Home ಅಂಕಣ ಅನಂತನಾಗ್: ಶ್ರೇಷ್ಠ ನಟನೋ ಅಥವಾ ಕೇವಲ ‘ಟೈಪ್ ಕಾಸ್ಟ್’ ತಾರೆಯೋ? – ಫಾಲ್ಕೆ ಪ್ರಶಸ್ತಿಯ ಹಿಂದಿನ...

ಅನಂತನಾಗ್: ಶ್ರೇಷ್ಠ ನಟನೋ ಅಥವಾ ಕೇವಲ ‘ಟೈಪ್ ಕಾಸ್ಟ್’ ತಾರೆಯೋ? – ಫಾಲ್ಕೆ ಪ್ರಶಸ್ತಿಯ ಹಿಂದಿನ ಅಸಲಿ ಸತ್ಯ!

0

“..ಅನಂತನಾಗ್ ಅವರು ಅತ್ಯುತ್ತಮ ವಾಚಿಕಾಭಿನಯವುಳ್ಳ ನಟ ಹೌದು, ಆದರೆ ಅವರು ವಿಶ್ವಮಟ್ಟದ ಅಥವಾ ಡಾ.ರಾಜ್ ಕುಮಾ‌ರ್ ಮಟ್ಟದ ವರ್ಸಟೈಲ್ ನಟ ಖಂಡಿತ ಅಲ್ಲ..” ಲೇಖನ: ವಿ.ಆ‌ರ್. ಕಾರ್ಪೆಂಟರ್, ತಪ್ಪದೇ ಓದಿ

ಒಬ್ಬ ನಟ, ಕೇವಲ ತನ್ನ ಸ್ಪಷ್ಟವಾದ ಡೈಲಾಗ್ ಡೆಲಿವರಿ ಮತ್ತು ಭಾಷೆಯ ಮೇಲಿನ ಹಿಡಿತದಿಂದ ಇಡೀ ರಾಜ್ಯದ ಜನರನ್ನು ರ ಜನರನ್ನು ದಶಕಗಳ ಕಾಲ ಮೋಡಿ ಮಾಡಬಹುದಾ? ಹೌದು ಎನ್ನುವುದಾದರೆ, ಅದಕ್ಕೆ ಬೆಸ್ಟ್‌ ಉದಾಹರಣೆ ಅನಂತನಾಗ್. ಇತ್ತೀಚೆಗಷ್ಟೇ ಅವರಿಗೆ ಭಾರತೀಯ ಚಿತ್ರರಂಗದ ಅತಿ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದು ಬಂದಾಗ, ಕನ್ನಡಿಗರೆಲ್ಲರೂ ತಮ್ಮದೇ ಮನೆಗೆ ಪ್ರಶಸ್ತಿ ಬಂದಷ್ಟು ಸಂಭ್ರಮಿಸಿದರು.

ಆದರೆ ಗೆಳೆಯರೆ, ಇವತ್ತು ನಾವು ಸ್ವಲ್ಪ ಎಮೋಷನ್ಸ್ ಅನ್ನು ಪಕ್ಕಕ್ಕಿಟ್ಟು, ಒಂದು ಕ್ರಿಟಿಕಲ್ ಅನಾಲಿಸಿಸ್‌ ಮಾಡೋಣ. ನಟನೆ ಎಂದರೆ ಕೇವಲ ಕ್ಯಾಮೆರಾ ಮುಂದೆ ನಿಂತು, ಡೈಲಾಗ್ ಅನ್ನು ಮಿಸ್ಟೇಕ್ ಇಲ್ಲದೆ ಒಪ್ಪಿಸುವುದಾ? ಅಥವಾ ನಟನೆ ಎನ್ನುವುದರ ಹಿಂದೆ ಒಂದು ವಿಜ್ಞಾನ, ಒಂದು ಸೈಕಾಲಜಿ ಇದೆಯಾ? ನಾವು ಅನಂತನಾಗ್ ಅವರನ್ನು ಕನ್ನಡದ ಶ್ರೇಷ್ಠ. ವರ್ಸಟೈಲ್ ನಟ ಎಂದು ಕರೆಯುವಾಗ, ಪ್ರಪಂಚದ ನಟನಾ ಸಿದ್ಧಾಂತಗಳ ಮುಂದೆ ಅವರ ನಟನೆ ಎಲ್ಲಿ ನಿಲ್ಲುತ್ತದೆ?

