Tuesday, February 3, 2026

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣ ಮಸೂದೆಗೆ 29 ಆಕ್ಷೇಪ ಕಾರಣಗಳೊಂದಿಗೆ ರಾಷ್ಟ್ರಪತಿಗಳಿಗೆ ಪತ್ರ – ಸರ್ಕಾರ–ರಾಜಭವನ ಮಧ್ಯೆ ಮತ್ತೆ ಸಂಘರ್ಷ

ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಲು ನಿರಾಕರಿಸಿದ್ದಾರೆ. ಮಸೂದೆಗೆ ಅಂಕಿತ ಹಾಕದೇ ಇರುವ ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ರೂಪದಲ್ಲಿ 29 ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ.

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು. ಉಭಯ ಸದನಗಳಲ್ಲಿ ವಿಧೇಯಕ ಅಂಗೀಕಾರಗೊಂಡ ಬಳಿಕ ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ರವಾನಿಸಲಾಗಿತ್ತು. ಆದರೆ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಮಸೂದೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ರಾಜ್ಯ ಸರ್ಕಾರ ಇದನ್ನು ದ್ವೇಷ ಭಾಷಣ ನಿಯಂತ್ರಣಕ್ಕೆ ಅಗತ್ಯ ಕ್ರಮ ಎಂದು ಸಮರ್ಥಿಸಿಕೊಂಡಿದೆ.

ರಾಜ್ಯಪಾಲರ ಪ್ರಮುಖ ಆಕ್ಷೇಪಗಳು:

  • ಮಸೂದೆಯಲ್ಲಿ ಅಸ್ಪಷ್ಟತೆ ಇರುವುದರಿಂದ ಜಾತಿ, ಧರ್ಮ, ಜನಾಂಗದ ವ್ಯಕ್ತಿಗಳ ವಿರುದ್ಧ ಪೂರ್ವಾಗ್ರಹದಿಂದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
  • ಸಂವಿಧಾನಾತ್ಮಕವಾಗಿ ಸಂರಕ್ಷಿತ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಚರ್ಚೆಗೆ ಧಕ್ಕೆ ಉಂಟಾಗಬಹುದು.
  • ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕು ಕಸಿಯುವ ಅಪಾಯವಿದೆ.
  • ಆನ್‌ಲೈನ್ ವಿಷಯಗಳ ನಿಯಂತ್ರಣ ಹಾಗೂ ಪೊಲೀಸ್ ಅಧಿಕಾರ ದುರುಪಯೋಗದ ಸಾಧ್ಯತೆ ಇದೆ.
  • ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಹಲವು ಕಾನೂನುಗಳು ಜಾರಿಯಲ್ಲಿರುವುದರಿಂದ ಹೊಸ ಮಸೂದೆ ಅಗತ್ಯವೇ ಎಂಬ ಪ್ರಶ್ನೆ ಇದೆ.
  • ಬೌದ್ಧಿಕ ಚಿಂತನೆ ಹಾಗೂ ಸ್ವತಂತ್ರ ಅಭಿವ್ಯಕ್ತಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ.

ಮಸೂದೆ ಹೈಲೈಟ್ಸ್:

  • ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಹಾಗೂ ಪ್ರಚಾರ ತಡೆಯಲು ವಿಧೇಯಕದಲ್ಲಿ ಅವಕಾಶ.
  • ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳನ್ನು ತಡೆಯುವ ಉದ್ದೇಶ.
  • ಮೊದಲ ಬಾರಿ ದ್ವೇಷ ಭಾಷಣ ಅಥವಾ ದ್ವೇಷ ಅಪರಾಧ ಮಾಡಿದರೆ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷವರೆಗೆ ಜೈಲು ಮತ್ತು ₹50,000 ದಂಡ.
  • ಅಪರಾಧ ಪುನರಾವರ್ತನೆಯಾದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷ ಜೈಲು ಮತ್ತು ₹1 ಲಕ್ಷ ದಂಡ.
  • ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ವಿಚಾರಣೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page