Home ಅಂಕಣ ಕಟೀಲು ಯಕ್ಷಗಾನ ಮತ್ತು ಅಸ್ರಣ್ಣರ ‘ಜಾತಿ’ ಪ್ರಶ್ನೆಗಳು

ಕಟೀಲು ಯಕ್ಷಗಾನ ಮತ್ತು ಅಸ್ರಣ್ಣರ ‘ಜಾತಿ’ ಪ್ರಶ್ನೆಗಳು

0

ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ‘ದೇವಿಯ ಭಂಡಾರ’ವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹರಕೆಯ ಯಕ್ಷಗಾನ ಆಡಿಸುವ ಶೂದ್ರರ ಮನೆಗೆ ಹೋಗುವುದಿಲ್ಲ, ಬದಲಾಗಿ ಆ ಊರಿನ ಬ್ರಾಹ್ಮಣರ ಮನೆಯಲ್ಲಿ ತಂಗುತ್ತದೆ. ಇದು ಯಕ್ಷಗಾನವು ಹಿಂದೂಗಳನ್ನೇ ಒಳಗೊಳ್ಳುವುದಿಲ್ಲ ಎಂಬ ಸಂದೇಶ ಸಾರುತ್ತದೆ ಎಂದು ನಾನು ಮಾಡಿದ ಭಾಷಣ ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ. ಉಪನ್ಯಾಸಕ ಬಿ ನಿತ್ಯಾನಂದ ಶೆಟ್ಟಿಯವರು ಯಕ್ಷಗಾನವನ್ನು ಆಧರಿಸಿ ಬರೆದ ‘ಅಳವು ಅರಿಯದ ಭಾಷೆ’ ಪುಸ್ತಕದ ಹಿನ್ನಲೆಯಲ್ಲಿ ಕರಾವಳಿಯ ಸಾಂಸ್ಕೃತಿಕ ರಾಜಕಾರಣದ ಕುರಿತಾದ ಒಂದು ದಿನದ ವಿಚಾರ ಸಂಕಿರಣವನ್ನು ಅಭಿಮತ ಮಂಗಳೂರು ಮತ್ತು ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿತ್ತು. ಈ ಸಾಂಸ್ಕೃತಿಕ ರಾಜಕಾರಣದ ಚರ್ಚೆಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹರಿನಾರಾಯಣ ಅಸ್ರಣ್ಣರು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಚರ್ಚೆಯನ್ನು ಮುಂದುರೆಸಬೇಕಾಗಿದೆ.

“ಯಕ್ಷಗಾನದ ದೇವಿಯ ಭಂಡಾರವು ಜಾತಿ ನೋಡುವುದಿಲ್ಲ. ಆದರೆ ಸಸ್ಯಾಹಾರಿಗಳ, ಸಾತ್ವಿಕ ಆಹಾರ ಸೇವಿಸುವವರ ಮನೆಗೆ ಮಾತ್ರ ಹೋಗುತ್ತದೆ” ಎಂದು ಕಟೀಲು ಅರ್ಚಕ ಹರಿನಾರಾಯಣ ಅಸ್ರಣ್ಣರು ಹೇಳುತ್ತಾರೆ. ಇದು ಮೇಲ್ನೋಟಕ್ಕೆ ನಿರಪರಾಧಿ ವಾಕ್ಯದಂತೆ ಕಾಣಬಹುದು. ಆದರೆ ಭಾರತೀಯ ಸಮಾಜದ ಇತಿಹಾಸವನ್ನು ಅರ್ಥಮಾಡಿಕೊಂಡವರು ಈ ವಾಕ್ಯದೊಳಗೆ ಅಡಗಿರುವ ಸಾಮಾಜಿಕ ರಾಜಕಾರಣವನ್ನು ಸುಲಭವಾಗಿ ಗುರುತಿಸುತ್ತಾರೆ. ಭಾರತದಲ್ಲಿ “ಸಸ್ಯಾಹಾರ” ಎಂಬುದು ಕೇವಲ ಆಹಾರದ ಆಯ್ಕೆಯಲ್ಲ. ಅದು ಶತಮಾನಗಳಿಂದ ಸಾಮಾಜಿಕ ಶ್ರೇಣೀಕರಣ, ಶುದ್ಧ, ಅಶುದ್ಧ ಎಂಬ ಕಲ್ಪನೆ ಮತ್ತು ಜಾತಿ ಪ್ರಾಬಲ್ಯದೊಂದಿಗೆ ಹೆಣೆದುಕೊಂಡಿರುವ ಒಂದು ಸಾಂಸ್ಕೃತಿಕ ಸಂಕೇತವೂ ಆಗಿದೆ.