ಜೊತೆಗೆ, ದಿಢೀರನೆ ಅವರಿಗೆ ಈ ರಾಷ್ಟ್ರಮಟ್ಟದ ಪರಮೋಚ್ಛ ಪ್ರಶಸ್ತಿ ಒಲಿದು ಬರಲು ಕಾರಣ ಅವರ 50 ವರ್ಷಗಳ ನಟನೆಯೋ ಅಥವಾ ಇತ್ತೀಚಿನ ಅವರ ‘ರಾಜಕೀಯ ನಿಷ್ಠೆ’ಯೋ? ಈ ಲೇಖನದಲ್ಲಿ, ಯಾವುದೇ ಮುಲಾಜಿಲ್ಲದೆ, ಕೆಲವು ಕಹಿ ಸತ್ಯಗಳನ್ನು ಬಗೆದು ನೋಡೋಣ.

ನಟನೆ ಎಂದರೆ ಕೇವಲ ವಾಚಿಕಾಭಿನಯವೇ? ಸ್ಟಾನಿಸ್ಲಾವಿ ಸಿದ್ಧಾಂತದ ಏನು ಹೇಳುತ್ತದೆ?
ವಿಶ್ಲೇಷಣೆಯ ಮೊದಲ ಹೆಜ್ಜೆಯಾಗಿ ನಾವು ‘ಸ್ಟಾನಿಸ್ಲಾಮ್ಮಿ ಥಿಯರಿ’ (Stanislavski System) ಬಗ್ಗೆ ತಿಳಿದುಕೊಳ್ಳಬೇಕು. 1900ರ ದಶಕದ ಆರಂಭದಲ್ಲಿ ರಷ್ಯಾದ ದ ಆರಂಭದಲ್ಲಿ ರಷ್ಯಾದ ರಂಗಕರ್ಮಿ ಕಾನ್ ಸ್ಟಾಂಟಿನ್ ಸ್ಟಾನಿಸ್ಲಾವಿ ನಟನೆಯ ಬಗ್ಗೆ ಒಂದು ಕ್ರಾಂತಿಕಾರಿ ಸಿದ್ದಾಂತವನ್ನು ಮಂಡಿಸಿದರು. ಅವರ ಪ್ರಕಾರ, ನಟನಾದವನು ಪಾತ್ರವನ್ನು ಕೇವಲ ‘ಅಭಿನಯಿಸಬಾರದು’, ಬದಲಾಗಿ ಆ ಪಾತ್ರವಾಗಿ ‘ಬದುಕಬೇಕು’. ನಟ ತನ್ನ ನಿಜವಾದ ವ್ಯಕ್ತಿತ್ವವನ್ನು ಮರೆತು, ಪಾತ್ರದ ಮನೋವಿಜ್ಞಾನವನ್ನು ಸಂಪೂರ್ಣವಾಗಿ ಆವಾಹಿಸಿಕೊಳ್ಳುವುದನ್ನೇ ನಾವು ‘ಮೆಥಡ್ ಆಕ್ಟಿಂಗ್ ಎಂದು ಕರೆಯುತ್ತೇವೆ.

