Friday, August 16, 2024

ಸತ್ಯ | ನ್ಯಾಯ |ಧರ್ಮ

ಎದೆಯಂಗಳಕ್ಕೆ ಇಳಿದ ಮಿನುಗು ತಾರೆ

ಕಲ್ಪನಾ ಕೇವಲ ಅಭಿನೇತ್ರಿ ಮಾತ್ರವಲ್ಲ.. ವಿಪರೀತ ಭಾವುಕತೆಯ ಅವರು ಚಂದದ ಕವಿತೆಗಳನ್ನೂ ಬರೆಯುತ್ತಿದ್ದರಂತೆ. ಸಾಹಿತ್ಯದ ಬಹಳಷ್ಟು ಕೃತಿಗಳನ್ನು ಓದುವ ಹವ್ಯಾಸವೂ ಇತ್ತು

“ಬದುಕಿಗೆ ಭಾವುಕತೆ ಬೇಕು ಆದರೆ ಭಾವುಕತೆಯೇ ಬದುಕಲ್ಲ” ಅನ್ನುವುದೊಂದು ಮಾತಿದೆ. ಅತಿಯಾದ ಭಾವುಕತೆಯಿಂದಲೇ ಬದುಕನ್ನು ಅಂತ್ಯಗೊಳಿಸಿಕೊಂಡ ಕಲ್ಪನಾ ನನ್ನ ಕಣ್ಣಲ್ಲಿ ಅಚ್ಚಳಿಯದೇ ಉಳಿದಿದ್ದು ಶರಪಂಜರದ ಕಾವೇರಿಯಾಗಿ, ಎರಡು ಕನಸಿನ ಗೌರಿಯಾಗಿ. ಬಿಟ್ಟೂ ಬಿಡದೆ ಕೈಗೆ ಸಿಕ್ಕ ಅವರ ಎಲ್ಲಾ ಚಿತ್ರಗಳನ್ನು ನೋಡುವ, ಆನಂದಿಸುವ ಸಂಭ್ರಮವೇ ಬೇರೆ.

“ಬೆಳ್ಳಿಮೋಡದ ಅಂಚಿನಿಂದ ಮೂಡಿಬಂದಾ ಮಿನುಗುತಾರೆ” ಹಾಡು ಕೇಳಿದಾಗಲೆಲ್ಲ ಕಲ್ಪನಾ ನೆನಪಾಗುತ್ತಾರೆ.
ನೀಳ ಶರೀರ, ಕೋಲು ಮುಖ, ಉದ್ದನೆಯ ಕತ್ತು ಅದರ ಮೇಲೊಂದು ಕುಂಕುಮದಷ್ಟಗಲ ಮಚ್ಚೆ, ಒಪ್ಪ ಓರಣವಾಗಿ ತಿದ್ದಿ ತೀಡಿದ ಹುಬ್ಬು, ಭಾವನೆಗಳನ್ನೆಲ್ಲ ಭಿತ್ತರಿಸಿಬಿಡುವೆ ಅನ್ನುವಂತಿದ್ದ ಆ ಕಮಲದಂಥ ಕಣ್ಣುಗಳು, ಆಗಾಗ ಕಿವಿಯ ಹಿಂಭಾಗದ ತಲೆ ತುರಿಸಿಕೊಳ್ಳುವಂಥಾ ನೋಟ, ಆಹಾ! ನನಗೆ ಕಲ್ಪನಾ ಯಾಕಷ್ಟು ಆವರಿಸಿಕೊಂಡಿದ್ದಾರೋ ತಿಳಿಯದು. ನನ್ನ ಮಾತು ನಗು, ನೋಟ, ಎಲ್ಲವುಗಳಲ್ಲಿ ಕಲ್ಪನಾ ಅವರನ್ನು ನೆನಪು ಮಾಡಿಕೊಂಡವರೇ ಹೆಚ್ಚು. ಅದು ನನಗೂ ಖುಷಿ.

