“..ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ, ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ ಎಂದು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ನ್ಯಾಯದ “ದೇವಾಲಯ”ದಲ್ಲಿ- ಮುಖ್ಯವಾದ ಮತ್ತು ಏಕೈಕ “ಧರ್ಮಗ್ರಂಥ” ಎಂದರೆ ಭಾರತದ ಸಂವಿಧಾನ ಮಾತ್ರ. ನಮ್ಮ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇದು ಪ್ರಶ್ನಾತೀತವಾಗಿ ಉಳಿಯಬೇಕಾದರೂ, ಬಲಪಂಥೀಯ ರಾಜಕೀಯ ಶಕ್ತಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದನ್ನು ಪ್ರಶ್ನಿಸುತ್ತಿರುವ ಇತ್ತೀಚಿನ ದಿನಗಳಲ್ಲಿ- ನ್ಯಾಯಾಂಗದ ಕೆಲವು ಅವಲೋಕನಗಳು ಮತ್ತು ಘೋಷಣೆಗಳು (observations and pronouncements) ಅದಕ್ಕಿಂತಲೂ ಆತಂಕಕಾರಿಯಾದ ಒಂದು ಪ್ರಶ್ನೆಯನ್ನು ಹುಟ್ಟುಹಾಕಿವೆ: ನ್ಯಾಯಾಧೀಶರ ವೈಯಕ್ತಿಕ ನಂಬಿಕೆ ಮತ್ತು ಅವರ ಸಾಂವಿಧಾನಿಕ ಕರ್ತವ್ಯದ ನಡುವಿನ “ಪ್ರತ್ಯೇಕತೆಯ ಗೋಡೆ”ಯು ಬಿರುಕು ಬಿಡಲು ಪ್ರಾರಂಭಿಸುತ್ತಿದೆಯೇ? ನ್ಯಾಯಾಧೀಶರು- ಕಾನೂನು ವಿದ್ವಾಂಸರೂ, ತೀರ್ಪುಗಾರರೂ ಆಗುವ ಬದಲು ನೈತಿಕ ಮಠಾಧೀಶರೋ, ಧಾರ್ಮಿಕ ಪ್ರವಚನಕಾರರೋ ಆಗಿಬಿಟ್ಟಾಗ ಅಥವಾ ಸಂವಿಧಾನ, ಕಾಯಿದೆ ಮತ್ತು ಶಾಸನಬದ್ಧ ತರ್ಕಕ್ಕೆ ಬದಲಾಗಿ ಧಾರ್ಮಿಕ ಪಠ್ಯಗಳನ್ನು ಅವಲಂಬಿಸಿದಾಗ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತದೆ. ಇದನ್ನು ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವ ನಿಮ್ಮಂತ ಸಾಮಾನ್ಯ ಪ್ರಜೆಯಾದ ನಾನು ಹೇಳುತ್ತಿರುವುದಲ್ಲ. ಸುಪ್ರೀಂ ಕೋರ್ಟ್ ಹಾಗೆ ಹೇಳಿದೆ.
”ನ್ಯಾಯಾಂಗದ ಧರ್ಮೋಪದೇಶ”
ಹಿಂದೆಯೇ ಭಾರತದ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ: ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ. ಉದಾಹರಣೆಗೆ ಹೇಳಬೇಕೆಂದರೆ, ಆಗಸ್ಟ್ 2024ರಲ್ಲಿ, ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು “ನ್ಯಾಯಾಧೀಶರು ಪ್ರಕರಣವನ್ನು ನಿರ್ಧರಿಸಬೇಕು ಮತ್ತು ಧರ್ಮೋಪದೇಶ ಮಾಡಬಾರದು” ಎಂದು ಒತ್ತಿ ಹೇಳಿದ್ದರು, ತೀರ್ಪುಗಳು ವೈಯಕ್ತಿಕ ಅಭಿಪ್ರಾಯಗಳು ಅಥವಾ “ಅನಗತ್ಯ ಧರ್ಮೋಪದೇಶಗಳನ್ನು” ಹೊಂದಿರಬಾರದು ಎಂದು ಸೂಚಿಸಿದ್ದರು. ಇಂತಾ ನಿರ್ದೇಶನಗಳ ಹೊರತಾಗಿಯೂ, “ನ್ಯಾಯಾಂಗ ನೈತಿಕೀಕರಣ”ದ (judicial moralizing) ಪ್ರವೃತ್ತಿ ಬೆಳೆಯುತ್ತಿರುವುದನ್ನು ನಾವು ನೋಡುತ್ತೇವೆ.