ಈ ಥಿಯರಿಯನ್ನು ಅರ್ಥಮಾಡಿಕೊಳ್ಳಲು ಹಾಲಿವುಡ್ ಡೇನಿಯಲ್ ಡೇ-ಲೂಯಿಸ್ ಅವರನ್ನು ನೋಡಬೇಕು. ‘ಲಿಂಕನ್’ ಚಿತ್ರದಲ್ಲಿ ಅವರು ಅಮೆರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ಆಗಿ ನಟಿಸಲಿಲ್ಲ, ಬದಲಾಗಿ ಲಿಂಕನ್ ಆಗಿಯೇ ರೂಪಾಂತರಗೊಂಡಿದ್ದರು! ಶೂಟಿಂಗ್ ಮುಗಿಯುವವರೆಗೂ ಅವರು ಸೆಟ್ ನಲ್ಲಿ ತಮ್ಮ ನಿಜವಾದ ಹೆಸರಿನಲ್ಲಿ ಮಾತನಾಡುತ್ತಲೇ ಇರಲಿಲ್ಲ. ‘ದಿ ಡಾರ್ಕ್ ನೈಟ್’ ಚಿತ್ರದ ಹೀತ್ ಲೆಕ್ಚರ್ ನ ‘ಜೋಕ‌ರ್ ಪಾತ್ರವನ್ನು ನೆನಪಿಸಿಕೊಳ್ಳಿ. ಅಲ್ಲಿ ಲೆಡ್ಡರ್ ಎಂಬ ನಟ ಸಂಪೂರ್ಣವಾಗಿ ಸತ್ತು, ಕೇವಲ ಜೋಕರ್ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತಾನೆ. ನಿರ್ದೇಶಕನ ಕಲ್ಪನೆಯನ್ನು ನೂರು ಪಟ್ಟು ಹೆಚ್ಚಿಸುವ ಈ ಪರಕಾಯ ಪ್ರವೇಶವೇ ಅಪ್ಪಟ ನಟನ ಲಕ್ಷಣ.

ಕೇವಲ ಹಾಲಿವುಡ್ ಮಾತ್ರವಲ್ಲ, ನಮ್ಮ ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲೂ ಇಂತಹ ಅದ್ಭುತಗಳಾಗಿವೆ. ‘ಶೋಲೆ’ ಚಿತ್ರದ ಠಾಕೂರ್ ಪಾತ್ರ ಮಾಡಿದ ಸಂಜೀವ್ ಕುಮಾರ್ ಇರಬಹುದು, ‘ಪಾನ್ ಸಿಂಗ್ ತೋಮರ್’ ಚಿತ್ರದಲ್ಲಿ ಅಶ್ಲೀಟ್ ಆಗಿ, ನಂತರ ಡಕಾಯಿತನಾಗಿ ಬದಲಾಗುವ ಇರ್ಫಾನ್ ಖಾನ್ ಅವರ ಸೂಕ್ಷ್ಮನಟನೆ ಇರಬಹುದು, ಅಥವಾ ನಮ್ಮ ಕಮಲ್ ಹಾಸನ್ ಅವರ ‘ದಶಾವತಾರಂ’ ಇರಬಹುದು.

ಈ ನಟರೆಲ್ಲರೂ ಪ್ರತಿ ಸಿನಿಮಾದಲ್ಲೂ ತಮ್ಮ ದೇಹ, ಧ್ವನಿ, ಹಾವಭಾವ, ಕಣ್ಣಿನ ಚಲನೆ ಎಲ್ಲವನ್ನೂ ಪಾತ್ರಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಪ್ರೇಕ್ಷಕನಿಗೆ ಇವರು ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆಯೇ ಹೊರತು, ಇವರ ನೈಜ ಐಡೆಂಟಿಟಿ ಅಲ್ಲ. ಅವರು ಪಾತ್ರವನ್ನು ನುಂಗುವುದಿಲ್ಲ. ಬದಲಾಗಿ ಪಾತ್ರವೇ ಅವರನ್ನು ಆವರಿಸಿಕೊಳ್ಳುತ್ತದೆ. ಈಗ, ಈ ಮಾನದಂಡವನ್ನು ಇಟ್ಟುಕೊಂಡು ಅನಂತನಾಗ್ ಅವರನ್ನು ಅಳೆಯೋಣ.

ಅನಂತನಾಗ್ ಅವರ ಸೀಮಿತ ಕಂಫರ್ಟ್ ರೋನ್ ಮತ್ತು ‘ಟೈಪ್ ಕಾಸ್ಟ್’ ಪಾತ್ರಗಳು!
ಅನಂತನಾಗ್ ಅವರು ನಟನಾಗಿ ಎಂದಿಗೂ ವಿಭಿನ್ನ ಪಾತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲೇ ಇಲ್ಲ. ಅವರ ಇಡೀ ಫಿಲ್ಲೋಗ್ರಫಿಯನ್ನು ಗಮನಿಸಿ, ಎಲ್ಲವೂ ಮನೋಟೋನಸ್ ಪಾತ್ರಗಳೇ! ಅವರು ನಿರ್ದೇಶಕನ ಕಲ್ಪನೆಯನ್ನು ಒಡೆದುಹಾಕಿ. ಇಡೀ ಪಾತ್ರಗಳನ್ನು ‘ಅನಂತನಾಗ್’ ಆಗಿಯೇ ನುಂಗಿ ಹಾಕಿದ್ದಾರೆ.

