Home ಅಂಕಣ ಇದು ಗಂಡಸರ ಕೋಟೆ ಕಣ್ರಮ್ಮೋ..

ಇದು ಗಂಡಸರ ಕೋಟೆ ಕಣ್ರಮ್ಮೋ..

0

“ಬಡತನದ ಮನೆಯೊಳಗೆ ಹೆಣ್ಣು ಹುಟ್ಟಬಾರದು ಎಂಬ ಜಾನಪದ ಹಾಡನ್ನು ಸ್ವಲ್ಪ ಬದಲಾಯಿಸಿ ಭಾರತ ಮತ್ತು ಕರ್ನಾಟಕದ ರಾಜಕೀಯದಲ್ಲಿ ಹೆಣ್ಣು ಪ್ರವೇಶಿಸಲೇಬಾರದು. ಇದು ಗಂಡಸಿನ ಕೋಟೆ…” ಚಿಂತಕರಾದ ವಿವೇಕಾನಂದ ಹೆಚ್.ಕೆ ಅವರ ಬರಹದಲ್ಲಿ

ಸುಮಾರು ಎರಡೂವರೆ ಕೋಟಿ ಮತದಾರರಿರುವ ಕರ್ನಾಟಕದ ರಾಜಕೀಯ ಆಡಳಿತದಲ್ಲಿ ಅಂದರೆ ಸಚಿವ ಸಂಪುಟದಲ್ಲಿ ಈ ಕ್ಷಣದಲ್ಲಿ ಒಂದು ಹೆಣ್ಣೂ ಸಹ ಇಲ್ಲ. ಅಂದರೆ ಅರ್ಧದಷ್ಟು ಜನಸಂಖ್ಯೆಗೆ ಪ್ರಾತಿನಿಧ್ಯತ್ವವೇ ಇಲ್ಲ…

ಇಲ್ಲಿ ಗಂಡಸರು ಹೇಳಿದ್ದೇ ವೇದವಾಕ್ಯ. ಹೆಣ್ಣನ್ನು ಹೆಣ್ಣಾಗಿ ಸೃಷ್ಟಿಸಿದ್ದೇ ಗಂಡಸು, ಅವನ ಸುಖಕ್ಕಾಗಿಯೇ. ಇದು ಪಿತೃ ಪ್ರಧಾನ ಕುಟುಂಬವಲ್ಲ, ಪಿತೃವುದೇ ಕುಟುಂಬ.
ಹೆಣ್ಣು ಅವನ ಗುಲಾಮಳು. ಗಂಡು ಮೇಲೆ, ಹೆಣ್ಣು ಕೆಳಗೆ ಮತ್ತು ಮನೆಯೊಳಗೆ…..

ಗೊತ್ತಲ್ಲ ಹೆಣ್ಣುಗಳೇ, ಮೊದಲು ಸತಿ ಸಹಗಮನವಿತ್ತು. ದೇವದಾಸಿ ಪದ್ಧತಿ ಇತ್ತು. ಬೆತ್ತಲೆ ಸೇವೆಯಿತ್ತು. ಹೆಣ್ಣಿಗಾಗಿ ಯುದ್ಧಗಳು ನಡೆಯುತ್ತಿತ್ತು. ಅಂದರೆ ಹೆಣ್ಣು ಒಂದು ಭೋಗದ ವಸ್ತು. ಹುಷಾರ್, ನೀವು ಧ್ವನಿಯೆತ್ತದಿರಿ. ನೀವಿರುವುದು ಮಕ್ಕಳು ಹೆರಲು, ಅಡುಗೆ ಮಾಡಲು, ಗಂಡಸರ ಸೇವೆಗಾಗಿ ಮಾತ್ರ.

ಬೇಕಾದರೆ ನೋಡಿ, ಗಂಡಸರಾದ ನಾವು ನಿಮ್ಮನ್ನು ಎಲ್ಲಿ ಇಟ್ಟಿದ್ದೇವೆ ಎಂದು. ಹೆಚ್ಚು ಕಡಿಮೆ ಶೇಕಡಾ 50% ಮಹಿಳಾ ಮತದಾರರಿದ್ದರೂ ಕೇಂದ್ರ ಮೋದಿ ಸರ್ಕಾರದ ಸಂಪುಟದ 72 ಸಚಿವರಲ್ಲಿ ಕೇವಲ ಏಳು ಜನ ಮಾತ್ರ ಹೆಂಗಸರು, ಅದು ಕೊಸರಿಗಾಗಿ. ಕರ್ನಾಟಕದ ಡಿಕೆಶಿ ಸಂಪುಟದಲ್ಲಿ ಒಂದೂ ಇಲ್ಲ. ಇನ್ನು ಬೇರೆ ಬೇರೆ ರಾಜ್ಯದಲ್ಲಿ ಒಂದೆರಡು ಶಾಸ್ತ್ರಕ್ಕೆ ಇರಬಹುದಷ್ಟೇ. ನೋಡಿ ಇದೇ ಗಂಡಸರ ತಾಖತ್ತು.

