Home ದೇಶ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉದ್ವಿಗ್ನತೆ: ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯದ ಆತಂಕ

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉದ್ವಿಗ್ನತೆ: ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯದ ಆತಂಕ

0

ಇರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ದೇಶದ ಮಿತಿ ಮೀರಿದ ಯುದ್ಧದ ನಡೆಯ ಹಿನ್ನಲೆಯಲ್ಲಿ ಭಾರತದಲ್ಲಿ ಗೃಹ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಇಂಧನ ಪೂರೈಕೆ ಸರಪಳಿಯಲ್ಲಿ ಒತ್ತಡ ಹೆಚ್ಚಾಗುತ್ತಿದೆ. ದೇಶದಲ್ಲಿಯೂ ಅನಿಲ ಲಭ್ಯತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಆರಂಭವಾಗಿವೆ.

ಮಾಹಿತಿಗಳ ಪ್ರಕಾರ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ತೂಕವನ್ನು ಪ್ರಸ್ತುತ ಇರುವ 14 ಕೆಜಿ ಮಟ್ಟದಿಂದ 10 ಕೆಜಿಗೆ ಇಳಿಸುವ ಬಗ್ಗೆ ಚಿಂತನೆ ನಡೆಯುತ್ತಿರುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದರಿಂದ ಸೀಮಿತ ಪೂರೈಕೆಯನ್ನು ಹೆಚ್ಚು ಕುಟುಂಬಗಳಿಗೆ ಹಂಚುವ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ ಜಾಗತಿಕ ರಾಜಕೀಯ ಸಮೀಕರಣಗಳಲ್ಲಿ ಬದಲಾವಣೆ ಕಂಡುಬಂದಿರುವುದು ಕೂಡ ಇಂಧನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ತಂದಿದೆ. ಭಾರತವು ಅಮೆರಿಕಾದೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದಲೂ ಇಂಧನ ಪೂರೈಕೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ವರದಿಗಳು ಕೇಳಿಬರುತ್ತಿವೆ.

ಈ ಬೆಳವಣಿಗೆಗಳ ನಡುವೆ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಿತಿಗತಿಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಪ್ರಶ್ನೆಗಳು ಎದ್ದಿವೆ. ಇಂಧನ ಪೂರೈಕೆಯ ನಿರ್ವಹಣೆಯಲ್ಲಿ ಸರ್ಕಾರದ ತಂತ್ರ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದರೆ, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳ ಹಿನ್ನೆಲೆ ಇಂಧನ ಪೂರೈಕೆ ಪರಿಸ್ಥಿತಿ ಯಾವ ರೀತಿಯಲ್ಲಿ ರೂಪುಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

You cannot copy content of this page

Exit mobile version