ನವದೆಹಲಿ: ವಯಸ್ಸು ಕೇವಲ ನಂಬರ್ ಎಂಬುದನ್ನು ಸಾಬೀತುಪಡಿಸುತ್ತಾ ಜಬಲ್ಪುರದ (Jabalpur) 19 ವರ್ಷದ ಯುವಕ ಅಥರ್ವ ಚತುರ್ವೇದಿ (Atharva Chaturvedi), ಹಿರಿಯ ವಕೀಲರಿಗೂ (Lawyer) ಸಾಧ್ಯವಾಗದ ಸಾಧನೆಯೊಂದನ್ನು ಮಾಡಿದರು. ಇದೆಲ್ಲವೂ ಪ್ರಾರಂಭವಾಗಿದ್ದು ಫೆಬ್ರವರಿಯ ಒಂದು ಮಧ್ಯಾಹ್ನ.
ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಕಲಾಪ ಮುಗಿಸಿ ಏಳಲು ಸಿದ್ಧವಾಗುತ್ತಿದ್ದಾಗ, ಆ ಯುವ ಧ್ವನಿಯು ಹತ್ತು ನಿಮಿಷಗಳ ಕಾಲಾವಕಾಶ ನೀಡುವಂತೆ ವಿನಂತಿಸಿತು.
ವರದಿಯ ಪ್ರಕಾರ, ಹತ್ತು ನಿಮಿಷಗಳ ನಂತರ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತು. ಸಂವಿಧಾನದ ಆರ್ಟಿಕಲ್ 142 ಅನ್ನು ಉಲ್ಲೇಖಿಸಿದ ನ್ಯಾಯಾಲಯವು, ‘ನೀಟ್’ ಅರ್ಹತೆ ಪಡೆದ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಭ್ಯರ್ಥಿಗಳಿಗೆ ತಾತ್ಕಾಲಿಕ ಎಂಬಿಬಿಎಸ್ ಪ್ರವೇಶಾತಿ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಥರ್ವನ ಪಾಲಿಗೆ ಇದು ವೈದ್ಯನಾಗುವ ಕನಸಿಗೆ ಮರುಜೀವ ನೀಡುವಂತಿತ್ತು. ಅಥರ್ವ ಅವರು ಎರಡು ಬಾರಿ ‘ನೀಟ್’ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು ಮತ್ತು 530 ಅಂಕಗಳನ್ನು ಗಳಿಸಿದ್ದರು. ಆದಾಗ್ಯೂ, ಅವರಿಗೆ ಖಾಸಗಿ ಕಾಲೇಜುಗಳಲ್ಲಿ ಇಡಬ್ಲ್ಯೂಎಸ್ (EWS) ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯಲು ಸಾಧ್ಯವಾಗಲಿಲ್ಲ. ಯಾಕೆಂದರೆ ರಾಜ್ಯದ ಮೀಸಲಾತಿ ವ್ಯವಸ್ಥೆಯ ಪ್ರಕಾರ, ಇಡಬ್ಲ್ಯೂಎಸ್ ನೀತಿಯು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತಿರಲಿಲ್ಲ.
ಇದಕ್ಕೂ ಮೊದಲು, ಜಬಲ್ಪುರ ಹೈಕೋರ್ಟ್‌ನಲ್ಲಿ ಅಥರ್ವ ಅವರೇ ಖುದ್ದಾಗಿ ತಮ್ಮ ಪರ ವಾದ ಮಂಡಿಸುವುದನ್ನು ಕೇಳಿದ ನ್ಯಾಯಾಧೀಶರು, “ನೀವು ವಕೀಲರಾಗಬೇಕು, ವೈದ್ಯರಲ್ಲ. ನೀವು ತಪ್ಪು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಅಂತಾ ಹೇಳಿರುವುದಾಗಿ ವರದಿಯಾಗಿದೆ.
ಅರ್ಥವ್ ತಂದೆ ಹೇಳಿದ್ದೇನು..?: ಅಥರ್ವ ಅವರ ತಂದೆ ಮನೋಜ್ ಚತುರ್ವೇದಿ ವಕೀಲರು. ಆದರೆ ಅವರು ಸುಪ್ರೀಂ ಕೋರ್ಟ್‌ಲ್ಲಿ ಎಂದಿಗೂ ಪ್ರಾಕ್ಟಿಸ್ ಮಾಡಿಲ್ಲ. “ನನ್ನ ಮಗ ಎಂದಿಗೂ ಕಾನೂನು ಅಧ್ಯಯನ ಮಾಡಿಲ್ಲ. ಆದರೆ ಅವನು ಎಲ್ಲವನ್ನೂ ಗಮನಿಸಿದನು. ಎಷ್ಟು ಮಾತನಾಡಬೇಕು, ಯಾವಾಗ ಮೌನವಾಗಿರಬೇಕು. ವಾಸ್ತವವಾಗಿ, ಅರ್ಜಿಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಅಪ್‌ಲೋಡ್ ಮಾಡುವುದು ಹೇಗೆ ಎಂದು ಅವನು ನನಗೆ ಕಲಿಸಿದನು” ಎಂದು ಚತುರ್ವೇದಿ ತಿಳಿಸಿದರು.