ಮಾಂಸಾಹಾರಿಗಳ ಮನೆಯಲ್ಲಿ ಕಟೀಲು ದೇವಿಯ ಪ್ರತಿಮೆ, ಮೂರ್ತಿ, ಭಂಡಾರ ನಿಲ್ಲಿಸುವುದಿಲ್ಲ ಎನ್ನುವುದು ಸರಿಯಾದ ವಾದ ಅಲ್ಲ. ಕರಾವಳಿಯ ಶೂದ್ರರೆಲ್ಲರೂ ಮೀನು ಮಾಂಸ ತಿನ್ನುವವರೇ ಆಗಿದ್ದಾರೆ. ಕರಾವಳಿಯ ಬಹುತೇಕ ಶೂದ್ರ ಹಿಂದೂಗಳ ಮನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಫೋಟೋ ಇದೆ. ಕಟೀಲು ದೇವಿಗೆ ಬಹುತೇಕ ಮನೆಗಳಲ್ಲಿ ನಿತ್ಯ ಹೂವಿಟ್ಟು, ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಹಾಗಾದರೆ, ಕರಾವಳಿಯ ಮಾಂಸಾಹಾರಿ ಶೂದ್ರರು ತಮ್ಮ ಮನೆಯ ಗೋಡೆಗಳಲ್ಲಿ, ದೇವರ ಕೋಣೆಗಳಲ್ಲಿ ಕಟೀಲು ದೇವಿಯ ಆರಾಧನೆ ಮಾಡುವಂತಿಲ್ಲವೇ ?

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಸುಮಾರು 1867 ನೇ ಇಸವಿಯಲ್ಲಿ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕಟೀಲು ದೇವರಿಗೆ ಯಕ್ಷಗಾನವೆಂದರೆ ಅತ್ಯಂತ ಪ್ರೀಯವಾದದ್ದು ಎಂಬ ಕಮರ್ಷಿಯಲ್ ಪ್ರಚಾರದಿಂದಾಗಿ, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ರೂಪದಲ್ಲಿ ಯಕ್ಷಗಾನ ಬಯಲಾಟವನ್ನು ಆಡಿಸುವುದನ್ನು ರೂಢಿಸಿಕೊಂಡರು. ಹಾಗಾಗಿ159 ವರ್ಷಗಳಿಂದ ಕಟೀಲು ಯಕ್ಷಗಾನ ಮೇಳ ಬಹಳ ಬೇಡಿಕೆಯ ಮೇಳವಾಗಿ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಹೆಚ್ಚುತ್ತಿರುವ ಭಕ್ತರ ಬೇಡಿಕೆ ಮತ್ತು ಹರಕೆ ಆಟಗಳ ಕಾರಣದಿಂದ ಕಾಲಕಾಲಕ್ಕೆ ಹೊಸ ಮೇಳಗಳನ್ನು ಆರಂಭಿಸಲಾಯಿತು. ಮೊದಲ ಮೇಳದ ಬಳಿಕ 1975, 1982, 1993, 2010, 2013 ಹಾಗೂ ಇತ್ತೀಚೆಗೆ ಹೆಚ್ಚುವರಿ ಮೇಳಗಳು ಸೇರ್ಪಡೆಯಾಗಿ ಒಟ್ಟು 7 ಮೇಳಗಳು ಸಧ್ಯ ತಿರುಗಾಟ ನಡೆಸುತ್ತಿವೆ.

ಕಟೀಲಿನಲ್ಲಿ ಸಧ್ಯ 7 ಯಕ್ಷಗಾನದ ತಂಡಗಳಿದ್ದರೂ, ‘ನೀವು ಇಂದು ಯಕ್ಷಗಾನ ಬುಕ್ ಮಾಡಿದರೆ ನಿಮಗೆ ಯಕ್ಷಗಾನದ ತಂಡ ಲಭ್ಯ ಆಗುವುದು ಮೂರು ವರ್ಷದ ನಂತರ !’ ಎಂಬ ಮಾತು ಕರಾವಳಿಯಲ್ಲಿ ಜನಜನಿತ. ಅಂದರೆ ಅಷ್ಟು ಹರಕೆಯ ಯಕ್ಷಗಾನಗಳನ್ನು ಆಡಿಸಲು ಜನ ಮುಗಿ ಬೀಳುತ್ತಿದ್ದಾರೆ ಎಂದರ್ಥ. ಆದರೆ, ಕಟೀಲು ಹರಿನಾರಾಯಣ ಅಸ್ರಣ್ಣರು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮೂವರು ಶೂದ್ರರ ಹೆಸರನ್ನು ಹೇಳಿ, ಅವರ ಮನೆಯಲ್ಲಿ ಶುದ್ಧಾಧಿಗಳನ್ನು ಮಾಡಿರುವ ವ್ಯವಸ್ಥೆ ಮಾಡಿದ್ದರಿಂದ ದೇವಿಯನ್ನು ಅವರ ಮನೆಯಲ್ಲಿ ಇರಿಸಿದ್ದೇವೆ ಎಂದಿದ್ದಾರೆ. 159 ವರ್ಷದಲ್ಲಿ ನಡೆದ ಸಾವಿರಾರು ಯಕ್ಷಗಾನ ಆಟದಲ್ಲಿ ಕೇವಲ ಮೂವರು ಸಸ್ಯಹಾರಿ ಶೂದ್ರರ ಮನೆಗೆ ಹೋಗಿದ್ದೇ ? ಎಂಬುದು ಚರ್ಚಾರ್ಹ ವಿಷಯವಲ್ಲವೇ ?

ಹಾಗಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಜಾತಿ ವ್ಯವಸ್ಥೆಯನ್ನು ಕೇವಲ ಧಾರ್ಮಿಕ ನಂಬಿಕೆಗಳಿಂದ ಉಳಿಸಲಾಗಿಲ್ಲ. ದೈನಂದಿನ ಜೀವನದ ಆಚರಣೆಗಳ ಮೂಲಕ ಹೇಗೆ ಅದನ್ನು ಗಟ್ಟಿಗೊಳಿಸಲಾಗಿದೆ’ ಎಂದು ವಿವರಿಸುತ್ತಾರೆ. ಯಾರ ಜೊತೆ ಊಟ ಮಾಡಬೇಕು, ಯಾರ ಮನೆಗೆ ಹೋಗಬೇಕು, ಯಾರ ಕೈಯಿಂದ ನೀರು ಕುಡಿಯಬೇಕು, ಯಾರ ಆಹಾರವನ್ನು “ಶುದ್ಧ” ಎಂದು ಕರೆಯಬೇಕು ಎಂಬ ಎಲ್ಲವೂ ಜಾತಿ ವ್ಯವಸ್ಥೆಯೇ ಆಗಿದೆ. ಈ ಹಿನ್ನೆಲೆಯಲ್ಲಿ “ಸಸ್ಯಾಹಾರಿಗಳ ಮನೆಗೆ ಮಾತ್ರ ಯಕ್ಷಗಾನದ ದೇವಿ ಹೋಗುತ್ತದೆ” ಎಂಬ ನಿಯಮವನ್ನು ಕೇವಲ ಆಹಾರದ ನಿಯಮ ಎಂದು ನೋಡಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಸಮಾಜದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಸಮಾನ ಸಾಮಾಜಿಕ ಸ್ಥಾನಮಾನ ಹೊಂದಿಲ್ಲ. ಹಾಗಾಗಿಯೇ ಕರಾವಳಿಯ ಎಲ್ಲಾ ಹಿಂದೂಗಳೂ ತಾಯಿ/ಅಪ್ಪೆ ಎಂದು ಕರೆಯುವ ಕಟೀಲು ಉಲ್ಲಾಳ್ತಿಯು ಬ್ರಾಹ್ಮಣರಲ್ಲದ ಹಿಂದುಳಿದ ವರ್ಗದ ಮನೆಗಳಿಗೆ ಹೋಗುವುದಿಲ್ಲ. ಮಕ್ಕಳು ಮಾಂಸಾಹಾರಿಗಳೆಂದು ಮನೆಯೊಳಗೆ ಕಾಲಿಡದ ‘ತಾಯಿ/ಅಪ್ಪೆ’ ಇರಲು ಸಾದ್ಯವೇ ?

ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯಲ್ಲಿ “ಶುದ್ಧತೆ” ಎಂಬ ಪರಿಕಲ್ಪನೆಯನ್ನು ಆಹಾರದೊಂದಿಗೆ ಜೋಡಿಸಲಾಯಿತು. ಸಸ್ಯಾಹಾರವನ್ನು ಉನ್ನತ ಸಂಸ್ಕೃತಿಯ ಸಂಕೇತವನ್ನಾಗಿ ಮತ್ತು ಮಾಂಸಾಹಾರವನ್ನು ಕೀಳು ಸಂಸ್ಕೃತಿಯ ಸಂಕೇತವನ್ನಾಗಿ ಚಿತ್ರಿಸಲಾಯಿತು. ಇದು ಕೇವಲ ಆಹಾರದ ಕುರಿತು ರೂಪುಗೊಂಡ ಅಭಿಪ್ರಾಯವಲ್ಲ. ಜನರನ್ನು ಮೇಲು-ಕೀಳು ಎಂದು ವಿಭಜಿಸುವ ಸಾಮಾಜಿಕ ವಿಧಾನವೂ ಆಗಿದೆ. ಕರ್ನಾಟಕದ ಕರಾವಳಿ, ಮಲೆನಾಡು, ಆದಿವಾಸಿ ಪ್ರದೇಶಗಳು, ದಲಿತ ಸಮುದಾಯಗಳು, ಮೀನುಗಾರ ಸಮುದಾಯಗಳು, ರೈತ ಸಮುದಾಯಗಳು ಸೇರಿದಂತೆ ಅನೇಕ ಜನಾಂಗಗಳ ಆಹಾರ ಸಂಸ್ಕೃತಿಯಲ್ಲಿ ಮೀನು ಮತ್ತು ಮಾಂಸ ಸಹಜ ಭಾಗವಾಗಿದೆ. ಅವರ ಜೀವನಶೈಲಿಯನ್ನು “ಅಶುದ್ಧ” ಎಂದು ಗುರುತಿಸುವ ಯಾವುದೇ ಮಾನದಂಡವು ಸಾಮಾಜಿಕ ಅಸಮಾನತೆಯನ್ನು ಬಲಪಡಿಸುವ ಅಪಾಯ ಹೊಂದಿದೆ.

ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಏಳು ಮೇಳಗಳಲ್ಲಿ ನೂರಾರು ಕಾರ್ಮಿಕರು, ಕಲಾವಿದರು ಇದ್ದಾರೆ. ಹತ್ತಾರು ಬ್ರಾಹ್ಮಣರಿದ್ದಾರೆ. ಕೆಲವೇ ಕೆಲವು ಅರ್ಚಕರು ಇದ್ದಾರೆ. ಮೇಳದ ವಾಹನದಲ್ಲಿ ಯಕ್ಷಗಾನ ನಡೆಯುವ ಮನೆಯ ಅಂಗಳದಲ್ಲಿ ಬಂದಿಳಿಯುವ ಇವರೆಲ್ಲರೂ ಆ ಬಳಿಕ ಜಾತಿಯಿಂದ ಪ್ರತ್ಯೇಕಗೊಳ್ಳುತ್ತಾರೆ. ಮೇಳದ ಕಾರ್ಮಿಕರಾಗಿರುವ ಬ್ರಾಹ್ಮಣ ಅರ್ಚಕರು ಅಂದು ಉಳಿದುಕೊಳ್ಳಲು ಬ್ರಾಹ್ಮಣರ ಮನೆ ಆಥವಾ ದೇವಸ್ಥಾನವನ್ನು ಬಳಸಿದರೆ, ಅದೇ ತಂಡದ ಶೂದ್ರ ಕಾರ್ಮಿಕ ಕಲಾವಿದರು ಶೂದ್ರರ ಮನೆಯ ಮುಂದೆ ಹಾಕಿದ್ದ ಚೌಕಿಯನ್ನೋ, ಶಾಮಿಯಾನ ಹಾಕಿದ ಸ್ಥಳವನ್ನೋ ಆಯ್ದುಕೊಳ್ಳಬೇಕು. ಇದನ್ನೇ ಕಾರ್ಲ್​ ಮಾಕ್ಸ್​ ಹೇಳುವುದು, ‘ಕಾರ್ಮಿಕರನ್ನು ಜಾತಿಗಳಾಗಿ ವಿಭಜಿಸಲಾಗುತ್ತದೆ. ಒಬ್ಬ ಕಾರ್ಮಿಕ ಇನ್ನೊಬ್ಬ ಕಾರ್ಮಿಕನನ್ನು ಸಮಾನನೆಂದು ಕಾಣದಂತೆ ಮಾಡಲಾಗುತ್ತದೆ. ಹೀಗಾಗಿ ಈ ಅಸಮಾನತೆಯ ವಿರುದ್ಧ ಏಕತೆಯ ಹೋರಾಟ ಮಾಡಬೇಕಾಗುತ್ತದೆ’ ಎಂಬ ಸಾರವೇ ಮಾರ್ಕ್ಸ್​​ವಾದ.

‘ದೈವಾರಾಧನೆಯ ವರ್ಚಸ್ಸು ಕಡಿಮೆ ಮಾಡಲು ಬ್ರಾಹ್ಮಣ ದೇವರುಗಳ ಕತೆಗಳುಳ್ಳ ಯಕ್ಷಗಾನವನ್ನು ಬೆಳೆಸಲಾಯಿತು’ ಎಂಬ ನನ್ನ ವಾದಕ್ಕೆ ಹರಿನಾರಾಯಣ ಅಸ್ರಣ್ಣರು ಪ್ರತಿಕ್ರಿಯಿಸುತ್ತಾ ‘ದೈವಾರಾಧನೆಯಲ್ಲಿರುವ ದೈವಗಳೂ, ಯಕ್ಷಗಾನದಲ್ಲಿ ಬರುವ ರಾಮ, ಕೃಷ್ಣ, ವಿಷ್ಣುವೂ ಹಿಂದೂಗಳ ದೇವರೇ ಆಗಿದೆ’ ಎನ್ನುವ ವಾದ ಮಂಡಿಸುತ್ತಾರೆ.

