ಇದೇ ಫೆಬ್ರವರಿ ೨೪ ಕ್ಕೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾಗಿ ಒಂದು ವರ್ಷ ಕಳೆದಿದೆ. ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಿಲ್ಲಿಸಬೇಕಾದದ್ದು ಪುಟಿನ್. ಉಕ್ರೇನ್ ಏನಾದರೂ ತನ್ನ ಹೋರಾಟವನ್ನು ನಿಲ್ಲಿಸಿದರೆ, ಉಕ್ರೇನ್ ಎಂಬ ದೇಶವೇ ಕೊನೆಯಾಗುತ್ತದೆ ಎಂದು ಬರೆಯುತ್ತಾರೆ ಫಿನ್ಲೆಂಡಿನಿಂದ ರಂಜಿತಾ ಜಿ ಎಚ್.
ಫಿನ್ಲೆಂಡಿಗೆ ನಾವು ಬಂದಾಗ ಯುಧ್ಧ ಆಗಲೇ ಶುರುವಾಗಿತ್ತು. ಫಿನ್ಲೆಂಡ್ ಹಾಗೂ ಸ್ವೀಡನ್ ಉಕ್ರೇನಿಗೆ ಬೆಂಬಲ ಘೋಷಿಸಿದ್ದುದರಿಂದ ಪುಟಿನ್ ಈ ದೇಶಗಳಿಗೆ ಯುದ್ಧದ ಬೆದರಿಕೆ ಹಾಕಿಯೂ ಆಗಿತ್ತು. ನಮ್ಮ ಮನೆಯ ಮಾಲೀಕರು ಯುದ್ಧದ ಸಮಯದ ಅಗತ್ಯಕ್ಕಾಗಿ ಅಪಾರ್ಟ್‌ಮೆಂಟಿನ ಕೆಳಗೆ ಬಂಕರ್ ಇರುವುದನ್ನು ತೋರಿಸಿ, “ಇಲ್ಲಿಯೂ ಯುದ್ಧ ಶುರುವಾಗಲಾರದು ಎಂದು ಅಂದುಕೊಂಡಿದ್ದೇನೆ…” ಎಂದು ತೀರಾ ಸಾಮಾನ್ಯ ವಿಷಯವೊಂದನ್ನು ಚರ್ಚಿಸುವಂತೆ ವಿವರಿಸಿದಾಗ ನನಗೆ ಏನು ಯೋಚಿಸಬೇಕು, ಮಾತಾಡಬೇಕು ಎಂದು ತಿಳಿಯದೆ ಸುಮ್ಮನಿದ್ದೆ .
ರಷ್ಯಾದ ಜೊತೆ ಹಲವು ಯುದ್ಧಗಳ ಇತಿಹಾಸ ಇರುವ ಫಿನ್ಲೆಂಡಿನಲ್ಲಿ ಅಪಾರ್ಟ್‌ಮೆಂಟ್ ಗಳ ಕೆಳಗೆ, ಸಾರ್ವಜನಿಕ ಕಟ್ಟಡಗಳ ಕೆಳಗೆ ಬಂಕರ್ ಗಳು ಇರುವುದು ಸಾಮಾನ್ಯ. 2008 ರ ರಷ್ಯಾ -ಜಾರ್ಜಿಯಾ ಯುದ್ಧ ಮತ್ತು 2014ಲ್ಲಿ ಉಕ್ರೇನಿನ ಕ್ರಿಮಿಯವನ್ನು ರಷ್ಯಾ ವಶ ಪಡಿಸಿಕೊಂಡ ಆನಂತರದಲ್ಲಿ ಕಟ್ಟಲಾದ ವಸತಿ ಸಮುಚ್ಚಯಗಳು (ಖಾಸಗಿ ಹಾಗೂ ಸರ್ಕಾರಿ ) ಬಂಕರ್ ಗಳನ್ನು ಕಡ್ಡಾಯ ಎಂಬಂತೆ ಹೊಂದಿವೆ. ಫಿನ್ಲೆಂಡಿಗರು ‘ನಮ್ಮ ಪಕ್ಕದಲ್ಲಿರುವ ಕರಡಿ [ರಷ್ಯಾ] ಯ ಬಗ್ಗೆ ನಮಗೆ ಭ್ರಮೆಗಳೇನಿಲ್ಲ’ ಎಂದು ತಮ್ಮ ಬಂಕರ್ ಸಂಸ್ಕೃತಿಯನ್ನು ಸಮರ್ಥಿಸಿಕೊಂಡರೆ, ರಷ್ಯನ್ ಟ್ರೋಲ್ ಗಳು “ಇಷ್ಟು ಬಂಕರ್ ಗಳನ್ನು ಇನ್ಯಾರು ಕಟ್ಟಿದ್ದರು ಗೊತ್ತೇ? ಹಿಟ್ಲರ್ ! ಫಿನ್ಲೆಂಡ್ ನಿಜಕ್ಕೂ ತನ್ನ ಹಳೆಯ ನಾಝಿತನವನ್ನು ಬಿಡಬೇಕು“ ಎಂದು ವ್ಯಂಗ್ಯವಾಡುತ್ತಾರೆ
2013ರಲ್ಲಿ ಉಕ್ರೇನಿನ ಸಂಸತ್ತು, ಯುರೋಪಿಯನ್ ಒಕ್ಕೂಟದೊಂದಿಗೆ ರಾಜಕೀಯ ಸಹಕಾರ ಹಾಗೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಬಹುಮತದ ಒಪ್ಪಿಗೆ ಸೂಚಿಸಿತ್ತು. ಆದರೆ ಆನಂತರ ರಷ್ಯಾದ ಒತ್ತಡ, ಬೆದರಿಕೆಗಳಿಗೆ ಮಣಿದ ಅಂದಿನ ಉಕ್ರೇನ್ ಅಧ್ಯಕ್ಷ ಯಾನುಕೋವಿಚ್ ಈ ಒಪ್ಪಂದದಿಂದ ಹಿಂದೆ ಸರಿದು ರಷ್ಯಾದೊಂದಿಗೆ ನಿಕಟ ಸಂಬಂಧ ಸಾಧಿಸುವುದನ್ನು ಆಯ್ಕೆ ಮಾಡಿಕೊಂಡರು. ಇದನ್ನು ವಿರೋಧಿಸಿ ನವೆಂಬರ್ ನಲ್ಲಿ ಶುರುವಾದ ಯೂರೊಮೈದಾನ್ ದಂಗೆ ಅಥವಾ ‘ಘನತೆಯ ಕ್ರಾಂತಿ’( Revolution Of Dignity) ಯಲ್ಲಿ ನೂರಾರು ಪ್ರತಿಭಟನಾಕಾರರು, ಪೊಲೀಸರು ಸತ್ತರು. ದಂಗೆ, ಭ್ರಷ್ಟಾಚಾರದ ಆರೋಪಗಳು, ಮಾನವ ಹಕ್ಕು ಉಲ್ಲಂಘನೆಯ ಆರೋಪಗಳಿಂದಾಗಿ ಅಧ್ಯಕ್ಷರು ರಾಜೀನಾಮೆ ಕೊಡಬೇಕಾಯಿತು. ಈ ದಂಗೆಗಳಿಗೆ ಪ್ರತಿಯಾಗಿ ರಷ್ಯನ್ ಭಾಷಿಕರು ಹೆಚ್ಚಾಗಿರುವ ಪೂರ್ವ ಉಕ್ರೇನ್ ನಲ್ಲಿ ರಷ್ಯಾದಿಂದ ಪ್ರೇರಿತ ದಂಗೆಗಳು ಶುರುವಾಗಿ ರಷ್ಯಾವು ಕ್ರಿಮಿಯವನ್ನು ವಶಪಡಿಸಿಕೊಂಡಿತು ಹಾಗೂ ಪೂರ್ವ ಉಕ್ರೇನಿನ ಹಲವು ಪ್ರಾಂತ್ಯಗಳು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಗುಂಪುಗಳ ಪ್ರಭಾವಕ್ಕೊಳಗಾದವು.
