ ಜಿಜ್ಞಾಸೆಯ ಕೇಂದ್ರವಾಗಿರುವುದನ್ನು ಮೊದಲಬಾರಿಗೆ ಕಂಡದ್ದು ಅಲ್ಲಿಯೇ. ( ತನ್ನ ವಿಚಾರಗಳಿಂದಲೇ ಮುಂದೆ ಬಾಬು ಪೊಲೀಸರ ಅತಿಥಿಯಾಗಿ ಸಂಕಷ್ಟ ಅನುಭವಿಸದರೆಂದು ತಿಳಿಯಿತು)

ಇಂಥ ಸಲೂನ್‌ಗೆ ರಾಮಯ್ಯ ಒಮ್ಮೆ ಧುಮು ಧುಮನೆ ಪ್ರವೇಶ ಮಾಡಿ ಬಾಬುವಿನ ಮುಂದೆ ನಿಂತು’’ ಅರ್ಜೆಂಟ್ ಐವತ್ತು’’ ಎಂದ. ಐವತ್ತು ರೂಪಾಯಿ ಪಡೆದು ಬಂದಷ್ಟೇ ಬಿರುಸಿನಿಂದ ರಾಮಯ್ಯ ನಿರ್ಗಮಿಸಿದ. ಮತ್ತೊಂದು ದಿನ ರಾಮಯ್ಯ ಸಿಕ್ಕಾಗ ಈ ದೃಶ್ಯಕ್ಕೆ ವಿವರಣೆ ದೊರೆಯಿತು. ಆ ದಿನ ಬ್ಯಾಂಕ್ ವ್ಯವಹಾರ ವೇಳೆ ಮುಗಿದ ನಂತರ ಕ್ಯಾಶ್ ಕ್ಲೋಸ್ ಮಾಡಿದಾಗ ಐವತ್ತು ರೂಪಾಯಿ ಕೊರತೆಯಾಗಿತ್ತು. ಎಣಿಸಿಕೊಡುವ ಭರದಲ್ಲಿ ರಾಮಯ್ಯ ಯಾರಿಗೋ ಐವತ್ತು ರೂಪಾಯಿ ಹೆಚ್ಚಿಗೆ ಕೊಟ್ಟಿದ್ದ. ಕ್ಯಾಶ್ ಕ್ಲೋಸ್ ಮಾಡಲು ರಾಮಯ್ಯನಿಗೆ ಗೆಳೆಯರಾಗಿದ್ದ ಬಾಬು ಹತ್ತಿರ ಸಾಲಕ್ಕೆ ಬಂದಿದ್ದ. ಕ್ಯಾಶ್‌ನಲ್ಲಿ ಹಣ ಕಳೆದುಕೊಳ್ಳುವ ಸಂಗತಿ ಬಾಬುವಿಗೆ ರಾಮಯ್ಯ ಹೊಸದಾಗಿರಲಿಲ್ಲ. ಹಾಗಾಗಿ ರಾಮಯ್ಯ ಬಿರುಸಿನಿಂದ ಬಂದರೆ ಬೇಡಿಕೆ ಅರ್ಥವಾಗುತ್ತಿತ್ತು. ಬ್ಯಾಂಕ್ ಮುಗಿದ ನಂತರ ಕೋಲಾರಕ್ಕೆ ಹೋಗುವ ಮುನ್ನ ಬಾಬು ಸಲೂನ್‍ಗೆ ಹೋಗುತ್ತಿದ್ದ ರಾಮಯ್ಯನನ್ನು ಅಲ್ಲಿಯೇ ಸಂಧಿಸುತ್ತಿದ್ದೆ.