ದೈವ/ಭೂತಗಳು ಹಿಂದೂ ಧರ್ಮದ್ದೇ ಆಗಿದ್ದರೆ, ಶೈವ, ವೈಷ್ಣವ ದೇವಸ್ಥಾನದ ಗರ್ಭಗುಡಿಯಲ್ಲೋ, ಗರ್ಭಗುಡಿಯ ಪೌಳಿಯಲ್ಲಿರುವ ನವಗ್ರಹ, ಗಣೇಶ ಇನ್ನಿತರ ದೇವರ ಗುಡಿಯ ಜೊತೆಗೆ ದೈವಗಳ ಆರಾಧನೆ ಯಾಕೆ ನಡೆಯಲ್ಲ ? ಬ್ರಾಹ್ಮಣರ ದೇವಸ್ಥಾನದಲ್ಲಿ ದೈವಗಳನ್ನು ಕ್ಷೇತ್ರಪಾಲ (ಕಾವಲಿಗೆ ಇರುವ ದೈವ) ಎಂದು ಯಾಕೆ ಕರೆಯುತ್ತಾರೆ ? ದೈವಗಳು ಬ್ರಾಹ್ಮಣರ ದೇವಸ್ಥಾನದಲ್ಲಿ ವಾಚ್ ಮ್ಯಾನ್ ಆಗಿದ್ದು ಯಾಕೆ ? ಕೆಲವು ಕಡೆ ದೈವಗಳು ಮಸೀದಿ ಭೇಟಿಯನ್ನು ಮಾಡುತ್ತದೆ. ಮಸೀದಿ ಭೇಟಿ ಮಾಡಿ ಮಹಮ್ಮದರ ಜೊತೆ ಅಲೌಕಿಕ ಮಾತುಕತೆ ನಡೆಸುತ್ತದೆ. ಯಾಕೆಂದರೆ ದೈವಗಳು ಮುಸ್ಲಿಂ ಧರ್ಮದ ಭಾಗವಲ್ಲ. ಹಾಗಾಗಿ ಊರಿನ ಎರಡು ಪ್ರತ್ಯೇಕ ‘ಶಕ್ತಿ’ ಗಳು ಭೇಟಿ ಮಾಡುವ ಸೌಹಾರ್ದತೆಯ ಕ್ರಮ ಬಂದಿರಬಹುದು. ದೈವಗಳು ಎಲ್ಲಾ ಊರಿನಲ್ಲೂ ಗ್ರಾಮದ ದೇವಸ್ಥಾನದ ದೇವರ ಭೇಟಿಯನ್ನು ಯಾಕೆ ಮಾಡುತ್ತದೆ ? ದೈವ ಮತ್ತು ದೇವರು ಎರಡೂ ಹಿಂದೂವಾಗಿದ್ದರೆ ಭೇಟಿ ಯಾಕೆ ? ವಿಷ್ಣು ಮತ್ತು ಶಿವ ಪರಸ್ಪರ ಭೇಟಿ ಯಾಕೆ ಮಾಡಲ್ಲ ? ಕೃಷ್ಣ ಮತ್ತು ರಾಮರ ಭೇಟಿ ಎಂಬುದೂ ಯಾಕಿಲ್ಲ ? ದೈವ ಮಾತ್ರ ದೇವರ ಭೇಟಿಯಾಗುವ ಕಾರ್ಯಕ್ರಮ ಯಾಕೆ ?
ತೀರಾ ಇತ್ತಿಚೆಗೆ ದೇವಿ ಮತ್ತು ಕೊಡಮಣಿತ್ತಾಯ ದೈವದ ಭೇಟಿ ವಿವಾದ ಆಗಿತ್ತು.‌ ದೈವ ಭೇಟಿ ಕೊಡುವ ವೇಳೆ ಕೊಡಮಣಿತ್ತಾಯ ದೈವಕ್ಕೆ ಕೊಡೆ ಬಳಸಬಾರದು ಎಂದು ಕೆಲವರು ತಗಾದೆ ತೆಗೆದಿದ್ದರು. ಕೊಡಮಣಿತ್ತಾಯ ದೈವವೂ ಹಿಂದೂ ಧರ್ಮದ ಭಾಗವಾಗಿದ್ದರೆ ಹಿಂದೂ ದೇವರಾದ ದೇವಿಯ ಎದುರು ಹೇಗೆ ಸಣ್ಣದಾಗುತ್ತದೆ ?

