Thursday, June 20, 2024

ಸತ್ಯ | ನ್ಯಾಯ |ಧರ್ಮ

ಇಡಿ ದಾಳಿ ಬೆನ್ನಲ್ಲೆ ಬಿಜೆಪಿ ಸೇರಿದ ಟಿಎಂಸಿ ಹಿರಿಯ ಮುಖಂಡ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ)ಹಿರಿಯ ರಾಜಕಾರಣಿ ತಪಸ್ ರಾಯ್ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.


ಮುನ್ಸಿಪಲ್ ಉದ್ಯೋಗ ಹಗರಣ ಪ್ರಕರಣ ಸಂಬಂಧ ಜನವರಿ 12ರಂದು ತನ್ನ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಈ ದಾಳಿಗೆ ಹೆದರಿಯೇ ಅವರು ಬಿಜೆಪಿ ಸೇರಿದರೇ ಎಂಬ ಚರ್ಚೆ ಈಗ ಪಶ್ಚಿಮ ಬಂಗಾಳದಾದ್ಯಂತ ನಡೆಯುತ್ತಿದೆ. ತಪಸ್‌ ರಾಯ್ ಅವರು ಟಿಎಂಸಿ ಪಕ್ಷದಿಂದ ಐದು ಸಲ ಸ್ಪರ್ಧಿಸಿ, ಗೆದ್ದು ಶಾಸಕರಾಗಿದ್ದರು.


ಕೊಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್ ಮಜುಂದಾರ್ ಅವರು ತಪಸ್ ರಾಯ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
“ಟಿಎಂಸಿಯ ದುರಾಡಳಿತ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ನಾನು ಇಂದು ಬಿಜೆಪಿಗೆ ಸೇರಿದ್ದೇನೆ” ಎಂದು ಪಕ್ಷ ಸೇರ್ಪಡೆ ವೇಳೆ ತಪಸ್ ರಾಯ್ ಹೇಳಿಕೆ ನೀಡಿದ್ದಾರೆ.


ನನ್ನ ಮೇಲೆ ಇಡಿ ದಾಳಿ ನಡೆಸಿದಾಗ ಟಿಎಂಸಿ ಪಕ್ಷ ನನ್ನ ಸಹಾಯಕ್ಕೆ ಬಂದಿಲ್ಲ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೌನ ವಹಿಸಿದ್ದರು” ಎಂದು ತಪಸ್ ರಾಯ್ ವಾಗ್ದಾಳಿ ನಡೆಸಿದ್ದಾರೆ.
“ತನ್ನ ವೈಯುಕ್ತಿಕ ಲಾಭಕ್ಕಾಗಿ ತತ್ವ ಸಿದ್ದಾಂತಗಳನ್ನು ಮರೆತು ತಪಸ್ ರಾಯ್ ಟಿಎಂಸಿ ತೊರೆದಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಪಕ್ಷವನ್ನು ತೊರೆದ ತಪಸ್ ರಾಯ್ ಅವರಂತಹ ದೇಶ ದ್ರೋಹಿಗಳನ್ನು ಬಂಗಾಳದ ಜನರು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಟಿಎಂಸಿ ನಾಯಕ ಸಂತಾನು ಸೇನ್ ಹೇಳಿದ್ದಾರೆ.


ಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರ್ಪಡೆ:
ಜನವರಿ 12ರಂದು ತಪಸ್ ರಾಯ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಅದೇ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಕಳ್ಳರ ಮನೆಗಳ ಮೇಲೆ ಇಡಿ ದಾಳಿ ನಿರಂತರವಾಗಿ ನಡೆಯಲಿವೆ ಎಂದಿದ್ದರು. ಬಂಗಾಳದ ಯುವಕರು ಮತ್ತು ಇತರ ಜನರು ಅವರು ಕಂಬಿ ಹಿಂದೆ ಹೋಗಬೇಕೆಂದು ಬಯಸುತ್ತಿದ್ದಾರೆ ಎಂದಿದ್ದರು.


ತಪಸ್ ರಾಯ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ. ಪಶ್ಚಿಮ ಬಂಗಾಳದಿಂದ ದೆಹಲಿ ಪಟ್ಟಿ ಹೋಗುತ್ತಿದೆ. ಆ ಪಟ್ಟಿ ಪ್ರಕಾರ ಬಿಜೆಪಿ ಹೇಳಿದಂತೆ ಇಡಿ ದಾಳಿ ನಡೆಸುತ್ತಿದೆ ಎಂದು ಜನವರಿ 12ರಂದು ಟಿಎಂಸಿ ಆರೋಪಿಸಿತ್ತು.


ಈ ನಡುವೆ ಮಾರ್ಚ್ 4ರಂದು ತಪಸ್ ರಾಯ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸುವೇಂದು ಅಧಿಕಾರಿ, “ತಪಸ್ ರಾಯ್ ನಮ್ಮ ರಾಜ್ಯದ ಅತ್ಯಂತ ಹಿರಿಯ ನಾಯಕ. ಅವರು ಮಾಜಿ ಮಂತ್ರಿ ಮತ್ತು 4- 5 ಬಾರಿ ಶಾಸಕರಾದವರು. ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ” ಎಂದಿದ್ದರು. ದಾಳಿ ನಡೆದಾಗ ತಪಸ್‌ ರಾಯ್‌ ಅವರನ್ನು ಕಳ್ಳ ಎಂದಿದ್ದ ಸುವೇಂದು, ತಪಸ್ ರಾಜಿನಾಮೆ ನೀಡಿದಾಗ ಹಾಡಿ ಹೊಗಳಿದ್ದು, ಬಹಳ ಚರ್ಚೆಗೆ ಗ್ರಾಸವಾಗಿತ್ತು. ತಪಸ್‌ ಅವರನ್ನು ಬಿಜೆಪಿ ತನ್ನ ಖೆಡ್ಡಾ ಕೆಡವಿಕೊಳ್ಳಲು ಬಿಜೆಪಿ ತಯಾರಿ ನಡೆಸಿದೆ ಎಂದು ಕೆಲವರು ಆರೋಪಿಸಿದ್ದರು. ಆ ಆರೋಪ ಈಗ ನಿಜವಾಗಿದೆ.

Related Articles

ಇತ್ತೀಚಿನ ಸುದ್ದಿಗಳು