ನಿಮ್ಮನ್ನು ಪೂಜನೀಯ ಭಾವದಿಂದ ನೋಡುವುದಕ್ಕಷ್ಟೇ ಸೀಮಿತ. ನಿಮ್ಮನ್ನು ಮಾತೃದೇವೋಭವ, ಮಾತೃ ಸ್ವರೂಪಿ ಎಂದೂ, ನೀವು ಪ್ರಕೃತಿಯ ವರಪ್ರಸಾದವೆಂದೂ, ಸೌಂದರ್ಯದ ಖನಿಯೆಂದೂ ಹೊಗಳಿಸಿಕೊಳ್ಳಲಷ್ಟೇ ನೀವುಗಳು ಇರುವುದು. ಏಕೆಂದರೆ ದೇವರಿಗೆ ಬಲಿ ಕೊಡುವುದು ಕುರಿಗಳನ್ನೇ ಹೊರತು ಹುಲಿಗಳನ್ನಲ್ಲ. ಅದಕ್ಕೇ ಬಲಿ ಕೊಡುವ ಮೊದಲು ಕುರಿಗೆ ಪೂಜೆ ಮಾಡಲಾಗುತ್ತದೆ. ನೀವು ಸಹ ಕುರಿಗಳೇ.

ಸ್ವಾತಂತ್ರ್ಯ ಬಂದು 80 ವರ್ಷವಾಗುತ್ತಿದೆ. ವಿಶ್ವ ಮಾರುಕಟ್ಟೆಗೆ ಸಹಿಮಾಡಿ ಜಾಗತೀಕರಣ ಅನುಷ್ಠಾನಗೊಂಡು 30 ವರ್ಷವಾಗುತ್ತಿದೆ. ಆದರೂ ನಿಮ್ಮನ್ನು ತುಳಿಯುತ್ತಲೇ ಇದ್ದೇವೆ. ಇನ್ನೂ ತುಳಿಯುತ್ತಲೇ ಇರುತ್ತೇವೆ. ಏಕೆಂದರೆ ನೀವು ಹೆಂಗಸರು, ಮೂರ್ಖರು, ಮುಗ್ಧರು, ಮೂಢರು. ನಿಮಗೆ ಚೆನ್ನಾಗಿ ನಂಬಿಸಿದರೆ ಸಾಕು, ಸುಮ್ಮನೆ ಹಳ್ಳಕ್ಕೆ ಬೀಳುತ್ತೀರಿ.

ನಿಮ್ಮ ವೀಕ್ನೆಸ್ ನಮಗೆ ಗೊತ್ತಿಲ್ಲವೇ. ಚಿನ್ನ, ಒಡವೆ, ಲಿಪ್ಸ್ಟಿಕ್, ಡ್ರೆಸ್, ಅಲಂಕಾರ, ಧಾರವಾಹಿ, ಸಿನಿಮಾ, ಮಾಡೆಲಿಂಗ್, ಮೈಸೂರ್ ಪಾಕು, ಮಲ್ಲಿಗೆ ಹೂ, ಹೊಗಳಿಕೆ, ಬೆದರಿಕೆ, ಹೆದರಿಕೆ ಇಷ್ಟನ್ನೇ ಇಟ್ಟುಕೊಂಡು ಎಲ್ಲಾ ಆಟ ಆಡುತ್ತೇವೆ. ಜೊತೆಗೆ ತಾಯಿ ಎಂದು ಕವಿತೆ ಬರೆಯುತ್ತೇವೆ. ಅವ್ವಾ ಎಂದು ಕಥೆ ಬರೆಯುತ್ತೇವೆ. ಮಗಳೇ, ತಂಗಿ ಎಂದು ಕಾದಂಬರಿ ಬರೆಯುತ್ತೇವೆ. ಬೆತ್ತಲೆ ಶಿಲ್ಪಕಲೆ, ಚಿತ್ರಕಲೆ ನಿರ್ಮಿಸುತ್ತೇವೇ ಮತ್ತು ರಚಿಸುತ್ತೇವೆ. ಸಾಕಲ್ಲವೇ ನಿಮಗೆ. ಇದಕ್ಕಿಂತ ಇನ್ನೇನು ಬೇಕು.

