Saturday, June 15, 2024

ಸತ್ಯ | ನ್ಯಾಯ |ಧರ್ಮ

‘ದಲಿತ್ ಹೈ ಕ್ಯಾ? ಉದರ್ ಜಾವೋರೇ’

ಒಂದು ಕಡೆ ಒಬ್ಬ ಅಂಗಡಿಯವನ ಬಳಿ ಚೈತ್ಯಭೂಮಿಗೆ ದಾರಿ ಕೇಳಿದಾಗ ಆತ ದಾರಿ ಹೇಳುವ ಬದಲು ‘ದಲಿತ್ ಹೈ ಕ್ಯಾ? ಉದರ್ ಜಾವೋರೆ’ ಎಂದು ತಪ್ಪುದಾರಿಯನ್ನು ತೋರಿಸಿದ್ದ. ಇಂಥಹ ಅಸಹನೆಗಳೆಲ್ಲ ಬಾಬಾಸಾಹೇಬರ ಪರ ಇರುವವರ ಬಗ್ಗೆ ಸಹಜವೇ ಎಂದು ನೊಂದು ನುಡಿಯುವ ರಂಗಭೂಮಿ ನಟ ಮನೋಜ್‌, ಅಂಬೇಡ್ಕರ್‌ ಅವರ ಚೈತ್ಯಭೂಮಿಯನ್ನು ನೋಡಲು ಹೋದಾಗಿನ ತಮ್ಮ ಅನುಭವವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.  

ಮಹಾನಗರಿಯ ಫೆಬ್ರವರಿ ತಂಪು ಚಳಿಯಲ್ಲಿ, ಭಾನುವಾರದ ಬೆಳಿಗ್ಗೆ ಒಲ್ಲದ ಮನಸಿನಲ್ಲಿ ಹಾಸಿಗೆಯಿಂದ ಏಳಲೋ ಬೇಡವೋ ಎಂದು ಮಗ್ಗುಲು ಬದಲಿಸಿ ಕಣ್ಣು ಬಿಡುವಷ್ಟರಲ್ಲಿ ಗಂಟೆ 9:00 ಆಗಿತ್ತು. ನಿತ್ಯ ಕರ್ಮಗಳನ್ನು ಮುಗಿಸಿ ಪೂರ್ವ ನಿಗದಿಯಂತೆ ಆ ಜಾಗಕ್ಕೆ ತಲುಪಲು ಅಣಿ ಆದೆ. ಆಗ ತಾನೆ ಬಂದ ದೊಡ್ಡ ಹಡಗುಗಳ ಸೈರನ್‌ ಒಂದು ಕಡೆ, ಅಲ್ಲೇ ಟೀ ಅಂಗಡಿಯಲ್ಲಿ ಕೇಳುತ್ತಿದ್ದ ಹಳೆಯ ಹಿಂದಿಯ ಹಾಡು ಇನ್ನೊಂದು ಕಡೆ. ನಾನು ತಂಗಿದ್ದ ಹೋಟೆಲ್ ಇದ್ದದ್ದು ಕುಲಬದಲ್ಲಿ. ಅಲ್ಲೇ ಭಾರತೀಯ ನೌಕಾನೆಲೆ ಇರುವುದು. ರಜೆಯಾದ ಕಾರಣ ದಾರಿಯಲ್ಲಿ ಅಷ್ಟೇನೂ ವಾಹನಗಳು ಇರಲಿಲ್ಲ. ಬ್ರಿಟಿಷರ ಸಮಯದಲ್ಲಿ ಕಟ್ಟಿದ ಬೃಹತ್ ಕಟ್ಟಡಗಳನ್ನು ನೋಡುತ್ತಾ, ಛತ್ರಪತಿ ಶಿವಾಜಿ ಟರ್ಮಿನಲ್ ಗೆ ಬರುವಷ್ಟರಲ್ಲಿ ಆಗಲೇ 10:30. ಅಲ್ಲೇ ಒಂದು ಫಲಕದಲ್ಲಿ ಇದರ ಮಾಹಿತಿ ನೋಡಿ, 1878 ರಲ್ಲಿ ಕಟ್ಟಿದ ಈ ಬೃಹತ್ ಕಟ್ಟಡ ಈಗಲೂ ಚಂದವಾಗಿ, ವಿರಾಜಮಾನವಾಗಿ ನಿಂತಿದ್ದನ್ನು ನೋಡಿ ಖುಷಿಪಟ್ಟೆ. ಹಾಗೆಯೇ ನಮ್ಮ ಈಗಿನ ಕಟ್ಟಡ, ಸೇತುವೆಗಳು ಕಟ್ಟಿ ಒಂದೆರಡು ವರ್ಷಗಳಲ್ಲೆ ಬಿದ್ದೋಗುವುದು ನೆನಪಿಗೆ ಬಂತು.

