Home ಅಂಕಣ ಅಸ್ತಿತ್ವವೇ ಹಸುವಾಗುವ ಕ್ಷಣ ‘ವಲವಾರ’

ಅಸ್ತಿತ್ವವೇ ಹಸುವಾಗುವ ಕ್ಷಣ ‘ವಲವಾರ’

0

“..ಇತ್ತೀಚಿನ ವರ್ಷಗಳಲ್ಲಿ ಗೋವು ಹೆಸರು ಕೇಳಿದಾಗಲೇ ಧರ್ಮ, ದ್ವೇಷ, ಹಿಂಸೆ, ಕಾನೂನು, ಗುಂಪು ದಾಳಿ ಇವೆಲ್ಲ ನೆನಪಿಗೆ ಬರುತ್ತವೆ. ಆದರೆ ವಲವಾರ ಚಿತ್ರ ಗೋವನ್ನ ಮತ್ತೆ ಅದರ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ರಾಷ್ಟ್ರದ ರಾಜಕಾರಣದ ಅಸ್ತ್ರವಾಗಿರುವ ಹಸು ಈ ದೇಶದಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಹೈನುಗಾರಿಕೆಯಿಂದಲೇ ಬದುಕು ಸಾಗಿಸಬೇಕು ಅಂದುಕೊಂಡಿರುವ ಒಂದು ಬಡ ಮದ್ಯಮ ಕುಟುಂಬವೊಂದು ಹಸುವನ್ನು ಹೇಗೆ ಅವಲಂಬಿತವಾಗಿದೆ ಒಂದು ಸಣ್ಣ ಕುಟುಂಬದ ಕತೆಯ ಮೂಲಕ ‘ವಲವಾರ’ ಚಿತ್ರ ( Valavaara Movie) ಹೇಳುತ್ತದೆ.

ಸಕಲೇಶಪುರ/ಮಲೆನಾಡಿನ ಹಳ್ಳಿಯ ಕಥೆ ಹೇಳುವ ವಲವಾರ, ಹಾಗೆ ನೋಡಿದರೆ ಈ ಜಗತ್ತಿನ ಯಾವುದಾದರೂ ದೇಶದ ಕತೆಯೂ ಹೌದು. ಹೈನುಗಾರಿಕೆಗಾಗಿ ದನವನ್ನು ಸಾಕಿದ ಪ್ರತಿಯೊಬ್ಬ ಹಳ್ಳಿಯ ರೈತರ ಕತೆ ಹೇಳುವಂತೆ ನಮ್ಮ ಹೃದಯದ ಆಳಕ್ಕೆ ಇಳಿಯುತ್ತದೆ. ರೈತರ ಮಕ್ಕಳಿಗೆ ತನ್ನದೇ ಕತೆ ಬೆಳ್ಳಿ ಪರದೆಯ ಮೇಲೆ ಬರುತ್ತಿದೆ ಎಂಬಂತೆ ಭಾಸವಾಗುತ್ತದೆ.

ಹಿಂದೊಮ್ಮೆ ಬೆಂಗಳೂರು ಫಿಲಂ ಫೆಸ್ಟಿವಲ್ ನಲ್ಲಿ ಇರಾನಿಯನ್ ಸಿನಿಮಾ ‘ದಿ ಕೌ’ (ದ ಕೌ) ನೋಡಿದ್ದ ನೆನಪು ವಲವಾರ ನೋಡಿದಾಗ ಮರುಕಳಿಸುತ್ತದೆ. ಇರಾನಿನ ಹಳ್ಳಿಯ ಬಡತನವನ್ನು ಸಾರುತ್ತದೆ ಎಂಬ ಕಾರಣಕ್ಕಾಗಿ ದಿ ಕೌ ಸಿನಿಮಾವನ್ನು ಇರಾನ್ ರಾಜಪ್ರಭುತ್ವ ನಿಷೇದಿಸಿತು. ದಿ ಕೌ ಸಿನಿಮಾದ ಕತೆಯಲ್ಲಿ ಗರ್ಭಿಣಿ ಹಸು ಸತ್ತು ಹೋದರೆ, ವಲವಾರ ಸಿನಿಮಾ ಕತೆಯಲ್ಲಿ ಗರ್ಭಿಣಿ ಹಸು ಕಳೆದು ಹೋಗಿ ಮತ್ತೆ ಮರಳಿ ಸಿಗುತ್ತದೆ. ಎರಡೂ ಸಿನಿಮಾಗಳಲ್ಲಿ ಗರ್ಭಿಣಿ ಹಸುವನ್ನು ಹುಡುಕುವ ಕತೆಯು ಹಳ್ಳಿ ಬದುಕು, ಹಸುವನ್ನು ಅವಲಂಬಿಸಿರುವ ಕುಟುಂಬಗಳ ಸಂಕಷ್ಟ ನಮ್ಮ ಮುಂದೆ ತೆರೆದಿಡುತ್ತದೆ.

