Home ಅಂಕಣ ಅಸ್ಪೃಶ್ಯತೆ ರೋಗಕ್ಕೆ ಬೌದ್ಧ ಧರ್ಮ ಪರಿಹಾರ

ಅಸ್ಪೃಶ್ಯತೆ ರೋಗಕ್ಕೆ ಬೌದ್ಧ ಧರ್ಮ ಪರಿಹಾರ

0

“..ಅಸ್ಪೃಶ್ಯರು ಬೌದ್ಧ ಧರ್ಮ ಅಥವಾ ಇನ್ನಿತರ ಯಾವುದೇ ಧರ್ಮ ಸೇರಿದರು ಒಂದೆರಡು ತಲೆಮಾರುಗಳ ಕಾಲದಲ್ಲಿ ಅಸ್ಪೃಶ್ಯತೆ ನಶಿಸುತ್ತದೆ. ಹಿಂದೂ ನಾವೆಲ್ಲ ಒಂದು, ಎನ್ನುವುದೊಂದು ಬೋಗಸ್..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಬರಹದಲ್ಲಿ

ಕರ್ನಾಟಕವು ಸದಾ ಸುದ್ದಿಯಲ್ಲಿರುವ ರಾಜ್ಯ. ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕತೆ ಪ್ರಮುಖವಾದವು. ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಕಿತ್ತಾಟ, ಕೆಸರೇರಚಾಟ ಅವರ ದಿನಚರಿಯಾಗಿದೆ. ಇನ್ನು ಸದಾ ಸುದ್ದಿಯಲ್ಲಿರುವ ಕರ್ನಾಟಕ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಎನ್ನಬಹುದು. ಅದಕ್ಕೆ ಸಾಕ್ಷಿಯಾಗಿ ಕಳೆದ ಶನಿವಾರ ಸೆಪ್ಟೆಂಬರ್ 12ರಂದು ಮಾದಿಗ ಜಾತಿಯವರ ಮೇಲೆ ಕ್ಲುಲಕ್ಷ ಕಾರಣಕ್ಕೆ, ಜಾತಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವುದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ.

ಮೇಲ್ನೋಟಕ್ಕೆ ವರದಿಯಾಗಿರುವುದು – ಚಾಮನಾಳ ಗ್ರಾಮದ ದಲಿತ ಭಕ್ತರ ಗುಂಪು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಅಮಾವಾಸ್ಯೆಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ತೆರಳಿತ್ತು, ಜಾತ್ರೆ ಪೂಜೆಗಳು ಮುಗಿದು ವಾಪಸ್ ಆಗುವ ಸಮಯದಲ್ಲಿ ಆಟೋ ಹಿಂತೆಗೆಯುವಾಗ, ಆಟೋ ಬಾಲಕನಿಗೆ ತಗಲಿದೆ ಎಂಬ ಕಾರಣಕ್ಕೆ ಮಾದಿಗರ ಮೇಲೆ ಜಾತಿಯನ್ನು ಆಧಾರವಾಗಿಟ್ಟುಕೊಂಡು ಹಲ್ಲೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕಂಡು ಬಂದಿರುವ ಈ ವಿಷಯವನ್ನು ವರದಿಯಾಗಷ್ಟೆ ನೋಡದೆ, ಪರಿಹರಿಸುವ ರೀತಿಯಲ್ಲಿ ನೋಡುವುದಾದರೆ.

ಜನರಿಗೆ ಜಾತಿ ರೋಗ, ಅಸ್ಪೃಶ್ಯರಿಗೆ ದೇವಸ್ಥಾನಕ್ಕೆ ಹೋಗಲೇಬೇಕೆಂಬ ರೋಗ, ಎರಡಕ್ಕೂ ಕೊನೆಯಿಲ್ಲ ಎಂಬಂತಾಗಿದೆ. ಈ ಎರಡು ರೋಗಗಳು ರಕ್ತದಲ್ಲಿ ಅಥವಾ ಅಂಗ ರಚನೆಯಲ್ಲಿ ಬಂದಿರುವುದಲ್ಲ, ಬದಲಾಗಿ ಸಮಾಜದಿಂದ ಮಾನಸಿಕವಾಗಿ ಬರುವಂತಹ ರೋಗಗಳಿವು. ಈ ರೋಗ ಈ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಕಿತ್ತರು ಬಾರದಷ್ಟರ ಮಟ್ಟಿಗೆ ಬೇರು ಬಿಟ್ಟಿದೆ. ಈ ಸಾಮಾಜಿಕ ರೋಗಕ್ಕೆ ಮದ್ದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು, ಬಹು ಮುಖ್ಯವಾಗಿ ಕೋಟ್ಯಾನು ಕೋಟಿ ಜನರು ಅಸ್ಪೃಶ್ಯತೆ ಎಂಬ ರೋಗದಿಂದ ಕಾಲಾನುಕಾಲದಿಂದ ಇವತ್ತಿನವರೆಗೂ ಬಳಲುತ್ತಿದ್ದಾರೆ. ಆದರೆ ಅವರಿಗೆ ರೋಗದ ಅರಿವಿದೆ, ಈ ರೋಗ ಪರಿಹಾರವಾಗಬೇಕೆಂಬ ಆಸೆಯೂ ಇದೆ, ಆದರೆ ತಮಗೆ ಹುಟ್ಟಿನಿಂದಲೇ ಬಂದಿರುವ ಈ ರೋಗದಿಂದ ಗುಣಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಇಚ್ಛೆಯಿದ್ದಂತಿಲ್ಲ.

