Home ಅಂಕಣ ಜನಾಡಳಿತ (Democracy) ಪರಿಣಾಮಕಾರಿಯಾಗಲು ಶಾಸಕರಿಗೊಂದು ವೇಳಾಪಟ್ಟಿ: ಜಾಗತಿಕ ಮಾದರಿಗಳ ಬೆಳಗು

ಜನಾಡಳಿತ (Democracy) ಪರಿಣಾಮಕಾರಿಯಾಗಲು ಶಾಸಕರಿಗೊಂದು ವೇಳಾಪಟ್ಟಿ: ಜಾಗತಿಕ ಮಾದರಿಗಳ ಬೆಳಗು

0

“..ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗಷ್ಟೇ ಮುಖ ತೋರಿಸಿ, ಗೆದ್ದ ನಂತರ ಮಹಲು ಸೇರಿಕೊಳ್ಳುವ ಪದ್ಧತಿಗೆ ಮುಕ್ತಿ ಹಾಡಬೇಕಿದೆ. ಶಾಸಕರು ತಮಗಾಗಿ ಅಲ್ಲ, ಜನರಿಗಾಗಿ ನಿಯಮಿತವಾಗಿ ಕೆಲಸ ಮಾಡಲು ವೇಳಾಪಟ್ಟಿ ನಿಗದಿಯಾಗಲೇಬೇಕು..” ನಾವು DRAVIDA ಕನ್ನಡಿಗರು ಚಳುವಳಿ ಸಂಘಟಕರಾದ ಅಭಿ ಒಕ್ಕಲಿಗ ಅವರ ಬರಹದಲ್ಲಿ

ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಆಡಳಿತ. ಆದರೆ ಇಂದಿನ ವ್ಯವಸ್ಥೆಯಲ್ಲಿ ‘ಜನಪ್ರತಿನಿಧಿ’ಗಳಾಗಬೇಕಿದ್ದ ಶಾಸಕರು ‘ದೊರೆ’ಗಳಂತೆ ಮೆರೆಯುತ್ತಿದ್ದರೆ, ಮಾಲೀಕರಾಗಬೇಕಿದ್ದ ಸಾರ್ವಜನಿಕರು ಸೇವಕರಂತೆ ಕೈಮುಗಿದು ನಿಲ್ಲುವ ವಾತಾವರಣ ನಿರ್ಮಾಣವಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಮತ್ತು ಶಾಸಕರು ತಮಗೆ ನೀಡಿದ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸಿ ಜನಸೇವೆ ಮಾಡಲು, ಅವರಿಗೆ ನಿರ್ದಿಷ್ಟ ವೇಳಾಪಟ್ಟಿ ಹಾಗೂ ಕಾರ್ಯನಿರ್ವಹಣಾ ಚೌಕಟ್ಟನ್ನು ನಿಗದಿಪಡಿಸುವ ಹೋರಾಟ ಇಂದು ಕಾಲದ ತುರ್ತು ಅಗತ್ಯವಾಗಿದೆ.

ವಿಐಪಿ ಸಂಸ್ಕೃತಿಯಲ್ಲಿ ಮುಳುಗಿರುವ ಭಾರತೀಯ ರಾಜಕಾರಣ
ಇಡೀ ಪ್ರಪಂಚದಲ್ಲೇ ಶಾಸಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಅತ್ಯಂತ ಹೆಚ್ಚಿನ ಸವಲತ್ತು, ಭತ್ಯೆ ಮತ್ತು ಭೋಗ-ಭಾಗ್ಯಗಳನ್ನು ನೀಡುತ್ತಿರುವ ದೇಶ ಎಂದರೆ ಅದು ಭಾರತ. ತೆರಿಗೆದಾರರ ಶ್ರಮದ ಹಣದಿಂದ ಭಾರಿ ಸಂಬಳ, ಉಚಿತ ವಸತಿ, ಉಚಿತ ಪ್ರಯಾಣ, ಹೆಜ್ಜೆ ಹೆಜ್ಜೆಗೂ ಸಿಗುವ ಸವಲತ್ತುಗಳು ಹಾಗೂ ಸಾಲು ಸಾಲು ಭದ್ರತಾ ಸಿಬ್ಬಂದಿಯ ಬೆಂಗಾವಲನ್ನು ಅನುಭವಿಸುವ ನಮ್ಮ ಶಾಸಕರು, ತಮಗೆ ವಹಿಸಿದ ಜವಾಬ್ದಾರಿಯನ್ನು ಎಷ್ಟು ಮಟ್ಟಿಗೆ ಪೂರೈಸುತ್ತಿದ್ದಾರೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಸವಲತ್ತು ಪಡೆಯುವುದರಲ್ಲಿ ಪ್ರಥಮ ಸ್ಥಾನದಲ್ಲಿರುವ ನಮ್ಮ ಶಾಸಕರು, ಜವಾಬ್ದಾರಿ ನಿರ್ವಹಣೆಯಲ್ಲಿ ಮಾತ್ರ ಹಿಂದೆ ಬೀಳುತ್ತಿದ್ದಾರೆ.