“ಹೆತ್ತವರ ಮಾರ್ಗದರ್ಶನವಿಲ್ಲದೇ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಯುವತಿಯರಿಗೆ ಪ್ರಬುದ್ಧತೆಯ ಕೊರತೆಯಿದೆ” ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ- ಸಂವಿಧಾನವು ವಯಸ್ಕರಿಗೆ ನೀಡಿದ ಸಮಾನ ಹಕ್ಕಿಗೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದ್ದರಿಂದ ಹಿಡಿದು, ಸಾಂಪ್ರದಾಯಿಕ ನೈತಿಕತೆಯ ಪಾಲಕರಂತೆ ಕಾರ್ಯನಿರ್ವಹಿಸುವ ನ್ಯಾಯಾಧೀಶರವರೆಗೆ, ಕಾನೂನು ಆದೇಶಗಳಲ್ಲಿ ಹುದುಗಿರುವ ಈ “ಸಲಹೆಯ ಒಕ್ಕಣೆಗಳು”- ಕಾನೂನು ಮತ್ತು ವೈಯಕ್ತಿಕ ಅಭಿಪ್ರಾಯದ ಪಕ್ಷಪಾತದ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತವೆ. ಕೆಲವು ನ್ಯಾಯಾಧೀಶರು ಯೂಟ್ಯೂಬ್‌ನಲ್ಲಿ ಪ್ರಖ್ಯಾತರಾಗಿದ್ದು, ತಾವು ಗುರುಗಳು- ಫಿರ್ಯಾದಿಗಳು ಶಿಷ್ಯರು ಎಂಬ ಶೈಲಿಯಲ್ಲಿ ಕಾಲೇಜು ಪ್ರಾಧ್ಯಾಪಕರಂತೆ ಉದ್ದುದ್ದದ ನೈತಿಕ ಪ್ರವಚನವನ್ನು ಮಾಡುತ್ತಾರೆ.
ವಿವಾದಾತ್ಮಕ ಮನುಸ್ಮೃತಿಯ ಪ್ರಕರಣ
ಬಹುಶಃ ನ್ಯಾಯಾಲಯದಲ್ಲಿ ನಡೆದ ಅತ್ಯಂತ ಧ್ರುವೀಕರಣದ ಬೆಳವಣಿಗೆಯೆಂದರೆ, ಮಾನವ ವಿರೋಧಿ ಮನುಸ್ಮೃತಿಯಂತಹ ಪ್ರಾಚೀನ ಗ್ರಂಥಗಳ ಆಯ್ದ ಪಠ್ಯಗಳನ್ನು ಉಲ್ಲೇಖಿಸುವುದು. ಜಾತಿ ಮತ್ತು ಲಿಂಗ ದಬ್ಬಾಳಿಕೆಯ ಸಂಕೇತವಾಗಿ 1927ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಟ್ಟುಹಾಕಿದ ಈ ಪಠ್ಯವು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತಾ ತತ್ವಗಳ ವಿರುದ್ಧತೆಯನ್ನು ಪ್ರತಿನಿಧಿಸುತ್ತದೆ. ಆದರೂ, ಇತ್ತೀಚೆಗೆ 2026ರ ಆರಂಭದಲ್ಲಿ, ವಿಧವೆ ಸೊಸೆಗೆ ಜೀವನಾಂಶ ನೀಡುವ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್, “ನೈತಿಕ ಕರ್ತವ್ಯ”ವನ್ನು ಒತ್ತಿಹೇಳಲು ಮನುಸ್ಮೃತಿಯನ್ನು (ಅಧ್ಯಾಯ 8, ಶ್ಲೋಕ 389) ಉಲ್ಲೇಖಿಸಿತು. ಈ ತೀರ್ಪು ನಿಜಕ್ಕೂ ಪ್ರಗತಿಪರವಾಗಿದ್ದರೂ, ಮನುಸ್ಮೃತಿಯ ಉಲ್ಲೇಖವು ಅನಗತ್ಯವಾಗಿತ್ತು. ಕ್ರೂರವಾದ ಸಾಮಾಜಿಕ ಶ್ರೇಣೀಕರಣದ ಪ್ರತಿಪಾದನೆಗೆ ಇನ್ನೊಂದು ಹೆಸರಾದ ಮನುಸ್ಮೃತಿಯನ್ನು ಉಲ್ಲೇಖಿಸುವ ಮೂಲಕ, ನ್ಯಾಯಾಲಯವು ತನ್ನ ಅಜಾಗರೂಕತೆಯ ಮೂಲಕ- ಭಾರತೀಯ ಗಣರಾಜ್ಯವನ್ನು ಕೆಡವಲೆಂದೇ ರೂಪಿಸಲಾಗಿರುವ “ಧಾರ್ಮಿಕ” ಚಿಂತನೆ ಮತ್ತು ವಾದಗಳಿಗೆ ಕಾನೂನುಬದ್ಧತೆಯನ್ನು ನೀಡಿದಂತಾಗಿದೆ ಎಂದು ವಿಮರ್ಶಕರು ವಾದಿಸುತ್ತಾರೆ. ಇಲ್ಲಿ ಉತ್ತರ ಬಯಸುವ ಪ್ರಶ್ನೆ ಸರಳ: ಭಾರತದ ಸಂವಿಧಾನ ಜಾತ್ಯತೀತ ಮತ್ತು ಧರ್ಮ ನಿರಪೇಕ್ಷ. ಅಲ್ಲಿ ಯಾವುದೇ ಧರ್ಮಗಳಿಗೆ ಪ್ರಭುತ್ವದ ಆಶ್ರಯವಿಲ್ಲ. ಅದು ಸಂವಿಧಾನದ ರಕ್ಷಕನಾದ ನ್ಯಾಯಾಂಗಕ್ಕೂ ಅನ್ವಯಿಸುತ್ತದೆ. ಹೀಗಿರುವಾಗ ನ್ಯಾಯಾಧೀಶರು ಸಂವಿಧಾನಕ್ಕೆ ತದ್ವಿರುದ್ಧವಾದ ಕೊಳಕು ಮನಸ್ಸಿನ ಮನುಸ್ಮೃತಿಯನ್ನು ಯಾಕೆ ಉಲ್ಲೇಖಿಸಬೇಕಿತ್ತು? ಸಂವಿಧಾನದ, ಕಾನೂನಿನ ಆಧಾರದಲ್ಲಿಯೇ ತೀರ್ಪು ನೀಡಬಹುದಿತ್ತಲ್ಲವೆ? ಅದುವೇ ಸಾಕಾಗುತ್ತಿರಲಿಲ್ಲವೆ? ನ್ಯಾಯಾಧೀಶರು ಮನುಸ್ಮೃತಿಯ ದಮನಕಾರಿ ಅಂಶಗಳನ್ನೂ ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಲು ನ್ಯಾಯಾಲಯವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ?
ಇದಕ್ಕೆ ಉದಾಹರಣೆ ಎಂದರೆ, ದಿಲ್ಲಿ ಹೈಕೋರ್ಟ್ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್ ಅವರು ಮನುಸ್ಮೃತಿಯು ಮಹಿಳೆಯರಿಗೆ ಗೌರವಾರ್ಹ ಸ್ಥಾನವನ್ನು ನೀಡಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದರು. ಯಾಕೆಂದರೆ, ಮನುಸ್ಮೃತಿಯು ಮಹಿಳೆಯರ ಕೀಳುಮಟ್ಟದ ಶೋಷಣೆಯನ್ನು ಪ್ರತಿಪಾದಿಸಿದೆ ಎಂಬ ಸತ್ಯಕ್ಕೆ ಇದು ತದ್ವಿರುದ್ಧವಾಗಿತ್ತು.