ಗೌತಮ ಬುದ್ಧ, ಬಸವಣ್ಣ, ಗುರು ನಾನಕ್, ಡಾ. ಬಿ‌.ಆರ್ ಅಂಬೇಡ್ಕರ್ ಅವರ ಹಾದಿಯಾಗಿ ಇವರ ಅನುಯಾಯಿಗಳಾಗಿ ಕೆಲವರಷ್ಟೇ ಅಸ್ಪೃಶ್ಯತೆ ರೋಗದಿಂದ ಗುಣಮುಖರಾಗಿದ್ದಾರೆ. ಇನ್ನುಳಿದವರು ಅದೇ ರೋಗದಿಂದ ಬಳಲುತ್ತಿದ್ದಾರೆ. ಅಸ್ಪೃಶ್ಯತೆಯಿಂದ ಬಾಧೆಗೆ ಒಳಪಟ್ಟಿರುವ ಮಾದಿಗ ಸಮುದಾಯ, ಜನಸಂಖ್ಯೆಯಲ್ಲಿ ಗಮನಾರ್ಹವಾಗಿದ್ದರು, ಒಳ ಮೀಸಲಾತಿಯಲ್ಲಿ ತಮ್ಮ ಸಮುದಾಯಕ್ಕೆ ಬರಬೇಕಾದ ಪಾಲಿಗಾಗಿ ಹೋರಾಟ ಮಾಡಿದರು, ಜಾತಿಯಲ್ಲಿ ಅನುಕೂಲಸ್ಥರು, ಶ್ರೀಮಂತರೂ ಇದ್ದರೂ ಸಹ ಮಾದಿಗ ಸಮುದಾಯ ಸಾಮಾಜಿಕ ವ್ಯವಸ್ಥೆಯಲ್ಲಿ ಏಳಿಗೆ ಕಾಣುತ್ತಿಲ್ಲ.

ಹಾಗಾದರೆ ಈ ಸಮುದಾಯ ಎಡವಿದ್ದಿಲ್ಲಿ ಅಂದರೆ? ಆ ಸಮುದಾಯದ ರಾಜಕಾರಣಿಗಳ ಲಾಭಕೋರತನದಿಂದ, ರಾಜಕೀಯದಲ್ಲಿ ಜಾತಿ ಧರ್ಮಗಳಿಗೆ ಅವಕಾಶ ಕೊಟ್ಟಿದ್ದರಿಂದ. ರಾಜಕೀಯ ಕ್ಷೇತ್ರದಲ್ಲಿ ಜಾತಿಗಳ ಆಧಾರದಲ್ಲಿ ಮೀಸಲಾತಿ ಇರುವುದರಿಂದ, ರಾಜಕಾರಣಿಗಳಿಗೆ ಇದೊಂದು ವರವಾಗಿ ಪರಿಣಮಿಸಿದೆ. ಪ್ರತಿಭಾನ್ವಿತ ವ್ಯಕ್ತಿಗಳಿಗೆ ರಾಜಕೀಯದಲ್ಲಿ ಅವಕಾಶ ದೊರೆಯುತ್ತಿಲ್ಲ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅನುಸೂಚಿತ ಜಾತಿಗಳಿಗೆ (ಎಸ್ಸಿ) 36 ಕ್ಷೇತ್ರಗಳು, ಅನುಸೂಚಿತ ಪಂಗಡಗಳಿಗೆ (ಎಸ್ಟಿ) 15 ಕ್ಷೇತ್ರಗಳು ಮೀಸಲಿವೆ. ಈ ಮೀಸಲು ಕ್ಷೇತ್ರಗಳಲ್ಲದೆ ಬೇರೆ ಕ್ಷೇತ್ರಗಳಲ್ಲಿ ಅನುಸೂಚಿತ ಜಾತಿಯವರನ್ನು ಮತ್ತು ಪಂಗಡದವರನ್ನು ನೋಡುವುದು ಕಷ್ಟಕರ ಮತ್ತು ತೀರ ಸಾಧ್ಯವಿಲ್ಲವೇ ಇಲ್ಲ ಎನ್ನಬಹುದು. ಏಕೆಂದರೆ ಈ ಸಮುದಾಯಗಳಿಗೆ ಸೇರಿದ ವ್ಯಕ್ತಿ ಸಾಮಾನ್ಯ ಕ್ಷೇತ್ರದಲ್ಲಿ ಪ್ರತಿನಿಧಿಸಲು ಹೊರಟರೆ ಆತನನ್ನು ನಿಮಗೆ ಮೀಸಲಿರುವ ಕ್ಷೇತ್ರದಲ್ಲಿ ನೀವು ಸ್ಪರ್ಧಿಸಬೇಕೆಂದು ತಾಕಿತು ಮಾಡಿ ಅವರನ್ನು ಹಿಮ್ಮೆಟ್ಟಿಸುತ್ತಾರೆ.

