Home ಅಂಕಣ ಬೆಂಗಳೂರು ಉಳಿಯಲಿ, “ಕನ್ನಡದೂರು” ಬೆಳೆಯಲಿ

ಬೆಂಗಳೂರು ಉಳಿಯಲಿ, “ಕನ್ನಡದೂರು” ಬೆಳೆಯಲಿ

0

“ಕನ್ನಡದೂರು”.. ತುಂಬಾ ಜನಕ್ಕೆ ಈ ರೀತಿಯ ಒಂದು ಊರು ಇದೆಯಾ? ಇದ್ದರೂನು ಕೂಡ ಎಲ್ಲಿದೆ? ಎಷ್ಟು ವರ್ಷದಿಂದ ಅಸ್ತಿತ್ವದಲ್ಲಿದೆ ಅಂತ ಗೊತ್ತಿಲ್ಲ! ನಿಜವಾಗಿಯೂ ಇದು ಅಸ್ತಿತ್ವದಲ್ಲಿ ಇತ್ತ? ಅನ್ನೋ ಪ್ರಶ್ನೆ ಮೂಡುತ್ತದೆ..” ನಾವು ದ್ರಾವಿಡ ಕನ್ನಡಿಗರು ಚಳುವಳಿ ಮುಂದಾಳು, ಅಬಿ ಒಕ್ಕಲಿಗ ಅವರ ಬರಹದಲ್ಲಿ

ಕನ್ನಡದ ಊರು ಅದನ್ನ ನಾವು ವೇಗವಾಗಿ ಹೇಳಿದರೆ ಕನ್ನಡದೂರು ಅಂತ ಆಗುತ್ತೆ. ತುಂಬಾ ಜನಕ್ಕೆ ಈ ರೀತಿಯ ಒಂದು ಊರು ಇದೆಯಾ? ಇದ್ದರೂನು ಕೂಡ ಎಲ್ಲಿದೆ? ಎಷ್ಟು ವರ್ಷದಿಂದ ಅಸ್ತಿತ್ವದಲ್ಲಿದೆ ಅಂತ ಗೊತ್ತಿಲ್ಲ! ನಿಜವಾಗಿಯೂ ಇದು ಅಸ್ತಿತ್ವದಲ್ಲಿ ಇತ್ತ? ಅನ್ನೋ ಪ್ರಶ್ನೆ ಮೂಡುತ್ತದೆ. ಮುಂದಿನ ದಿನಗಳಲ್ಲಿ ಸ್ವಾಯತ್ತ ಕನ್ನಡನಾಡಿಗೆ ಎಲ್ಲಾ ರೀತಿಯ ಸಮಾನತೆಯ ಕನ್ನಡನಾಡಿಗೆ ರಾಜಧಾನಿ ಆಗುವಂತಹ ಊರು ಬೇಕು ಆ ಊರಿನ ಹೆಸರು ಕನ್ನಡದೂರು ಅಂತಿರಬೇಕು. ಇದನ್ನ ಸರಿ ಸುಮಾರು ಆರು ತಿಂಗಳಿಂದ ನಾವುಗಳು ಒಂದಷ್ಟು ಪರಿಶೀಲನೆ ಮಾಡಿ ಯಾಕೆ ಈ ಒಂದು ಜಾಗವೇ ಕನ್ನಡದೂರು ಆಗಬೇಕು ಎಂದು ಐತಿಹಾಸಿಕ ಮತ್ತು ಮುಂದಾಲೋಚನೆಯ ಕಾರಣಗಳನ್ನು ವಿವರಿಸಿದ್ದೇವೆ ಓದಿ.