ವಿಶ್ವದ ಪ್ರಜಾಪ್ರಭುತ್ವ ಮಾದರಿಗಳಿಂದ ನಾವೇನು ಕಲಿಯಬೇಕು?
ಜಗತ್ತಿನ ಪ್ರಗತಿಪರ ದೇಶಗಳಲ್ಲಿ ಶಾಸಕರು ಜನಸಾಮಾನ್ಯರಿಗಿಂತ ಬೇರೆಯವರಲ್ಲ ಎಂಬ ಸ್ಪಷ್ಟ ಭಾವನೆಯಿದೆ. ಅಲ್ಲಿ ಅಧಿಕಾರ ಎನ್ನುವುದು ಸೇವೆಯ ಹೊರತು ಮೆರೆದಾಟವಲ್ಲ:

ಸ್ವೀಡನ್‌: ಸ್ವೀಡನ್‌ನಲ್ಲಿ ಶಾಸಕರು ಸಾರ್ವಜನಿಕ ಹಣದಲ್ಲಿ ಟ್ಯಾಕ್ಸಿ ಬಳಸಿದರೂ ಸಹ ಸಾರ್ವಜನಿಕವಾಗಿ ದೊಡ್ಡ ಮಟ್ಟದ ಋಣಾತ್ಮಕ (ನೆಗೆಟಿವ್) ಪ್ರಚಾರ ಎದುರಿಸಬೇಕಾಗುತ್ತದೆ. ಹೀಗಾಗಿ ಅಲ್ಲಿನ ಶಾಸಕರು ಪ್ರತಿದಿನ ಬಸ್ ಮತ್ತು ರೈಲುಗಳಲ್ಲೇ ಜನಸಾಮಾನ್ಯರ ಜೊತೆ ಸಾಗಿ ಕಚೇರಿ ತಲುಪುತ್ತಾರೆ. ಆದರೆ ನಮ್ಮಲ್ಲಿ ಶಾಸಕರು ಯಾವುದೋ ಒಂದು ದಿನ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿ ಕ್ಯಾಮೆರಾ ಕಣ್ಣಿಗೆ ಫೋಸ್ ನೀಡುವ ‘ಮೀಡಿಯಾ ಸ್ಟಂಟ್’ ಮಾಡುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.

ಜರ್ಮನಿ: ಜರ್ಮನಿಯಲ್ಲಿ ಶಾಸಕರಿಗೆ ಉಚಿತ ಸಾರ್ವಜನಿಕ ಸಾರಿಗೆ ಪಾಸ್ ನೀಡಲಾಗುತ್ತದೆ ಮತ್ತು ಅವರು ಕಡ್ಡಾಯವಾಗಿ ಬಸ್, ಟ್ರಾಮ್ ಅಥವಾ ರೈಲುಗಳಲ್ಲೇ ಪ್ರಯಾಣಿಸಿ ತಮ್ಮ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಬೇಕು.

ನೆದರ್ಲ್ಯಾಂಡ್ಸ್: ನೆದರ್ಲ್ಯಾಂಡ್ಸ್‌ನಲ್ಲಿ ಶಾಸಕರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರೂ ಸೈಕಲ್‌ನಲ್ಲೇ ಕಚೇರಿಗೆ ತಲುಪುತ್ತಾರೆ. ಆದರೆ ನಮ್ಮ ದೇಶದಲ್ಲಿ ಇಂಧನ (ಪೆಟ್ರೋಲ್ ಮತ್ತು ಡೀಸೆಲ್) ಬೆಲೆ ಏರಿಕೆಯಿಂದ ಬೆಂಡಾಗಿದ್ದ ಜನರ ಆಕ್ರೋಶವನ್ನು ಬೇರೆಡೆಗೆ ಹಾದಿತಪ್ಪಿಸಲು, ಶಾಸಕರು ಎರಡು ದಿನ ಸೈಕಲ್ ಏರಿ ನಾಟಕವಾಡಿದ್ದನ್ನು ಬಿಟ್ಟರೆ ಜನರಿಗೆ ಸಿಕ್ಕ ಪ್ರಯೋಜನ ಶೂನ್ಯ.

