Home ದೇಶ ಬಿಹಾರದಲ್ಲಿಇಂದು ಎರಡನೇ ಹಂತದ ಮತದಾನ: 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಬಿಹಾರದಲ್ಲಿಇಂದು ಎರಡನೇ ಹಂತದ ಮತದಾನ: 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

0

ರಾಂಚಿ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಸಮರವು ಅಂತಿಮ ಹಂತಕ್ಕೆ ತಲುಪಿದೆ. 20 ಜಿಲ್ಲೆಗಳ ವ್ಯಾಪ್ತಿಯ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 3 ಕೋಟಿ 70 ಲಕ್ಷ ಮತದಾರರಿಗಾಗಿ ಚುನಾವಣಾ ಆಯೋಗವು 45,399 ಮತಗಟ್ಟೆಗಳನ್ನು ಸ್ಥಾಪಿಸಿದೆ.

ಇವುಗಳಲ್ಲಿ 40,073 ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಚುನಾವಣಾ ಕರ್ತವ್ಯಗಳಿಗಾಗಿ ನಾಲ್ಕು ಲಕ್ಷ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟು 1,302 ಅಭ್ಯರ್ಥಿಗಳ ಭವಿಷ್ಯವನ್ನು ಈ ಮತದಾರರು ನಿರ್ಧರಿಸಲಿದ್ದಾರೆ. ರಾಜ್ಯದ ಒಟ್ಟು 243 ವಿಧಾನಸಭಾ ಸ್ಥಾನಗಳ ಪೈಕಿ ಬಹುತೇಕ ಸ್ಥಾನಗಳಲ್ಲಿ ನಡೆಯುತ್ತಿರುವ ಈ ಎರಡನೇ ಹಂತದ ಮತದಾನದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಎರಡನೇ ಹಂತದ ಮತದಾನ ನಡೆಯಲಿರುವ 122 ವಿಧಾನಸಭಾ ಸ್ಥಾನಗಳಲ್ಲಿ 101 ಸಾಮಾನ್ಯ ಸ್ಥಾನಗಳು, 19 ಎಸ್‌ಸಿ ಮೀಸಲು ಸ್ಥಾನಗಳು ಮತ್ತು 2 ಎಸ್‌ಟಿ ಮೀಸಲು ಸ್ಥಾನಗಳಿವೆ. ಈ ಸ್ಥಾನಗಳಿಗೆ ಒಟ್ಟು 1,761 ನಾಮಪತ್ರಗಳು ಸಲ್ಲಿಕೆಯಾಗಿದ್ದು, 1,372 ನಾಮಪತ್ರಗಳು ಮಾತ್ರ ಮಾನ್ಯವಾಗಿವೆ. ಇವರಲ್ಲಿ 70 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಈ ಮೂಲಕ, ಚುನಾವಣಾ ಕಣದಲ್ಲಿ 1,302 ಅಭ್ಯರ್ಥಿಗಳು ಉಳಿದಿದ್ದಾರೆ. ಇವರಲ್ಲಿ 1,165 ಪುರುಷರು, 136 ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ಅಭ್ಯರ್ಥಿ ಸೇರಿದ್ದಾರೆ. ಒಟ್ಟು ಅಭ್ಯರ್ಥಿಗಳಲ್ಲಿ ಶೇಕಡಾ 10 ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಆರ್‌ಜೆಡಿ 13, ಜನ ಸುರಾಜ್ 12, ಬಿಜೆಪಿ 10, ಜೆಡಿಯು 9 ಮತ್ತು ಕಾಂಗ್ರೆಸ್ 2 ಟಿಕೆಟ್‌ಗಳನ್ನು ನೀಡಿದೆ.

ಪ್ರಮುಖ ಪಕ್ಷಗಳ ಪರವಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರಗಳು:

ಆರ್‌ಜೆಡಿ 71, ಬಿಜೆಪಿ 53, ಜನ ಸುರಾಜ್ 120, ಜೆಡಿಯು 44, ಕಾಂಗ್ರೆಸ್ 37, ಎಲ್‌ಜೆಪಿ (ರಾಮ್ ವಿಲಾಸ್) 15 ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) 7, ಸಿಪಿಐ (ಎಂಎಲ್-ಎಲ್), 6ಸಿಪಿಐ(ಎಂ) 4,

ಅಂತಿಮ ಹಂತದ ಮತದಾನ ನಡೆಯುವ 122 ವಿಧಾನಸಭಾ ಸ್ಥಾನಗಳಲ್ಲಿ 462 ಸ್ವತಂತ್ರ ಅಭ್ಯರ್ಥಿಗಳು ಮತ್ತು 487 ಇತರರು (ಸಣ್ಣ ಪಕ್ಷಗಳ) ಸ್ಪರ್ಧಿಸುತ್ತಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 11 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಿಹಾರದ ಮುಖ್ಯ ರಾಜಕೀಯ ಪಕ್ಷಗಳೆಂದರೆ ಬಿಜೆಪಿ, ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಜನ ಸುರಾಜ್, ವಿಐಪಿ, ಎಡಪಕ್ಷಗಳು ಮತ್ತು ಎಲ್‌ಜೆಪಿ (ರಾಮ್ ವಿಲಾಸ್). ಆಸಕ್ತಿಕರ ವಿಷಯವೆಂದರೆ, ಎರಡನೇ ಹಂತದ ಮತದಾನದ ಕಣದಲ್ಲಿ ಬರೋಬ್ಬರಿ 109 ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್ ಸಿಗದೆ ನಿರಾಶೆಗೊಂಡ ಕೆಲವು ನಾಯಕರು ಸಣ್ಣ ಪಕ್ಷಗಳ ಮೂಲಕ ಚುನಾವಣಾ ಕಣಕ್ಕಿಳಿದಿದ್ದರೆ, ಮತ್ತೆ ಕೆಲವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

You cannot copy content of this page

Exit mobile version