ಕ್ರಿಸ್ತ ಶಕ 850ರಲ್ಲಿ ರಚಿತವಾಗಿರುವ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬ ಕವಿರಾಜಮಾರ್ಗದ ಸಾಲು ಕನ್ನಡನಾಡಿನ  ತೆಂಕಣ ಬಡಗಣದ ಗಡಿ ತಿಳಿಸುತ್ತದೆ. ಸರಿಸುಮಾರು 12ನೆ ಶತಮಾನದಲ್ಲಿ  ರಾಜ ಪ್ರಭುತ್ವದಲ್ಲಿ ತುಂಗಭದ್ರ ನದಿಯಿಂದ ಮೇಲಕ್ಕೆ ಸೇವುಣರಿಗೆ ಮತ್ತು ಕೆಳಕ್ಕೆ ಹೊಯ್ಸಳರಿಗೆ ಎಂದು ಹಂಚಿಕೊಂಡು ಕನ್ನಡಿಗರನ್ನು ಹೊಯ್ಸಳ ರಾಜರು ಮತ್ತು ಸೇವುಣ ರಾಜರು ದೂರ ದೂರ ಮಾಡಿಬಿಟ್ಟರು. ನಂತರ ವಸಾಹತು ಕಾಲಘಟ್ಟದಲ್ಲಿ ಮೈಸೂರು, ಮುಂಬಯಿ, ಮದ್ರಾಸ್, ಹೈದರಾಬಾದ್‌ಗಳ ನಡುವೆ ಹಂಚಿಹೋದರು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಹೀಗೆ ನಿರಂತರವಾಗಿ ಒಡೆಯುತ್ತಲೇ ಹೋದ ಕನ್ನಡಿಗರು ಮತ್ತೆ ಆಡಳಿತಾತ್ಮಕವಾಗಿ ಒಂದಾದದ್ದು, 750 ವರ್ಷಗಳ ಆನಂತರ ಕರ್ನಾಟಕ ಏಕೀಕರಣ ಚಳುವಳಿ ಮೂಲಕ ಅಂದರೆ 1956 ನವೆಂಬರ್ 1 ರಂದು.1973 ರ ವರೆಗೂ ಮೈಸೂರು ರಾಜ್ಯದವರಾಗಿದ್ದ ಕನ್ನಡಿಗರು ನಂತರ ಕರ್ನಾಟಕದವರಾದರು. ಪ್ರಸ್ತಕ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಮತ್ತು ಹಳೆ ಮೈಸೂರು ಸೀಮೆಗಳು ಸಂಗಮವಾಗುವ ಜಾಗವನ್ನೆ ನಾವು ಕನ್ನಡದೂರು ಎಂದು ಆದೇಶ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಲು ಶುರು ಮಾಡಿರುವುದು.

ಬಾಂಬೆ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಹಿರೇಬಿದರಿ ಗ್ರಾಮ, ಹಳೇ ಮೈಸೂರಿನ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಚಿಕ್ಕಬಿದರಿ ಗ್ರಾಮ, ಹೈದರಾಬಾದ್ ಕರ್ನಾಟಕದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ವಟ್ಲಹಳ್ಳಿ ಎಂಬ ಊರುಗಳು ತುಂಗಭದ್ರಾ ನದಿ ದಡದಲ್ಲಿ ಸೇರುವ ಜಾಗವೆ ಈ ಪ್ರದೇಶವಾಗಿದೆ. ಇದು ಹೆಚ್ಚು ಕಡಿಮೆ ಕನ್ನಡನಾಡಿನ ಎಲ್ಲಾ ಜಿಲ್ಲೆಗೂ ಸಮಾನ ಅಂತರದಲ್ಲು ಇದೆ. ಈ  ಜಾಗದಲ್ಲಿ ಹೊಯ್ಸಳರು ಕಟ್ಟಿಸಿರುವ ಕಲ್ಲಪ್ಪನ ಗುಡಿ ಕೂಡ ಇದೆ. ಇಲ್ಲಿ ಬಹಳ ವಿಶೇಷವಾದ ವೀರ ಮಾಸ್ತಿಕಲ್ಲು ಶಾಸನ ಕೂಡ ಇದೆ. ಎಲ್ಲಾ ಕಡೆ ಮಾಸ್ತಿಕಲ್ಲು, ವೀರಗಲ್ಲು ಬೇರೆ ಬೇರೆ ಆಗಿ ಸಿಗುತ್ತದೆ ಆದರೆ ವೀರ ಮಾಸ್ತಿಕಲ್ಲು ಸಿಕ್ಕಿರೋದು ಇದು ಒಂದೇ ಕಡೆ ಎಂದು ಸ್ಥಳೀಯ ಇತಿಹಾಸಕಾರರು ತಿಳಿಸುತ್ತಾರೆ. ಸೇವುಣರು ಮತ್ತು ಹೊಯ್ಸಳರು ಕನ್ನಡನಾಡನ್ನು ಹಂಚಿಕೊಂಡಿದ್ದಕ್ಕೆ ಗುರುತೇ ಈ ವೀರಮಾಸ್ತಿಕಲ್ಲು ಎಂಬ ಅಭಿಪ್ರಾಯವಿದೆ.

ಈ ಇತಿಹಾಸನ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಇದು ಬಹಳ ಐತಿಹಾಸಿಕವಾದಂತಹ ಜಾಗ. ಕರ್ನಾಟಕ ಸರ್ಕಾರ ಈ ಜಾಗವನ್ನು ಗುರುತಿಸಬೇಕು. ಗುರುತಿಸಿ ಇದನ್ನ ಐತಿಹಾಸಿಕ ಜಾಗ ಮತ್ತು ಈ ಜಾಗವನ್ನು ಕನ್ನಡದೂರು ಅಂತೇಳಿ ಘೋಷಿಸಬೇಕು. ಇಲ್ಲಿ ಸರ್ಕಾರದವರು ಮೂರು ದಿಕ್ಕು ಸೇರುವ ಒಂದು ಸೇತುವೆ ಕಟ್ಟಿ ಅದರ ಮೇಲೆ 750 ವರ್ಷಗಳ ನಂತರ ಕನ್ನಡಿಗರು ಒಂದಾದ ನೆನಪಿಗೆ 750 ಅಡಿಯ  ಕನ್ನಡ ಧ್ವಜ ಕಂಬವನ್ನು ಸ್ಥಾಪಿಸಬೇಕು ಅಂತೇಳಿ ನಾವು ಇದೇ ನವೆಂಬರ್ 1, 2025 ರಿಂದ ಅಭಿಯಾನ ಶುರು ಮಾಡಿದ್ದೀವಿ. 663 ಅಡಿಯ ಈಜಿಪ್ಟ್ ನ ಕೈರೋಲಿ ಇರುವ ಧ್ವಜ ಕಂಬವೆ ಇಡೀ ಜಗತ್ತಿನಲ್ಲಿಯೆ ಎತ್ತರವಾದದ್ದು ಇವತ್ತಿನ ಮಟ್ಟಿಗೆ. ಕನ್ನಡದೂರಿನ ಧ್ವಜ ಕಂಬ ಇಡೀ ಜಗತ್ತಿನಲ್ಲಿಯೆ ಎತ್ತರವಾದ ಧ್ವಜ ಕಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆಗೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ ಜೊತೆಗೆ ಕನ್ನಡಿಗರನ್ನು ಗಟ್ಟಿಗೊಳಿಸುವ ಸಾಧನವಾಗುತ್ತದೆ.
ಈಗ ಇಲ್ಲಿನ ಸುತ್ತಮುತ್ತಲಿನ ಊರಿನವರು ನದಿ ದಾಟಬೇಕೆಂದರೆ 40 ಕಿ ಮಿ ಸುತ್ತ ಬೇಕು ಇಲ್ಲಿ ಸೇತುವೆ ಕಟ್ಟಿದರೆ ಸ್ಥಳಿಯರಿಗೆ ಅನುಕೂಲವಾಗುತ್ತದೆ. ನಮ್ಮ ಕನ್ನಡ ಅಸ್ಮಿತೆ ಸ್ಥಳಿಯರಿಗೆ ತೊಂದರೆ ಕೊಡದೆ ಅನುಕೂಲ ಕೂಡ ಮಾಡಿಕೊಡುತ್ತದೆ.

ನಾವು ಸ್ಥಳೀಯ ಜನರಿಗೆ ನಮ್ಮ ಅನಿಸಿಕೆ ಅಭಿಪ್ರಾಯ ಹೇಳಿದಾಗ ಎಲ್ಲರೂ ಸಂತೋಷವಾಗಿ ಕೈಜೋಡಿಸುವುದಾಗಿ ತಿಳಿಸಿ ನಮ್ಮ ಜೊತೆ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು. ಮುಂದಿನ ದಿನಗಳಲ್ಲಿ ನಾವು ಸಂಪೂರ್ಣವಾಗಿ ದ್ರಾವಿಡ ಕನ್ನಡಿಗರು ಚಳುವಳಿಯ ಕನ್ನಡದೂರು ಕಟ್ಟುವಂತಹ ಕೆಲಸ ಏನಿದೆ ಅದಕ್ಕೆ ಸಂಪೂರ್ಣ ಕೈ ಜೋಡಿಸುತ್ತೇವೆಂದು ಹೇಳಿದ್ದಾರೆ. ಸರ್ಕಾರ ಕೂಡ ಇದರ ಕಡೆಗೆ ಗಮನ ಕೊಡಬೇಕು ಅಂತ ಈ ಮೂಲಕ ಕೇಳಿಕೊಳ್ಳುತ್ತೇವೆ