ರಾಮಯ್ಯನಿಗೆ ಸ್ಥಿರವಾದ ಬ್ಯಾಂಕ್ ಉದ್ಯೋಗವಿದ್ದರೂ ಆತನ ತಹತಹ ಒಂದೆಡೆ ಕೂರಲು ಬಿಡುತ್ತಿರಲಿಲ್ಲ. ಆಗಲೇ ಹೇಳಿದಂತೆ ಅವನೊಂದು Rolling Stone. ಲಂಕೇಶ್ ಪತ್ರಿಕೆಯಿಂದ ಜಾಣಗೆರೆ, ಮಾಸಡಿ ಮೊದಲಾದವರು ಹೊರಹೋದಮೇಲೆ ಬ್ಯಾಂಕಿಗೆ ರಜೆ ಹಾಕಿ ಲಂಕೇಶ್ ಪತ್ರಿಕೆಗೆ ಹೋದರು. ಈ ಮೊದಲು ಪಂಚಮ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವವಿತ್ತು.  ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ ಒಂದು ವರ್ಷದ ಅವಧಿಯಲಿ ಪತ್ರಿಕೋದ್ಯಮ ಕರಗತವಾಯ್ತು “ಲಂಕೇಶರ ಒಂದು ಪುಟ ಒದಿದರೆ ಸಾಕು  ಬಾಷೆಯ ಪ್ರಾಣಧಾತು ಯಾವುದೆಂದು ಗೊತ್ತಾಗುತ್ತಿತ್ತು. ವಾಕ್ಯ ಚಿಹ್ನೆಗಳು: ಕಾಮಾ, ಫುಲ್‌ಸ್ಟಾಪ್, ಕೋಟ್, ಆವರಣ… ಲಂಕೇಶರ ಶ್ರದ್ಧಾಪೂರ್ಣ ಕೊಡುಗೆ .. ಅದನ್ನು ನಾನು ಕಲಿತೆ” ಎಂದು  ರಾಮಯ್ಯನೇ ಹೇಳಿದ್ದು.

೧೯೮೨ರಲ್ಲಿ ರಾಮಯ್ಯ ಬೆಂಗಳೂರಿನ ನೃಪತುಂಗ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿದ್ದ. ಅದಾಗಲೇ ಅವನ ಹೋರಾಟದ ಹಾಡುಗಳು ಚಳವಳಿಗಾರರಲ್ಲಿ ಅನುರಣಿಸುತ್ತಿದ್ದವು. ಪ್ರಜಾವಾಣಿಯಲ್ಲಿದ್ದ ನಾನು ಎನ್ ಎಸ್ ಶಂಕರನನ್ನು ಕರೆದುಕೊಂಡು ಹೋಗಿ ಪರಿಚಯಿಸಿದೆ. ಕೆಲವೇ ದಿನಗಳಲ್ಲಿ ಯಾವುದೋ ವಿಷಯದಲ್ಲಿ ಕೊಬ್ಬಿದ ಮ್ಯಾನೇಜರಿಗೆ ಬಿಸಿ ಮುಟ್ಟಿಸಿದ ರಾಮಯ್ಯ ಸಸ್ಪೆಂಡ್ ಆದ. ಏನೂ ಆಗಿಲ್ಲವೆಂಬಂತೆ ಮತ್ತೆ ನೇಮಕವಾಗುವವರೆಗೆ, ಸಂಘಟನೆ, ನಾಟಕ, ಹೋರಾಟ, ಬರಹದಲ್ಲಿ ತೊಡಗಿಸಿಕೊಂಡ. ೧೯೮೪ರ ಆರಂಭದಲ್ಲಿ ಮುಂಗಾರು ಪತ್ರಿಕೆ ಆರಂಭವಾಗುವ ಸೂಚನೆ ಸಿಕ್ಕಾಗ ಆ ಪ್ರಯೋಗದಲ್ಲಿ ಭಾಗಿಯಾಗುವ ಇಚ್ಛೆ ಪ್ರಕಟಿಸಿದ. ಬ್ಯಾಂಕ್‌ಗೆ ರಾಜೀನಾಮೆ ನೀಡಿ ಬಂದರೆ ಮಾತ್ರ ಪತ್ರಿಕೆಯಲ್ಲಿ ಅವಕಾಶ ಎಂದು ಇಂದೂಧರ ಹಾಕಿದ ಶರತ್ತಿಗೆ ಮರುಮಾತನಾಡದೆ ರಾಜೀನಾಮೆ ಎಸೆದು ಬಂದ!

