13 ವರ್ಷಗಳ ಹಿಂದೆ ಮಹಡಿಯಿಂದ ಬಿದ್ದು ತೀವ್ರ ಮೆದುಳು ಗಾಯಗೊಂಡು ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ಕುರಿತು ಭಾವನಾತ್ಮಕ ತೀರ್ಪು ಪ್ರಕಟಿಸಿದೆ. ಇಂತಹ ಸಂದರ್ಭಗಳಲ್ಲಿ ಮುಖ್ಯ ಪ್ರಶ್ನೆ “ಸಾವು ರೋಗಿಯ ಹಿತಾಸಕ್ತಿಯಲ್ಲಿದೆಯೇ?” ಎಂಬುದಲ್ಲ, “ಜೀವರಕ್ಷಕ ಚಿಕಿತ್ಸೆ ಮುಂದುವರಿಸುವುದು ರೋಗಿಯ ಹಿತಾಸಕ್ತಿಯನ್ನು ಪೂರೈಸುತ್ತದೆಯೇ?” ಎಂಬುದಾಗಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.
ರಾಣಾ ಅವರ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯಕೀಯ ಮಂಡಳಿಗಳು ಚೇತರಿಕೆಯ ಯಾವುದೇ ಅರ್ಥಪೂರ್ಣ ನಿರೀಕ್ಷೆ ಇಲ್ಲವೆಂದು ಹೇಳಿದ ಹಿನ್ನೆಲೆಯಲ್ಲಿ, ಅವರ ಪೋಷಕರಿಗೆ ವೈದ್ಯಕೀಯ ಬೆಂಬಲವನ್ನು ಹಿಂತೆಗೆದುಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಪೌಷ್ಠಿಕಾಂಶವನ್ನು ವೈದ್ಯಕೀಯವಾಗಿ ನೀಡುವುದು ಸಹ ಒಂದು ರೀತಿಯ ವೈದ್ಯಕೀಯ ಚಿಕಿತ್ಸೆಯೇ ಆಗಿದ್ದು, ವೈದ್ಯಕೀಯ ಮಂಡಳಿಯ ಶಿಫಾರಸ್ಸಿನ ಮೇರೆಗೆ ಅದನ್ನೂ ಹಿಂಪಡೆಯಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ತೀರ್ಪು ಓದುವ ವೇಳೆ ಪೀಠ, ರಾಣಾ ಒಮ್ಮೆ ಉಜ್ವಲ ಭವಿಷ್ಯ ಹೊಂದಿದ್ದ ಯುವಕನಾಗಿದ್ದರೂ, ಮಹಡಿಯಿಂದ ಬಿದ್ದ ಪರಿಣಾಮ ಉಂಟಾದ ಗಂಭೀರ ಮೆದುಳು ಗಾಯಗಳು ಅವರನ್ನು ಸಂಪೂರ್ಣ ನಿಷ್ಕ್ರಿಯ ಸ್ಥಿತಿಗೆ ತಳ್ಳಿವೆ ಎಂದು ಉಲ್ಲೇಖಿಸಿತು. ಕಳೆದ 13 ವರ್ಷಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದಿರುವುದನ್ನು ವೈದ್ಯಕೀಯ ವರದಿಗಳು ಸೂಚಿಸಿವೆ. ಬದುಕುಳಿಯಲು ಅವರು ಸಂಪೂರ್ಣವಾಗಿ ಇತರರ ಮೇಲೆಯೇ ಅವಲಂಬಿತರಾಗಿದ್ದಾರೆ ಎಂಬುದನ್ನೂ ಕೋರ್ಟ್ ಗಮನಿಸಿದೆ.
ಭಾರತದಲ್ಲಿ ನಿಷ್ಕ್ರಿಯ ದಯಾಮರಣವನ್ನು ಮೊದಲ ಬಾರಿಗೆ 2011ರಲ್ಲಿ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿತ್ತು. ನಂತರ 2018ರಲ್ಲಿ ಕಾಮನ್ ಕಾಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ “ಘನತೆಯಿಂದ ಸಾಯುವ ಹಕ್ಕು” ಬದುಕುವ ಹಕ್ಕಿನ ಭಾಗವೆಂದು ಕೋರ್ಟ್ ಸ್ಪಷ್ಟಪಡಿಸಿ ಅದನ್ನು ಕಾನೂನುಬದ್ಧಗೊಳಿಸಿತ್ತು. ಆದರೆ ಔಷಧಿ ಅಥವಾ ಇಂಜೆಕ್ಷನ್ ಮೂಲಕ ನೇರವಾಗಿ ಸಾವಿಗೆ ಕಾರಣವಾಗುವ ಸಕ್ರಿಯ ದಯಾಮರಣವು ಭಾರತದಲ್ಲಿ ಇನ್ನೂ ಕಾನೂನುಬಾಹಿರವಾಗಿಯೇ ಉಳಿದಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಹರೀಶ್ ರಾಣಾ, 2013 ಆಗಸ್ಟ್ 20ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಆ ದಿನದಿಂದಲೇ ಅವರು ಟ್ರಾಕಿಯೊಸ್ಟೊಮಿ ಟ್ಯೂಬ್ ಮೂಲಕ ಉಸಿರಾಟ ಹಾಗೂ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಮೂಲಕ ಪೌಷ್ಠಿಕಾಂಶವನ್ನು ಪಡೆಯುತ್ತಿದ್ದರು.
ಮಗನ ಚಿಕಿತ್ಸೆಗಾಗಿ ಹರೀಶ್ ಅವರ ಪೋಷಕರು ದೆಹಲಿಯಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿ, ಏಮ್ಸ್ ಆಸ್ಪತ್ರೆಯ ಬಳಿಯ ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ನಿಷ್ಕ್ರಿಯ ದಯಾಮರಣಕ್ಕೆ ಕಾನೂನು ಅನುಮತಿ ನೀಡುವಂತೆ ಅವರು ನ್ಯಾಯಾಲಯವನ್ನು ಮೊರೆ ಹೋಗಿದ್ದರು.