ಬೆಂಗಳೂರು ಸುತ್ತ ಮಾತ್ರನೆ ಅಭಿವೃದ್ಧಿ ಅನ್ನುವಂತ ಭೂತ ಬೆಳೆದು ನಿಂತು ಕನ್ನಡನಾಡಿನ ಇತರೆ ಜಿಲ್ಲೆಗಳು ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಆಗಿಲ್ಲ. ಅದು ಬರೀ ಯೋಜನಾ ಅಭಿವೃದ್ಧಿ ಅಲ್ಲ ಜನ ಅಭಿವೃದ್ಧಿನು ಕೂಡ ಆಗಿಲ್ಲ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ , ಅಪೌಷ್ಟಿಕಾಂಶದಿಂದ ನರಳುತ್ತಿದ್ದಾರೆ. ಹಾಗಾಗಿ ಸರ್ಕಾರ ಇದೊಂದು ಐತಿಹಾಸಿಕವಾದ ಜಾಗವನ್ನ ಗುರುತಿಸಬೇಕು ಜೊತೆಗೆ ಬರಿ ಐತಿಹಾಸಿಕವಾದ ಜಾಗವನ್ನ ಗುರುತಿಸಿಬಿಟ್ರೆ ಸಾಕಾಗಲ್ಲ ನಮಗೆ ಇತಿಹಾಸ ಬೇಕಾಗಿರೋದು ಮುಂದಿನ ಒಳ್ಳೆ ದಿನಗಳನ್ನ ಕಟ್ಟುವುದಕ್ಕೆ ವಿನಃ ಸುಮ್ಮನೆ ಇತಿಹಾಸ ಹೇಳ್ಕೊಂಡು ರಾಜಕೀಯ ಮಾಡಿಕೊಂಡು ಓಟನ್ನ ಗಳಿಸಲು ಅಲ್ಲ. ಹೇಗೆ ಒಳ್ಳೆಯ ದಿನಗಳನ್ನ ಕಟ್ಟಬಹುದು ಕನ್ನಡದೂರಿನಿಂದ ಅಂದರೆ ಇದು ಕನ್ನಡನಾಡಿನ ಎಲ್ಲಾ ಜಿಲ್ಲೆಗೂ ಹೆಚ್ಚು ಕಮ್ಮಿ ಸಮಾನ ಅಂತರದಲ್ಲಿದೆ. ಕರಾರುವಾಕ್ಕಾಗಿ ಸಮಾನ ಅಂತರ ಅಂತಂದ್ರೆ ನಾವು ಗುರುತಿಸಿರುವ ಜಾಗದ ಪಕ್ಕದ ಹೂವಿನ ಹಡಗಲಿ ತಾಲ್ಲೂಕಿನಲ್ಲಿ ಬರುತ್ತದೆ. ಇವಾಗ ಬೆಂಗಳೂರಿಗೆ ಬರಬೇಕು ಬೀದರ್ ಅವರು ಅಂತಂದ್ರೆ ಒಂದಿಡೀ ದಿನ ಬೇಕು ಆದರೆ ಕನ್ನಡದೂರಿಗೆ ಯಾವುದೇ ಮೂಲೆಯಿಂದ  8 ರಿಂದ 10 ಗಂಟೆ ಸಾಕು. ಮುಂದೆ ಐದತ್ತು ವರ್ಷಗಳಲ್ಲಿ ಬರುವ ಸಾರಿಗೆ ವ್ಯವಸ್ಥೆಯ ಊಹಿಸಿಕೊಂಡರೆ ಈ ಸಮಯ ಇನ್ನೂ ಕಡಿಮೆ ಆಗುತ್ತದೆ.

ಇದರಿಂದ ಪ್ರಾದೇಶಿಕ ಸಮಾನತೆಯು ಬರುತ್ತದೆ ಕಾಲಕ್ರಮೇಣ ಎಲ್ಲಾ ರೀತಿಯ ಸಮಾನತೆಗು ಅಡಿಪಾಯವಾಗುವುದರ ಜೊತೆಗೆ ಕನ್ನಡಿಗರ ಕೈ ತಪ್ಪಿ ಹೋಗುತ್ತಿರುವ ಬೆಂಗಳೂರು ಕನ್ನಡಿಗರ ಕೈಗೆ ಮತ್ತೆ ಶಾಶ್ವತವಾಗಿ ಸಿಗುವುದರ ಜೊತೆಗೆ ಹೊಸದೊಂದು ಕನ್ನಡದೂರು ಸಿಗುತ್ತದೆ ಕನ್ನಡಿಗರಿಗೆ.

You cannot copy content of this page

Exit mobile version