ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಹಿಂಡನ್‌ಬರ್ಗ್ ಸಂಸ್ಥೆಯ ಹೊಸ ಸಂಶೋಧನಾ ವರದಿ ಬಿಡುಗಡೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಹೊರಿಸಿದ್