Home ಬ್ರೇಕಿಂಗ್ ಸುದ್ದಿ ಹಾರ್ಮುಜ್ ಜಲಸಂಧಿಗೆ ಮತ್ತೆ ಬಂದ್!: ಭಾರತದ ತೈಲ ಮತ್ತು ಎಲ್‌ಪಿಜಿ ಪೂರೈಕೆಗೆ ಮತ್ತೊಂದು ದೊಡ್ಡ ಆಘಾತ

ಹಾರ್ಮುಜ್ ಜಲಸಂಧಿಗೆ ಮತ್ತೆ ಬಂದ್!: ಭಾರತದ ತೈಲ ಮತ್ತು ಎಲ್‌ಪಿಜಿ ಪೂರೈಕೆಗೆ ಮತ್ತೊಂದು ದೊಡ್ಡ ಆಘಾತ

0

ಅಮೇರಿಕಾ-ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಭಾರತದ ಇಂಧನ ಭದ್ರತೆ ಮೇಲೆ ಕರಿಮೋಡ ಕವಿದಿದೆ. ಅಪಾಚೆ ಹೆಲಿಕಾಪ್ಟರ್ ಪತನದ ಹಿನ್ನೆಲೆಯಲ್ಲಿ ಅಮೆರಿಕ ಎರಡು ದಿನಗಳಿಂದ ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣ ಮುಚ್ಚುವ ಘೋಷಣೆ ಮಾಡಿದೆ.

ಜಾಗತಿಕ ಇಂಧನಕ್ಕೆ ದೊಡ್ಡ ಅಡ್ಡಿ
ವಿಶ್ವದ ಒಟ್ಟು ತೈಲ ಸರಬರಾಜಿನ ಸುಮಾರು ಶೇ. 20ರಷ್ಟು ಮತ್ತು ಗಣನೀಯ ಪ್ರಮಾಣದ ಎಲ್‌ಎನ್‌ಜಿ ಪ್ರತಿ ದಿನ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಈ ಜಲಸಂಧಿ ಮುಚ್ಚಿದರೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾಗಲಿದೆ. ಈಗಾಗಲೇ ಬ್ರೆಂಟ್ ಕಚ್ಚಾ ತೈಲ ಬೆಲೆ ಗುರುವಾರ ಬ್ಯಾರೆಲ್‌ಗೆ 95 ಡಾಲರ್ ಸಮೀಪಕ್ಕೆ ತಲುಪಿದ್ದು, ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ಭಾರತಕ್ಕೆ ನೇರ ಹೊಡೆತ
ಭಾರತ ತನ್ನ ಶೇ. 40-50ರಷ್ಟು ಕಚ್ಚಾ ತೈಲ, ಶೇ. 60ರಷ್ಟು ಎಲ್‌ಎನ್‌ಜಿ ಮತ್ತು ಬಹುಪಾಲು ಎಲ್‌ಪಿಜಿಯನ್ನು ಸೌದಿ ಅರೇಬಿಯಾ, ಇರಾಕ್, ಕುವೈತ್, ಯುಎಇ ಹಾಗೂ ಕತಾರ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದು, ಅವೆಲ್ಲವೂ ಹಾರ್ಮುಜ್ ಜಲಸಂಧಿ ಮಾರ್ಗದಲ್ಲೇ ಬರಬೇಕಿದೆ. ಪ್ರಸ್ತುತ ಭಾರತದ ಒಟ್ಟು ಎಲ್‌ಪಿಜಿ ಮತ್ತು ತೈಲ ಆಮದಿನ ಶೇ. 60ಕ್ಕೂ ಹೆಚ್ಚು ಈ ಮಾರ್ಗದಿಂದಲೇ ಬರುತ್ತದೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

ಸಾಮಾನ್ಯ ಮನೆಗಳಲ್ಲಿ ಬಳಕೆಯಾಗುವ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಮತ್ತು ಬೆಲೆ ಎರಡರ ಮೇಲೂ ಈ ಬಿಕ್ಕಟ್ಟು ನೇರ ಪರಿಣಾಮ ಬೀರಬಹುದು. ಜೊತೆಗೆ, ಯೂರಿಯಾ ಸೇರಿದಂತೆ ರಸಗೊಬ್ಬರಗಳ ಆಮದು ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿ ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಗತ್ಯ ದಾಸ್ತಾನು ಇಲ್ಲವಾದರೆ ಭಾರತಕ್ಕೆ ದೊಡ್ಡ ಹೊಡೆತ
ಭಾರತ ಸರ್ಕಾರ ಮತ್ತು ತೈಲ ಕಂಪನಿಗಳು ಕಾರ್ಯತಂತ್ರ ಮತ್ತು ವಾಣಿಜ್ಯ ಮೀಸಲು ದಾಸ್ತಾನು ಹೊಂದಿರುವ ಕಾರಣ ತಕ್ಷಣದ ಬಿಕ್ಕಟ್ಟು ಸದ್ಯಕ್ಕೆ ತಲೆದೋರುವ ಸಾಧ್ಯತೆ ಕಡಿಮೆ. ಆದರೆ ಉದ್ವಿಗ್ನತೆ ದೀರ್ಘಕಾಲ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಇಂಧನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳದಂತೆ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ಮತ್ತಷ್ಟು ತೀವ್ರಗೊಳ್ಳಬೇಕಿದೆ ಎಂದು ವಿಶ್ಲೇಷಕರು ಒತ್ತಿ ಹೇಳಿದ್ದಾರೆ.

You cannot copy content of this page

Exit mobile version