ಭಾರತದ ಗ್ರಾಮೀಣ ಸಮಾಜದಲ್ಲಿ ಹೈನುಗಾರಿಕೆ ಕೇವಲ ಉದ್ಯೋಗವಲ್ಲ; ಅದು ಬದುಕಿನ ಭದ್ರತೆ. ಹಾಲು, ಮೊಸರು, ತುಪ್ಪ-ಇವುಗಳು ಆಹಾರ ಸರಪಳಿಯ ಅವಿಭಾಜ್ಯ ಅಂಗಗಳಾಗಿ, ಗೋವು ಮತ್ತು ಎಮ್ಮೆ ಲಕ್ಷಾಂತರ ರೈತ ಕುಟುಂಬಗಳ ದಿನನಿತ್ಯದ ಆದಾಯದ ಮೂಲ. ಆದರೆ ಇದೆ ಗೋವು ರಾಜಕೀಯ ಅಂಗಳಕ್ಕೆ ಕಾಲಿಟ್ಟಾಗ, ಅದರ ಅರ್ಥ ಬದಲಾಗುತ್ತದೆ. ಬದುಕನ್ನು ಪೋಷಿಸುವ ಪ್ರಾಣಿ, ಅಧಿಕಾರದ ಸಂಕೇತವಾಗಿ ಮಾರ್ಪಡುತ್ತದೆ. ಇಲ್ಲಿಯೇ ಹುಟ್ಟುವುದು ಗೋವು ರಾಜಕಾರಣ .

ಭಾರತ ಇಂದು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ದೇಶ. ದೊಡ್ಡ ದೊಡ್ಡ ಹಾಲು ಉತ್ಪಾದಕ ಕಂಪನಿಯ ಸಾಧನೆಗಳ ಹಿಂದೆ ರೈತರು, ಮಹಿಳೆಯರು, ಭೂಹೀನ ಕಾರ್ಮಿಕರ ಶ್ರಮ ಇದೆ. ಹಾಲು ಸಹಕಾರಿ ಸಂಸ್ಥೆಗಳು ಗ್ರಾಮೀಣ ಸ್ವಾವಲಂಬನೆಗೆ ಮಾದರಿಯಾಗಿವೆ. ರೈತನು ಗೋವನ್ನು ಸಾಕುವುದು ಧರ್ಮಕ್ಕಾಗಿ ಅಲ್ಲ—ಬದುಕಿಗಾಗಿ. ಹೈನುಗಾರಿಕೆ ಆರ್ಥಿಕ ಚಟುವಟಿಕೆ; ಅದಕ್ಕೆ ನೀತಿ, ಮಾರುಕಟ್ಟೆ ಪ್ರವೇಶ ಮತ್ತು ಭದ್ರ ಆದಾಯ ಅಗತ್ಯ.