ಮಾದಿಗ ಸಮುದಾಯದಲ್ಲಿರುವ (ಒಟ್ಟಾರೆ ಎಲ್ಲ ಜಾತಿಯ) ರಾಜಕಾರಣಿಗಳು ತಾವು ರಾಜಕೀಯದ ಮುಖಾಂತರ ವೈಯಕ್ತಿಕವಾಗಿ ಲೂಟಿ ಮಾಡಲು ಜಾತಿಯೆಂಬ ಅಸ್ತ್ರ ಬಳಸಿ ಮತ ಕೇಳುತ್ತಾರೆ, ಪಡೆಯುತ್ತಾರೆ, ಚುನಾವಣೆಗಳಲ್ಲಿ ಗೆಲ್ಲುತ್ತಾರೆ. ಅವಿವೇಕಿ ಮತದಾರರಿಗೆ ಚುನಾಯಿತರಾದ ಜನಪ್ರತಿನಿಧಿಗಳು ತಮ್ಮ ಜಾತಿಗೆ ಸೇರಿದವರಾಗಿದ್ದರೆ, ಅವರಿಗದೇ ಅದಮ್ಯ ಸಂತೋಷಕರ ವಿಷಯ. ಆಯ್ಕೆಯಾದ ಶಾಸಕರಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆಯೇ ಇಲ್ಲವೇ ಎಂಬುದು ಅಮುಖ್ಯವಾದದ್ದು.

ಕುತಂತ್ರ ರಾಜಕಾರಣಿಗಳಿಗೆ ಜಾತಿಯೇ ಚುನಾವಣೆ ಗೆಲುವಿನ ಅಸ್ತ್ರವಾಗಿದೆ. ಜನರಿಗೆ ಅನುಸೂಚಿತ ಜಾತಿ ಬಿಟ್ಟು ಒಂದು ಧರ್ಮ ಸೇರಿಕೊಂಡರೆ ಮೀಸಲಾತಿ ಸಿಗುವುದಿಲ್ಲವೆಂದು ಮತ್ತು ನಮ್ಮ ಜಾತಿ ಪುರಾತನವಾದುದೆಂದು, ಹಬ್ಬ ಆಚರಣೆ ಜಾತ್ರೆಗಳಲ್ಲಿ ಮುಳುಗಿ ಸಾಮಾಜಿಕ ಪ್ರಜ್ಞೆ ಕಳೆದುಕೊಂಡಿರುವಾಗ ಯಾದಗಿರಿಯಲ್ಲಿ ಆದಂತಹ ಘಟನೆಗಳು ಮರುಕಳಿಸುತ್ತವೆ.