2014ರಲ್ಲಿ ಕ್ರಿಮಿಯಾ ಅತಿಕ್ರಮಣದ ನಂತರವೂ ರಷ್ಯಾದೊಂದಿಗೆ ವ್ಯಾವಹಾರಿಕ ಸಂಬಂಧ ಹೆಚ್ಚಿಸಿಕೊಂಡೇ ಇದ್ದ ಯುರೋಪಿನ ದೇಶಗಳಿಗೆ ಈ ಬಾರಿಯ ಆಕ್ರಮಣದಲ್ಲಿ ಉಕ್ರೇನ್ ಪರವಾಗಿ ನಿಲ್ಲಲೇಬೇಕಾದ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿರಲಿಲ್ಲ. ‘ಉಕ್ರೇನ್ ನಾಝಿ ಪ್ರಭಾವಕ್ಕೆ ಒಳಗಾಗಿದೆ’ ಎಂದು ರಷ್ಯಾ ಆರೋಪಿಸಿದರೂ ಜರ್ಮನಿಯೊಂದಿಗೆ ರಷ್ಯಾದ ವ್ಯಾಪಾರ ಬಹಳ ಉತ್ತಮವಾಗೇ ನಡೆಯುತ್ತಿತ್ತು. ಕೋವಿಡ್ ನಂತರದ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಂಡರೆ ಸಾಕೆನಿಸುವಂಥ ಸ್ಥಿತಿಯಲ್ಲಿರುವ ದೇಶಗಳಿಗೆ ಯುದ್ಧ ಬೇಕಿರಲಿಲ್ಲ.
ಭ್ರಷ್ಟಾಚಾರ ನಿರ್ಮೂಲನೆಯ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಝೆಲೆನ್ಸ್ಕಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಏದುಸಿರು ಬಿಡುತ್ತಿರುವಾಗಲೇ ಪುಟಿನ್ ರ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಶುರುವಾಯಿತು. ಆಕ್ರಮಣದ ಆರಂಭದ ದಿನಗಳಲ್ಲಿ ಗೊಂದಲ, ಆಘಾತಕ್ಕೆ ಒಳಗಾದಂತೆ ಕಂಡುಬಂದ ಉಕ್ರೇನ್ ಅಧ್ಯಕ್ಷರಿಗೆ ಈ ಬಾರಿ ಬಹುಶ: ಜನರೇ ತಮ್ಮ ಆಯ್ಕೆ ಸ್ಪಷ್ಟ ಪಡಿಸಿದರು. ಒಂದು ದಶಕದಲ್ಲಿ ಎರಡನೇ ಬಾರಿ ಸೋಲೊಪ್ಪಲು ತಯಾರಿರದೆ ಈ ಬಾರಿ ಉಕ್ರೇನಿಯನ್ನರು ಹೋರಾಡಲೇ ಬೇಕೆಂದು ನಿರ್ಧರಿಸಿದರು.
ಅಧ್ಯಕ್ಷ ಝೆಲೆನ್ಸ್ಕಿ ತನಗೆ ಸಿಕ್ಕ ಯಾವ ಸಾರ್ವಜನಿಕ ವೇದಿಕೆಯನ್ನೂ ಬಿಡದೆ ಉಕ್ರೇನ್ ಬಗ್ಗೆ ಚರ್ಚೆ ಜಾರಿ ಇಟ್ಟರು; ಸಾಮಾಜಿಕ ಮಾಧ್ಯಮದ ಮುಖಾಂತರ ಜನರೊಂದಿಗೆ ನಿರಂತರ ಸಂವಹನ ನಡೆಸಿದರು. ದೇಶ ಬಿಟ್ಟು ಹೊರ ಹೋಗಲಾಗದ ಪತಿಯ ಪರವಾಗಿ ಒಲೆನ ಝೆಲೆಂಕ್ಸ ಹಲವು ದೇಶಗಳ ನಾಯಕರನ್ನು ಭೇಟಿಯಾಗಿ ಸಹಾಯ ಕೋರಿದರು. ಆರಂಭದ ತಿಂಗಳುಗಳಲ್ಲಿ, ಯುರೋಪ್ ಮತ್ತು ನ್ಯಾಟೋದ ನಾಯಕರು ಖಾಸಗಿ ಚರ್ಚೆಗಳಲ್ಲಿ ಅನುಕಂಪ, ಸಹಾಯದ ಮಾತಾಡಿದರೂ, ಶಸ್ತ್ರಗಳ ಪೂರೈಕೆಯ ಭರವಸೆ ನೀಡುವಲ್ಲಿ ಬಹಿರಂಗವಾಗಿ ಹಿಂಜರಿದರು. ಆದರೆ ಸಹಾಯದ ಭರವಸೆಯ ಹಲವು ಖಾಸಗಿ ಸಂಭಾಷಣೆಗಳು ಕೆಲವೇ ಗಂಟೆಗಳಲ್ಲಿ ಮಾಧ್ಯಮದ ಮುಂದೆ “ಅದ್ಯಾವ ರೀತಿಯಲ್ಲೋ “ ಬಯಲಾಗಿ ನ್ಯಾಟೋ ನಾಯಕರನ್ನು ಪೇಚಿಗೆ ಸಿಲುಕಿಸಿ ಶಸ್ತ್ರಗಳು, ಧನ ಸಹಾಯವನ್ನು ನಿಜಕ್ಕೂ ಶೀಘ್ರವಾಗಿ ಬಿಡುಗಡೆ ಮಾಡಬೇಕಾದಂಥ ಒತ್ತಡದ ಪರಿಸ್ಥಿತಿ ನಿರ್ಮಾಣವಾಯಿತು! ಆನಂತರ ಉಕ್ರೇನಿನ ಸೈನ್ಯ ಹಲವು ಆಕ್ರಮಿತ ಪ್ರದೇಶಗಳನ್ನು ಮರು ವಶಪಡಿಸಿಕೊಂಡದ್ದು, ವಾರದಲ್ಲಿ ಮುಗಿಯಬಹುದಾದ ಮಿಲಿಟರಿ ಕಾರ್ಯಚರಣೆಯಿದು ಎಂದು ನುಗ್ಗಿದ ರಷ್ಯಾ ಸೈನ್ಯವನ್ನು ತಿಂಗಳುಗಳ ಕಾಲ ತಡೆದು ಹಿಡಿದದ್ದು ನ್ಯಾಟೋ ಹಾಗೂ ಯೂರೋಪಿಯನ್ ಒಕ್ಕೂಟದ ನಾಯಕರಿಗೂ ಒಂದು ಅಚ್ಚರಿಯ ವಿಷಯ.
ಹಲವು ಗೆಲವುಗಳ ನಂತರವೇ ಸಹಾಯ ಮಾಡಿದ ದೇಶಗಳ ನಾಯಕರನ್ನು ಖುದ್ದು ಭೇಟಿಯಾಗಲು ಉಕ್ರೇನ್ ಬಿಟ್ಟು ಹೋದ ಝೆಲೆನ್ಸ್ಕಿ ಎಲ್ಲೆಲ್ಲೂ ತನ್ನ ದೇಶದ ಸೈನಿಕರನ್ನು ಹೋಲುವ ವಸ್ತ್ರಗಳನ್ನು ಧರಿಸಿ ತಾನೊಂದು ಯುದ್ಧ ನಿರತ, ಬೆಂಬಲದ ಅಗತ್ಯವಿರುವ ದೇಶದ ಅಧ್ಯಕ್ಷ ಎಂಬುದನ್ನು ಮಿತ್ರರಿಗೆ ಸದಾ ನೆನಪಿಸುತ್ತಾ, ಗೋಚರತೆಯ ಸಾಧನಗಳನ್ನು ಬಳಸುವಲ್ಲಿನ ಅವರ ಚಾಣಾಕ್ಷತೆಯನ್ನು ಸಾಬೀತುಪಡಿಸಿದ್ದಾರೆ.
ರಷ್ಯಾದ ನಿರಂತರ ಪ್ರಚಾರ (ಪ್ರೊಪಗಾಂಡಾ)ಕ್ಕೆ ಕಿವಿಯಾಗಿರುವ ಭಾರತದ ಹಾಗೂ ಪ್ರಪಂಚದ ತೀವ್ರ ಎಡ ಪಂಥದವರ ಸಮಸ್ಯೆ ಏನೆಂದರೆ ನ್ಯಾಟೋ ವಿರೋಧಿಸುವ ಭರದಲ್ಲಿ, ನಾಝಿ ಜರ್ಮನಿಯ ವಿರುದ್ಧದ ಸ್ಟಾಲಿನ್ ಹೋರಾಟದ ರಮ್ಯ ನೆನಪುಗಳನ್ನು ಮೆಲುಕು ಹಾಕುತ್ತಾ, ಅದಕ್ಕೂ ವರ್ಷಗಳ ಮುಂಚೆಯೇ ಒಂದು ಪೂರ್ತಿ (ಸೋವಿಯತ್ ಉಕ್ರೇನ್) ರಾಜ್ಯದ ಜನರನ್ನು ಹಸಿವಿನಿಂದ ಸಾಮೂಹಿಕವಾಗಿ ಸಾಯುವಂತೆ ಮಾಡಿದ ಸ್ಟಾಲಿನ್ ಸರ್ಕಾರದ ನೀತಿಗಳನ್ನು ಅವರು ಮರೆಯುತ್ತಾರೆ. ಅಮೆರಿಕದ ಹಾಗೂ ಯೂರೋಪಿನ ಕೆಲವು ಇತಿಹಾಸಜ್ಞರು 2014ರ ಅತಿಕ್ರಮಣದ ಆನಂತರ ಉಕ್ರೇನ್ ಬಗ್ಗೆ ಹೆಚ್ಚು ಹೆಚ್ಚು ಬರೆಯಲಾರಂಭಿಸಿದ್ದನ್ನು ಅವರು ಉದಾಹರಿಸಿ ಇದು ನ್ಯಾಟೋ ಪಿತೂರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಇದೇ ಸಮಯದಲ್ಲಿ ಅವರು ಕೆಲವಾದರೂ ಉಕ್ರೇನಿಯನ್ ಸಾಹಿತಿ /ಇತಿಹಾಸಜ್ಞರ ಬರಹಗಳನ್ನು ಹಂಚಿ ಅವರ ಅಭಿಪ್ರಾಯ ಓದಿದ ಉದಾಹರಣೆ ಕೊಡುವುದಿಲ್ಲ.