ಯಾವುದೇ ಹಳ್ಳಿಗರ ಬದುಕಿನಲ್ಲಿ ಗೋವು ಪವಿತ್ರತೆ, ದೇವರು, ಪೂಜನೀಯ ಸ್ಥಾನವನ್ನೂ ವರ್ಷಪೂರ್ತಿ ಹೊಂದಿರುವುದಿಲ್ಲ. ರೈತರಿಗೆ ದನ ಮನೆಯ ಸದಸ್ಯನಂತೆಯೇ ಪ್ರಾಣಿಯಾಗಿದ್ದರೂ ಅದರ ಹಿಂದೆ ರಾಜಕೀಯ ಇರುವುದಿಲ್ಲ. ರೈತರ ಕುಟುಂಬ ಮತ್ತು ಗೋವಿನ ಮಧ್ಯೆ ಇರುವ ಈ ಸಿದ್ದಾಂತವಿಲ್ಲದ ಪ್ರೀತಿಯನ್ನು ವಲವಾರ ಸಿನಿಮಾ ಕಟ್ಟಿಕೊಡುತ್ತದೆ.  ರಾಜಕೀಯದಲ್ಲಿ ದನ ಎಂಬುದು ಮತ ಧ್ರುವೀಕರಣದ ಸಾಧನವಾಗಿದೆ. ಗೋವು ರಕ್ಷಣೆಯ ಹೆಸರಿನಲ್ಲಿ ಕಠಿಣ ಕಾನೂನುಗಳು, ನಿಗಾ ವ್ಯವಸ್ಥೆ, ಗುಂಪು ಹಿಂಸೆಯೂ ಇರುತ್ತದೆ. ಆಹಾರ ಆಯ್ಕೆ, ಸಾಗಣೆ, ವ್ಯಾಪಾರ ಎಲ್ಲವೂ ರಾಜಕೀಯ ವಿವಾದಗಳಾಗಿ ಪರಿವರ್ತಿಸುತ್ತವೆ. ಹಾಗಾಗಿಯೇ ರೈತರ ಗೋವು ಧಾರ್ಮಿಕ ಭಾವನೆಯಿಂದ ಹೊರಬಂದು ಅಧಿಕಾರದ ಚಿಹ್ನೆಯಾಗಿ ಬದಲಾಗಿದೆ. ವಲವಾರ ಚಿತ್ರದಲ್ಲಿ ಗೋವು ಹೇಗೆ ಬದುಕಿನ ಚಿಹ್ನೆ ಎಂದು ನಮಗೆ ಮನದಟ್ಟು ಮಾಡಿಕೊಡುತ್ತದೆ.

‘ವಲವಾರ’ ಸಿನಿಮಾದಲ್ಲಿ ಮಕ್ಕಳೇ ಹೀರೋಗಳು. ಇದು ಕಮರ್ಷಿಯಲ್ ನಂತೆ ಕಾಣುವ ಆರ್ಟ್ ಸಿನಿಮಾ. ಹಾಗಂತ ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾಗಳೆರಡರ ಸಿದ್ಧ ಸೂತ್ರಗಳು ಇಲ್ಲಿಲ್ಲ. ದನ ಸಾಕುವ, ದನ ಸಾಕಿದ, ಮಕ್ಕಳಾಗಿದ್ದಾಗ ದನ ಸಾಕಿದ ಎಲ್ಲರಿಗೂ ಭಾವನಾತ್ಮಕವಾಗಿ ‘ವಲವಾರ’ ಇಷ್ಟವಾಗುತ್ತದೆ. ಕುಂಡೇಸಿ (ಮಾಸ್ಟರ್ ವೇದಿಕ್ ಕುಶಾಲ್) ಹಾಗೂ ಕೊಸುಡಿ (ಮಾಸ್ಟರ್ ಶಯನ್) ಅಣ್ಣ-ತಮ್ಮಂದಿರು. ಇವರ ತಂದೆ (ಮಾಲತೇಶ್ ಎಚ್‌ವಿ) ಬಡ ರೈತ. ತುಂಡು ಜಮೀನು ಮತ್ತು ಒಂದೇ ಒಂದು ದನ ಇವನ ಆಸ್ತಿ. ಇಷ್ಟರಲ್ಲೇ ಆತ ಇಬ್ಬರು ಮಕ್ಕಳು, ಪತ್ನಿಯ ಸಣ್ಣ ಸಂಸಾರವನ್ನು ನಿಭಾಯಿಸಬೇಕು. ದೊಡ್ಡ ಮಗನಲ್ಲಿ ತನ್ನ ಕೋಪಿಷ್ಟ ತಂದೆಯನ್ನು ಕಂಡು ದ್ವೇಷಿಸುತ್ತಾನೆ. ಆದರೆ ತಾಯಿಗೆ (ಹರ್ಷಿತಾ ಗೌಡ) ಇಬ್ಬರು ಮಕ್ಕಳೆಂದರೆ ಪ್ರೀತಿ. ಬಡತನದ ನಡುವಿನ ಇವರ ಜೀವನ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ, ನಟನೆಯೇ ಅಲ್ಲವೆಂಬಂತೆ ನಟಿಸಿದ್ದಾರೆ. ಇವರು ಮನೆಯ ಕೊಟ್ಟಿಗೆಯಲ್ಲಿದ್ದ ಏಕೈಕ ಗರ್ಭಿಣಿ ಹಸು ಗೌರ(ಗೌರಿ), ಜಡೇಜಾ ಎಂಬ ಹೆಸರಿನ ಹುಂಜ ಕೂಡ ಮನೆಯ ಸದಸ್ಯರೇ ಆಗಿ ಹೋಗುತ್ತಾರೆ.

