ವಾಟ್ಸಾಪ್‌ನ 2021ರ ಗೌಪ್ಯತಾ ನೀತಿಯಲ್ಲಿನ (Privacy Policy) “ಒಪ್ಪಿಕೊಳ್ಳಿ ಇಲ್ಲವೇ ಹೊರನಡೆಯಿರಿ” (take it or leave it) ಎಂಬ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ.
ಫೆಬ್ರವರಿ 9 ರಂದು ಮಧ್ಯಂತರ ಆದೇಶಗಳನ್ನು ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ಜೋಮಾಲ್ಯ ಬಾಗ್ಚಿ ಮತ್ತು ಜಸ್ಟಿಸ್ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ತಿಳಿಸಿದೆ. ಈ ಅರ್ಜಿಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ (ಪಾರ್ಟಿ) ಸೇರಿಸುವಂತೆ ಅದು ಆದೇಶಿಸಿದೆ.
ಬಳಕೆದಾರರು ತಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವಂತೆ (ಡೇಟಾ ಶೇರಿಂಗ್) ವಾಟ್ಸಾಪ್ ಒತ್ತಡ ಹೇರುತ್ತಿದೆ ಎಂದು ಸಿಜೆಐ ಸೂರ್ಯಕಾಂತ್ ಮೌಖಿಕವಾಗಿ ಅಭಿಪ್ರಾಯಪಟ್ಟರು. “ಬಳಕೆದಾರರ ಗೌಪ್ಯತೆಯೊಂದಿಗೆ ನೀವು ಹೇಗೆ ಚೆಲ್ಲಾಟವಾಡುತ್ತೀರಿ? ನಿಮ್ಮ ನಿಬಂಧನೆಗಳ ಭಾಷೆ ಸಂಕೀರ್ಣವಾಗಿದೆ. ತಮಿಳುನಾಡಿನ ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರು ಅದನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಿ? ಮಾಹಿತಿಯನ್ನು ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ,” ಎಂದು ಸಿಜೆಐ ಹೇಳಿದರು.
ಡೇಟಾ ಶೇರಿಂಗ್ ಹೆಸರಿನಲ್ಲಿ ದೇಶದ ಜನರ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು. ಸಮ್ಮತಿಯ ಮಾರ್ಗದಲ್ಲೇ ಗೌಪ್ಯ ಮಾಹಿತಿಯನ್ನು ಕದಿಯಲಾಗುತ್ತಿದೆ, ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ನೀವು ಇದಕ್ಕೆ ಬದ್ಧರಾಗಿರಬೇಕು, ಇಲ್ಲದಿದ್ದರೆ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಸಿಜೆಐ ತಿಳಿಸಿದರು. ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಲು ಮೆಟಾ ಮತ್ತು ವಾಟ್ಸಾಪ್‌ಗೆ ನ್ಯಾಯಾಲಯವು ಸ್ವಲ್ಪ ಕಾಲಾವಕಾಶ ನೀಡಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಯಿತು.
ನ್ಯಾಷನಲ್ ಕಂಪನಿ ಲಾ ಅಪೀಲೇಟ್ ಟ್ರಿಬ್ಯೂನಲ್ (NCLAT) ಆದೇಶವನ್ನು ಎತ್ತಿಹಿಡಿದಿರುವುದನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಮೆಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ತಿಳಿದ ಸಂಗತಿಯಾಗಿದೆ.