ಉಕ್ರೇನಿಯನ್ನರ ಮೇಲೆ ಇರುವ ಇನ್ನೊಂದು ಅಪವಾದ ಅವರು ಅತೀ ರಾಷ್ಟ್ರವಾದಿಗಳು ಎಂಬುದು. ಉಕ್ರೇನಿಯನ್ ಭಾಷೆ- ಸಂಸ್ಕೃತಿಯ ಮೇಲೆ ರಷ್ಯನ್ ಸಂಸ್ಕೃತಿಯ ಹೇರಿಕೆ ಹಾಗೂ ಅದರ ವಿರುದ್ಧ ಉಕ್ರೇನಿಯನ್ನರ ಹೋರಾಟ ತ್ಸಾರ್ ದೊರೆಗಳ ಆಡಳಿತ ಕಾಲದಿಂದ ನಡೆದು ಬಂದ ಇತಿಹಾಸವಿದೆ. ಈ ಯುದ್ಧವು ರಷ್ಯನ್ ವಸಾಹುತುಶಾಹಿ ವಿರುದ್ಧದ ಯುದ್ಧವೂ ಆಗಿದೆ. ಒಂದು ದಶಕದಲ್ಲಿ ಎರೆಡೆರಡು ಬಾರಿ ಅತಿಕ್ರಮಣ ಅನುಭವಿಸಿದ ದೇಶದ ಜನರು ಅತಿಯಾದ ರಾಷ್ಟ್ರೀಯವಾದಿಗಳಾಗುವುದು ಬಹುಶ: ಸಹಜವೇನೋ. ಇಲ್ಲದಿದ್ದರೆ ಅವರಿಗಿರುವ ದಾರಿಯೆಂದರೆ ಸ್ವಾತಂತ್ರ್ಯ ಕಳೆದುಕೊಂಡು ಬೆಲಾರಸ್ ನಂತೆ ರಷ್ಯಾದ ಆಜ್ಞೆಗಳನ್ನು ಪಾಲಿಸುವುದು.
ರಷ್ಯಾದಲ್ಲಿ ಯುದ್ಧ ಶುರುವಾದ ಮೊದಲ ತಿಂಗಳುಗಳಲ್ಲಿ ನಡೆದ ಯುದ್ಧ ವಿರೋಧಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಎಲ್ಲಾ ಸರ್ವಾಧಿಕಾರಿಗಳ ಸಾಮಾನ್ಯ ನಡೆಯಂತೆ ಭಿನ್ನ ಧ್ವನಿಯ ಮಾಧ್ಯಮಗಳನ್ನು ಹತ್ತಿಕ್ಕಿ ಕೇವಲ ಸರ್ಕಾರೀ ಮಾಧ್ಯಮದ ಮೂಲಕ ಉಕ್ರೇನ್ ನಲ್ಲಿ ನ್ಯಾಟೋ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ನಿರೂಪಣೆಯನ್ನೇ ಬಿತ್ತರಿಸಲಾಗುತ್ತಿದೆ. ಇನ್ನೂ ಕೆಲವು ರಷ್ಯನ್ನರಿಗೆ ಉಕ್ರೇನಿಯನ್ನರ ಮೇಲೆ ಅನುಕಂಪ ಇದ್ದರೂ ನ್ಯಾಟೋ ಮೇಲಿನ ಕೋಪ ಅದಕ್ಕಿಂತಲೂ ಮಿಗಿಲಾದುದು.
