ಬೆಂಗಳೂರು: ಅಲಹಾಬಾದ್ ಹೈಕೋರ್ಟ್‌ನ ಇಬ್ಬರು ಹಾಲಿ ನ್ಯಾಯಾಧೀಶರು ಡಿಸೆಂಬರ್ 8, ಭಾನುವಾರ ಹಿಂದುತ್ವವಾದಿ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರಲ್ಲಿ ಒಬ್ಬರು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು.
ಹೈಕೋರ್ಟ್‌ನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಎಚ್‌ಪಿಯ “ಕಾಶಿ ಪ್ರಾಂತ” (ವಾರಣಾಸಿ ಪ್ರಾಂತ್ಯ) ಮತ್ತು ಉಚ್ಚ ನ್ಯಾಯಾಲಯದ ಘಟಕ (ಅಲಹಾಬಾದ್) ಕಾನೂನು ಘಟಕ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಚರ್ಚಿಸಲಾದ ವಿಷಯಗಳು: “ವಕ್ಫ್ ಬೋರ್ಡ್ ಆಕ್ಟ್” ಮತ್ತು “ಧಾರ್ಮಿಕ ಮತಾಂತರ – ಕಾರಣಗಳು ಮತ್ತು ತಡೆಗಟ್ಟುವಿಕೆ”.
2026 ರಲ್ಲಿ ನಿವೃತ್ತರಾಗಲಿರುವ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಯುಸಿಸಿಯಲ್ಲಿ “ಏಕರೂಪ ನಾಗರಿಕ ಸಂಹಿತೆ – ಒಂದು ಸಾಂವಿಧಾನಿಕ ಅಗತ್ಯ” ಎಂಬ ಶೀರ್ಷಿಕೆಯ ಉಪನ್ಯಾಸವನ್ನು ನೀಡಿದರು. ಯುಸಿಸಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಆಧರಿಸಿದೆ, ಜಾತ್ಯತೀತತೆ ಭಾರತದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯ ವಿಷಯವಾಗಿದೆ ಎಂದು ಹೇಳಿದರು.
“UCC ಯ ಮುಖ್ಯ ಉದ್ದೇಶವೆಂದರೆ ವಿವಿಧ ಧರ್ಮಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಅಸಮಾನ ಕಾನೂನು ವ್ಯವಸ್ಥೆಗಳನ್ನು ತೆಗೆದುಹಾಕುವ ಮೂಲಕ ಸಾಮಾಜಿಕ ಸಾಮರಸ್ಯ,ಲಿಂಗ ಸಮಾನತೆ ಮತ್ತು ಜಾತ್ಯತೀತತೆಯನ್ನು ಉತ್ತೇಜಿಸುವುದು. ಈ ಸಂಹಿತೆಯು ಸಮುದಾಯಗಳ ನಡುವೆ ಮಾತ್ರವಲ್ಲದೆ, ಒಂದು ಸಮುದಾಯದೊಳಗೆ ಕಾನೂನುಗಳ ಏಕರೂಪತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ,” ಯಾದವ್ ಹೇಳಿದ್ದಾರೆ.
ಇನ್ನೋರ್ವ ನ್ಯಾಯಾಧೀಶರಾದ ಜಸ್ಟಿಸ್ ದಿನೇಶ್ ಪಾಠಕ್ ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಆಶೀರ್ವಾದ ನೀಡುವ ಮೂಲಕ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿರಲಿಲ್ಲ.
ಜಾನ್‌ಪುರ್, ಸುಲ್ತಾನ್‌ಪುರ, ಪ್ರತಾಪ್‌ಗಢ, ಅಮೇಥಿ, ಪ್ರಯಾಗ್‌ರಾಜ್, ಕೌಶಂಬಿ, ಭದೋಹಿ, ಮಿರ್ಜಾಪುರ, ಚಂದೌಲಿ, ಸೋನ್‌ಭದ್ರ, ಘಾಜಿಪುರ ಮತ್ತು ವಾರಣಾಸಿಯಿಂದ ವಿಎಚ್‌ಪಿಯ ಕಾಶಿ ಪ್ರಾಂತ್ ಕಾನೂನು ಘಟಕದ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ವಕೀಲ ಎಕೆ ಸ್ಯಾಂಡ್ ಮತ್ತು ಅಲಹಾಬಾದ್‌ನ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ತಿವಾರಿ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಸ್ಟಿಸ್ ಯಾದವ್ ಅವರು ಈ ಹಿಂದೆ ಕೂಡ ಹಿಂದೂ ಧರ್ಮ ಮತ್ತು ಪುರಾಣದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗಿದ್ದರು.
