ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಹಾರ್ಮುಜ್ ಜಲಸಂಧಿ ಸಮೀಪ ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ದಾಳಿ ನಡೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಖಲೀಫಾ ಬಂದರಿನಿಂದ ಹೊರಟ ಥಾಯ್ಲೆಂಡ್ ಧ್ವಜ ಹೊಂದಿದ್ದ ಸರಕು ನೌಕೆ ಮೇಲೆ ಈ ದಾಳಿ ನಡೆದಿರುವುದಾಗಿ ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ.
ಥಾಯ್ಲೆಂಡ್‌ನ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಕಂಪನಿಗೆ ಸೇರಿದ ‘ಮಯೂರಿ ನರಿ’ ಎಂಬ ಬೃಹತ್ ಸರಕು ಹಡಗು ಯುಎಇಯಿಂದ ಭಾರತದ ಕಾಂಡ್ಲಾ ಬಂದರಿಗೆ ತೆರಳುತ್ತಿತ್ತು. ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ವೇಳೆ ದಾಳಿಗೆ ಗುರಿಯಾಗಿದ್ದು, ಘಟನೆಯಲ್ಲಿ ನೌಕೆಯಲ್ಲಿದ್ದ 20 ನಾವಿಕರನ್ನು ರಕ್ಷಿಸಲಾಗಿದೆ. ಆದರೆ ಮೂವರು ನಾವಿಕರು ಇನ್ನೂ ಪತ್ತೆಯಾಗಿಲ್ಲ.
ಇದೇ ವೇಳೆ ಗಲ್ಫ್ ಪ್ರದೇಶದಲ್ಲಿ ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ಸೇನೆ ಇರಾನ್‌ನ ನೌಕಾ ನೆಲೆಗಳ ಮೇಲೆ ದಾಳಿ ನಡೆಸಿ ಹಲವು ಮೈನ್‌ಲೇಯರ್ ಹಡಗುಗಳನ್ನು ನಾಶಪಡಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಕಾರ್ಯಾಚರಣೆಯ ವೇಳೆ ಒಟ್ಟು 16 ಇರಾನಿನ ಮೈನ್‌ಲೇಯರ್‌ಗಳನ್ನು ಧ್ವಂಸಗೊಳಿಸಲಾಗಿದೆ.
ಇದರ ನಡುವೆಯೇ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿ ಉಂಟಾದರೆ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ, ಯುದ್ಧ ಮುಂದುವರಿದರೆ ಗಲ್ಫ್ ಪ್ರದೇಶದಿಂದ ತೈಲ ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಯ ಬಗ್ಗೆ ಇರಾನ್ ಎಚ್ಚರಿಕೆ ನೀಡಿದೆ.
ವಿಶ್ವದ ಕಚ್ಚಾ ತೈಲ ಪೂರೈಕೆಯ ಸುಮಾರು 20 ಶೇಕಡಾ ಸಾಗಣೆ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿರುವುದರಿಂದ ಈ ಪ್ರದೇಶದ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ.
ಇದರ ನಡುವೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಡೆದ ಡ್ರೋನ್ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರು ಭಾರತೀಯ ಮೂಲದವರಾಗಿದ್ದಾರೆ.