ನಿರ್ದೇಶಕ ಸುತನ್ ಗೌಡ ಹೇಳಿರುವ ‘ದನ’ದ ಕಥೆ ಇಲ್ಲಿನ ಗ್ರಾಮೀಣ ಮೂಲದ ಮನೆಮನೆಯ ಕತೆಯಾಗಿದೆ. ಯಾವ ಹೆಚ್ಚಿನ ಅಬ್ಬರಗಳೂ, ಟ್ವಿಸ್ಟ್​ಗಳೂ ಇಲ್ಲದೆ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟ ರೀತಿಯಿಂದಾಗಿ ಪ್ರೇಕ್ಷಕನನ್ನು ಸಿನಿಮಾ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಪೂರ್ತಿ ಸಿನಿಮಾದಲ್ಲಿ ಕುಂಡೇಸಿ ಪಾತ್ರದಲ್ಲಿ ಆತನ ಸಹಜ ಅಭಿನಯ, ನಗು, ಅಳು ಎಲ್ಲವೂ ನಿಮ್ಮದೇ ಪಾತ್ರ ಎಂದು ಅನ್ನಿಸಲು ಆರಂಭ ಆಗುತ್ತದೆ. ತನ್ನ ವಯಸ್ಸಿಗೂ ಮೀರಿ ಮಾಸ್ಟರ್ ವೇದಿಕ್ ಅವರು ಕುಂಡೇಸಿ ಪಾತ್ರವನ್ನು ನಟಿಸಿದ್ದಾರೆ. ಮಾಸ್ಟರ್ ಶಯನ್ ಕೂಡ ಕುಂಡೇಸಿಯ ತಮ್ಮನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸಮುದಾಯದ ರಂಗಕರ್ಮಿ ಮಾಲತೇಶ್​ ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು, ವಲವಾರ ಸಿನಿಮಾದ ನಟನೆ ಅವರ ನಟನಾ ಕೌಶಲ್ಯದ ಮೈಲಿಗಲ್ಲಿನಂತೆ ಕಾಣಿಸುತ್ತದೆ. ತಾಯಿಯಾಗಿ ನಟಿಸಿರುವ ಹರ್ಷಿತಾ, ನಮ್ಮೊಳಗೆ ಸದಾ ತಾಯಿಭಾವವನ್ನು ಉಳಿಸುತ್ತಾರೆ. ಯದು ಕುಮಾರನ ಪಾತ್ರ ಮಾಡಿರುವ ಅಭಯ್​ ಇಡೀ ಚಿತ್ರವನ್ನು ರೊಮ್ಯಾಂಟಿಕ್ ಆಗಿ ಇರಿಸಿದ್ದಾರೆ.