ಉದಾಹರಣೆಗೆ ‘ನಾರದ ವಿಜಯ’ ಚಿತ್ರವನ್ನು ತೆಗೆದುಕೊಳ್ಳಿ. ಇದರಲ್ಲಿ ಅವರು ಡಬಲ್ ರೋಲ್ ಮಾಡಿದ್ದಾರೆ. ಆದರೆ ನಾರದನ ಗೆಟಪ್ ಹಾಕಿದ ಪಾತ್ರದಲ್ಲೂ ನಮಗೆ ದೇವರ್ಷಿ ನಾರದ ಕಾಣುವುದಿಲ್ಲ, ಬದಲಾಗಿ ಕಿರೀಟ ಇಟ್ಟುಕೊಂಡು, ತನ್ನದೇ ರೆಗ್ಯುಲರ್ ಶೈಲಿಯಲ್ಲಿ ಡೈಲಾಗ್ ಹೇಳುವ ಅನಂತನಾಗ್ ಮಾತ್ರ ಕಾಣಿಸುತ್ತಾರೆ! ನಲ್ಲಿ ಗಣೇಶ ಸೀರೀಸ್‌ವ ಅವರ ಕಾಮಿಡಿ ಟೈಮಿಂಗ್ ಅದ್ಭುತ ಎನ್ನುತ್ತಾರೆ. ಆದರೆ ಕಾಮಿಡಿ ಪಾತ್ರದಲ್ಲೂ ತೆಗೆದುಕೊಂಡರೂ, ಅವರು ಗಡ್ಡ ಬಿಟ್ಟ ಅಥವಾ ಕ್ಲೀನ್ ಶೇವ್ ಮಾಡಿದ ಒಬ್ಬ ‘ಫಿಲಾಸಫರ್’ ಅಥವಾ ‘ಸಭ್ಯ ವ್ಯಕ್ತಿ’ಯಾಗಿಯೇ ಕಾಣುತ್ತಾರೆ ಹೊರತು, ಅನಂತನಾಗ್ ಆಗಿ ಕಾಣದ, ಪೂರ್ತಿಯಾಗಿ ಬೇರೆಯದೇ ಆಯಾಮದ ಯಾವುದಾದರೊಂದು ಪಾತ್ರವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರ ಕಂಫರ್ಟ್ ರೋನ್ ಬಹಳ ಲಿಮಿಟೆಡ್.

ಬ್ರೆಕ್ಟ್ ಥಿಯರಿ (Alienation Effect) ಮತ್ತು ಅನಂತನಾಗ್ ನಟನೆ
ನಟನಾ ವಿಜ್ಞಾನದಲ್ಲಿ ಮತ್ತೊಂದು ಪ್ರಮುಖ ಸಿದ್ಧಾಂತವಿದೆ, ಅದೇ ಜರ್ಮನ್ ನಾಟಕಕಾರ, ಕವಿ ಬರ್ಟೋಲ್ಟ್ ಬ್ರೆಕ್ಟ್ ಅವರ ‘ಎಪಿಕ್ ಥಿಯೇಟರ್’ ಅಥವಾ ‘ಬ್ರೆಕ್ಟ್ ಥಿಯರಿ’. ಈ ಸಿದ್ಧಾಂತದ ಪ್ರಮುಖ ಅಂಶವೇ ‘ಏಲಿಯನೇಷನ್ ಎಫೆಕ್ಟ್’. ಅಂದರೆ, ನಟನು ತಾನು ಪಾತ್ರವಾಗಿ ಬದಲಾಗದೆ, ಪ್ರೇಕ್ಷಕರಿಗೆ “ನಾನು ಕೇವಲ ನಟಿಸುತ್ತಿದ್ದೇನೆ. ಇದೊಂದು ಕೃತಕ ಪ್ರಪಂಚ” ಎಂದು ಪದೇ ಪದೇ ನೆನಪಿಸುವುದು. ಬ್ರೆಕ್ಟ್ ಇದನ್ನು ಪ್ರೇಕ್ಷಕರನ್ನು ಎಚ್ಚರಿಸಲು, ಅವರನ್ನು ಭಾವುಕತೆಯಿಂದ ಹೊರತಂದು ವಿಚಾರಶೀಲರನ್ನಾಗಿ ಮಾಡಲು ಉದ್ದೇಶಪೂರ್ವಕವಾಗಿ ಬಳಸುತ್ತಿದ್ದರು.