ಚೈತ್ಯಭೂಮಿಯ ಪ್ರವೇಶ ದ್ವಾರ

ಆ ಜಾಗವೇ ಮುಂಬೈ. ಜನ ಜಂಗುಳಿ, ಬಹು ಸಂಸ್ಕೃತಿ, ಕಿಕ್ಕಿರಿದ ರೈಲು ಬಸ್ಸುಗಳು, ಬಡತನ, ಸಿರಿತನ ಎಲ್ಲವೂ ಒಟ್ಟಾದ ಸ್ಥಳ ಅದು. ಎತ್ತ ನೋಡಿದರು ಜನ ತಾವಾಯಿತು ತಮ್ಮ ಕೆಲಸವಾಯಿತು ಎಂದು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ದೌಡಯಿಸುವುದು ಸಾಮಾನ್ಯವಾಗಿರುವ ದೃಶ್ಯ. ಅಲ್ಲಿಯವರ ಸಮಯ ಪ್ರಜ್ಞೆ, ನಿಷ್ಠೆ, ಅವರು ಸಮಯಕ್ಕೆ ಕೊಡುವ ಪ್ರಾಶಸ್ತ್ಯ, ಎಲ್ಲಕ್ಕಿಂತ ಮಿಗಿಲಾಗಿ ಬದುಕು ಕಟ್ಟಿಕೊಳ್ಳುವ ಅವರ ತವಕ ಅಸಾಧಾರಣವಾದುದು. ಮರೀನ್ ಡ್ರೈವಿನಲ್ಲಿ ಬಂದಪ್ಪಳಿಸುವ ಅಲೆಯನ್ನು ದಿಟ್ಟಿಸಿ ಕೂತ ಅದೆಷ್ಟೋ ಪ್ರೇಮಿಗಳು ಒಂದೆಡೆಯಾದರೆ, ನಾಳೆ ಹೇಗೆ ಬದುಕು ಸಾಗಿಸುವುದು ಎಂಬ ಯೋಚನೆಯ ಅದೆಷ್ಟೋ ಶ್ರಮಿಕರು ಇನ್ನೊಂದೆಡೆ. ಅರಮನೆಯಲ್ಲಿ ಬದುಕುವವರೂ ಸಿಗುತ್ತಾರೆ, ದಾರವಿಯಲ್ಲಿ ಹಸಿದು ಮಲಗುವವರೂ ಇದ್ದಾರೆ ಎಂಬುದೇ ಇಲ್ಲಿಯ ವಿಪರ್ಯಾಸ. ಬಾಂಬೆ ಅಲಿಯಾಸ್ ಮುಂಬೈ ಒಂದು ಕೌತುಕವೇ ಸರಿ.