ಸೈದ್ಧಾಂತಿಕ ಒಳನುಸುಳುವಿಕೆಯ ನೆರಳು
ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತಗಳೊಂದಿಗೆ ಸಾರ್ವಜನಿಕವಾಗಿ ತಮ್ಮನ್ನು ತಾವು ಗುರುತಿಸಿಕೊಂಡಾಗ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಮತ್ತಷ್ಟು ಸಂಶಯದಿಂದ ನೋಡುವಂತಾಗುತ್ತದೆ. ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅವರು ಇಂತಹ ವಿವಾದಗಳಿಗೆ “ಹೆಸರುವಾಸಿ” ಆಗುತ್ತಿದ್ದಾರೆ. “ತನ್ನ ಸೇವೆಗೆ ಸನಾತನ ಧರ್ಮ ಮಾರ್ಗದರ್ಶನ ನೀಡುತ್ತದೆ” ಮತ್ತು “ಡಿಎಂಕೆ “ನೂರು” ವರ್ಷಗಳಿಂದ ಸನಾತನವನ್ನು ಟೀಕಿಸುವುದನ್ನು ಚಾಳಿ ಮಾಡಿಕೊಂಡಿದೆ” ಎಂಬಂತ ಹೇಳಿಕೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. (ಪೆರಿಯಾರ್ ದ್ರಾವಿಡ ಕಳಗಂ ಸ್ಥಾಪನೆ ಮಾಡಿದ್ದು 1938ರಲ್ಲಿ ಅಣ್ಣಾದುರೈ ಡಿಎಂಕೆ ಸ್ಥಾಪನೆ ಮಾಡಿದ್ದು 1949ರಲ್ಲಿ!). ಇಲ್ಲಿ ಈ ನ್ಯಾಯಾಧೀಶರ ವೈಯುಕ್ತಿಕ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಪ್ರತೀ ನ್ಯಾಯಾಲಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಇಡಬೇಕೆಂಬಂತ ತೀರ್ಪುಗಳನ್ನೂ ಇವರು ನೀಡಿದ್ದಾರೆ. ಆದರೆ, ಇಂತಾ ಸನಾತನ ಪರ ನಿಲುವನ್ನು ಇಟ್ಟುಕೊಂಡ, ಅದಕ್ಕಾಗಿ ತನ್ನನ್ನು ಕೆಲಸದಿಂದ ತೆಗೆಯಲಾರರು ಎಂದು ಹೇಳುವ ನ್ಯಾಯಾಧೀಶರ ತೀರ್ಪುಗಳಲ್ಲಿ ಆ ಕುರಿತ ಪಕ್ಷಪಾತ ಗೊತ್ತಿಲ್ಲದಂತೆ ನುಸುಳುವುದಿಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಹಲವರು ವ್ಯಾಪಕವಾಗಿ ಇಂತಾ ಪ್ರಶ್ನೆಗಳನ್ನು ಈಗಾಗಲೇ ಕೇಳಿದ್ದಾರೆ.
ಇದಲ್ಲದೆ, 2002ರ ನಂತರದ ಗಲಭೆ ವಿಚಾರಣೆಯ ಸಮಯದಲ್ಲಿ ಗುಜರಾತ್ ನ್ಯಾಯಾಂಗದ ಬಗ್ಗೆ ಸುಪ್ರೀಂ ಕೋರ್ಟ್ ಸೇರಿದಂತೆ ಕಾನೂನು ಮತ್ತು ಸಾರ್ವಜನಿಕ ವಲಯಗಳಲ್ಲಿ ವ್ಯಕ್ತಪಡಿಸಲಾದ ಐತಿಹಾಸಿಕ ಕಳವಳಗಳು ನಮಗೊಂದು ಕಠೋರವಾದ ಪಾಠಗಳಾಗಿವೆ. ಇಲ್ಲಿ ನ್ಯಾಯಬದ್ಧ ವಿಚಾರಣೆ ನಡೆಸಲು ಗುಜರಾತಿನ ಸಾಮರ್ಥ್ಯದ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಪ್ರಕರಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಒಂದು ಕರಾಳ ನೆನಪು. ಈ ಪಾಠಗಳೆಂದರೆ, ಹಿಂದೂತ್ವ ಅಥವಾ ಬೇರಾವುದೇ ಸೈದ್ಧಾಂತಿಕ ನಿರ್ಬಂಧವು ಒಂದು ನ್ಯಾಯಪೀಠದ ಮೇಲೆ ಪ್ರಭಾವ ಬೀರುತ್ತದೆ ಎಂದು ಗ್ರಹಿಸಿದಾಗ, ಪಕ್ಷಪಾತದ ಚಿಕ್ಕ ಸಂಶಯ ಮಾತ್ರವೇ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ನಾಶಮಾಡಲು ಸಾಕು.