ಅನಂತನಾಗ್ ಅವರು ತಮ್ಮ ಸಿನಿಮಾಗಳಲ್ಲಿ ಈ ‘ಬ್ರೆಕ್ಟ್ ಥಿಯರಿ’ಯನ್ನು ತಮಗರಿವಿಲ್ಲದೆಯೇ ಪಾಲಿಸುತ್ತಾ ಬಂದಿದ್ದಾರೆ! ಅವರು ಕ್ಯಾಮೆರಾ ಮುಂದೆ ನಿಂತು ಎಷ್ಟೇ ಭಾವುಕವಾಗಿ ಮಾತನಾಡಿದರೂ, ಪ್ರೇಕ್ಷಕರಿಗೆ ಅಲ್ಲಿ ಪಾತ್ರದ ನೋವು ಕಾಣುವುದಿಲ್ಲ, ಬದಲಾಗಿ “ಅನಂತನಾಗ್ ಅವರು ಎಂತಹ ಅದ್ಭುತವಾದ ಕನ್ನಡದಲ್ಲಿ ಡೈಲಾಗ್ ಹೇಳುತ್ತಿದ್ದಾರೆ” ಎಂದಷ್ಟೇ ಅನಿಸುತ್ತದೆ. ಅನಿಸುತ್ತದೆ. ಭಾಷೆಯ ಮೇಲಿನ ಹಿಡಿತ, ಸ್ಪಷ್ಟ ಉಚ್ಛಾರಣೆ ಇದೆ ಎಂದ ಮಾತ್ರಕ್ಕೆ ಅದನ್ನೇ ನಟನೆ ಎಂದು ಕರೆಯಲು ಸಾಧ್ಯವಿಲ್ಲ. ಅದು ವಾಚಿಕಾಭಿನಯ ಮಾತ್ರ. ಸಂಪೂರ್ಣ ನಟನೆಯಲ್ಲ. ಆದರೆ, ಬ್ರೆಕ್ಟ್ ಥಿಯರಿಯಂತೆ ಪ್ರೇಕ್ಷಕರನ್ನು ವಿಚಾರಶೀಲರನ್ನಾಗಿ ಮಾಡುವ ಒಂದೇ ಒಂದು ಸಣ್ಣ ಪ್ರಯತ್ನವನ್ನೂ ಅವರು ಮಾಡಲೇ ಇಲ್ಲ. ಇದು ಯಾರ ಸೋಲು?