ನಾರ್ವೆ, ನ್ಯೂಜಿಲ್ಯಾಂಡ್ ಮತ್ತು ಡೆನ್ಮಾರ್ಕ್: ಜಗತ್ತಿನಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಪಾರದರ್ಶಕ ಪ್ರಜಾಪ್ರಭುತ್ವ ಹೊಂದಿರುವ ದೇಶಗಳೆಂದರೆ ನಾರ್ವೆ, ನ್ಯೂಜಿಲ್ಯಾಂಡ್ ಹಾಗೂ ಡೆನ್ಮಾರ್ಕ್. ಈ ದೇಶಗಳಲ್ಲಿ ಶಾಸಕರಿಗೆ ಯಾವುದೇ ಅಧಿಕಾರದ ಗತ್ತಾಗಲಿ, ಮೆರೆದಾಟವಾಗಲಿ ಇರುವುದಿಲ್ಲ. ಬದಲಿಗೆ ಅವರೇ ಸ್ವತಃ ಜನರ ಬಳಿಗೆ ಬಂದು, ಸಮಸ್ಯೆಗಳನ್ನು ಆಲಿಸಿ, ‘ನಿಮಗೆ ಏನು ಕೆಲಸವಾಗಬೇಕು?’ ಎಂದು ಕೇಳಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡುತ್ತಾರೆ.

ವೇಳಾಪಟ್ಟಿ ನಿಗದಿಯ ಅಗತ್ಯ ಮತ್ತು ಹೋರಾಟದ ಹಾದಿ ಸಾಮಾನ್ಯ ಉದ್ಯೋಗಿಗಳಿಗೆ, ಶಿಕ್ಷಕರಿಗೆ, ಕಾರ್ಮಿಕರಿಗೆ ನಿರ್ದಿಷ್ಟ ಕೆಲಸದ ಸಮಯ ಮತ್ತು ವೇಳಾಪಟ್ಟಿ ಇರುವಾಗ, ಕೋಟ್ಯಂತರ ರೂಪಾಯಿ ತೆರಿಗೆ ಹಣ ಬಳಸುವ ಶಾಸಕರಿಗೇಕೆ ನಿರ್ದಿಷ್ಟ ವೇಳಾಪಟ್ಟಿ ಇರಬಾರದು?

ಕ್ಷೇತ್ರದಲ್ಲಿ ಸಾರ್ವಜನಿಕರನ್ನು ಭೇಟಿಯಾಗುವ ಸಮಯ,
ಕುಂದುಕೊರತೆ ಆಲಿಸುವ ದಿನಗಳು,
ಶಾಸನಸಭೆಯ ಕಲಾಪಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವಿಕೆ, ಮತ್ತು
ಅಭಿವೃದ್ಧಿ ಕೆಲಸಗಳ ನಿರಂತರ ಪರಿಶೀಲನೆಗೆ
ಕಾಲಮಿತಿಯ ವೇಳಾಪಟ್ಟಿಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಬೇಕಿದೆ.

ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗಷ್ಟೇ ಮುಖ ತೋರಿಸಿ, ಗೆದ್ದ ನಂತರ ಮಹಲು ಸೇರಿಕೊಳ್ಳುವ ಪದ್ಧತಿಗೆ ಮುಕ್ತಿ ಹಾಡಬೇಕಿದೆ. ಶಾಸಕರು ತಮಗಾಗಿ ಅಲ್ಲ, ಜನರಿಗಾಗಿ ನಿಯಮಿತವಾಗಿ ಕೆಲಸ ಮಾಡಲು ವೇಳಾಪಟ್ಟಿ ನಿಗದಿಯಾಗಲೇಬೇಕು. ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಅನ್ವರ್ಥಗೊಳಿಸಲು ಈ ವೇಳಾಪಟ್ಟಿ ನಿಗದಿಯ ಹೋರಾಟವೇ ನಮ್ಮ ಮೊದಲ ಹೆಜ್ಜೆಯಾಗಲಿ.

You cannot copy content of this page

Exit mobile version