ಆಂತರಿಕ ಪುನರುಜ್ಜೀವನ: ನ್ಯಾಯಾಂಗದ ಸ್ವಯಂ ತಿದ್ದುಪಡಿ
ನಿರ್ಣಾಯಕವಾಗಿ ಹೇಳಬೇಕೆಂದರೆ, ಭಾರತೀಯ ನ್ಯಾಯಾಂಗವು ಏಕಶಿಲೆಯಲ್ಲ. ಮೇಲೆ ಹೇಳಿರುವ “ದೇವಪ್ರಭುತ್ವವಾದಿ” ಅಥವಾ ಧಾರ್ಮಿಕ ವಾಲುವಿಕೆಯ ವಿರುದ್ಧ ನ್ಯಾಯಾಂಗದ ಒಳಗೆಯೇ ಗಮನಾರ್ಹ ಪ್ರತಿರೋಧವಿದೆ. ನ್ಯಾಯಾಧೀಶರ ನೈತಿಕ ಪೋಲೀಸ್‌ಗಿರಿ ವಿರುದ್ಧ ಮಾತನಾಡಿರುವ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು, ತಮ್ಮ ಸಹೋದ್ಯೋಗಿಗಳ ಬೋಧನಾ ಪ್ರವೃತ್ತಿಯ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಗಮನಾರ್ಹವಾದ ನ್ಯಾಯಾಂಗ ಹಸ್ತಕ್ಷೇಪವೊಂದರಲ್ಲಿ ಅವರು, ಹದಿಹರೆಯದವರ ಲೈಂಗಿಕ ನಡವಳಿಕೆಯ ಬಗ್ಗೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಅಭಿಪ್ರಾಯದ ಟೀಕೆಯನ್ನು ಕಿತ್ತು ಹಾಕಿದ್ದರು. “ನ್ಯಾಯಾಲಯದ ಕೆಲಸ ನೈತಿಕ ಪೋಲೀಸಿಂಗ್ ಮಾಡುವುದು ಅಲ್ಲ. ನ್ಯಾಯಾಧೀಶರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯಬೇಕು” ಎಂದು ಅವರು ದೃಢವಾಗಿ ಹೇಳಿದ್ದರು.
ಸ್ವತಃ ಟೀಕೆಗಳಿಗೆ ಒಳಗಾಗಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸ್ವತಃ ನಂಬಿಕೆಯ ವ್ಯಕ್ತಿಯಾಗಿದ್ದುಕೊಂಡು- “ನ್ಯಾಯಾಧೀಶರ ಆತ್ಮಸಾಕ್ಷಿಯು ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂವಿಧಾನದಿಂದ ಮಾತ್ರವೇ ಮಾರ್ಗದರ್ಶನ ಪಡೆಯಬೇಕು” ಎಂದು ಆಗಾಗ್ಗೆ ಒತ್ತಿ ಹೇಳಿದ್ದರು. ವಿವಿಧ ಭಿನ್ನಾಭಿಪ್ರಾಯದ ಪ್ರಕರಣಗಳಲ್ಲಿ, “ಅಗತ್ಯ ಧಾರ್ಮಿಕ ಆಚರಣೆಗಳು” ಎಂಬ ತರ್ಕವನ್ನು ಮೂಲಭೂತ ಹಕ್ಕುಗಳನ್ನು ಬೈಪಾಸ್ ಮಾಡಲು ಬಳಸಿದಾಗ ಅವರು ಅದನ್ನು ವಿರೋಧಿಸಿದ್ದರು. ನ್ಯಾಯಾಲಯಗಳು “ಸುಧಾರಣಾವಾದಿ ಧಾರ್ಮಿಕ ಪಾತ್ರ”ವನ್ನು ವಹಿಸಿಕೊಳ್ಳಬಾರದು; ಬದಲಿಗೆ, ವಿಶ್ಲೇಷಣಾತ್ಮಕ ಸಾಂವಿಧಾನಿಕ ಪಾತ್ರವನ್ನು ವಹಿಸಬೇಕು ಎಂದು ಅವರು ವಾದಿಸಿದ್ದರು.
2024ರ ಕೊನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ವಿವರಿಸುವಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್ ಅವರನ್ನು ಕರೆಸಿಕೊಳ್ಳುವ ಅಪರೂಪದ ಹೆಜ್ಜೆಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತೆಗೆದುಕೊಂಡಿತು. ಈತ ಆರೆಸ್ಸೆಸ್ ಸಭೆಗಳಲ್ಲಿ ಬಹಿರಂಗವಾಗಿ ಭಾಗವಹಿಸಿದ್ದ ವ್ಯಕ್ತಿ. ಈ ಕ್ರಮದ ಮೂಲಕ ಸುಪ್ರೀಂ ಕೋರ್ಟ್- ನ್ಯಾಯಾಂಗದ ಉನ್ನತ ಅಧಿಕಾರಿಗಳು ತಮ್ಮ ಪೂರ್ವಗ್ರಹವನ್ನು ಬಹಿರಂಗವಾಗಿ ಪ್ರದರ್ಶನ ಮಾಡುವುದನ್ನು ನಿರ್ಲಕ್ಷಿಸಲು ತನಗೆ ಇಷ್ಟವಿಲ್ಲ ಎಂದು ಸೂಚಿಸಿತು.