ಡಿಸೆಂಬರ್ ನಲ್ಲಿ ನಿಪ್ರೋ ದ ಅವಳಿ ಬಹುಮಹಡಿ ಕಟ್ಟಡಗಳ ಮೇಲೆ ನಡೆದ ಭೀಕರ ದಾಳಿಯ ನಂತರ ಮತ್ತೆ ಪ್ರತಿಭಟನೆಯ ಧ್ವನಿಗಳು ಕೇಳಿ ಬಂದವು. ಆದರೆ ತೀವ್ರತೆಯು ಮೊದಲಿನಂತಿರಲಿಲ್ಲ. ಏಕೆಂದರೆ ಯುದ್ಧ ವಿರೋಧಿಸಿದ ಕೆಲವು ಸಾವಿರ ರಷ್ಯನ್ನರು ಸೆರೆಮನೆಯಲ್ಲಿದ್ದರೆ, ಇನ್ನೂ ಸಾವಿರಾರು ಜನ ದೇಶ ತೊರೆದಿದ್ದಾರೆ. ರಷ್ಯಾ ತೊರೆದು ಉಕ್ರೇನ್ ಪರವಾಗಿ ಅಂತಾರಾಷ್ಟ್ರೀಯ ಸೇನೆ ಸೇರಿ ತಮ್ಮ ದೇಶದ ವಿರುದ್ಧವೇ ಶಸ್ತ್ರ ಹಿಡಿದಿರುವವರ ಉದಾಹರಣೆಗಳೂ ಇವೆ.
ಸಂಘರ್ಷದ ಆರಂಭದಲ್ಲಿ ಉಕ್ರೇನ್ ಕಡೆಯಿಂದಲೂ ಕೆಲವು ತಪ್ಪುಗಳನ್ನು ನಿಸ್ಸಂಶಯವಾಗಿ ಮಾಡಲಾಗಿದೆ. ಆದರೆ ರಷ್ಯನ್ ಸೇನೆ ನಡೆಸಿದ ಬುಚಾ ಹತ್ಯಾಕಾಂಡದ ನಂತರ, ಉಕ್ರೇನಿಯನ್ ಸಾರ್ವಜನಿಕ ಅಭಿಪ್ರಾಯವು ತನ್ನ ಸರ್ಕಾರದ ಹಿಂದೆ ಬಲವಾಗಿ ಒಗ್ಗೂಡಿ ನಿಂತಿದೆ. ಪೂರ್ವ ಉಕ್ರೇನ್ ನ ರಷ್ಯನ್ ಭಾಷಿಕರನ್ನು ಸ್ವತಂತ್ರಗೊಳಿಸಲು ಈ ಕಾರ್ಯಾಚರಣೆ ಎಂದು ಯುದ್ಧ ಆರಂಭಿಸಿ ಕೈವ್ ಹಾಗೂ ಉಕ್ರೇನ್‌ನ ತೀವ್ರ ಪಶ್ಚಿಮದಲ್ಲಿರುವ ಎಲ್ವಿವ್‌ನಂತಹ ನಗರಗಳ ಮೇಲೆಯೂ ಪುಟಿನ್ ಬಾಂಬ್ ದಾಳಿ ಮಾಡಿದ್ದಾರೆ. ಯೂರೋಪಿನ ಇನ್ನಿತರ ದೇಶದ ನಾಯಕರ ಜೊತೆಗಿನ ಸಂಧಾನದ ಮಾತುಕತೆಗಳಲ್ಲಿ ಹಲವು ಬಾರಿ ತಮ್ಮ ಮಾತು ಬದಲಾಯಿಸಿದ್ದಾರೆ. ಆದ್ದರಿಂದ ಪಶ್ಚಿಮದ ಹಾಗೂ ಯುರೋಪಿನ ನಾಯಕರಿಗೆ ಪುಟಿನ್ ಮಾತುಗಳಲ್ಲಿ ನಂಬಿಕೆ ಉಳಿದಿಲ್ಲ.