ಪುತ್ತೂರಿನ ವಿಶ್ವವಿಖ್ಯಾತ ದೇವಸ್ಥಾನವೊಂದರ ಗರ್ಭಗುಡಿಯಿಂದ ದೂರವೇ ಇರುವ ಅಂಗಣದಲ್ಲಿದ್ದ ದೈವವನ್ನು ಅರ್ಚಕರು ಹೊರ ಹಾಕಿದ್ದು ಯಾಕೆ ? ದೇವಸ್ಥಾನದೊಳಗೆ ದೈವ ಇರಬಾರದು ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ಹೇಳಿಸಿ ದೈವಕ್ಕೆ ಹೊರಗೆ ಗುಡಿ ಕಟ್ಟಿದ್ದೇಕೆ ? ಪುತ್ತೂರಿನ ವಿಶ್ವವಿಖ್ಯಾತ ಆ ದೇವಸ್ಥಾನದಲ್ಲಿ ದೇವರಿಗೆ ಗರ್ಭಗುಡಿಯೊಳಗೆ ನೈವೇದ್ಯ ಇರಿಸಲಾಗುತ್ತದೆ. ಗರ್ಭಗುಡಿಯಿಂದ ಹೊರಗಿರುವ ದೈವದ ಗುಡಿಯೊಳಗೆ ದೈವಕ್ಕೆ “ಭಾರಣೆ” ಯಾಕೆ ಇಡಲ್ಲ ? ದೈವದ ಊಟವನ್ನು ದೇವಸ್ಥಾನದ ಮುಂಬಾಗದ ಗದ್ದೆಯಲ್ಲಿ ಯಾಕೆ ಇಡಲಾಗುತ್ತದೆ ? ದೇವರ ಜೊತೆ ದೈವ ಯಾಕೆ ಊಟ ಮಾಡಬಾರದು ?

ಯಾಕೆಂದರೆ ದೈವಾರಾಧನೆ ಎಂಬುದು ತುಳುನಾಡಿನ ನೆಲದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ಆಚರಣೆ. ಹಿಂದೂ ಎಂಬ ‘ಧರ್ಮ’ ಕರಾವಳಿಗೆ ಪರಿಚಯ ಆಗುವ ಮೊದಲೇ ಮೂಲನಿವಾಸಿಗಳ ಭೂತಾರಾಧನೆ ಇತ್ತು. ಹಾಗಾಗಿಯೇ ದಲಿತ ಮೂಲನಿವಾಸಿ ಕೊರಗರ ‘ಕಟೀಲ’ ಕಟೀಲು ಆಯ್ತು. ನಂತರ ಶಂಕರ ಪಂಥದ ಸ್ಥಾನಿಕ ಮೊಕ್ತೇಸರಿಗೆ ಬಂದ ಕಟೀಲು ಮಾಧ್ವ ಆಸ್ರಣ್ಣರ ಪಾಲಾಯಿತು. ಕೊರಗರಿಂದ ಸ್ಥಾನಿಕರವರೆಗಿನ ಎಲ್ಲ ಸಮುದಾಯವೂ ಹಿಂದೂ ಧರ್ಮವೇ ಅನ್ನಿಸಿಕೊಂಡಿದ್ದರೆ, ಈ ಮತಾಂತರಗಳು ಯಾಕೆ ನಡೆಯಿತು ಎಂಬ ಪ್ರಶ್ನೆಗೂ ಉತ್ತರ ಬೇಕಾಗಿದೆ. ಹಾಗಾಗಿ ಭೂತಾರಾಧನೆಯೇ ಬೇರೆ, ದೇವತಾರಾಧನೆಯೇ ಬೇರೆ‌.

ಹಾಗಾಗಿಯೇ ‘ಜಾತಿ ವ್ಯವಸ್ಥೆ ಉಳಿಯುವುದಕ್ಕೆ ಕೇವಲ ಧಾರ್ಮಿಕ ಗ್ರಂಥಗಳು ಮಾತ್ರ ಕಾರಣವಲ್ಲ. ಸಮಾಜದ ಆಚರಣೆಗಳೂ, ಸಂಸ್ಕೃತಿಗಳೂ ಕಾರಣ’ ಎಂಬ ಅರಿವು ಡಾ ಬಿ ಆರ್ ಅಂಬೇಡ್ಕರ್ ರವರನ್ನು ಓದಿದರೆ ಬರುತ್ತದೆ. ಜಾತಿ ಎಂಬುದು ಸಾಮಾಜಿಕ ಸಂಪರ್ಕ, ಊಟ, ವಿವಾಹ ಮತ್ತು ದೈನಂದಿನ ಬದುಕನ್ನು ನಿಯಂತ್ರಿಸುವ ಒಂದು ವ್ಯವಸ್ಥೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಮಾನತೆ ಎಂದರೆ ಕೇವಲ ಕಾನೂನಿನ ಮುಂದೆ ಸಮಾನತೆ ಅಲ್ಲ. ಮನುಷ್ಯನ ಘನತೆಯನ್ನು ಪ್ರತಿಯೊಂದು ಸಾಮಾಜಿಕ ಸಂಬಂಧದಲ್ಲೂ ಒಪ್ಪಿಕೊಳ್ಳುವುದೇ ಸಮಾನತೆ. ಆಹಾರದ ಹೆಸರಿನಲ್ಲಿ ಒಬ್ಬರನ್ನು ದೂರವಿಡುವುದು, ಅವರ ಮನೆಗೆ ಧಾರ್ಮಿಕ ಗೌರವವನ್ನು ನೀಡದಿರುವುದು ಅಥವಾ ಅವರನ್ನು “ಕಡಿಮೆ ಶುದ್ಧ ಆಥವಾ ಅಶುದ್ದ” ಎಂದು ಪರಿಗಣಿಸುವುದೇ ಅಸಮಾನತೆಯಾಗುತ್ತದೆ.