ಹಲವು ಪ್ರೇಕ್ಷಣೀಯ ಜಾಗಗಳನ್ನು ನೋಡಿದ್ದ ನಾನು ʼಚೈತ್ಯ ಭೂಮಿʼ ಯನ್ನು ನೋಡಲು ನಿರ್ಧರಿಸಿದ್ದರಿಂದ ಅಂದು ಬೆಳಗ್ಗೆ ಲೋಕಲ್ ಟ್ರೈನ್ ಹಿಡಿದು ದಾದರ್ ಕಡೆ ನಡೆದೆ. ಹಲವು ಸಮಾಧಿಗಳು, ಗೋರಿಗಳನ್ನು ನೋಡಿದ ನನಗೆ, ಇಡೀ ಜೀವನವನ್ನೇ ಓದು, ಹೋರಾಟ, ಬಾಯಾರಿದ ಪ್ರತಿ ಬಾಯಿಗೂ ನೀರು ಸಿಗಬೇಕು ಎಂದು ದನಿಯಿಲ್ಲದವರ ಪರ ಚಳುವಳಿಗಳಲ್ಲಿ ಕಳೆದ ಮಹಾ ಚೇತನ, ಸಮಾನತೆ ಸಾರಿದ ಹರಿಕಾರ ಅಂಬೇಡ್ಕರ್ ಅವರು ಶಾಶ್ವತವಾಗಿ ನಿದ್ರಿಸುತ್ತಿರುವ ಆ ಜಾಗವನ್ನು ನೋಡಲು ಕುತೂಹಲ ಇನ್ನಷ್ಟೂ ಹೆಚ್ಚುತ್ತಿತ್ತು. ನಮ್ಮ ಪಠ್ಯಪುಸ್ತಕಗಳಿಂದ ಅಂಬೇಡ್ಕರ್ ಅವರ ಬಗ್ಗೆ ಬಹಳ ಕಡಿಮೆ ತಿಳಿದಿದ್ದ ನಾನು ರಂಗಭೂಮಿ ಗೆಳೆಯರಿಂದ ಹಲವು ವಿಷಯಗಳನ್ನು ತಿಳಿದುಕೊಂಡಾಗ ಸಂವಿಧಾನವನ್ನು ರಚಿಸಿದವರನ್ನು ಎಷ್ಟು ವೈಭವದಿಂದ ಇರಿಸಿದ್ದಾರೆ ಎಂದು ನೋಡುವ ಆಸೆ ಮತ್ತಷ್ಟೂ ಗರಿಗೆದರಿತು.

ದಾರಿ ಉದ್ದಕ್ಕೂ ಹಲವು ದೌರ್ಜನ್ಯಗಳು, ಹೋರಾಟಗಳು ನೆನಪಿಗೆ ಬಂದವು. ಕೆಲವೇ ದಿನಗಳ ಹಿಂದೆ ನಮ್ಮ ಊರಿನ ಸಮೀಪವಿರುವ ದಿಂಡಗೂರಿನಲ್ಲಿ ಗೆಳೆಯ ಸಂತೋಷರಿಗೆ ಹೋಟೆಲ್ ಪ್ರವೇಶ ನಿರಾಕರಣೆ ಮಾಡಿದ್ದರಿಂದ, ಆ ತಾರತಮ್ಯದ ವಿರುದ್ಧ ಅವರು ಧ್ವನಿಯೆತ್ತಿದ್ದರು. ಹೋಟೆಲಿಗೆ ಬೀಗ ಜಡಿಯುವಂತೆ ಮಾಡಿದ್ದರು. ಈ ಕೆಟ್ಟ ಜಾತಿ ತಾರತಮ್ಯವನ್ನು ಇಲ್ಲಿಗೆ ನಿಲ್ಲಿಸಲು, ಸ್ಥಳೀಯರ ಜೊತೆ ಸೇರಿ ಆ ಊರಿನ ದೇವಸ್ಥಾನ ಪ್ರವೇಶ ಮಾಡಿದರು. ಈ ನಡೆಯಿಂದ ಊರಿನ ಮೇಲ್ಜಾತಿ ಎಂದು ಕರೆಯಲ್ಪಡುವವರು ದಲಿತ ಕೇರಿಯವರೆಲ್ಲರನ್ನು ಸಾಮೂಹಿಕ ಬಹಿಷ್ಕಾರ ಮಾಡಿದರು. ಎಷ್ಟೇ ಬಿಗಿಯಾದ ಕಾನೂನುಗಳು ಇದ್ದರೂ ಇಂತಹ ಹಲವು ಪ್ರಕರಣಗಳು ನಮ್ಮ ಮುಂದೆ ಬರುತ್ತಿರುತ್ತವೆ. ಇನ್ನು ಅಂಬೇಡ್ಕರ್ ಅವರ ಸಮಯದಲ್ಲಿ ಎಂಥ ಪರಿಸ್ಥಿತಿ ಇತ್ತು ಎಂದು ಯೋಚಿಸಲು ಸಹ ಕಷ್ಟವಾಗುತ್ತದೆ. 