ಯಾದಗಿರಿಯಲ್ಲಿ ಮೇಲ್ಜಾತಿಯ ಗುಂಪು ಮಾದಿಗರ ಮೇಲೆ ಹಲ್ಲೆ ಮಾಡಿರುವುದು ಖಂಡನಾರ್ಹ ಮತ್ತು ದಂಡನಾರ್ಹ. ಮಾದಿಗ ಭಕ್ತಾದಿಗಳು ಪೂಜೆ ಮುಗಿಸಿಕೊಂಡು ಹಿಂತುರಿಗಬೇಕಾದರೆ ಆದ ಸಣ್ಣ ಹತಾಚೂರ್ಯಕ್ಕೆ ಜಾತಿಯನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿರುವುದು ಸಮರ್ಥನೆಗೆ ಯೋಗ್ಯವಲ್ಲದ್ದು. ಈ ಘಟನೆಗೆ ಸಂಬಂಧಿಸಿದಂತೆ 14 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಇಬ್ಬರನ್ನು ಬಂಧಿಸಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ಘಟನೆಯು ನಡೆದಿರುವುದಕ್ಕೆ ಪ್ರಮುಖ ಕಾರಣಗಳು – ಅಸ್ಪೃಶ್ಯತೆ ಇನ್ನೂ ಬದುಕಿರುವುದು ಮತ್ತು ಜಾತಿಯ ಮೇಲಿನ ಪೂರ್ವಗ್ರಹ.

ಹಲ್ಲೆಗೆ ಒಳಗಾದವರು, ಅಸ್ಪೃಶ್ಯತೆಗೆ ಮುದ್ದು ಇದ್ದರು ಅವರು ಅದನ್ನು ಬಳಸದೆ, ತಮ್ಮ ಪುರಾಣ ಪುಣ್ಯ ಕಥೆಗಳನ್ನೇ ಹೇಳುತ್ತಾ ಕೇಳುತ್ತಾ ಅವನ್ನೇ ನಂಬುತ್ತಾ ವೈದಿಕರ ಕುತಂತ್ರವಿರುವ ಆಚರಣೆ, ಹಬ್ಬಗಳಲ್ಲಿ ತಮ್ಮನ ತಾವು ತೊಡಗಿಸಿಕೊಳ್ಳುತ್ತಾ ಈ ರೀತಿ ಘಟನೆಗಳಿಗೆ ಆಸ್ಪದ ಕೊಡುತ್ತಾರೆ. ಮೊದಲು ಮಾರಿ ಹಬ್ಬ ಜಾತ್ರೆ ಮಾಡುತ್ತಿದ್ದ ಅಸ್ಪೃಶ್ಯರು ಇಂದು ದೀಪಾವಳಿ, ಗಣೇಶ ಚತುರ್ಥಿ, ರಾಮನವಮಿ, ವರಲಕ್ಷ್ಮಿ ಹಬ್ಬ, ಹನುಮ ಜಯಂತಿ, ಕೃಷ್ಣಾಷ್ಟಮಿ, ಗೃಹಪ್ರವೇಶಕ್ಕೆ ವಿಘ್ನೇಶ್ವರ ಪೂಜೆ, ಸತ್ಯನಾರಾಯಣ ಪೂಜೆ ಮತ್ತು ಇನ್ನೂ ಹತ್ತು ಹಲವು ಕುತಂತ್ರ ವ್ಯೂಹಗಳಲ್ಲಿ ಮುಳುಗಿದ್ದಾರೆ.

ಒಂದು ಧರ್ಮ ಸೇರಿದರೆ ಮೀಸಲಾತಿ ಹೋಗುತ್ತದೆ ಎಂಬ ಮಿತ್ಯೆಗೆ ಹೆದರುತ್ತ ಅಲ್ಲೇ ಇದ್ದಾರೆ. ಜಾತಿ ರಾಜಕೀಯವೆಂಬ ದುರ್ಮಾರ್ಗದಿಂದ ಅಸ್ಪೃಶ್ಯತೆ ಇನ್ನೂ ಸಾವಿರಾರು ವರ್ಷ ಕಳೆದರು ಖಂಡಿತವಾಗಿಯೂ ಕೊನೆಗೊಳ್ಳದು. ಇನ್ನು ಮುಂದುವರೆದು ವೈಯಕ್ತಿಕವಾಗಿ ಮೀಸಲಾತಿ ಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ, ಮೀಸಲಾತಿಯು ಜನಸಂಖ್ಯೆ ಮತ್ತು ಸಾಮಾಜಿಕತೆಯನ್ನು ಆಧರಿಸುವುದರಿಂದ, ಕರ್ನಾಟಕದಲ್ಲಿ ಅಸ್ಪೃಶ್ಯತೆಗೆ ಒಳಗಾದ ಸಮುದಾಯಗಳೆಂದರೆ ಹೊಲೆಯರು, ಮಾದಿಗರು. ಇವರು ಬೌದ್ಧ ಧರ್ಮ ಸೇರಿದರೆ, ಬೌದ್ಧರಾಗಿ ಮಾರ್ಪಡುತ್ತಾರೆ, ಇವರ ಗುರುತು ಬೌದ್ಧರೆಂದಾಗುತ್ತದೆ, ಅಸ್ಪೃಶ್ಯರೆಂದಲ್ಲ. ಜಾತಿಗಣತಿ ನಡೆದಾಗ ಬೌದ್ಧರ ಸಾಮಾಜಿಕತೆ ಮತ್ತು ಜನಸಂಖ್ಯೆಯ ಅನುಗುಣವಾಗಿ ಇವರು ಮೀಸಲಾತಿಯನ್ನು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯುತ್ತಾರೆ. ಇವರು ಹೋರಾಡದೆ ಇವರು ಬಯಸಿದ ಬದುಕು ಸಿಗುವುದಿಲ್ಲ.