ಚಿತ್ರದ ಕ್ಯಾಮೆರಾ ಕೆಲಸವೂ ವಲವಾರದ ಜೀವ. ಮಲೆನಾಡಿನ ಮಬ್ಬಾದ ಬೆಳಕು, ಮಳೆ–ಮಣ್ಣು–ಹಸಿರು ಇವುಗಳ ಮಧ್ಯೆ ನಡೆಯುವ ದೃಶ್ಯಗಳು ಪ್ರೇಕ್ಷಕನಿಗೆ ಸಿನೇಮಾ ನೋಡುತ್ತಿದ್ದೇನೆ ಎಂಬುದನ್ನೇ ಮರೆಸುತ್ತದೆ. ಇದು ನೋಡುತ್ತಿರುವ ಕತೆ ಅಲ್ಲ, ಅನುಭವಿಸುತ್ತಿರುವ ಬದುಕು ಎಂಬ ಭಾವನೆ ಮೂಡುತ್ತದೆ. ಹಳ್ಳಿ ಕಾಡು ಬದುಕಿನ ಹಲವಾರು ಹಿಟ್ ಸಿನಿಮಾದಲ್ಲಿ ಇರುವಂತೆ ಇಲ್ಲಿ ಕ್ಯಾಮೆರಾ ಹಳ್ಳಿಯ ಮೇಲೆ ಹಾರುವುದಿಲ್ಲ; ಹಳ್ಳಿಯ ಜೊತೆ ನಡೆದು ಬರುತ್ತದೆ. ದನದ ಕಣ್ಣು, ಮಕ್ಕಳ ಮುಖ, ಕೊಟ್ಟಿಗೆಯ ಕತ್ತಲೆ, ಮಣ್ಣಿನ ವಾಸನೆ ಇವೆಲ್ಲವೂ ದೃಶ್ಯಭಾಷೆಯಾಗಿ ಪರಿವರ್ತಿತವಾಗಿವೆ.

ಹಿನ್ನಲೆ ಸಂಗೀತ ಚಿತ್ರಕ್ಕೆ ಮೆರಗು ತರುವುದಕ್ಕಿಂತ, ಅದರೊಳಗೆ ಬೆರೆತು ಹೋಗುತ್ತದೆ. ಎಲ್ಲಿ ಸಂಗೀತ ಬೇಕೋ ಅಲ್ಲಿ ಮಾತ್ರ ಅದು ಬರುತ್ತದೆ. ಉಳಿದ ಕಡೆ ಮೌನವೇ ಮಾತಾಡುತ್ತದೆ. ಹಸು ಕಳೆದು ಹೋಗುವ ಕ್ಷಣದ ಮೌನ, ಮಕ್ಕಳ ಅಸಹಾಯಕತೆ, ತಂದೆಯ ಕೋಪದ ಹಿಂದೆ ಇರುವ ಅಸಮಾಧಾನ ಇವೆಲ್ಲವನ್ನೂ ಸಂಗೀತಕ್ಕಿಂತ ಮೌನವೇ ಚೆನ್ನಾಗಿ ಹೇಳುತ್ತದೆ. ಇದು ವಲವಾರದ ದೊಡ್ಡ ಶಕ್ತಿ.

ವಲವಾರ ಚಿತ್ರ ರಾಜಕೀಯ ಘೋಷಣೆ ಕೂಗುವುದಿಲ್ಲ. ಆದರೆ ರಾಜಕೀಯ ಪ್ರಶ್ನೆಗಳನ್ನು ನಮ್ಮ ಮನಸ್ಸಿನಲ್ಲಿ ಬಿತ್ತುತ್ತದೆ.  ಹಸು ಬದುಕಿನ ಸಾಧನವೇ? ಅಥವಾ ರಾಜಕೀಯ ಅಸ್ತ್ರವೇ? ರೈತನಿಗೆ ಗೋವು ದೇವರೇ? ಅಥವಾ ಹಸಿವು ನಿವಾರಣೆಯ ಭದ್ರತೆಯೇ?  ಗೋವು ಕಳೆದು ಹೋದರೆ ರೈತನ ಬದುಕು ಎಷ್ಟು ಅಸ್ಥಿರವಾಗುತ್ತದೆ?  ಈ ಪ್ರಶ್ನೆಗಳಿಗೆ ನಿರ್ದೇಶಕ ಉತ್ತರ ಕೊಡುವುದಿಲ್ಲ; ಉತ್ತರ ಹುಡುಕುವ ಹೊಣೆ ಪ್ರೇಕ್ಷಕನಿಗೆ ಬಿಡುತ್ತಾರೆ. ಧರ್ಮ ರಾಜಕಾರಣದ ಭ್ರಮೆಗಳಿಲ್ಲದ ಉತ್ತರ ಪ್ರೇಕ್ಷಕನಿಗೆ ಸಿಗುತ್ತದೆ. ಇದುವೇ ಒಳ್ಳೆಯ ರಾಜಕೀಯ ಸಿನಿಮಾ ಮಾಡುವ ನಿಜವಾದ ವಿಧಾನ.