ಚೈತ್ಯಭೂಮಿಯ ಒಳಗೆ ಬುದ್ಧ, ಅಂಬೇಡ್ಕರ್

ಅಂತೂ ತುಂಬಿದ ಲೋಕಲ್ ಟ್ರೈನ್ ಇಳಿದು ನನ್ನ ಆಲೋಚನೆಗಳ ಸರಪಳಿಯಿಂದ ಬಿಡಿಸಿಕೊಂಡು ಚೈತ್ಯಭೂಮಿ ಕಡೆ ನಡೆದೆ. ಅಲ್ಲಲ್ಲಿ ಕೆಲವರನ್ನು ದಾರಿ ಕೇಳುತ್ತಾ ನಡೆದೆ. ಗೂಗಲ್ ಮ್ಯಾಪ್ ಇರಲಿಲ್ಲವೇ ಎಂದು ನೀವು ಕೇಳಬಹುದು. ಇತ್ತು. ಅದರೂ ಸ್ಥಳೀಯರ ಜೊತೆ ಮಾತನಾಡುತ್ತ ನಡೆಯುವುದೇ ನನಗೆ ಬೇಕಿತ್ತು. ಹೀಗೆ ನಡೆದಾಗ ನನಗೆ ಸಿಕ್ಕ ಅನುಭವ ಮಾತ್ರ ಎಂದೂ ಮರೆಯಲಾರದ್ದು. ಒಂದು ಕಡೆ ಒಬ್ಬ ಅಂಗಡಿಯವನ ಬಳಿ ಚೈತ್ಯಭೂಮಿಗೆ ದಾರಿ ಕೇಳಿದಾಗ ಆತ ದಾರಿ ಹೇಳುವ ಬದಲು ‘ದಲಿತ್ ಹೈ ಕ್ಯಾ? ಉದರ್ ಜಾವೋರೆ’ ಎಂದು ತಪ್ಪುದಾರಿಯನ್ನು ತೋರಿಸಿದ್ದ. ಇಂಥಹ ಅಸಹನೆಗಳೆಲ್ಲ ಬಾಬಾಸಾಹೇಬರ ಪರ ಇರುವವರ ಬಗ್ಗೆ ಸಹಜವೇ.

