Tuesday, May 7, 2024

ಸತ್ಯ | ನ್ಯಾಯ |ಧರ್ಮ

ಕಣ್ಣೀರು ಜಿನುಗಿಸಿದ ಕೊರಮ್ಮ ಮೂವಿ

ಶ್ರೀಮಂತ  ಬಡವ ಎಂಬ  ತಾರತಮ್ಯಗಳನ್ನು ಬಿಟ್ಟಾಗ ನಮ್ಮಲ್ಲಿ ಕೀಳರಿಮೆಗಳು ಉಂಟಾಗುವುದಿಲ್ಲ. ಕೂಲಿ ಕೆಲಸವನ್ನು ಮಾಡಿದರೆ ಏನಾಯಿತು? ಅವನಿಗೂ ಬದುಕುವ ಹಕ್ಕಿದೆ. ಎಲ್ಲರ ತರ ಅವನಿಗೂ ಜೀವನವಿರುತ್ತದೆ ಎಂಬೆಲ್ಲ ಸಂದೇಶಗಳನ್ನು ಕೊರಮ್ಮ ಸಿನೆಮಾ ನೀಡುವುದು ಖುಷಿ ನೀಡುತ್ತವೆ -ಲಾವಣ್ಯ ಪುತ್ತೂರು

ನನ್ನ ಮನಸ್ಸಿನ ಮೇಲೆ ಒಂದು ಕುತೂಹಲ ಮೂಡಿಸಿದ ಹಾಗೂ ಕಣ್ಣೀರು ತರಿಸಿದ ಮೂವಿಯೆಂದರೆ “ಕೊರಮ್ಮ” ಮೂವಿ. ಶಿವಧ್ವಜ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವಿದು. ಈ ಮೂವಿಯಲ್ಲಿ ನಿರ್ದೇಶಕರ ಮನೆಯಲ್ಲೇ  ಇದ್ದ ಒಬ್ಬ ಕೆಲಸದ ಹುಡುಗ ಅವರ ರೂಮ್ ನೋಡಲೆಂದು ಆಸೆ ಪಡುತ್ತಿದ್ದ. ಆದರೆ ಅವನದು ಕೆಳ ಜಾತಿಯಾದ್ದರಿಂದ ಅವನು ಮನೆಯೊಳಗೆ ಹೋಗುವಂತಿರಲಿಲ್ಲ. ಒಂದು ದಿನ ನಿರ್ದೇಶಕರಾದ ಶಿವಧ್ವಜ್  ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಅವನಿಗೆ ತನ್ನ ರೂಮ್ ತೋರಿಸಿದರು ಎಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಅವರು ಹಂಚಿಕೊಂಡಿದ್ದರು.

 ತುಳುನಾಡಿನಲ್ಲಿ  ನಡೆದ ನೈಜ ಘಟನೆಯೊಂದನ್ನು  ಚಿತ್ರದ ಮೂಲಕ ತೋರಿಸಿದ್ದಾರೆ. ತಮ್ಮ ಮನೆಯಲ್ಲಿ  ಕೆಲಸ ಮಾಡುವ ಕೆಲಸದವರನ್ನು  ನಾಯಿಗಿಂತ ಕೀಳಾಗಿ  ನೋಡುವ ಪ್ರಸಂಗಗಳನ್ನು  ನಮ್ಮ ಕಣ್ಣಾರೆ ನೋಡಿರುತ್ತೇವೆ. ಆದರೆ “ಕೊರಮ್ಮ” ಮೂವಿಯಲ್ಲಿ  ಕೊರಮ್ಮ ನ ಪಾತ್ರವನ್ನು ನೋಡಿದಾಗ, ಕಲಿಯುಗದಲ್ಲಿ  ಇಂತಹ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ ಅಂದರೆ ಅದು ತಪ್ಪಂತೂ ಆಗಲಾರದು. ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿ, ಯಾವುದೇ ರೀತಿಯಲ್ಲಿ ಮೋಸ ಮಾಡದೆ ತನ್ನ ಧಣಿಗಾಗಿ ಹಗಲಿರುಳು  ದುಡಿಯುವ ಸೇವಕನಾಗಿದ್ದಾನೆ ಕೊರಮ್ಮ.  ಒಬ್ಬ ಕೆಲಸದವನಾದರು  ಅವನಿಗೆ ಯಾವುದೇ ಭೇದ ಭಾವ ಮಾಡದೆ ತನ್ನ ಮನೆಯಲ್ಲಿ ಆತ ಒಬ್ಬನೆಂದು  ತಿಳಿದು, ಪ್ರೀತಿಯಿಂದ ನೋಡಿಕೊಳ್ಳುವ ಸನ್ನಿವೇಶವನ್ನು ಸಿನೆಮಾದಲ್ಲಿ ಕಾಣುತ್ತೇವೆ.