ಡಾ.ರಾಜ್‌ಕುಮಾ‌ರ್ ಎಂಬ ನಟನೆಯ ಅಪ್ಪಟ ವ್ಯಾಕರಣ!
ಅಪ್ಪಟ ನಟನೆ ಎಂದರೆ ಹೇಗಿರುತ್ತದೆ ಎಂದು ಕನ್ನಡಿಗರು ಬೇರೆ ಎಲ್ಲಿಗೂ ಹೋಗಬೇಕಾಗಿಲ್ಲ. ನಮ್ಮ ಡಾ. ರಾಜ್ ಕುಮಾ‌ರ್ ಅವರ ಪಾತ್ರಗಳನ್ನು ನೋಡಿದರೆ ಸಾಕು. ರಾಜ್ ಕುಮಾರ್ ಅವರು ಸ್ಟಾನಿಸ್ಲಾವಿ ಸಿದ್ಧಾಂತವನ್ನು ಹುಟ್ಟಿನಿಂದಲೇ ಕರಗತ ಮಾಡಿಕೊಂಡಿದ್ದರೋ ಎನಿಸುತ್ತದೆ. ‘ಸನಾದಿ ಅಪ್ಪಣ್ಣ’ ಚಿತ್ರವನ್ನೇ ತೆಗೆದುಕೊಳ್ಳಿ. ಅಲ್ಲಿ ರಾಜ್‌ ಅವರು ರಾಜ್ ಆಗಿ ಉಳಿದಿಲ್ಲ. ಶಹನಾಯಿ ಊದುವಾಗ ಅವರ ಕುತ್ತಿಗೆಯ ಕು ನರಗಳು ಬಿಗಿಯಾಗುವುದು, ಕಣ್ಣುಗಳ ಆಳದಲ್ಲಿನ ಆ ಭಕ್ತಿ, ಆ ಹಾವಭಾವ.. ಅಲ್ಲಿ ಅಪ್ಪಣ್ಣನೇ ನಮ್ಮ ಕಣ್ಣ ಮುಂದೆ ನಿಲ್ಲುತ್ತಾನೆ.

‘ಭಕ್ತ ಪ್ರಹ್ಲಾದ’ ಚಿತ್ರದ ಹಿರಣ್ಯ ಕಶ್ಯಪು ಪಾತ್ರದ ಅಹಂಕಾರ ಮತ್ತು ರೌದ್ರಾವತಾರ ಇರಬಹುದು, ‘ಬಬ್ರುವಾಹನ’ದಲ್ಲಿನ ಎರಡು ವಿಭಿನ್ನ ತಲೆಮಾರಿನ ಪಾತ್ರಗಳ ಧ್ವನಿಯಲ್ಲಿದ್ದ ಏರಿಳಿತಗಳಿರಬಹುದು, ಅಥವಾ ‘ಆಕಸ್ಮಿಕ’ ಚಿತ್ರದ ಆ ಮಾಸ್ ಅಪೀಲ್ ಇರಬಹುದು. ರಾಜ್ ಅವರು ನೂರಾರು ಪಾತ್ರಗಳಿಗೆ ಜೀವ ಕೊಟ್ಟು ನಟಿಸಿದ್ದಾರೆ.ನಿರ್ದೇಶಕ ಕೊಟ್ಟ ಹಸಿಮಣ್ಣಿಗೆ ತಮ್ಮ ಉಸಿರನ್ನು ತುಂಬಿ ಪಾತ್ರಗಳಿಗೆ ಜೀವಕಳೆ ಕೊಟ್ಟರು. ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಬ್ರೆಕ್ಟ್ ಥಿಯರಿಯನ್ನೂ ಅಪ್ಪಿಕೊಂಡು, ನಟಿಸಿ ಜಾಗೃತಿ ಮೂಡಿಸಿದರು. ರಾಜ್ ಕುಮಾರ್ ಅವರಿಗೆ ಹೋಲಿಸಿದರೆ, ಅನಂತನಾಗ್ ಅವರ ನಟನಾ ರೇಂಜ್ ಬಹಳೆ ಸೀಮಿತ ಮತ್ತು ಸೇಫ್.

ದಿಢೀ‌ರ್ ಬದಲಾದ ‘ಕಾಶ್ಮೀರಿ’ ಐಡೆಂಟಿಟಿ
ಸರಿ, ನಟನೆಯ ವಿಚಾರವನ್ನು ಪಕ್ಕಕ್ಕಿಡೋಣ. ಹಾಗಾದರೆ ಅನಂತನಾಗ್ ಅವರಿಗೆ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದಾದರೂ ಹೇಗೆ? ಕೇವಲ ಅವರ ಸೀಮಿತ ನಟನೆಗೋ ಅಥವಾ ಇದರ ಹಿಂದೆ ಬೇರೆಯದೇ ಆಟ ನಡೆದಿದೆಯೋ? ಇಲ್ಲಿ ನಾವು ಇತ್ತೀಚಿನ ವರ್ಷಗಳ ಭಾರತದ ರಾಜಕೀಯ ಧ್ರುವೀಕರಣವನ್ನು ಅರ್ಥಮಾಡಿಕೊಳ್ಳಬೇಕು. 2022 ರಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಎಂಬ ಪ್ರೊಪಗಾಂಡಾ ಸಿನಿಮಾ ಬಿಡುಗಡೆಯಾಗಿ, ದೇಶಾದ್ಯಂತ ದೊಡ್ಡ ಕೋಮುಗಲಾಟೆ, ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿತು.