ನೋಡಿ, ಅಲ್ಲಿ ಟಿವಿಗಳಲ್ಲಿ, ಎಂತೆಂಥಹ ಶ್ರೀಮಂತರು, ಎಂತೆಂಥಹ ಅಧಿಕಾರದ ಫಲಾನುಭವಿಗಳು, ಎಂತೆಂಥಹ ದೊಡ್ಡ ಮನುಷ್ಯರು, ಜೀವನದಲ್ಲಿ ಬಹುತೇಕ ಎಲ್ಲಾ ಪಡೆದ ಗಂಡಸರು, ಮಂತ್ರಿ ಸ್ಥಾನ ಬೇಕು ಎಂದು ಕಚ್ಚಾಟ ಮಾಡುತ್ತಿರುವುದೇನು, ಅನ್ಯಾಯ ಎಂದು ಹೇಳುತ್ತಿರುವುದೇನು, ಅವರ ಬೆಂಬಲಿಗರು ಮಂತ್ರಿ ಸ್ಥಾನಕ್ಕಾಗಿ ಹೋರಾಡುತ್ತಿರುವುದೇನು. ಅವರಲ್ಲಿ ಒಬ್ಬರಾದರೂ ಮಹಿಳೆಯರಿಗೆ ಮಂತ್ರಿ ಮಾಡಿ ಎಂದು ಕೇಳುತ್ತಿದ್ದಾರೆಯೇ. ಅವರ ಕ್ಷೇತ್ರದ ಶಾಸಕರ ಪರ ಮಾತ್ರ ಪ್ರದರ್ಶನ ಮಾಡುತ್ತಿದ್ದಾರೆಯೇ ಹೊರತು, ಮಹಿಳಾ ಸಮುದಾಯದ ಬಗ್ಗೆ ಯಾರು ಮಾತನಾಡುತ್ತಲೇ ಇಲ್ಲ. ಏಕೆಂದರೆ ಇದು ಗಂಡಸರ ಕೋಟೆ.

ಸ್ವಾತಂತ್ರ್ಯ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಪಕ್ಷಗಳು, ಅಂದರೆ, ರಾಷ್ಟ್ರೀಯ, ಪ್ರಾದೇಶಿಕ, ಕಮ್ಯುನಿಸ್ಟ್, ಬಿಜೆಪಿ, ಕಾಂಗ್ರೆಸ್, ಬಹುಜನಪಕ್ಷ, ಆಮ್ ಆದ್ಮಿ ಯಾರೇ ಇರಲಿ ನಿಮಗೆ ಕೊಡುತ್ತಿರುವುದು ಮೂರು ನಾಲ್ಕು ಭಿಕ್ಷಾ ರೂಪದ ಸ್ಥಾನಗಳಷ್ಟೇ. ನೀವು ಅಲ್ಪ ತೃಪ್ತರು ಎಂಬುದು ನಮಗೆ ತಿಳಿದಿದೆ. ಅದಕ್ಕೇ ನಿಮ್ಮನ್ನು ಎಲ್ಲಿ ಇಡಬೇಕೋ ಅಲ್ಲಿಟ್ಟಿದ್ದೇವೆ. ಇದು ಪುರುಷರ ಕೋಟೆ.

ಯಾವ ಥಾರವಾಹಿಯ, ಯಾವ ಪತ್ರ, ಯಾವ ರೀತಿ ವರ್ತಿಸುತ್ತದೆ ಎಂದು ಟಿವಿ ನೋಡುತ್ತಲೇ ಇರಿ. ಬಿಗ್ ಬಾಸ್ ನಲ್ಲಿ ಯಾರು, ಯಾವ ರೀತಿ ಜಗಳ ಆಡುತ್ತಾರೆ ಎಂದು ಗಮನಿಸುತ್ತಿರಿ. ಕಾಮಿಡಿ ಕಿಲಾಡಿಗಳಲ್ಲಿ ಯಾವ ಕಾಮಿಡಿಗೆ ಹೆಚ್ಚು ನಗು ಬರುತ್ತದೆ ಎಂದು ಮಾತಾಡುತ್ತಾ ಇರಿ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಅಡುಗೆ ಕಾರ್ಯಕ್ರಮ, ಹಳ್ಳಿ ಹುಡುಗ ಪ್ಯಾಟೆಗ್ ಬಂದ, ಪ್ಯಾಟೆ ಹುಡುಗಿ ಹಳ್ಳಿಗ್ ಬಂದ್ಲು, ಮಜಾ ಟಾಕೀಸ್ ನೋಡಿಕೊಂಡು ಆರಾಮಾಗಿರಿ.