ಮುಂಗಾರುವಿನಲ್ಲಿ ವಾರದ ಪುರವಣಿಯ ಜವಾಬ್ದಾರಿ ಹೊತ್ತ ರಾಮಯ್ಯನ ಪ್ರಯೋಗಗಳು ಒಂದೆರಡಲ್ಲ. ಆರಂಭದ ವಿಶೇಷ ಸಂಚಿಕೆಗೆ ಕೃಪಾಕರ ಸೇನಾನಿ ಅವರು ತೆಗೆದ ಹಕ್ಕಿಯ ಫೋಟೋಗಳನ್ನು ಆರಿಸಿ ರೂಪಕವೊಂದನ್ನು ತಯಾರಿಸಿದ. ಅಲ್ಲಿನ ಚಿತ್ರ-ಕಥೆ ಸಂಚಿಕೆಯ ಹೈಲೈಟ್ ಎನಿಸಿತು. ಕೃಪಾಕರ ಸೇನಾನಿ ಅವರ ಚಿತ್ರಗಳ ಪ್ರಕಟಣೆಗೆ ಮೊದಲು ಕಾರಣನಾದವನು ರಾಮಯ್ಯ. ಆತ ಚಿತ್ರಗಳಿಗೆ ನೀಡಿದ ಶೀರ್ಷಿಕೆಯ ಚಂದವನ್ನು ಇಂದಿಗೂ ಆ ಕ್ಯಾಮರಾ ಜೋಡಿ ನೆನೆಯುತ್ತದೆ. 

ಒಮ್ಮೆ ಮುಂಗಾರು ಕಚೇರಿಗೆ ಗಡ್ಡಬಿಟ್ಟ, ಪಂಚೆ ಉಟ್ಟ ಸಣಕಲು ದೇಹದ ವ್ಯಕ್ತಿಯೊಬ್ಬರ ಪ್ರವೇಶವಾಯಿತು. ರಾಮಯ್ಯನ ಕಣ್ಣುಗಳು ಮಿನುಗಿದವು. ಬಂದ ವ್ಯಕ್ತಿ ’ರಾಮಯ್ಯ’ ಎಂದಿತು. ರಾಮಯ್ಯ ’ಜಾನ್’ ಎಂದು ಉದ್ಗರಿಸಿ ತಬ್ಬಿಕೊಂಡ.  ಅಗ್ರಹಾರತ್ತಿಲ್ ಕಳುದೈ ಖ್ಯಾತಿಯ ಮಲಯಾಳಂನ ನಿರ್ದೇಶಕ ಜಾನ್ ಅಬ್ರಹಾಂ ರವರು ಸಾಗರದ ನೀನಾಸಂಗೆ ಹೋಗುವ ಹಾದಿಯಲ್ಲಿ ಮಂಗಳೂರಿನಲ್ಲಿ ಇಳಿದು ರಾಮಯ್ಯನನ್ನು ಹುಡುಕಿ ಬಂದಿದ್ದರು. ರಾಮಯ್ಯ ಅವರ ಪರಿಚಯವಿದೆ ಎಂದು ಹೇಳಿದ್ದ. ಆದರೆ ಇಷ್ಟು ಗಾಢವಾಗಿರುವುದನ್ನು ಹೇಳಿರಲಿಲ್ಲ. ತಕ್ಷಣವೇ ಮೊದಲೇ ನಿರ‍್ಧರಿಸಿದವರಂತೆ ಇಬ್ಬರೂ ಕಚೇರಿಯಿಂದ ಹೊರನಡೆದರು. ಅನಂತರ ಅಂಗಾರಗುಂಡಿಯಲ್ಲಿ ಬೆಳಗಿನವರೆಗೂ ಮಾತನಾಡುತ್ತಾ ರಾತ್ರಿಯನ್ನು ಕೊಂದರೆಂದು ಜೊತೆಗಾರರು ಹೇಳಿದರು.

