ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಲು ನಿರಾಕರಿಸಿದ್ದಾರೆ. ಮಸೂದೆಗೆ ಅಂಕಿತ ಹಾಕದೇ ಇರುವ ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ರೂಪದಲ್ಲಿ 29 ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ.
ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು. ಉಭಯ ಸದನಗಳಲ್ಲಿ ವಿಧೇಯಕ ಅಂಗೀಕಾರಗೊಂಡ ಬಳಿಕ ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ರವಾನಿಸಲಾಗಿತ್ತು. ಆದರೆ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಮಸೂದೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ರಾಜ್ಯ ಸರ್ಕಾರ ಇದನ್ನು ದ್ವೇಷ ಭಾಷಣ ನಿಯಂತ್ರಣಕ್ಕೆ ಅಗತ್ಯ ಕ್ರಮ ಎಂದು ಸಮರ್ಥಿಸಿಕೊಂಡಿದೆ.
ರಾಜ್ಯಪಾಲರ ಪ್ರಮುಖ ಆಕ್ಷೇಪಗಳು:
- ಮಸೂದೆಯಲ್ಲಿ ಅಸ್ಪಷ್ಟತೆ ಇರುವುದರಿಂದ ಜಾತಿ, ಧರ್ಮ, ಜನಾಂಗದ ವ್ಯಕ್ತಿಗಳ ವಿರುದ್ಧ ಪೂರ್ವಾಗ್ರಹದಿಂದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
- ಸಂವಿಧಾನಾತ್ಮಕವಾಗಿ ಸಂರಕ್ಷಿತ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಚರ್ಚೆಗೆ ಧಕ್ಕೆ ಉಂಟಾಗಬಹುದು.
- ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕು ಕಸಿಯುವ ಅಪಾಯವಿದೆ.
- ಆನ್‌ಲೈನ್ ವಿಷಯಗಳ ನಿಯಂತ್ರಣ ಹಾಗೂ ಪೊಲೀಸ್ ಅಧಿಕಾರ ದುರುಪಯೋಗದ ಸಾಧ್ಯತೆ ಇದೆ.
- ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಹಲವು ಕಾನೂನುಗಳು ಜಾರಿಯಲ್ಲಿರುವುದರಿಂದ ಹೊಸ ಮಸೂದೆ ಅಗತ್ಯವೇ ಎಂಬ ಪ್ರಶ್ನೆ ಇದೆ.
- ಬೌದ್ಧಿಕ ಚಿಂತನೆ ಹಾಗೂ ಸ್ವತಂತ್ರ ಅಭಿವ್ಯಕ್ತಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ.
ಮಸೂದೆ ಹೈಲೈಟ್ಸ್:
- ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಹಾಗೂ ಪ್ರಚಾರ ತಡೆಯಲು ವಿಧೇಯಕದಲ್ಲಿ ಅವಕಾಶ.
- ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳನ್ನು ತಡೆಯುವ ಉದ್ದೇಶ.
- ಮೊದಲ ಬಾರಿ ದ್ವೇಷ ಭಾಷಣ ಅಥವಾ ದ್ವೇಷ ಅಪರಾಧ ಮಾಡಿದರೆ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷವರೆಗೆ ಜೈಲು ಮತ್ತು ₹50,000 ದಂಡ.
- ಅಪರಾಧ ಪುನರಾವರ್ತನೆಯಾದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷ ಜೈಲು ಮತ್ತು ₹1 ಲಕ್ಷ ದಂಡ.
- ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ವಿಚಾರಣೆ.