ಡಾ. ಬಿ.ಆರ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಜಾರಿಯಾದದ್ದು 1950ರಲ್ಲಿ, ನಂತರ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದು 1956ರಲ್ಲಿ ಅಂದರೆ ಅವರಿಗೂ ಅರಿವಾಗಿತ್ತು, ಈ ಸಂವಿಧಾನದಿಂದಷ್ಟೇ ಅಸ್ಪೃಶ್ಯತೆ ನಾಶವಾಗಲು ಸಾಧ್ಯವಿಲ್ಲವೆಂದು. ಅಂಬೇಡ್ಕರ್ ಅವರ ಬಗ್ಗೆ ನಾನಾ ಕತೆಗಳನ್ನು ಹೇಳುತ್ತಾ ಅವರು ನಮ್ಮಂತೆ ಸಾಮಾನ್ಯ ಮನುಷ್ಯರಾಗಿದ್ದರು ಎಂಬುದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದೆ ಅಸ್ಪೃಶ್ಯತೆಯ ಕೂಪದಲ್ಲೇ ನರಳುತ್ತಿದ್ದಾರೆ.

ಯಾದಗಿರಿಯಲ್ಲಿ ಆದಂತಹ ಘಟನೆಯಲ್ಲಿ ತಪ್ಪು ಕೇವಲ ಮೇಜಾತಿಯವರದೆಂದು ಬರಹಗಳು ಅಭಿಪ್ರಾಯಗಳು ಬರುತ್ತವೆ. ವಾಸ್ತವದಲ್ಲಿ ತಪ್ಪು ಎರಡು ಕಡೆಯೂ ಇವೆ, ಮೇಲ್ಜಾತಿಯವರಲ್ಲಿರುವ ಜಾತಿ ಆಧಾರಿತ ಪೂರ್ವಗ್ರಹದಿಂದ ಈ ಹೀನಾಯ ಕೃತ್ಯ ನಡೆದಿದ್ದರೂ, ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಮುಖ್ಯ ಕಾರಣ ಅಸ್ಪೃಶ್ಯತೆಯಿಂದ ಹೊರಬರದೆ ಇರುವ ಮಾದಿಗರದು ಸಹ ಹೆಚ್ಚಿದೆ.

ಅಸ್ಪೃಶ್ಯರು ಬೌದ್ಧ ಧರ್ಮ ಅಥವಾ ಇನ್ನಿತರ ಯಾವುದೇ ಧರ್ಮ ಸೇರಿದರು ಒಂದೆರಡು ತಲೆಮಾರುಗಳ ಕಾಲದಲ್ಲಿ ಅಸ್ಪೃಶ್ಯತೆ ನಶಿಸುತ್ತದೆ. ಹಿಂದೂ ನಾವೆಲ್ಲ ಒಂದು, ಎನ್ನುವುದೊಂದು ಬೋಗಸ್. ಅಸಲಿಗೆ ಹಿಂದೂ ಧರ್ಮ ಎನ್ನುವುದೇ ಭೋಗಸ್, ಇದು ವೈದಿಕರ ಕುತಂತ್ರವೇ ಹೊರೆತು ಧರ್ಮವಲ್ಲ. ಅಸ್ಪೃಶ್ಯರು ಒಂದು ಧರ್ಮ ಸೇರಬೇಕು, ಸ್ಪೃಶ್ಯರು (ಹಿಂದುಳಿದ ವರ್ಗದವರು) ನಾಸ್ತಿಕರಾಗಬೇಕು, ಆಗ ಮಾತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಯತಾಸ್ಥಿತಿ ಮುಂದುವರಿಕೆ.

You cannot copy content of this page

Exit mobile version