ವಿದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಉತ್ತೇಜಿಸುತ್ತಿದೆ. ಇದರ ಭಾಗವಾಗಿ, ಹೆಚ್ಚಿನ ಪ್ರಮಾಣದ ಇಥನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಕೇಂದ್ರ ಸರ್ಕಾರ ಕಡಿತಗೊಳಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಇ20 (20% ಇಥನಾಲ್ ಮಿಶ್ರಿತ) ಪೆಟ್ರೋಲ್‌ಗಿಂತ ಹೆಚ್ಚಿನ ಪ್ರಮಾಣದ ಇಥನಾಲ್ ಹೊಂದಿರುವ ಇ22, ಇ25, ಇ27 ಮತ್ತು ಇ30 ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಮತ್ತು ಕಂದಾಯ ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಉದಾಹರಣೆಗೆ, ಇ22 ಪೆಟ್ರೋಲ್ ಎಂದರೆ ಅದರಲ್ಲಿ ಶೇ 78 ರಷ್ಟು ಪೆಟ್ರೋಲ್ ಮತ್ತು ಶೇ 22 ರಷ್ಟು ಇಥನಾಲ್ ಇರುತ್ತದೆ.
ಗ್ರಾಹಕರಿಗೆ ಪೆಟ್ರೋಲ್ ದರ ಕಡಿಮೆ ಆಗುತ್ತಾ?: ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ, ಸಾಮಾನ್ಯ ಗ್ರಾಹಕರಿಗೆ ಸದ್ಯಕ್ಕೆ ಪೆಟ್ರೋಲ್ ದರದಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ. ಏಕೆಂದರೆ, ಈ ಸುಂಕ ವಿನಾಯಿತಿಯ ಲಾಭವನ್ನು ಸದ್ಯಕ್ಕೆ ತೈಲ ಉತ್ಪಾದನಾ ಕಂಪನಿಗಳು ಮಾತ್ರ ಪಡೆದುಕೊಳ್ಳುತ್ತಿವೆ. ಆ ಪ್ರಮಾಣದ ರಿಯಾಯಿತಿಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ.
ಅಲ್ಲದೆ, ಇಷ್ಟೊಂದು ಹೆಚ್ಚಿನ ಪ್ರಮಾಣದ ಇಥನಾಲ್ ಮಿಶ್ರಿತ ಪೆಟ್ರೋಲ್ ಸದ್ಯಕ್ಕೆ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ, ಇಷ್ಟು ಹೆಚ್ಚಿನ ಇಥನಾಲ್ ತಡೆದುಕೊಳ್ಳುವ ಸಾಮರ್ಥ್ಯವಿರುವ ವಾಹನಗಳು ಸದ್ಯ ಮಾರುಕಟ್ಟೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿವೆ. ಸಾಮಾನ್ಯ ವಾಹನಗಳಿಗೆ ಇಂತಹ ಪೆಟ್ರೋಲ್ ಬಳಸಿದರೆ ಇಂಜಿನ್ ಬೇಗನೆ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ಈಗ ‘ಫ್ಲೆಕ್ಸ್ ಫ್ಯುಯೆಲ್’ (Flex-Fuel) ವಾಹನಗಳನ್ನು ಮಾರುಕಟ್ಟೆಗೆ ತರಲು ಆರಂಭಿಸಿವೆ. ಸದ್ಯಕ್ಕೆ ಹೀರೋ ಕಂಪನಿಯು ‘ಹೀರೋ ಸ್ಪ್ಲೆಂಡರ್ ಪ್ಲಸ್’ ಮತ್ತು ‘ಹೀರೋ ಎಚ್‌ಎಫ್ ಡೀಲಕ್ಸ್’ ಮಾದರಿಗಳಲ್ಲಿ ಮಾತ್ರ ಇಂತಹ ಫ್ಲೆಕ್ಸ್ ಫ್ಯುಯೆಲ್ ವಾಹನಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ.
