Home ಬೆಂಗಳೂರು ವಿದೇಶದಿಂದ ಕಾಳು ಮೆಣಸು, ಅಡಿಕೆ ಆಮದಿನಲ್ಲೂ 40% ಕಮಿಷನ್ ನಡೆದಿದೆ : AAP ಮುಖಂಡ ಬ್ರಿಜೇಶ್...

ವಿದೇಶದಿಂದ ಕಾಳು ಮೆಣಸು, ಅಡಿಕೆ ಆಮದಿನಲ್ಲೂ 40% ಕಮಿಷನ್ ನಡೆದಿದೆ : AAP ಮುಖಂಡ ಬ್ರಿಜೇಶ್ ಕಾಳಪ್ಪ ಆರೋಪ

0

ಬೆಂಗಳೂರು: ಕಡಿಮೆ ಗುಣಮಟ್ಟದ ಅಡಿಕೆ ಹಾಗೂ ಕಾಳುಮೆಣಸನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಅಡಿಕೆ ಬೆಳೆಗಾರರ ಭವಿಷ್ಯದ ಜೊತೆ ಚೆಲ್ಲಾಟವಾಡುವ ಮೋದಿ ಸರ್ಕಾರದ ನಿರ್ಧಾರಕ್ಕೆ ಆಮ್‌ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿದೇಶದಿಂದ ಕಾಳು ಮೆಣಸು, ಅಡಿಕೆ ಆಮದಿನಲ್ಲೂ 40% ಕಮಿಷನ್ ನಡೆದಿದೆ ಎಂದು ಎಎಪಿ ಮುಖಂಡ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ಹಿರಿಯ ವಕೀಲರಾದ ಬ್ರಿಜೇಶ್‌ ಕಾಳಪ್ಪ ಅವರು, ನಮ್ಮ ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಅಡಿಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದೆ. ಆದರೆ ಕೇಂದ್ರ ಸರ್ಕಾರವು ಭೂತಾನ್‌ನಿಂದ ಅಡಿಕೆಯನ್ನು ಹಾಗೂ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲು ಮುಂದಾಗಿದೆ. ಅವು ಕಡಿಮೆ ಗುಣಮಟ್ಟದ್ದಾಗಿದ್ದು, ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಮಿಶ್ರವಾಗುವುದರಿಂದ ಸ್ವದೇಶಿ ಅಡಿಕೆ ಹಾಗೂ ಕಾಳುಮೆಣಸಿನ ಬಗ್ಗೆ ಗ್ರಾಹಕರಲ್ಲಿ ತಪ್ಪು ಕಲ್ಪನೆ ಮೂಡಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ ರೈತರು ಬೆಳೆದ ಅಡಿಕೆ ಹಾಗೂ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಲಿದೆ. ರೈತರಿಗೆ ಸಿಗುವ ಬೆಲೆಯ ಮೇಲೆ ಇದು ಕೆಟ್ಟ ಪರಿಣಾಮ ಪರಿಣಾಮ ಬೀರಲಿದೆ. ಭಾರತಕ್ಕೆ ಅಗತ್ಯವಿರುವಷ್ಟು ಅಡಿಕೆ ಹಾಗೂ ಕಾಳುಮೆಣಸನ್ನು ನಮ್ಮ ರೈತರೇ ಉತ್ಪಾದಿಸುವಾಗ ಆಮದು ಮಾಡಿಕೊಳ್ಳುವ ಅಗತ್ಯವೇನಿದೆ? ಎಂದು ಬ್ರಿಜೇಶ್‌ ಕಾಳಪ್ಪ ಪ್ರಶ್ನಿಸಿದರು.

ಒಂದುವೇಳೆ ಅಡಿಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಸರ್ಕಾರ ಇವುಗಳಿಗೆ ವಿಧಿಸಬೇಕು. ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಆಮದುದಾರರಿಗೆ ಅವಕಾಶ ನೀಡಬಾರದು. ಅಡಿಕೆ ಹಾಗೂ ಕಾಳುಮೆಣಸು ಆಮದಿಗೆ ಸಂಬಂಧಿಸಿ ಪ್ರಭಾವಿಗಳಿಂದ ಸಫೆಮಾ, ಫೆರಾ ಮುಂತಾದ ಕಾನೂನುಗಳ ಉಲ್ಲಂಘನೆಯಾಗಿರುವುದು ಕಂಡುಬರುತ್ತಿದೆ. ಸರ್ಕಾರದ ಈ ರೈತವಿರೋಧಿ ನೀತಿಯ ಹಿಂದೆ ಭಾರೀ ಪ್ರಮಾಣದ ಹಣ ಕೆಲಸ ಮಾಡಿದ್ದು, 40% ಕಮಿಷನ್‌ಗಾಗಿ ರೈತರ ಹಿತದೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂಬುದು ಆಮ್‌ ಆದ್ಮಿ ಪಾರ್ಟಿಯ ಆಗ್ರಹವಾಗಿದೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಮಾಧ್ಯಮ ವಕ್ತಾರ ಉಷಾ ಮೋಹನ್ ಅವರು ಮಾತನಾಡಿ, ಹಲವು ದಶಕಗಳಿಂದ ಬಾಧಿಸುತ್ತಿರುವ ಹಳದಿರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆರಂಭವಾದ ಎಲೆಚುಕ್ಕಿ ರೋಗವು ತೀವ್ರ ಸ್ವರೂಪ ಪಡೆಯುತ್ತಿದ್ದು, ಇದರಿಂದ ಭಾರೀ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಾದ ಸರ್ಕಾರವು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ಅಮಾನವೀಯ ನಡೆ ಎಂದು ಹೇಳಿದರು.

ಈ ಬಗ್ಗೆ ಪ್ರಧಾನಿಗಳಿಗೆ ಹಾಗೂ ಕೇಂದ್ರದ ವಾಣಿಜ್ಯ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ ಹಾಗೂ ಸಂಸತ್ತಿನಲ್ಲೂ ಆಮ್ ಆದ್ಮಿ ಪಕ್ಷದಿಂದ ಈ ಬಗ್ಗೆ ವಿರೋಧ ಮಾಡಲಾಗುತ್ತದೆ ಎಂದು ತಿಳಿಸಿದರು.

You cannot copy content of this page

Exit mobile version