Home ಬ್ರೇಕಿಂಗ್ ಸುದ್ದಿ ಹಾಸನದಲ್ಲಿ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ – ದರ್ಮೇಶ್‌

ಹಾಸನದಲ್ಲಿ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ – ದರ್ಮೇಶ್‌

ಹಾಸನ : ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ನೀಡುವಂತೆ ಹಾಸನ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜಂಟಿಯಾಗಿ ಮನವಿ ಮಾಡಿವೆ.

ಫೆಬ್ರವರಿ 12ರಂದು ದೇಶದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು ಹಾಗೂ ನೌಕರರ ಸಂಘಟನೆಗಳು ಸೇರಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ–ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಸಲಿದ್ದಾರೆ ಎಂದು ಧರ್ಮೇಶ್ ಅವರು ತಿಳಿಸಿದರು. ವ್ಯಾಪಾರ ಸುಲಭೀಕರಣದ ಹೆಸರಿನಲ್ಲಿ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಕಾರ್ಮಿಕರ ಹಕ್ಕುಗಳ ಮೇಲೆ ಆರ್ಥಿಕ ಹಾಗೂ ರಾಜಕೀಯ ದಾಳಿ ನಡೆಸಿದಂತಾಗಿದೆ. ಇದರಿಂದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಜೀವನೋಪಾಯ ವೇತನದ ಬದಲು ತಳಮಟ್ಟದ ಕನಿಷ್ಠ ವೇತನದ ಪ್ರಸ್ತಾವನೆ ಕಾರ್ಮಿಕರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.

ನರೇಗಾ ಕಾಯ್ದೆಯಡಿಯಲ್ಲಿ ಖಾತರಿಪಡಿಸಿದ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ಮೂಲಕ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು, ರೈತರಿಗೆ ಬೆಂಬಲ ಬೆಲೆ ನೀಡದೇ ಕಂಪನಿ ಕೃಷಿ ಮತ್ತು ಬಲವಂತದ ಭೂಸ್ವಾಧೀನಕ್ಕೆ ಉತ್ತೇಜನ ನೀಡುತ್ತಿರುವುದು ರೈತರು ಹಾಗೂ ಗ್ರಾಮೀಣ ಶ್ರಮಜೀವಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

You cannot copy content of this page

Exit mobile version