ನ್ಯಾಯಾಂಗ ನಿಂದನೆ: ಭಯ ಮತ್ತು ವಾಸ್ತವ
ಕೊಲೆ- ಅತ್ಯಾಚಾರ ಮುಂತಾದ ಆರೋಪಿಗಳಿಗೆ ಜಾಮೀನು, ಪ್ರಭಾವಿ ಮತ್ತು ಧಾರ್ಮಿಕ ಪ್ರಚೋದನೆಯ ದ್ವೇಷ ಭಾಷಣದ ಆರೋಪಿಗಳ ವಿರುದ್ಧ “ಬಲವಂತದ ಕ್ರಮ ಬೇಡ” ಎಂಬ ತಡೆಗಳು, ಆಧಾರ ಸಾಬೀತಾಗದೆ “ದೇಶದ್ರೋಹಿ” ಎಂಬ ಹಣೆಪಟ್ಟಿಯನ್ನು ಹೊತ್ತವರಿಗೆ ವರ್ಷಗಳ ಕಾಲ ಜಾಮೀನು ನಿರಾಕರಣೆ ಮುಂತಾದ ಹಲವು ನ್ಯಾಯಾಂಗ ಕ್ರಮಗಳು ಭಾರೀ ಸಾರ್ವಜನಿಕ ಟೀಕೆಗೆ ಗುರಿಯಾಗಿವೆ. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಪ್ರಕರಣಗಳಲ್ಲಿ ಗೊತ್ತುಗುರಿಯಿಲ್ಲದೇ ನ್ಯಾಯಾಲಯವನ್ನೂ, ವೈಯಕ್ತಿಕವಾಗಿ ನ್ಯಾಯಾಧೀಶರನ್ನೂ ಅವಹೇಳನಕಾರಿಯಾಗಿ ನಿಂದಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ನಿಂದನೆಯ ಕಾಯಿದೆಯನ್ನು ಅನುಷ್ಟಾನಗೊಳಿಸುವುದು ತೀರಾ ಕಷ್ಟ. ಯಾಕೆಂದರೆ, ಲಕ್ಷಾಂತರ ಜನರ ಮೇಲೆ ಕೇಸು ದಾಖಲಿಸಬೇಕಾಗುತ್ತದೆ. ಈ ನಿಂದನಾ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ. ಹಾಗಾಗಿಯೇ ನ್ಯಾಯಾಧೀಶರು ನ್ಯಾಯಾಂಗದ ಬಗ್ಗೆ ಜನರ ನಂಬಿಕೆಯನ್ನು ಅಸ್ಥಿರಗೊಳಿಸಲು ಕಾರಣರಾಗಬಾರದು.
ಆದರೆ, ಮೇಲೆ ಹೇಳಿದ ಪ್ರವೃತ್ತಿಗಳನ್ನು ಟೀಕಿಸುವುದು ಎಂದರೆ, ಇಡೀ ನ್ಯಾಯಾಂಗವನ್ನು ಒಂದು ಸಂಸ್ಥೆಯಾಗಿ ಆಕ್ರಮಣ ಮಾಡುವುದು ಅಲ್ಲ, ಬದಲಾಗಿ ಅದನ್ನು ರಕ್ಷಿಸುವುದು. 1971ರ ನ್ಯಾಯಾಲಯಗಳ ತಿರಸ್ಕಾರ ಅಧವಾ ನಿಂದನೆ ಕಾಯ್ದೆಯ ಅಡಿಯಲ್ಲಿ ವ್ಯಾಖ್ಯಾನಿಸಲಾದ ಪ್ರಕಾರ ನ್ಯಾಯಾಲಯದ ತಿರಸ್ಕಾರ ಅಥವಾ ನಿಂದನೆಯು ಸಾಮಾನ್ಯವಾಗಿ “ನಾಗರಿಕ ತಿರಸ್ಕಾರ/ನಿಂದನೆ” (ತೀರ್ಪುಗಳನ್ನು ಅನುಸರಿಸದಿರುವುದು) ಮತ್ತು “ಕ್ರಿಮಿನಲ್ ತಿರಸ್ಕಾರ/ನಿಂದನೆ” (ನ್ಯಾಯಾಲಯವನ್ನು ನಿಂದಿಸಿ, ಆರೋಪ, ಹಗರಣ ಮಾಡುವುದು) ಒಳಗೊಂಡಿದೆ.