ಇತ್ತೀಚಿನ ವರ್ಷಗಳಲ್ಲಿ ಗೋವು ಹೆಸರು ಕೇಳಿದಾಗಲೇ ಧರ್ಮ, ದ್ವೇಷ, ಹಿಂಸೆ, ಕಾನೂನು, ಗುಂಪು ದಾಳಿ ಇವೆಲ್ಲ ನೆನಪಿಗೆ ಬರುತ್ತವೆ. ಆದರೆ ವಲವಾರ ಚಿತ್ರ ಗೋವನ್ನ ಮತ್ತೆ ಅದರ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ: ಅದು ಬದುಕಿನ ಆಧಾರ.  ಈ ದೇಶದ ಬಹುಪಾಲು ರೈತರಿಗೆ ಗೋವು ಎಂದರೆ ಅದು ಬೆಳಗಿನ ಹಾಲು, ಮಕ್ಕಳ ಶಾಲಾ ಫೀಸ್, ಔಷಧಿ ಖರ್ಚು, ಬದುಕಿನ ನಾಳೆ. ಹಾಗಾಗಿ, ಹಸುವಿನ ಮೇಲಿನ ಪ್ರೀತಿ ಇನ್ನೊಬ್ಬರ ಮೇಲೆ ದ್ವೇಷವನ್ನು ಹುಟ್ಟಿಸಬೇಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಿನಿಮಾ ನೀಡುತ್ತದೆ.

ವಲವಾರದಲ್ಲಿ ಗೋವು ಕಳೆದು ಹೋಗುವ ಘಟನೆಯೇ ದೊಡ್ಡ ದುರಂತವಲ್ಲ; ಅದರಿಂದ ಹುಟ್ಟುವ ಅಸ್ಥಿರತೆಯೇ ನಿಜವಾದ ದುರಂತ. ಒಂದು ಹಸು ಕಳೆದು ಹೋದರೆ, ಒಂದು ಕುಟುಂಬದ ಭವಿಷ್ಯವೇ ಅಲುಗಾಡುತ್ತದೆ ಎಂಬ ಸತ್ಯವನ್ನು ಚಿತ್ರ ಬಹಳ ಸೌಮ್ಯವಾಗಿ ಆದರೆ ತೀವ್ರವಾಗಿ ಹೇಳುತ್ತದೆ. ಈ ಸೌಮ್ಯತೆಯಲ್ಲೇ ಅದರ ರಾಜಕೀಯ ತೀಕ್ಷ್ಣತೆ ಅಡಗಿದೆ.

ಇಂದಿನ ಕಾಲದ ಅತಿರೇಕ, ಹೀರೋಯಿಸಂ, ಡೈಲಾಗ್‌ ಗಳು, ಅಬ್ಬರದ ಹಿನ್ನಲೆ ಸಂಗೀತಗಳ ನಡುವೆ ವಲವಾರ ಒಂದು ಧೈರ್ಯದ ಪ್ರಯತ್ನ. ಇದು ಮಕ್ಕಳನ್ನು ಹೀರೋಗಳಾಗಿಸುವ ಮೂಲಕ, ಹಳ್ಳಿಯ ಬದುಕನ್ನು ಕೇಂದ್ರವಾಗಿಟ್ಟುಕೊಂಡು, ಸಿನೇಮಾ ಇನ್ನೂ ಮಾನವೀಯವಾಗಿರಬಹುದು ಎಂದು ನೆನಪಿಸುತ್ತದೆ. ಅಸ್ತಿತ್ವವೇ ಹಸುವಾಗುವ ಕ್ಷಣದಲ್ಲಿ, ಮನುಷ್ಯನ ಅಸಹಾಯಕತೆಯೂ, ಪ್ರೀತಿಯೂ, ರಾಜಕೀಯವೂ ಒಟ್ಟಾಗಿ ಕಾಣಿಸಿಕೊಳ್ಳುತ್ತವೆ. ಎಲ್ಲರೂ ನೋಡಿ ಅನುಭವಿಸಲೇಬೇಕಾದ ಉತ್ತಮ ಚಿತ್ರ ವಲವಾರ!

You cannot copy content of this page

Exit mobile version