“ರೀ.. ಶಾಂತಮ್ಮ, ಕಾವೇರಿ ಹುಚ್ಚಿಯಂತೆ ಕಣ್ರೀ. .” ಅಂತ ಹೇಳುತ್ತಾ ಕೈಗೆ ಸಿಕ್ಕಿದ್ದನ್ನೆಲ್ಲಾ ಎಸೆದು ಅಳು, ನಗು ಒಟ್ಟೊಟ್ಟಾಗಿ ಆವರಿಸಿ ಕಾವೇರಿಯಾಗಿ ಪರಕಾಯ ಪ್ರವೇಶ ಮಾಡಿದ ಆ ಸಂದರ್ಭವಿದೆಯಲ್ಲ.. ಆಹ್ .. ಅಂಥದೊAದು ಅಭಿನಯಕ್ಕೆ ಅವರಿಗೆ ಅವರೇ ಸಾಟಿ. ನಾನು ಹೇಳಿಕೇಳಿ ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿದ್ದ ಕಾರಣಕ್ಕೋ ಏನೋ ಕಲ್ಪನಾ ಮತ್ತು ಅಣ್ಣಾವ್ರ ಜೋಡಿ ನನಗೆ ಬಹಳ ಇಷ್ಟವಾಗುತ್ತಿತ್ತು. ಅಣ್ಣಾವ್ರ ಜೊತೆಗೆ ಗಂಧದಗುಡಿ, ಎರಡು ಕನಸು, ದಾರಿ ತಪ್ಪಿದ ಮಗ ಹೀಗೆ ಬೆರಳೆೆಣಿಕೆಯಷ್ಟೇ ಚಿತ್ರಗಳಲ್ಲಿ ನಟಿಸಿದರೂ ಸಹ ಅದದನ್ನೇ ಮತ್ತೆ ಮತ್ತೆ ನೋಡುವ ಖುಷಿ ನನ್ನದು.

ಕಲ್ಪನಾ ಕೇವಲ ಅಭಿನೇತ್ರಿ ಮಾತ್ರವಲ್ಲ.. ವಿಪರೀತ ಭಾವುಕತೆಯ ಅವರು ಚಂದದ ಕವಿತೆಗಳನ್ನೂ ಬರೆಯುತ್ತಿದ್ದರಂತೆ. ಸಾಹಿತ್ಯದ ಬಹಳಷ್ಟು ಕೃತಿಗಳನ್ನು ಓದುವ ಹವ್ಯಾಸವೂ ಇತ್ತೆಂಬುದನ್ನು ಅವರ ಬಗ್ಗೆ ಬರೆದ ಕೃತಿಯಲ್ಲಿ ದಾಖಲಿಸಲಾಗಿದೆ.