ಈ ಕುರಿತ ಕಾನೂನಿನ ಸ್ಪಷ್ಟತೆಗಾಗಿ ಸುಪ್ರೀಂ ಕೋರ್ಟ್ (ವಿಶೇಷವಾಗಿ ಪಿ.ಎನ್. ದುಡಾ ವರ್ಸಸ್ ಪಿ. ಶಿವಶಂಕರ್ ಪ್ರಕರಣದಲ್ಲಿ) ತೀರ್ಪನ್ನು ನೋಡಬಹುದು. ಅದರಲ್ಲಿ “ನ್ಯಾಯಯುತ ಮತ್ತು ಸಮತೋಲಿತ ಟೀಕೆ” ಅಥವಾ “ಅನುಚಿತ ಉದ್ದೇಶಗಳನ್ನು ಆರೋಪಿಸದ” ನ್ಯಾಯಾಂಗ ನಡವಳಿಕೆಯ ವಿಶ್ಲೇಷಣೆಯನ್ನು ನ್ಯಾಯಾಂಗದ ತಿರಸ್ಕಾರ ಅಥವಾ ನಿಂದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬದಲಾಗಿ, ನ್ಯಾಯಾಧೀಶರ ಸಾರ್ವಜನಿಕವಾದ ಧಾರ್ಮಿಕ ಹೇಳಿಕೆಗಳ ಸಾಂವಿಧಾನಿಕ ಔಚಿತ್ಯವನ್ನು ವಿಶ್ಲೇಷಿಸುವುದು ನಾಗರಿಕ ಭಾಗವಹಿಸುವಿಕೆಯ ಒಂದು ರೂಪವಾಗಿದೆಯೇ ಹೊರತು ಕಾನೂನು ಅಪರಾಧವಲ್ಲ. ಈ ಬರಹವೂ ಅದೇ ನಿಟ್ಟಿನಲ್ಲಿ ಇದೆ ಮತ್ತು ಅದೇ ಸದುದ್ದೇಶವನ್ನು ಹೊಂದಿದೆ.
ಕಾನೂನಿನ ಶ್ರೇಷ್ಟತೆ
ಅಷ್ಟಕ್ಕೂ, ಭಾರತವು ಜಾತ್ಯತೀತ ಗಣರಾಜ್ಯ. ನಮ್ಮ ನ್ಯಾಯಾಂಗದ “ತರ್ಕ”ವು 14ನೇ ವಿಧಿ (ಸಮಾನತೆ) ಮತ್ತು ಕಾನೂನಿನ ಆಳ್ವಿಕೆಯಲ್ಲಿ ಬೇರೂರಿರಬೇಕು. ನ್ಯಾಯಾಧೀಶರು ನ್ಯಾಯಾಲಯಕ್ಕೆ ಪ್ರವೇಶಿಸಿದಾಗ, ಅವರ ವೈಯಕ್ತಿಕ ನಂಬಿಕೆಗಳನ್ನು ಬಾಗಿಲಿನಲ್ಲೇ ಬಿಡಬೇಕು. ನ್ಯಾಯಾಂಗದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ತೀರ್ಪಿನ ಸಂಕ್ಷಿಪ್ತತೆ, ತಟಸ್ಥತೆ ಮತ್ತು ದೇಶದ ಕಾನೂನುಗಳ ಕಟ್ಟುನಿಟ್ಟಿನ ಅನುಸರಣೆ. ನ್ಯಾಯಾಧೀಶರಿಗೆ ತಕ್ಕಂತ ಸಾರ್ವಜನಿಕ ನಡವಳಿಕೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಇರುವ ನ್ಯಾಯಾಂಗವನ್ನು ರಕ್ಷಿಸುವ ಹೊಣೆಗಾರಿಕೆ ಅಂತಿಮವಾಗಿ ಜನರದ್ದು.