ಈ ಚಿತ್ರದಲ್ಲಿ ಕೊರಮ್ಮ ತಾನು ಸಾಯುವವರೆಗೂ  ತನ್ನ  ನಿಷ್ಠೆಯನ್ನು ಬಿಟ್ಟು ಕೊಡುವುದಿಲ್ಲ. ತನ್ನ ಧಣಿಯನ್ನು ಉಳಿಸಿಕೊಳ್ಳುವುದಕ್ಕಾಗಿ  ಕಾಡಿಗೆ ಹೋಗಿ ಔಷಧಿಗಳನ್ನು ತಂದುಕೊಡುತ್ತಾನೆ. ಅವನ ಕಾಲಿಗೆ ಮುಳ್ಳು ಚುಚ್ಚಿ ಗಾಯವಾದರೂ ಆ ನೋವನ್ನೆಲ್ಲ ಲೆಕ್ಕಿಸದೆ  ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ.

 ಕರಾವಳಿ ಭಾಗದಲ್ಲಿ  ಇಂತಹ ಸನ್ನಿವೇಶಗಳನ್ನು  ಪ್ರತಿನಿತ್ಯ ನೋಡಬಹುದು. ಸೌದೆಯ ಮೂಲಕ ಬೆಂಕಿ ಹಚ್ಚಿ ಅಡುಗೆ ಮಾಡುವುದು, ಅರೆಯುವ ಕಲ್ಲಿನ ಮೂಲಕ ತಿಂಡಿಗಳನ್ನು ತಯಾರಿಸುವುದು ಅಲ್ಲಿ ಸರ್ವೇಸಾಮಾನ್ಯ.  ತನ್ನ ಮಗ ದೂರದ ಊರಿನಲ್ಲಿ  ಇರುವುದರಿಂದ  ತಾಯಿಗೆ ಮಗನ ಮೇಲೆ ಹೆಚ್ಚಿನ ಒಲವು ಇರುತ್ತದೆ. ನಾವು ಈ ಚಿತ್ರದಲ್ಲಿ ತಾಯಿಯ ವಿಶೇಷ ಮಮತೆಯನ್ನೂ ಕಾಣಬಹುದು. ಮಗನಿಗೆ ಮದುವೆಯಾದ ಮೇಲೆ ಅತ್ತೆ ಸೊಸೆಯ ಉತ್ತಮವಾದ ಬಾಂಧವ್ಯವು ಸಮಾಜಕ್ಕೆ  ಒಳ್ಳೆಯ ಸಂದೇಶಗಳನ್ನು ನೀಡಿದಂತಾಗಿದೆ.