ಸುಮಾರು 300 ಪ್ರಯಾಣಿಕರ ಸಾವಿಗೆ ಕಾರಣವಾದ 2014 ರ MH 17 ವಿಮಾನ ಅಪಘಾತದಲ್ಲಿ ಪುಟಿನ್ ರ ನೇರ ಭಾಗೀದಾರಿಕೆ ಯೂರೋಪಿಯನ್ ಒಕ್ಕೂಟದ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ (ಹೇಗ್ ,ನೆಡೆರ್ಲ್ಯಾಂಡ್ ) ಸಾಬೀತಾಗಿದೆ. ಉಕ್ರೇನ್ ನಲ್ಲಿ ರಷ್ಯಾ ಸೇನೆ ನಡೆಸಿದ ಅತ್ಯಾಚಾರಗಳು, ಅಪಹರಣಗಳ ಪಟ್ಟಿ ಬೆಳೆಯುತ್ತಲೇ ಇದ್ದರೂ ಭದ್ರತಾ ಸಮಿತಿಯಲ್ಲಿ ರಷ್ಯಾ -ಚೀನಾಕ್ಕೆ ವೀಟೋ ಅಧಿಕಾರ ಇರುವುದರಿಂದಾಗಿ ವಿಶ್ವ ಸಂಸ್ಥೆ ಕೂಡ ಉಕ್ರೇನ್ ಗೆ ಹೆಚ್ಚಿನ ಸಹಾಯ ಮಾಡದಂಥ ಸ್ಥಿತಿಯಲ್ಲಿದೆ.
ಒಂದು ವರ್ಷದ ಯುದ್ಧ ಚೀನಾ -ಯೂರೋಪ್ ನಡುವಿನ ವ್ಯವಹಾರ -ರಾಜಕೀಯ ಸಂಬಂಧಗಳ ಮೇಲೂ ನಕಾರಾತ್ಮಕ ಪ್ರಭಾವ ಬೀರಿದೆ. ಅಮೆರಿಕಾದ ಜೊತೆಯಂತೂ ಚೀನಾ ನೇರ ಸಂಘರ್ಷಕ್ಕೆ ಇಳಿದಿರುವಂತೆ ಕಾಣುತ್ತಿರುವ ಈ ದಿನಗಳಲ್ಲಿ ಸದ್ಯ ಯೂರೋಪಿಯನ್ ಒಕ್ಕೂಟದ ಜೊತೆ ವ್ಯಾವಹಾರಿಕ ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವು ದಿನಗಳ ಹಿಂದೆ 12 ಅಂಶಗಳ ಶಾಂತಿ ಯೋಜನೆಯನ್ನು ಚೀನಾ ಪ್ರಸ್ತಾಪಿಸಿದೆ.
ಆದರೆ ಸಿನೋ-ರಷ್ಯನ್ ಅಧ್ಯಯನಗಳ ಪ್ರಾಧ್ಯಾಪಕ, ನ್ಯೂ ಸೌತ್ ವೇಲ್ಸ್ ನ ಡಾ ಕೊರೊಲೆವ್ ಹೇಳಿದಂತೆ “ನಾಯಕತ್ವವನ್ನು ಪ್ರದರ್ಶಿಸಲು ಚೀನಾಕ್ಕೆ ಸಾಕಷ್ಟು ಅವಕಾಶಗಳಿತ್ತು. ಯುದ್ಧವನ್ನು ಕೊನೆಗೊಳಿಸಲು ಕೊಡುಗೆ ನೀಡಲು ಅದನ್ನು ಮೊದಲೇ ಆಹ್ವಾನಿಸಲಾಗಿತ್ತು … ಜಾಗತಿಕ ನಾಯಕನ ಚಿತ್ರವನ್ನು ನಿಜವಾಗಿಯೂ ಪ್ರದರ್ಶಿಸುವುದು [ಚೀನಾದ] ಗುರಿಯಾಗಿದ್ದರೆ, ಒಂದು ವರ್ಷ ಬೇಲಿಯ ಮೇಲೆ ಕುಳಿತು ರಾಜತಾಂತ್ರಿಕ ನೃತ್ಯ ಮಾಡುವ ಅಗತ್ಯವಿರಲಿಲ್ಲ“. ಸದ್ಯ ಭಾರತದ ಕುರಿತೂ ಬಹಿರಂಗಗೊಳ್ಳದ ಇದೇ ರೀತಿಯ ಅಸಮಾಧಾನ ಯೂರೋಪ್ ಹಾಗೂ ಪಶ್ಚಿಮದ ದೇಶಗಳ ನಾಯಕರಲ್ಲಿ ಮನೆ ಮಾಡಿದೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ ಜರ್ಮನಿಯ ಛಾನ್ಸಲರ್ ಹಾಗೂ ಇತರೆ ಜಿ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಶಾಂತಿ ಸಂಧಾನ ಹಾಗೂ ಯುರೋಪಿಯನ್ ಒಕ್ಕೂಟದ ಜೊತೆ ಉಕ್ರೇನ್ ಬೆಂಬಲಕ್ಕೆ ನಿಲ್ಲಲು ಭಾರತವನ್ನು ಮತ್ತೆ “ಒತ್ತಾಯ ಪೂರ್ವಕವಾಗಿ “ ಆಹ್ವಾನಿಸಿದರು. ವಿಶ್ವ ಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿರುವ ಚೀನಾ ಹಾಗೂ ರಷ್ಯಾದ ಮುಂದೆ ಭಾರತಕ್ಕೆ ಹೆಚ್ಚಿನ ಅಧಿಕಾರ ಇಲ್ಲ, ಆದರೆ ಸರದಿ ಪ್ರಕಾರ ಬಂದ ಜಿ20 ಅಧ್ಯಕ್ಷತೆಯನ್ನು ಕೂಡ ತನ್ನ ವ್ಯಾಪಕ ಪ್ರಚಾರಕ್ಕೆ ಬಳಸಿಕೊಂಡ ಭಾರತ ಸರ್ಕಾರ ತನ್ನದೇ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಜಂಟಿ ಹೇಳಿಕೆಯನ್ನು ಕೂಡ ಚೀನಾ ನಿರ್ದೇಶಿಸಲು -ನಿರ್ಬಂಧಿಸಲು ಬಿಟ್ಟಿದೆ.
“ಯುದ್ಧವು ತನ್ನ ವ್ಯಾಪ್ತಿಯಲ್ಲಿ ಪ್ರಜ್ಞಾಶೂನ್ಯವಾಗಿದೆ, ಅದರ ಆಯಾಮಗಳಲ್ಲಿ ನಿರ್ದಯವಾಗಿದೆ ಮತ್ತು ಜಾಗತಿಕವಾಗಿ ಹಾನಿ ಮಾಡುವ ಅದರ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ. “ದೇಶಗಳು ಒಗ್ಗೂಡಿ, ಈ ಯುದ್ಧವನ್ನು ಕೊನೆಗೊಳಿಸಲು ಇದು ಸುಸಮಯವಾಗಿದೆ” ಎಂಬ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಮನವಿ ಕೂಡ ವಿಶ್ವಗುರುಗಳಾಗಲು ಆಶಿಸುವ ಯಾವ ದೇಶದ ಮನಸ್ಸಿಗೂ ತಾಕದೇ ಕೇವಲ ಭಾಷಣವಾಗಿ ಉಳಿದಿದೆ. ನ್ಯಾಟೋ, ಯುರೋಪಿಯನ್ ಒಕ್ಕೂಟ ಹಾಗೂ ಪುಟಿನ್ ನಡುವೆ ಸದ್ಯ ಯಾವುದೇ ಸಂಧಾನದ ಸಾಧ್ಯತೆಯೂ ಕಂಡುಬರುತ್ತಿಲ್ಲ. ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂಬ ಯುದ್ಧ ಆರಂಭಿಸಿದ ಪುಟಿನ್ ಆಕ್ರಮಣವನ್ನು ಪ್ರತಿರೋಧಿಸುವ ಆಯ್ಕೆ ಮಾಡಿಕೊಂಡಿದ್ದು ಉಕ್ರೇನಿಯನ್ನರು. ಯುದ್ಧ ನಿಲ್ಲಿಸಬೇಕಾದದ್ದು ಕೂಡ ಪುಟಿನ್. ಏಕೆಂದರೆ ಪುಟಿನ್ ಸೈನ್ಯ ಯುದ್ಧವನ್ನು ನಿಲ್ಲಿಸಿದರೆ ಮತ್ತು ಉಕ್ರೇನ್ ತೊರೆದರೆ, ಯುದ್ಧವು ಕೊನೆಗೊಳ್ಳುತ್ತದೆ. ಆದರೆ ಉಕ್ರೇನ್ ತನ್ನ ಹೋರಾಟವನ್ನು ನಿಲ್ಲಿಸಿದರೆ, ಉಕ್ರೇನ್ ಎಂಬ ದೇಶವೇ ಕೊನೆಯಾಗುತ್ತದೆ.
ರಂಜಿತಾ ಜಿ ಎಚ್
ಲೇಖಕರು, ಫಿನ್ಲೆಂಡ್