2021 ರಲ್ಲಿ, ಸಂಭಾಲ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ಹಸುವನ್ನು ಕದ್ದು ತನ್ನ ಸಹಚರರೊಂದಿಗೆ ಹಸುವಿನ ಹತ್ಯೆ ಮಾಡಿದ ಆರೋಪದ ಮೇಲೆ ಜಾಮೀನು ನಿರಾಕರಿಸಿದಾಗ, ಯಾದವ್ ಗೋವನ್ನು “ರಾಷ್ಟ್ರೀಯ ಪ್ರಾಣಿ” ಎಂದು ಘೋಷಿಸಬೇಕು ಮತ್ತು ಗೋರಕ್ಷ (ಗೋ ರಕ್ಷಣೆ) ಅನ್ನು ಹಿಂದೂಗಳ ಮೂಲಭೂತ ಹಕ್ಕುಗಳಲ್ಲಿ ಸೇರಿಸಬೇಕು ಎಂದು ಹೇಳಿದರು.
ಪೌರಾಣಿಕ ಕಥೆಗಳೊಂದಿಗೆ ಹಿಂದಿಯಲ್ಲಿ ಬರೆದ 12 ಪುಟಗಳ ಆದೇಶದಲ್ಲಿ, ನ್ಯಾಯಮೂರ್ತಿ ಯಾದವ್ ಅವರು ಹಸು ಆಮ್ಲಜನಕವನ್ನು ಉಸಿರಾಡುವ ಮತ್ತು ಹೊರಹಾಕುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ನಂಬುತ್ತಾರೆ ಎಂದು ಉಲ್ಲೇಖಿಸಿದ್ದರು. ಗೋಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸತ್ತು ಕಾನೂನನ್ನು ತರಬೇಕು ಎಂದೂ ಅವರು ಇದೇ ಆದೇಶದಲ್ಲಿ ವಾದಿಸಿದ್ದಾರೆ. “ದೇಶದ ನಂಬಿಕೆ ಮತ್ತು ಸಂಸ್ಕೃತಿಗೆ ಹಾನಿಯಾದಾಗ, ದೇಶವು ದುರ್ಬಲಗೊಳ್ಳುತ್ತದೆ” ಎಂದು ಅವರು ಹೇಳಿದ್ದರು.
2021, ಅಕ್ಟೋಬರ್‌ನಲ್ಲಿ, ನ್ಯಾಯಮೂರ್ತಿ ಯಾದವ್ ಅವರು ಆದೇಶದಲ್ಲಿ, ಹಿಂದೂ ದೇವತೆಗಳಾದ ರಾಮ ಮತ್ತು ಕೃಷ್ಣ ಹಾಗೂ ಹಿಂದೂ ಪುರಾಣ ಗ್ರಂಥಗಳಾದ ರಾಮಾಯಣ ಮತ್ತು ಗೀತೆ ಮತ್ತು ಅವನ್ನು ಬರೆದ ಲೇಖಕರಾದ ವಾಲ್ಮೀಕಿ ಮತ್ತು ವೇದವ್ಯಾಸನಿಗೆ ಕಾನೂನಿನ ಮೂಲಕ ಸಂಸತ್ತಿನಲ್ಲಿ ರಾಷ್ಟ್ರೀಯ ಗೌರವವನ್ನು ನೀಡಬೇಕು ಎಂದು ಹೇಳಿದ್ದರು. ರಾಮ, ಕೃಷ್ಣ, ರಾಮಾಯಣ , ಗೀತೆ , ವಾಲ್ಮೀಕಿ ಮತ್ತು ವೇದ ವ್ಯಾಸರು ದೇಶದ “ಸಂಸ್ಕೃತಿ ಮತ್ತು ಪರಂಪರೆಯ” ಭಾಗವಾಗಿದ್ದಾರೆ ಎನ್ನುತ್ತಾ, ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಮ ಮತ್ತು ಕೃಷ್ಣನನ್ನು ಅವಮಾನಿಸಿದ ಆರೋಪದ ಮೇಲೆ ಹಿಂದೂ ದಲಿತ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಯಾದವ್ ವಾದಿಸಿದ್ದರು.