ಕೊರಮ್ಮನು ತನಗೆ ಮದುವೆಯಾದರೂ  ಹೆಂಡತಿಯನ್ನು ಲೆಕ್ಕಿಸದೆ ತನ್ನ ಧಣಿ ಯ ಮನೆಯನ್ನು ತನ್ನ ಮನೆ ಎಂದು ತಿಳಿದುಕೊಂಡು ಅಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ. ತನ್ನ ಧಣಿಯು ತೀರಿ ಹೋದ ನಂತರ  ಆತನಿಗೆ ತನ್ನ ಜೀವದ ಮೇಲೆ ಆಸೆ ಇರುವುದಿಲ್ಲ. ಧಣಿ ಯ ಮಗನಿಗೆ ಕೊರಮ್ಮನನ್ನು ಕಂಡರೆ ಆಗುತ್ತಿರಲಿಲ್ಲ. ಅವನು ಅಹಂಕಾರದಿಂದ ಮೆರೆಯುತ್ತಾ ಅವನಿಗೆ ಚಿತ್ರಹಿಂಸೆಯನ್ನು ಕೊಡುತ್ತಿದ್ದನು. ಕೆಳಜಾತಿ  ಆದ್ದರಿಂದ ಅವನ್ನು ಮುಟ್ಟಲು ಸಹ  ಹಿಂಜರಿಯುತ್ತಿದ್ದ. ಆದರೆ ಅದೆಲ್ಲವನ್ನು ಸಹಿಸಿಕೊಂಡು  ತನ್ನ ತಮ್ಮನಂತೆ  ಆತನನ್ನು ಕೊರಮ್ಮನು ಕಾಣುತ್ತಿದ್ದನು. ಧಣಿ ತೀರಿಹೋದ ನೋವಲ್ಲೇ ಕೊರಮ್ಮ ನೂ ತೀರಿಹೋದ. ಧಣಿ ಯ ಹೆಂಡತಿ ತನ್ನ ಮಗನನ್ನು ಕರೆದು  ಬುದ್ಧಿವಾದ ಹೇಳಿದ ನಂತರ  ಅವನು ಕೂಡ ಬದಲಾದ. ತನ್ನ ಸೊಸೆಗೆ  ಎದೆಯಲ್ಲಿ ಹಾಲು ಇಲ್ಲವೆಂದಾಗ ಕೊರಮ್ಮ ನ ಹೆಂಡತಿಯ ಎದೆ ಹಾಲನ್ನು ನೀಡುವ ಸನ್ನಿವೇಶವನ್ನು ನೋಡಿದಾಗ  ಕಣ್ಣಲ್ಲಿ ನೀರು ಉಕ್ಕಿ ಬರುತ್ತದೆ. ಎಲ್ಲರ ರಕ್ತ ಒಂದೇ ಆದರೂ, ಎದೆಯಲ್ಲಿ ಬರುವ  ಹಾಲಿನ ಬಣ್ಣ ಒಂದೇ ಆದರೂ, ಕೇವಲ ಜಾತಿಗೋಸ್ಕರ ಹೊಡೆದಾಡುವ ಪರಿಸ್ಥಿತಿ ಈಗ ಬಂದಿದೆ! 

ತನ್ನ ಸ್ವಾರ್ಥಕೋಸ್ಕರ  ಕೆಳಜಾತಿಯವರ  ಬದುಕನ್ನೇ ನಾಶ ಮಾಡುವ  ಸನ್ನಿವೇಶಗಳೂ ಬರುತ್ತವೆ. ಆದರೆ ಕೊರಮ್ಮ ಮೂವಿಯಲ್ಲಿ ಕೊರಮ್ಮನಿಗೂ ಅವನ ಧಣಿ ಹತ್ತಿರವೇ  ಸಮಾಧಿಯನ್ನು ಕಟ್ಟುತ್ತಾರೆ. ಇದೆಲ್ಲವನ್ನು ನೋಡಿದಾಗ  ಸಮಾಜದಲ್ಲಿ ಈ ರೀತಿಯಾಗಿ  ಬದಲಾವಣೆಯಾದಾಗ, ಜಾತಿಗಳಲ್ಲಿ ಭೇದಭಾವ ಇರುವುದಿಲ್ಲ. ಶ್ರೀಮಂತ  ಬಡವ ಎಂಬ  ತಾರತಮ್ಯಗಳನ್ನು ಬಿಟ್ಟಾಗ ನಮ್ಮಲ್ಲಿ ಕೀಳರಿಮೆಗಳು ಉಂಟಾಗೋದಿಲ್ಲ. ಕೂಲಿ ಕೆಲಸವನ್ನು ಮಾಡಿದರೆ ಏನಾಯಿತು. ಅವನಿಗೂ ಬದುಕುವ ಹಕ್ಕಿದೆ. ಎಲ್ಲರ ತರ ಅವನಿಗೂ ಜೀವನವಿರುತ್ತದೆ ಎಂಬೆಲ್ಲ ಸಂದೇಶಗಳು ಖುಷಿ ನೀಡುತ್ತವೆ. ಮನುಷ್ಯನಿಗೆ ಬದುಕಲು  ಬಟ್ಟೆಬರೆಯ ಜೊತೆ ಒಂದಿಷ್ಟು ಪ್ರೀತಿ ಸಿಕ್ಕಿದರೆ ಅವನ ಜೀವನ ಸಾರ್ಥಕವಾಗುತ್ತದೆ. ಇತರರನ್ನು ಪ್ರೀತಿಯಿಂದ ಕಂಡಾಗ ಮಾತ್ರ ಅವನ ಬದುಕಿಗೊಂದು ಅರ್ಥ ಸಿಗುತ್ತದೆ.