೧೯೬೩ ರಿಂದ ೧೯೭೮ ರವರೆಗಿನ ೧೫ ವರ್ಷಗಳಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಸುಮಾರು ೭೮ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಮಿನುಗುತಾರೆಯಾಗಿ ಮೆರೆದದ್ದು ನಿಜಕ್ಕೂ ಸಾಹಸವೇ. ಮೂರು ಚಿತ್ರಗಳ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನೂ ಧರಿಸಿದ ಸರಳ ಸುಂದರಿಯ ರಾಗಬದ್ಧವಾದ ಮಾತು, ಒಪ್ಪವಾದ ಉಡುಗೆ, ಪುಟ್ಟ ಸೆರಗು, ತುಂಬುತೋಳಿನ ರವಿಕೆ ಎಲ್ಲವೂ ಅವತ್ತಿಗೆ ಕಲ್ಪನಾ ಟ್ರೆಂಡ್ ! ಕೇವಲ ಮುವತ್ತಾರನೇ ವಯಸ್ಸಿನಲ್ಲಿ ಈ ಲೋಕದಿಂದ ತೆರಳಿದ ಕಲ್ಪನಾ ಅವರ ಅಭಿನಯ ಚಾತರ‍್ಯವನ್ನು ಯಾರಾದರೂ ಮರೆಯಲು ಸಾಧ್ಯವೇ? ಇಂದು ಎನಗೆ ಗೋವಿಂದಾ ಹಾಡನ್ನು ಹಾಡ್ತಾ ಹಾಡ್ತಾ ಕಣ್ಣಿರಾಗುತ್ತಲೇ ನಮ್ಮ ಕಣ್ಣಂಚಿನಲ್ಲಿ ನೀರು ತರಿಸುವಂಥ ಅಭಿನಯ ಚತುರೆಯನ್ನು ಹೇಗಾದರೂ ಮರೆಯಲಾದೀತು?
ಅವರಿದ್ದಿದ್ದರೆ ಅವರಿಗೆ ಈಗ ೮೧ ವರ್ಷ ವಯಸ್ಸಾಗುತ್ತಿತ್ತು. ಈ ಭೂಮಿಯಿಂದ ಬೇಗನೇ ಹೋಗುವವರಿಗೆಲ್ಲ ಎಂದೂ ವಯಸ್ಸೇ ಆಗುವುದಿಲ್ಲ ಅಲ್ಲವೇ! ಚಿರಯೌವ್ವನೆ ಕಲ್ಪನಾ ನಮ್ಮ ಮನದಂಗಳದಲ್ಲಿ ಸದಾ “ತೆರೆಯೋ ಬಾಗಿಲನು ರಾಮಾ” ಎನ್ನುತ್ತ ನೀರು ಸೋರುತ್ತಿರುವ ಕಟ್ಟಿದ ಗುಂಗುರು ಕೂದಲನ್ನು ಇಳಿಬಿಟ್ಟ ಜವ್ವನೆ. “ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದಾ” ಅನ್ನುತ್ತಾ ಮುಂಜಾವಿನ ಸೂರ್ಯ ರಶ್ಮಿಯನ್ನು ಕಣ್ಣಿಗಿಳಿಸಿಕೊಂಡ ಅಭಿನೇತ್ರಿ. “ಇಂದು ಎನಗೆ ಗೋವಿಂದಾ” ಹಾಡನ್ನು ಹಾಡ್ತಾ ಹಾಡ್ತಾ ಕಣ್ಣಿರಾಗುತ್ತಲೇ ನಮ್ಮ ಕಣ್ಣಂಚಿನಲ್ಲಿ ನೀರು ತರಿಸಿದ ಅಭಿನಯ ಚತುರೆ. “ಗಗನವು ಎಲ್ಲೋ ಭೂಮಿಯು ಎಲ್ಲೋ” ಎನ್ನುತ್ತಾ ಹಳದೀ ಸೀರೆಯುಟ್ಟು ನೀಳ ಕೈಗಳನ್ನು ಚಾಚಿ ಮರದ ಕೊಂಬೆ ಹಿಡಿದು ಮನದರಸನನ್ನು ಆರಾಧಿಸುವ ಕಿನ್ನರಿ. “ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ ಆನಂದದ ಹೊಳೆ ಅನುರಾಗದ ಮಳೆ ಎಂದೆಂದು ಚಿಮ್ಮುತಿರಲಿ..” ಅನ್ನುತ್ತಾ ಮಡಿಚಿಟ್ಟ ಮಂಡಿಯ ಮೇಲೆ ತಲೆಯಾನಿಸಿ ಕುಳಿತ ಮುದ್ದು ಹುಡುಗಿ.. ನನ್ನ ಒಲವಿನ ಮಿನುಗುತಾರೆ! ನಾವಿರುವವರೆಗೆ ನಾಡಿರುವವರೆಗೆ ನಿಮ್ಮಿರವು ಶಾಶ್ವತ. ನಿಮ್ಮ ನೆನಪು ಚಿರಂತನ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page