ಯಾದವ್ ಹಿಂದೂ ಸಮಾಜದಲ್ಲಿ ಮತ್ತು ಪ್ರಪಂಚದ ಕಲ್ಯಾಣಕ್ಕಾಗಿ ಈ ದೇವತೆಗಳು ಮತ್ತು ಪೌರಾಣಿಕ ಮಹಾಕಾವ್ಯಗಳು ನಿರ್ವಹಿಸಿದ ಪಾತ್ರವನ್ನು ಶ್ಲಾಘಿಸಿದರು. ಈ ಅಂಶಗಳನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ವಿಷಯವನ್ನಾಗಿ ಮಾಡಬೇಕು, ಶಿಕ್ಷಣದ ಮೂಲಕ ಮಾತ್ರ ಒಬ್ಬ ವ್ಯಕ್ತಿಯು ಸುಸಂಸ್ಕೃತನಾಗುತ್ತಾನೆ ಮತ್ತು ಜೀವನ ಮೌಲ್ಯಗಳ ಬಗ್ಗೆ ಅರಿವು ಹೊಂದುತ್ತಾನೆ ಎಂದು ಯಾದವ್ ಹೇಳಿದ್ದರು.
“ರಾಮ ಮತ್ತು ಕೃಷ್ಣರು ಈ ಭಾರತದ ನೆಲದಲ್ಲಿ ಜನಿಸಿದರು ಮತ್ತು ಇಲ್ಲಿಯ ಜನರ ಕಲ್ಯಾಣದ ಬಗ್ಗೆ ಯೋಚಿಸಿದರು ಹಾಗೂ ತಮ್ಮ ಜೀವನದುದ್ದಕ್ಕೂ ಜೀವಿಗಳ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದರು. ಆ ಕೆಲಸವೇ ಲೋಕಕಲ್ಯಾಣವಾಯಿತು ಮತ್ತು ಆದ್ದರಿಂದ ರಾಮ ಮತ್ತು ಕೃಷ್ಣ ಹಾಗೂ ಅವರ ಕಾರ್ಯ- ಚಿಂತನೆಗಳನ್ನು ವಿಶ್ವದ ಅನೇಕ ದೇಶಗಳು ನಂಬುತ್ತವೆ,” ಎಂದು ನ್ಯಾಯಾಧೀಶರು ಅಕ್ಟೋಬರ್ 2021 ರಲ್ಲಿ ಹೇಳಿದರು.
2021 ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ಯಾದವ್ ಅವರು ಕೋವಿಡ್-19 ಪ್ರಕರಣಗಳ ಹೆಚ್ಚುತ್ತಿರುವ ಪ್ರಕರಣಗಳಿಂದ ರಾಜಕೀಯ ಪಕ್ಷಗಳ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ತಕ್ಷಣವೇ ನಿಷೇಧಿಸುವಂತೆ ಮತ್ತು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಸುದ್ದಿಯಾಗಿದ್ದರು. “ಜಾನ್ ಹೈ ತೋ ಜಹಾನ್ ಹೈ [ಜೀವನವಿದ್ದರೆ, ಭರವಸೆ ಇದೆ]” ಎಂದು ಯಾದವ್ ಹೇಳಿದ್ದರು. ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಯಾದವ್ ಈ ಮನವಿ ಮಾಡಿತ್ತಾ, ಮೋದಿಯವರ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಶ್ಲಾಘಿಸಿದ್ದರು.
ಪ್ರಯಾಗರಾಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಎಚ್‌ಪಿಯ ಕಾನೂನು ಘಟಕದ ರಾಷ್ಟ್ರೀಯ ಸಹ ಸಂಚಾಲಕ ಅಭಿಷೇಕ್ ಅತ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಭಾಷಣ ಮಾಡಿದರು. ಬಾಂಗ್ಲಾದೇಶದಲ್ಲಿ ʼಎರಡನೇ ಕಾಶ್ಮೀರʼ ವನ್ನು ಕಾಣಬಹುದು, ಇತ್ತೀಚಿನ ರಾಜಕೀಯ ಕ್ರಾಂತಿಯ ನಂತರ ಆ ದೇಶ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ, “ನಮ್ಮ ಅಸ್ತಿತ್ವವನ್ನು ರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು,” ಎಂದು ಅತ್ರೇ ಹೇಳಿದರು.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ವಿಎಚ್‌ಪಿ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಯಾದವ್ ಭಾಗವಹಿಸಿದ್ದನ್ನು ಟೀಕಿಸುತ್ತಾ, “ಹಿಂದೂ ಸಂಘಟನೆಯೊಂದು ತನ್ನ ರಾಜಕೀಯ ಅಜೆಂಡಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಲಿ ನ್ಯಾಯಾಧೀಶರಿಗೆ ಎಂತಹ ಒಂದು ನಾಚಿಗೇಡಿನ ಸಂಗತಿ,” ಎಂದು ತಮ್ಮ ಎಕ್ಸ್‌ನಲ್ಲಿ ಹೇಳಿದ್ದಾರೆ.