ಯಾವ ಅಂಗಡಿಯಲ್ಲಿ, ಯಾವ ಹೊಸ ಒಡವೆ ಬಂದಿದೆ, ಯಾವ ಡಿಸೈನ್ ಬಟ್ಟೆ ಬಂದಿದೆ, ಯಾವ ಮ್ಯಾಚಿಂಗ್ ಚಪ್ಪಲಿ, ವ್ಯಾನಿಟಿ ಬ್ಯಾಗ್ ಬಂದಿದೆ ತುಂಬಾ ಸೂಕ್ಷ್ಮವಾಗಿ ಗಮನಿಸಿ. ಸಚಿವ ಸಂಪುಟದಲ್ಲಿ ಮಹಿಳೆಯರು ಇದ್ದರೆಷ್ಟು ಬಿಟ್ಟರೆಷ್ಟು ನಿಮಗೇನು. ನೀವು ಯೋಚಿಸಬೇಡಿ ಗಂಡಸರು ನೋಡಿಕೊಳ್ಳುತ್ತಾರೆ ಎಂದು ಆರಾಮಾಗಿರಿ. ಗಂಡಸರಿಂದ ಅನ್ಯಾಯವಾದಾಗ ಕೂಗಾಟ, ರಂಪಾಟ ಮಾಡಿ ಮಾಧ್ಯಮಗಳಿಗೆ, ನ್ಯಾಯಾಲಯಗಳಿಗೆ ಹೋಗುವುದು ಇದ್ದೇ ಇದೆ. ಇಲ್ಲಾ ಅಂದರೆ ಟಿವಿಯಲ್ಲಿ ಜ್ಯೋತಿಷಿಗಳ ಮಾತು ಕೇಳಿ ಅವರು ಹೇಳಿದಂತೆ ಕುಂಕುಮ, ವಿಭೂತಿ, ಎಣ್ಣೆ, ಸ್ತೋತ್ರ, ಧ್ಯಾನ, ನವಗ್ರಹ ಪೂಜೆ, ಹೋಮ, ಹವನ ಮಾಡಿಕೊಂಡು ಆರಾಮಾಗಿರಿ.

ಕ್ಷಮಿಸಿ, ಮೇಲೆ ಹೇಳಿರುವುದೆಲ್ಲ ಆಡು ಮಾತಿನ ವ್ಯಂಗ್ಯ. ಆದರೆ ಸ್ವಲ್ಪಮಟ್ಟಿಗೆ ವಾಸ್ತವವೂ ಇದೆ. ಎಲ್ಲದರಲ್ಲೂ ಸಮಾನತೆ ಕೇಳುವ, ಸ್ವಾತಂತ್ರ್ಯ ಬಯಸುವ ಹೆಣ್ಣು ಮಕ್ಕಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮಾಜದ ಮುಖ್ಯ ವಾಹಿನಿಯ ಎಲ್ಲಾ ಕ್ಷೇತ್ರಗಳಲ್ಲೂ ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಪುರುಷ ಸಮಾಜ ಇಡೀ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗೂ ಅಧಿಕಾರ ಕೊಡದಷ್ಟು ದಾರ್ಷ್ಟ್ಯ ಪ್ರದರ್ಶಿಸುತ್ತದೆ. ದುರಹಂಕಾರ ಮೆರೆಯುತ್ತದೆ.