ಅಶೋಕ ಸ್ತಂಭ

ಅಂತೂ ಚೈತ್ಯ ಕಮಾನು ನನ್ನನ್ನು ಬರಮಾಡಿಕೊಂಡಿತು. ನನ್ನಂತೆ ನೂರಾರು ಜನರು ಅಲ್ಲಿಗೆ ಬಂದಿದ್ದರು. ‘ದಾದರ್ ಚೌಪಾಟ್ಟಿ’ ಸಮುದ್ರದ ಪಕ್ಕದಲ್ಲೇ ಇರುವ ಜಾಗದಲ್ಲಿ ಬೌದ್ಧ ಧರ್ಮನುಸಾರ ಚೈತ್ಯವನ್ನು ಕಟ್ಟಿಸಿದ್ದಾರೆ. ಇನ್ನೂ ಹತ್ತಿರ ಹೋದಾಗ ಕಮಟು ವಾಸನೆ ಬರುತ್ತಿತ್ತು. ಏನು ಎಂದು ಸುತ್ತಲೂ ನೋಡಿದರೆ, ಅಲ್ಲೇ ಪಕ್ಕದಲ್ಲಿ ಹೆಣ ಸುಡುತ್ತಿದ್ದರು. ಅಲ್ಲಿಗೆ ಅಂಬೇಡ್ಕರ್ ಅವರು ಚಿರ ನಿದ್ರೆಯಲ್ಲಿರುವ ಜಾಗವನ್ನು ನೋಡಲು ಇದ್ದ ನನ್ನ ಕುತೂಹಲ ಜರ್ರನೆ ಇಳಿಯಿತು. ಜಗತ್ತಿನ ಶ್ರೇಷ್ಠ ಚಿಂತಕ, ಸಮಾಜ ಸುಧಾರಕನಿಗೆ ನೀಡಿದ ಗೌರವ ನೋಡಿ ನನ್ನ ಮನ ವಿಲ ವಿಲ ಒದ್ದಾಡಿತು.ಕೊನೆಗೂ ಚೈತ್ಯ ಭೂಮಿಯ ಬೌದ್ಧರ ಗುಮ್ಮಟಾಕಾರದ ಸ್ಮಾರಕ ಮಂದಿರದ ಒಳಗೆ ಹೋಗಿ, ಬಾಬಾಸಾಹೇಬರಿಗೆ ನಮಿಸಿ ಬಂದೆ. ಮತ್ತೆ ಅದೇ ದಾರಿಯಲ್ಲಿ ಲೋಕಲ್‌ ಟ್ರೈನ್‌ ಹಿಡಿದು ನಾನು ಉಳಿದುಕೊಂಡಿದ್ದ ಹೋಟೆಲ್ ಕಡೆ ನಡೆದೆ. ಅಸಮಾನತೆಯ ಕಿಡಿ ಇನ್ನೂ ಎಷ್ಟೋ ಜನರನ್ನು ದಹಿಸುತ್ತಿದೆ. ಎಷ್ಟು ಪ್ರಗತಿ ಸಾಧಿಸಿದರೆ ಏನು ಬಂತು- ದಲಿತರನ್ನು ಬೆಕ್ಕು, ನಾಯಿಗಳಿಗಿಂತ ಕೀಳಾಗಿ ನೋಡುವಾಗ..!? 

ಇನ್ನೂ ಎಷ್ಟು ಅಂಬೇಡ್ಕರರು ಬರಬೇಕು ಈ ಕ್ರೌರ್ಯವನ್ನು ನಿಲ್ಲಿಸಲು? ಊರಿನ ಕೆರೆಯ ನೀರನ್ನು ಕುಡಿಯಲು? ದೇವಸ್ಥಾನದೊಳಗೆ ಹೋಗಲು? ಉತ್ತಮ ಬಟ್ಟೆಯನ್ನು ಹಾಕಲು? ಈ ಜಾತಿ ಅಸಮಾನತೆಯಿಂದ ನಡೆಯುತ್ತಿರುವ ಪ್ರಮಾದಕ್ಕೆ ಮುಕ್ತಿ ಇಲ್ಲವೇ? ಮನುಷ್ಯ ಮನುಷ್ಯನಾಗಿರಲು ಸಾಧ್ಯವಿಲ್ಲವೇ???

ಮನೋಜ್‌

ಹವ್ಯಾಸಿ ರಂಗಭೂಮಿ ನಟ ಮತ್ತು ಜಂಗಮ ಕಲೆಕ್ಟಿವ್‌ ನ ಸಕ್ರಿಯ ಕಲಾವಿದ. ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಯ ನೌಕರ.

Related Articles

ಇತ್ತೀಚಿನ ಸುದ್ದಿಗಳು