ಮುಂಗಾರು ಪ್ರಯೋಗದ ನಂತರ ಗೆಳೆಯರು ಆರಂಭಿಸಿದ ಸುದ್ದಿ ಸಂಗಾತಿಯಲ್ಲಿ ಮುಂದುವರೆದ ರಾಮಯ್ಯ ಅದನ್ನು ತೊರೆದದ್ದೂ ಜಾನ್ ಅಬ್ರಹಾಂ ಕಾರಣದಿಂದಲೇ! ೧೯೮೭ರಲ್ಲಿ ಜಾನ್ ಅಬ್ರಹಾಂ ಅನಿರೀಕ್ಷಿತವಾಗಿ ಸಾವನ್ನಪ್ಪಿದರು. ಅದು ರಾಮಯ್ಯನಿಗೆ ಆಘಾತಕಾರಿಯಾಗಿತ್ತು. ನಾನು ಸರ‍್ಕಾರಿ ಕೆಲಸದಲ್ಲಿದ್ದೆ. ಆದರೆ ಎರಡು ಬೇರೆ ಬೇರೆ ಹೆಸರಿನಲ್ಲಿ ಖಾಯಂ ಆಗಿ ಸುದ್ದಿ ಸಂಗಾತಿಗೆ ಅಂಕಣ ಬರೆಯುತ್ತಾ ಸುದ್ದಿ ಸಂಗಾತಿ ಕಚೇರಿಗೆ ಆಗಾಗ್ಗೆ ಹೋಗಿ ಬರುತ್ತಿದ್ದೆ. ಆ ದಿನ ರಾಮಯ್ಯ ವ್ಯಗ್ರವಾಗಿದ್ದ. ಜಾನ್ ಬದುಕು, ಸಾಧನೆಯ ಬಗ್ಗೆ ಬಹು ದೀರ್ಘವಾದ ಲೇಕನವೊಂದನ್ನು ಬರೆದಿದ್ದ. ಆದರೆ ಅಷ್ಟು ದೀರ್ಘ ಲೇಖನವನ್ನು ಪತ್ರಿಕೆಯಲ್ಲಿ ಹಾಕಲು ಸಾಧ್ಯವಿಲ್ಲವೆಂದು, ಸಂಕ್ಷಿಪ್ತಗೊಳಿಸಲು ಇಂಧೂಧರನ ಸಲಹೆ ಒಪ್ಪಿತವಾಗಿರಲಿಲ್ಲ. ಅವನನ್ನು ಎಬ್ಬಿಸಿಕೊಂಡು ಮನೆಗೆ ಕರೆತಂದೆ. ಊಟ ಮಾಡಲು ನಿರಾಕರಿಸಿದ. ಊರಿನಿಂದ ಬಂದಿದ್ದ ತಂಗಿ ಸ್ವಲ್ಪವಾರೂ ಊಟಮಾಡಣ್ಣ ಎಂದಾಗ ಕರಗಿ ನೀರಾದ. ಊಟ ಮಾಡಿದ. ಜಾನ್‌ನ ಅನಿಯಂತ್ರಿತ ಬದುಕು, ಅತನ ಪ್ರತಿಭೆ, ಕ್ರಿಯಾಶೀಲತೆ, ಸಿನೆಮಾವನ್ನು ಗ್ರಹಿಸುವ ಮತ್ತು ಅದನ್ನೊಂದು ಜನಮುಖಿ ಚಳವಾಳಿಯಾಗಿಸಲು ಆತ ಮಾಡಿದ ಪ್ರಯತ್ನಗಳೆಲ್ಲವನ್ನು ಆಪ್ತಶೈಲಿಯಲ್ಲಿ ರಾಮಯ್ಯ ಬರೆದಿದ್ದ. ಊಟವದ ನಂತರ ತಡೆದರೂ ಕೇಳದೆ ಜಾನ್ ಸಮಾಧಿ ನೋಡುವವರೆಗೂ ಸಮಾಧಾನವಿಲ್ಲ ಎಂದು ಹೇಳಿ ಕೇರಳಕ್ಕೆ ಹೊರಟೇಬಿಟ್ಟ.