ಆ ಸಂದರ್ಭದಲ್ಲಿ, ದಶಕಗಳಿಂದ ಕನ್ನಡಿಗರೇ ಆಗಿ, ಕನ್ನಡದ ಅಸ್ಮಿತೆಯನ್ನು ಮೈಗೂಡಿಸಿಕೊಂಡಿದ್ದ ಅನಂತನಾಗ್ ಅವರು ಇದ್ದಕ್ಕಿದ್ದಂತೆ ಒಂದು ಹೇಳಿಕೆ ಕೊಡುತ್ತಾರೆ. “ನನ್ನ ಮೂಲ ಕಾಶ್ಮೀರದ ಅನಂತನಾಗ್ ಜಿಲ್ಲೆ, ನಾವು ಕಾಶ್ಮೀರಿ ಪಂಡಿತರು, ಈ ಸಿನಿಮಾ ನೋಡಿ ನನಗೆ ಕಣ್ಣೀರು ಬಂತು” ಎಂದು ಹೇಳುತ್ತಾರೆ. ಯೋಚಿಸಿ ಗೆಳೆಯರೇ, ಅಲ್ಲಿಯವರೆಗೂ ಎಂದಿಗೂ ತಮ್ಮ ‘ಕಾಶ್ಮೀರಿ ಮೂಲ’ವನ್ನು ಪ್ರಸ್ತಾಪಿಸದಿದ್ದ ವ್ಯಕ್ತಿ, ದೇಶದಲ್ಲಿ ಒಂದು ನಿರ್ದಿಷ್ಟ ರಾಜಕೀಯ ವಾತಾವರಣ ಸೃಷ್ಟಿಯಾದಾಗ, ಅಂಧಭಕ್ತರನ್ನು ಓಲೈಸಲು ತಮ್ಮ ಹೊಸ ಐಡೆಂಟಿಟಿಯನ್ನು ಬಿಚ್ಚಿಡುತ್ತಾರೆ. ಇದು ಪ್ರಜ್ಞಾಪೂರ್ವಕವಾಗಿ ಮಾಡಿದ ರಾಜಕೀಯ ಓಲೈಕೆ ಅಲ್ಲದೆ ಮತ್ತೇನು?

ಫಾಲ್ಕೆ ಪ್ರಶಸ್ತಿ: ಪ್ರತಿಭೆಗೋ ಅಥವಾ ರಾಜಕೀಯ ನಿಷ್ಠೆಗೋ?
ಕೇವಲ ಕಾಶ್ಮೀರ್ ಫೈಲ್ಸ್ ಮಾತ್ರವಲ್ಲ. ಕಳೆದ ಕೆಲವು ವರ್ಷಗಳಿಂದ ಅನಂತನಾಗ್ ಅವರು ಪ್ರಧಾನಿ ಮೋದಿಯವರನ್ನು, ಅವರ ಸರ್ಕಾರದ ಪ್ರತಿಯೊಂದು ನಡೆಯನ್ನೂ, ಅವರ ಸೈದ್ಧಾಂತಿಕ ನಿಲುವುಗಳನ್ನೂ ಅತಿಯಾಗಿ ಹೊಗಳಿಕೊಂಡು ಬಂದಿದ್ದಾರೆ. ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಅಜೆಂಡಾಗಳಿಗೆ ಪೂರಕವಾಗಿ ತಮ್ಮ ನಿಲುವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ.