ಇಂಥ ಸಂದರ್ಭದಲ್ಲಿ ಮಹಿಳೆಯರು ಪಕ್ಷಾತೀತವಾಗಿ ಇದನ್ನು ಪ್ರತಿಭಟಿಸದಿದ್ದರೆ, ಸಾಮಾನ್ಯ ಜನರು ಇದಕ್ಕೆ ಧ್ವನಿಗೂಡಿಸದಿದ್ದರೆ ಇದಕ್ಕಿಂತ ನಾಚಿಕೆಗೇಡಿನ ಪರಿಸ್ಥಿತಿ ಯಾವುದೂ ಇರುವುದಿಲ್ಲ. ಮಹಿಳೆಯರು ನಿಜಕ್ಕೂ ಈಗ ಈ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಕನಿಷ್ಠವೆಂದರು ಐವರು ಮಹಿಳೆಯರಾದರು ಸಚಿವ ಸಂಪುಟದಲ್ಲಿ ಇರಬೇಕಾಗುತ್ತದೆ. ಆಗ ಮಾತ್ರ ಮಹಿಳಾ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಈಗ ಮಂತ್ರಿಗಳಾಗಿರುವ ಐದು ಜನ ಪುರುಷರು ತ್ಯಾಗ ಮಾಡಲಿ ಬಿಡಿ. ಶಾಸಕ ಸ್ಥಾನವೇ ಒಂದು ದೊಡ್ಡ ಗೌರವ. ತಮ್ಮ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡಲಿ.

ಮಂತ್ರಿ ಸ್ಥಾನವನ್ನು ಯಾರು ಗುತ್ತಿಗೆ ಪಡೆದಿಲ್ಲ. ಅದೊಂದು ಅಧಿಕಾರ ಸ್ಥಾನ ಅಷ್ಟೇ, ತಾತ್ಕಾಲಿಕ. ಯಾರೂ ಅದಕ್ಕೆ ಹಕ್ಕು ಮಂಡಿಸಬಾರದು. ಸಿಕ್ಕಾಗ ಅನುಭವಿಸಬೇಕಷ್ಟೆ. ಮಹಿಳೆಯರಿಗೆ ಮಂತ್ರಿ ಸ್ಥಾನ ನೀಡಿದರೆ ಮಾತ್ರ ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ, ಪ್ರಾಕೃತಿಕ ಸಹಜ ನ್ಯಾಯ ಮತ್ತು ರಾಜ್ಯದ ಅಭಿವೃದ್ಧಿ ಸಾಧ್ಯ.

ಆದ್ದರಿಂದ ಮಹಿಳೆಯರು ಒಗ್ಗಟ್ಟಾಗಿ ಇದರ ವಿರುದ್ಧ ಧ್ವನಿಯೆತ್ತಿದರೆ ಖಂಡಿತವಾಗಲೂ ಅವರೊಂದಿಗೆ ಸೇರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ಬೃಹತ್ ಅಭಿಯಾನ ಮಾಡಲು ನಾವು ಖಂಡಿತ ಅವರೊಂದಿಗೆ ಕೈಜೋಡಿಸುತ್ತೇವೆ. ಎಲ್ಲಾ ಸಾಮಾನ್ಯ ಮಹಿಳೆಯರು ಸಹ ರಾಜ್ಯಾದ್ಯಂತ ಒಂದಾಗಿ ಒಂದು ದೊಡ್ಡ ಕೂಗು ಹಾಕಿದರೆ ಸರ್ಕಾರಕ್ಕೆ ಇದರ ಒತ್ತಡ ತಟ್ಟುತ್ತದೆ. ದೆಹಲಿಯ ಜನ್ ಝೀಗಳ ಹೋರಾಟದಂತೆ ಕನಿಷ್ಠ ಐದು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಕೊಡುವಂತೆ ಒತ್ತಾಯ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಕಾನೂನು ಅನುಷ್ಠಾನ ಆಗಲಿ ಬಿಡಲಿ ಮಹಿಳೆಯರಿಗೆ ಎಲ್ಲಾ ಪಕ್ಷಗಳು ಚುನಾವಣಾ ಟಿಕೆಟ್ ಕೊಡಬೇಕು. ಹೀಗೆ ಒತ್ತಾಯ ಮಾಡದಿದ್ದರೆ ನಾನು ಹೇಳಿದಂತೆ ಗಂಡಸರ ಕೋಟೆಯಲ್ಲಿ ಹೆಂಗಸರು ಗುಲಾಮರು ಅಥವಾ ಜೀತದಾಳುಗಳಾಗುತ್ತಾರಷ್ಟೇ.
ಆಯ್ಕೆ ನಿಮ್ಮ ಮುಂದಿದೆ.
ಆಸಕ್ತರು ಸಂಪರ್ಕಿಸಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

You cannot copy content of this page

Exit mobile version