ಎಷ್ಟೋ ದಿನಗಳ ನಂತರ ರಾಮಯ್ಯ ಮರಳಿಬಂದ. ಬರೆದಿದ್ದ ಲೇಖನ ಕಳೆದುಕೊಂಡಿದ್ದ. ಸುದ್ದಿ ಸಂಗಾತಿಗೆ ಹೋಗಲಿಲ್ಲ. ಹಲವಾರು ಪ್ರಯೋಗಗಳಲ್ಲಿ ತೊಡಗಿಸಿಕೊಂಡ. ಸಿನೆಮಾಗಳಿಗೆ ಚಿತ್ರಕತೆ ಬರೆದ. ನಾಯಿ ತಿಪ್ಪ ಸೇರಿದಂತೆ ಹಲವಾರು ನಾಟಕ ಬರೆದ. ದೂರದರ್ಶನ ಧಾರಾವಾಹಿ ಸಂಕ್ರಾಂತಿಯ ಎಪಿಸೋಡುಗಳಿಗೆ ಸಂಭಾಷಣೆ ರಚಿಸಿದ. ಗೆಳೆಯರೊಡನೆ ಚೌಕಿ ಆರಂಭಿಸಿದ.  ವಿಶಿಷ್ಟವಾದ ಮಕ್ಕಳ ಶಿಬಿರ ಏರ್ಪಡಿಸಿದ. ಸಂಸಾರಿಯಾದರೂ ಸಂಚಾರಿಯಾದ.  ದಿನಕ್ಕೊಂದು ರೂಪಾಯಿ ಕೂಡಿಹಾಕಿ ಸಂಸ್ಕೃತಿಯನ್ನು ಬೆಳೆಸುವ ಯೋಜನೆ ಹುಟ್ಟು ಹಾಕಿದ. ಆದಿಮ ಬಳಗ ಸ್ಥಾಪಿಸಿದ. ಶಿಕ್ಷಣ ಇಲಾಖೆಗೆ ಒಗಟಿನ ರಾಣಿ, ರತ್ನಪಕ್ಷಿ ನಾಟಕ ರಚಿಸಿದ. ಜನಪದ ಶಿಶು ಗೀತೆಗಳನ್ನು ಕಲೆ ಹಾಕಿದ. ಮಾಡುತ್ತಿದ್ದ ಪ್ರಯೋಗಗಳು ಮುಗಿಯುವ ಹೊತ್ತಿಗೆ ಅನಿರೀಕ್ಷಿತ ಅಡೆತಡೆಗಳು ಎದುರಾಗುವುದು ಸಾಮಾನ್ಯ ಎಂಬ ಸ್ಥಿತಿ ಅವನ ಬದುಕಲ್ಲಿ ಉಂಟಾಯಿತು. ಅಂಥವುಗಳಿಗೆಲ್ಲ ಸಾಕ್ಷಿಯಾದೆ. ದಲಿತ ಬದುಕಿನ ಅನನ್ಯ ದಾಖಲೆಯೆನಿಸಿದ ’ತಲಪರಿಗೆ’ಯಂಥ ಬೃಹತ್ ಗ್ರಂಥ ರೂಪಿಸಿದ. ಅದು ಮುಗಿಯುವ ಹೊತ್ತಿಗೆ ತಾನು ಮತ್ತು ಜೊತೆಯವರೂ ಹೈರಾಣವಾದರು. ಅದರದೇ ಒಂದು ದೊಡ್ಡ ಕತೆ.

ಈ ನಡುವೆ ರಾಮಯ್ಯ ಮತ್ತು ನನ್ನ ನಡುವಿನ ಭೇಟಿ ಸುಸಂಜೆಗಳು ನಿಯತವಾಗಿ ಜರುಗುತ್ತಿದ್ದವು. ಒಮ್ಮೆ ನಮ್ಮ ಮನೆಯಲ್ಲಿ ಸುಸಂಜೆಯೊಂದನ್ನು ಕಳೆಯುವಾಗ ಹತ್ತು ಎಕರೆ ಜಮೀನಿನನಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ಕೇಂದ್ರವನ್ನು ತೆರೆಯುವ ಸುಂದರ ಕನಸನ್ನು ಹರಡಿದ. ಲಹರಿಯಲ್ಲಿದ್ದ ನಾನು ಅದನ್ನು ತಿರಸ್ಕರಿಸಿ, ಸ್ಥಾವರ ನಿರ್ಮಾಣಕ್ಕೆ ಭೂಮಿಯನ್ನು ಹೊಂದಿಸುವ ಬದಲು ನಮ್ಮದೇ ಆಸ್ತಿಯೆನಿಸಿದ ಸರ್ಕಾರಿ ಶಾಲೆ, ವಿದ್ಯಾರ್ಥಿ ನಿಲಯ,  ಕಾಲೇಜು, ಸಮುದಾಯ ಭವನಗಳು, ಮೈದಾನಗಳು ಕೊನೆಗೆ ಮುಜರಾಯಿ ಇಲಾಖೆಯ ಆವರಣಗಳೆ ನಮ್ಮ ಕನಸುಗಳಿಗೆ ಸಾಕಾರ ಕೊಡಬಹುದಾದ ಸಾಧ್ಯತೆಗಳನ್ನು ವಿವರಿಸಿದೆ. ಸರ‍್ಕಾರದ ಆಸ್ತಿಗಳನ್ನು ಜನರು ಓನ್ ಮಾಡದಿದ್ದರೆ ವ್ಯರ್ಥವೆಂಬ ವಾದ ಹೂಡಿದೆ.