ಯಾರನ್ನೋ ಓಲೈಸಲು ತನ್ನ ಇಷ್ಟು ವರ್ಷದ ಕನ್ನಡದ ಅಸ್ಮಿತೆಯನ್ನೇ ಬೇರೆಯವರ ಅಜೆಂಡಾಗೆ ಅಡವಿಟ್ಟ ಅನಂತನಾಗ್ ಅವರ ಈ ನಡೆಯನ್ನು ನಾವು ಪ್ರಶ್ನಿಸಲೇಬೇಕಾಗಿದೆ. ಇಂದು ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಬಂದಿರೋದು ಕೇವಲ ಅವರ ಸಿನಿಮಾಗಳಿಗಲ್ಲ. ಅವರು ಮೋದಿಯವರನ್ನು ಮತ್ತು ಆಡಳಿತ ಸರ್ಕಾರವನ್ನು ಎಗ್ಗಿಲ್ಲದೆ ಓಲೈಸಿಕೊಂಡು ಬಂದಿರುವ ಕಾರಣಕ್ಕಷ್ಟೇ ಈ ಫಾಲ್ಕೆ ಅವಾರ್ಡ್ ಒಂದು ‘ರಿಟರ್ನ್ ಗಿಫ್ಟ್’ ಆಗಿ ಬಂದಿದೆ. ಇದನ್ನು ‘ಕನ್ನಡಕ್ಕೆ ಸಿಕ್ಕ ಗೌರವ’ ಎಂದು ಅಂದುಕೊಳ್ಳುವುದು ಅಪ್ಪಟ ಮೂರ್ಖತನವಾಗುತ್ತದೆ.

ಕನ್ನಡಿಗರೇ, ನಾವು ಕಲೆಯ ವಿಚಾರದಲ್ಲಿ ಬಹಳ ಸೆಂಟಿಮೆಂಟಲ್. ನಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡುವವರನ್ನು ನಾವು ಪ್ರಶ್ನಾತೀತವಾಗಿ ಆರಾಧಿಸುತ್ತೇವೆ. ಆದರೆ ಕಲೆಯು ರಾಜಕೀಯದ ಜೊತೆ ಬೆರೆತಾಗ, ನೈಜ ಪ್ರತಿಭೆಗಿಂತ ರಾಜಕೀಯ ನಿಷ್ಠೆ ಮುನ್ನೆಲೆಗೆ ಬರುತ್ತದೆ ಎನ್ನುವುದಕ್ಕೆ ಅನಂತನಾಗ್ ಅವರಿಗೆ ಒಲಿದ ಈ ಪ್ರಶಸ್ತಿ ಒಂದು ಜ್ವಲಂತ ಉದಾಹರಣೆ. ಅನಂತನಾಗ್ ಅವರು ಅತ್ಯುತ್ತಮ ವಾಚಿಕಾಭಿನಯವುಳ್ಳ ನಟ ಹೌದು, ಆದರೆ ಅವರು ವಿಶ್ವಮಟ್ಟದ ಅಥವಾ ಡಾ.ರಾಜ್ ಕುಮಾ‌ರ್ ಮಟ್ಟದ ವರ್ಸಟೈಲ್ ನಟ ಖಂಡಿತ ಅಲ್ಲ.

ಹಾಗೆಯೇ, ಅವರಿಗೆ ಸಿಕ್ಕಿರುವ ಈ ಪ್ರಶಸ್ತಿಯು ಶುದ್ಧ ಪ್ರತಿಭೆಯ ಆಧಾರದ ಮೇಲೆ ಸಿಕ್ಕಿದ್ದಲ್ಲ, ಬದಲಾಗಿ ರಾಜಕೀಯ ಚದುರಂಗದಾಟದ ಒಂದು ಭಾಗವಷ್ಟೇ. ಈ ಕಹಿಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಇಂದಿನ ಯುವಜನತೆ ಮತ್ತು ಕನ್ನಡಿಗರು ಬೆಳೆಸಿಕೊಳ್ಳಲೇಬೇಕು. ಸೈದ್ಧಾಂತಿಕ ಕುರುಡುತನದಿಂದ ನಾವು ಕಲೆಯ ನೈಜ ವಿಮರ್ಶೆಯನ್ನು ಸಾಯಿಸಬಾರದು.

You cannot copy content of this page

Exit mobile version