‘ಯಕ್ಷಗಾನವನ್ನು ಕೋಮುವಾದಕ್ಕೆ ಬಳಸಲಾಗುತ್ತದೆ’ ಎಂಬ ವಾದವನ್ನು ಕಟೀಲು ಹರಿನಾರಾಯಣ ಅಸ್ರಣ್ಣರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ವಿಚಾರ ಸಂಕಿರಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಕೋಮುವಾದವನ್ನು ಹರಡುತ್ತಿದೆ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿಲ್ಲ. ಕರಾವಳಿಯ ಒಟ್ಟಾರೆ ಯಕ್ಷಗಾನವನ್ನು ಕೋಮುವಾದಕ್ಕಾಗಿ ಬಳಸಲಾಗುತ್ತಿದೆ ಎಂಬ ಚರ್ಚೆ ನಡೆದಿತ್ತು. ಕಟೀಲು ಹರಿನಾರಾಯಣ ಅಸ್ರಣ್ಣರು ಅದಕ್ಕೂ ಪ್ರತಿಕ್ರಿಯೆ ನೀಡಿರುವುದರಿಂದ, ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಯಕ್ಷಗಾನದಲ್ಲಿ ಮಾಡಿರುವ ಧ್ವೇಷದ ಸಂವಾದಗಳು, ರಾಜಕೀಯವನ್ನೂ ಚರ್ಚೆಗೆ ಒಳಪಡಿಸಬೇಕಾಗಿದೆ.

2018 ಡಿಸೆಂಬರ್ 29 ರಂದು ಮಣ್ಣಗುಡ್ಡೆ ಗುರ್ಜಿ ಸಮೀಪ ನಡೆದಿದ್ದ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಪ್ರಸಾದಿತ ದೇವಿ ಮಹಾತ್ಮೆ ಯಕ್ಷಗಾನವನ್ನು ‘ಟೀಮ್ ಮೋದಿ’ ತಂಡ ಆಯೋಜಿಸಿತ್ತು. ಹರಕೆಯ ಯಕ್ಷಗಾನ ಆಟ ಆಡಿಸಬೇಕಾದರೆ ವರ್ಷಗಟ್ಟಲೆ ಕಾಯುವ ಭಕ್ತರು ಇರುವಾಗ ‘ಟೀಮ್ ಮೋದಿ’ಗೆ ಕೆಲವೇ ದಿನಗಳಲ್ಲಿ ಯಕ್ಷಗಾನದ ದಿನಾಂಕ ಲಭ್ಯವಾಗಿದ್ದು ಹೇಗೆ ? ಆಗ ಇನ್ನೂ ಟೀಮ್ ಮೋದಿ ಪ್ರಾರಂಭವಾಗಿ ಒಂದು ತಿಂಗಳೂ ಕಳೆದಿರಲಿಲ್ಲ. ಹಾಗಿರುವಾಗ ಮೂರು ವರ್ಷದಿಂದ ಯಕ್ಷಗಾನ ಆಟ ಆಡಿಸಲು ಅರ್ಜಿ ಹಾಕಿರುವ ಭಕ್ತರ ಸರದಿಯನ್ನು ಬಿಟ್ಟು ಟೀಮ್ ಮೋದಿಗೆ ಲಭ್ಯವಾಗಿರುವ ಹಿಂದೆ ಕೋಮುವಾದ ಇಲ್ಲವೇ ? ಮೋದಿಯ ಪುನರಾಯ್ಕೆಗಾಗಿ ಯಕ್ಷಗಾನ ಆಡಿಸುವುದು ರಾಜಕಾರಣ ಅಲ್ಲವೇ ?

‘ಕಟೀಲು ಯಕ್ಷಗಾನ ಮೇಳವು ಕೇವಲ ಪೌರಾಣಿಕ ಪ್ರಸಂಗಗಳನ್ನು ಆಡಿಸುತ್ತದೆ. ಅದರಲ್ಲಿ ಕೋಮುವಾದ ಬರಲು ಸಾಧ್ಯವೇ ಇಲ್ಲ’ ಎಂದು ಹರಿನಾರಾಯಣ ಅಸ್ರಣ್ಣರು ಸಮರ್ಥಿಸಿಕೊಳ್ಳುತ್ತಾರೆ. ಕಟೀಲು ಯಕ್ಷಗಾನದಲ್ಲೂ ಹಲವು ಬಾರಿ ಮುಸ್ಲೀಮರನ್ನು ಅಣಕಿಸುವಂತಹ ಪ್ರಸಂಗಗಳು ನಡೆದಿದೆ. ಮುಸ್ಲೀಮರು ಹೇಗೆ ಪೌರಾಣಿಕ ಪ್ರಸಂಗಗಳ ಒಳಗೆ ಬಂದರು ಎಂಬುದನ್ನು ಅಸ್ರಣ್ಣರು ಹೇಳಬೇಕು.