ಬೆಳಗಾಯಿತು. ಟೀ ಕೂಡ ಕುಡಿಯದೇ ರಾಮಯ್ಯ ಹೊರಟೇಬಿಟ್ಟ.

ನನ್ನ ಮಾತಿನಿಂದ ಬೇಜಾರಾಗಿರಬಹುದೆಂದು ಪೇಚಾಡಿದೆ. ಆದರೆ ಎರಡು ತಿಂಗಳೊಳಗೆ ನಮ್ಮ ಮಹಡಿಯಲ್ಲಿನ ಮಾತು ಮೂರ್ತರೂಪಕ್ಕೆ ಇಳಿದಿತ್ತು. ಅಂದು ಸೀದಾ ಶ್ರೀನಿವಾಸಪುರಕ್ಕೆ ಹೋದ ರಾಮಯ್ಯ ಅಲ್ಲಿನ ಹೈಸ್ಕೂಲಲ್ಲಿದ್ದ ತಮ್ಮ ಪ್ರಿಯ ಗುರು ’ಮರೆತ ದಾರಿಗಳ ಹರಿಕಾರ’ ಶ್ರೀರಾಮರೆಡ್ಡಿಯವರ ನೆರವು ಪಡೆದು ಅಲ್ಲಿನ ಮಕ್ಕಳಿಗೆ ’ ಕಾಗೆ ಕಣ್ಣು ಇರುವೆ ಬಲ’ ನಾಟಕ ಬರೆದು ಕಲಿಸಿ, ಯಶಸ್ವಿ ರಂಗಪ್ರಯೋಗ ನಡೆಸಿಯೇ ಬಿಟ್ಟ.

ಇದರ ಹಿನ್ನೆಲೆಯಲ್ಲಿಯೇ ತೇರಳ್ಳಿ ಬೆಟ್ಟದ ಜಿಂಕೆ ರಾಮಯ್ಯನ ಜೀವ ತಾಣದಲ್ಲಿ ನೆಲೆಯಾದ ರಾಮಯ್ಯ ಆದಿಮ ಬಳಗಕ್ಕೆ ಸಾಂಸ್ಖೃತಿಕ ರೂಪ ಕೊಡಲು ನಿರ್ಧರಿಸಿದ. ಅಂದಿನಿಂದ ಕೋಲಾರದ ಜನತೆಗೆ ಪ್ರತಿಯೊಂದು ಹುಣ್ಣಿಮೆಯೂ ಹಬ್ಬವಾಯಿತು. ನಾಡಿನ ಭೌದ್ಧಿಕ, ಸಾಂಸ್ಕೃತಿಕ ಸಮೂಹಕ್ಕೆ ತೇರಳ್ಳಿ ಬೆಟ್ಟ ಭೇಟಿ ನೀಡಬೇಕಾದ ಶ್ರದ್ಧಾಕೇಂದ್ರವಾಯಿತು. ಗದ್ದುಗೆ ಗೌರವ ರೂಢಿಗೆ ಬಂತು. ಚಲನಚಿತ್ರ ರಸಗ್ರಹಣಗಳು, ಮಕ್ಕಳ ಶಿಬಿರಗಳು ನಡೆದವು. ಆದರೆ Rolling stone gathers no dust. ಅನ್ನುವುದು ಮತ್ತೊಮ್ಮೆ ಪ್ರೂವ್ ಆಯ್ತು.