ಕರಾವಳಿ ಭಾಗದಲ್ಲಿ ಪರಂಪರೆಯಿಂದ ಬಂದಂತಹ ಆಚರಣೆಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅದನ್ನು ಕೊರಮ್ಮ ಚಿತ್ರ ದಲ್ಲಿ ಮತ್ತೊಮ್ಮೆ ಸಾದರಪಡಿಸಿದ್ದಾರೆ.

 ನಿಜ ಜೀವನದಲ್ಲಿ  ಇಂತಹ ಸನ್ನಿವೇಶಗಳನ್ನು ಕಂಡಾಗ  ಕೆಲವೊಂದು ಬಾರಿ  ನಮಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರಬಹುದು ಆದರೆ, ಇಂತಹ ಮೂವಿಗಳನ್ನು ಮಾಡಿದಾಗ  ಜನರಿಗೆ ಅದು ಬೇಗನೆ ತಲುಪುತ್ತದೆ. ಕರಾವಳಿ ಭಾಗದ ಸಂಸ್ಕೃತಿಯನ್ನು ತೋರಿಸಿದಾಗ  ತುಳುನಾಡಿನ  ವೈಭವವನ್ನು ಇನ್ನೂ ಹೆಚ್ಚಿಸಿದಂತಾಗುತ್ತದೆ. ಮನಸ್ಸಿಗೆ ತಾಕುವಂತಹ  ಮೂವಿಗಳನ್ನು ನೋಡಿದಾಗ, ಅದರಲ್ಲಿ ಕೆಲವೊಂದು ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎನಿಸುತ್ತದೆ. ತಮ್ಮ ತಮ್ಮ ಅನುಭವಗಳನ್ನು  ಚಿತ್ರದ ಮೂಲಕ ತೋರಿಸುವುದರಿಂದ  ಅದು ಜನರಿಗೆ ಬೇಗನೆ  ತಲುಪಬಹುದು. ಕೊರಮ್ಮನಂತಹ ಹಲವಾರು ವ್ಯಕ್ತಿಗಳು ಇರುತ್ತಾರೆ.

ಇಂತಹ ಮೂವಿಯನ್ನು  ತೆರೆಯ ಮುಂದಿಟ್ಟ  ನಿರ್ದೇಶಕರಾದ ಶಿವಧ್ವಜ್  ಶೆಟ್ಟಿಯವರಿಗೆ  ಧನ್ಯವಾದಗಳು. ಈ ಸಿನೆಮಾವು ತುಳುನಾಡಿನಲ್ಲಿ ಆಗುವಂತಹ  ಘಟನೆಗಳನ್ನು  ಎಲ್ಲೆಡೆ  ಪಸರಿಸಿ ಅದು ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ.

ಲಾವಣ್ಯ, ಪುತ್ತೂರು

ಪತ್ರಿಕೋದ್ಯಮ ವಿದ್ಯಾರ್ಥಿನಿ

ಓದಿ- ಪ್ರೀತಿ-ಸೌಹಾರ್ದತೆಯ ಒರತೆಯನ್ನು ತಲುಪುವ ಬಹುದೂರದ ದಾರಿಯಲ್ಲಿನ ಒಯಸಿಸ್:’ಡೇರ್ ಡೆವಿಲ್ ಮುಸ್ತಾಫಾ’

Related Articles

ಇತ್ತೀಚಿನ ಸುದ್ದಿಗಳು