ಅಧಿಕೃತ ದಾಖಲೆಗಳ ಪ್ರಕಾರ ಹೇಳುವುದಾದರೆ, 2018ರ ಏಪ್ರಿಲ್ 1ರಂದು ಪಡುಮರ್ನಾಡ್ ಹತ್ತಿರದ ಬನ್ನಡ್ಕದಲ್ಲಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟವಿತ್ತು. ಈ ಆಟದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯರನ್ನು ಅವಹೇಳನ ಮಾಡಲಾಗಿತ್ತು. ಅದು ಚುನಾವಣೆಯ ಸಮಯವಾಗಿತ್ತು. ಯಕ್ಷಗಾನದ ಪೌರಾಣಿಕ ಪ್ರಸಂಗದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹೇಗೆ ಬಂದರು ? ಅವರಿಬ್ಬರು ತ್ರೇತಾಯುಗಕ್ಕೆ ಸೇರಿದವರೇ ? ದ್ವಾಪರ ಯುಗದಲ್ಲಿ ಬದುಕಿದ್ದವರೇ ? ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗವು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಗೆ ನೋಟಿಸ್ ಜಾರಿ ಮಾಡಿತ್ತು.

2019 ರಲ್ಲಿ ‘ನಿಖಿಲ್ ಎಲ್ಲಿದ್ದಿಯಪ್ಪಾ’ ಎಂಬ ಕುಮಾರಸ್ವಾಮಿಯವರ ಡೈಲಾಗ್ ಅನ್ನು ಬಳಸಿಕೊಂಡು ಅಸಂಸದೀಯ ಪದಗಳನ್ನು ಬಳಸಿದ್ದರಿಂದ ಮೇಳವೊಂದರ ವಿರುದ್ದ ಎಫ್​ಐಆರ್ ದಾಖಲಿಸಲಾಗಿತ್ತು. ಇತ್ತಿಚೆಗೆ ಯಕ್ಷಗಾನ ಕಲಾವಿದರು ಯಕ್ಷಗಾನದಲ್ಲಿ ‘ಬುರುಡೆ ಗ್ಯಾಂಗ್’ ಅನ್ನು ಎಳೆದು ತಂದಿದ್ದರು. ಇದ್ಯಾವುದೂ ಯಕ್ಷಗಾನಕ್ಕೆ ಸಂಬಂಧಪಟ್ಟ ವಿಷಯಗಳೇ ಅಲ್ಲ. ಸೌಜನ್ಯ ಪ್ರಕರಣ ಆಥವಾ ಧರ್ಮಸ್ಥಳ ದೌರ್ಜನ್ಯ ಪ್ರಕರಣವನ್ನು ಯಕ್ಷಗಾನವನ್ನಾಗಿ ಬಯಲಾಟ ಆಡಿಸಿದರೆ ಆಗ ‘ಬುರುಡೇ ಗ್ಯಾಂಗ್’ ಪದ ಬಳಕೆ ಮಾಡಿದರೆ ಒಪ್ಪಬಹುದೇನೋ..! ಹೀಗೆ ಯಕ್ಷಗಾನದಲ್ಲಿ ಮುಸ್ಲಿಂ ಅವಹೇಳವನಲ್ಲದೇ, ನಿರಂತರವಾಗಿ ರಾಜಕೀಯ ಅಜೆಂಡಾವನ್ನು ತುರುಕಿಸಲಾಗುತ್ತಿದೆ. ಆಗ ಹರಿನಾರಾಯಣ ಅಸ್ರಣ್ಣರಂತಹ ಧಾರ್ಮಿಕ ನಾಯಕರು ಮಾತನಾಡಬೇಕು. ಇಲ್ಲದೇ ಇದ್ದರೆ ಟೀಕೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ.

ಹಾಗಾಗಿಯೇ ಯಕ್ಷಗಾನದ ಹಿಂದಿರುವ ಜಾತಿ ಅಸಮಾನತೆಯನ್ನು ಪ್ರಶ್ನಿಸಬೇಕಾಗುತ್ತದೆ. ಹೀಗೆ ಜಾತಿ ಅಸಮಾನತೆಯನ್ನು ಪ್ರಶ್ನಿಸುವುದು ಎಂದರೆ ‘ಹಿಂದೂ ವಿರೋಧಿತನ’ ಅಲ್ಲ. ಅದು ಹಿಂದೂ ಧರ್ಮದೊಳಗಿನ ಸುಧಾರಣೆಯ ಪ್ರಯತ್ನ ಎಂದು ಯಾಕೆ ಅಂದುಕೊಳ್ಳಬಾರದು ?

– ನವೀನ್ ಸೂರಿಂಜೆ

You cannot copy content of this page

Exit mobile version