ಹಲವಾರು ವರ್ಷಗಳ ನಂತರ ರಾಮಯ್ಯ ಆದಿಮದಿಂದ ವಿಮುಖನಾಗಿ ಮತ್ತಷ್ಟು ದಾರಿಗಳನ್ನು ಹುಡುಕಿ ಹೋಗಿದ್ದಾನೆ. ಚುನಾವಣೆಗೂ ನಿಂತಿದ್ದಾನೆ. ಹೊಂಗೆ ಹೂ ಎಂಬ ಪತ್ರಿಕೆಯ ಪ್ರಯೋಗವನ್ನೂ ನಡೆಸಿದ್ದಾನೆ. ಬೆಟ್ಟದ ಮೇಲೆ ಬುಡ್ಡಿದೀಪ ಶೂನ್ಯಶಾಲೆಯನ್ನು ರೂಪಿಸಿದ್ದಾನೆ. ರೈತಸಂಘ ಸೇರಿ ಬಿಟ್ಟಿದ್ದಾನೆ.  ಮಾಡಿದ ಕೆಲಸಗಳೆಲ್ಲ ಚದುರಿಹೋದಂತೆ ಕಂಡರೂ ಚೋಳ ಶಿಲ್ಪಿಯಂತೆ ಮತ್ತೆ ತೊಡಗಿಸಿಕೊಳ್ಳುತ್ತಲೇ ಇದ್ದಾನೆ. ಅವನ ಕ್ರಿಯಾಶೀಲತೆಗೆಂದೂ ತುಕ್ಕು ಹಿಡಿಯಲಿಲ್ಲ. ತಪ್ಪು ಚಿಕ್ಕದು ಮಾಡು ತೆಪ್ಪ ದೊಡ್ಡದು ಮಾಡು ಎಂದು ಹೇಳುತ್ತಲೇ ಸಾಗಿದ್ದಾನೆ. ಪ್ರತಿಯೊಂದು ಅಡೆತಡೆಯ ನಡುವೆಯೂ ಈ ಬಂಡೆ ಉರುಳುತ್ತಲೇ ಸಾಗಿದೆ.

ಒರಿಜಿನಲ್ ಚಿಂತಕನಂತೆ ಯೋಚಿಸುವ ರಾಮಯ್ಯ ಹೇಳಬೇಕಾದ ಮಾತುಗಳಿಗೆ ಎಂದೂ ಡಿಪ್ಲೊಮ್ಯಾಟಿಕ್ ಮುಲಾಮನ್ನು ಹಚ್ಚುವುದಿಲ್ಲ. ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. ಅವನ  ಆದರೆ ಎಲ್ಲವನ್ನೂ ಪ್ರಖರ ಚಿಂತನೆಯಿಂದಲೇ ಸಾವು ಬದುಕಿನ ಆಯ್ಕೆಯಷ್ಟು ತೀವ್ರತೆಯೊಂದ ತುಡಿಯುವ ರಾಮಯ್ಯನಿಗೆ ಆದರ್ಶ, ವಾಸ್ತವ ಮತ್ತು ವ್ಯವಹಾರದ ನಡುವೆ ಸಮತೋಲನ ಕಾಯ್ದುಕೊಳ್ಳುವ ಸೂತ್ರ ಸಿಕ್ಕಿಲ್ಲ. ಅಸಲಿಗೆ ಅಂಥದ್ದೊಂದು ಸೂತ್ರದಲ್ಲಿ ಆತನಿಗೇ ನಂಬಿಕೆಯಿಲ್ಲ.

ಸತ್ತ ಮೂಳೆಗಳಿಂದ ನಾಳೆ ನಮ್ಮ ನೆಲ ಹೊಸ ಬೆಳೆಯೊಂದಿಗೆ ನಳನಳಿಸಿಯೇ ತೀರುತ್ತದೆ ಎಂದು ಅಚಲವಾದ ನಿಲುವಿನ ರಾಮಯ್ಯ ಡಿ ಆರ್ ನಾಗರಾಜ್ ಅವರ ಸಾಹಿತ್ಯ ಕಥನದಲ್ಲಿ ಉಲ್ಲೇಖವಾಗಿರುವ ಚಂದ್ರಕೀರ್ತಿಯಂಥ ವ್ಯಕ್ತಿ. ಯಾರಿಗೂ ಯಾವುದಕ್ಕೂ ಅವನ ಕನಸುಗಳನ್ನು ನಾಶಮಾಡಲು ಸಾಧ್ಯವಾಗದು.

You cannot copy content of this page

Exit mobile version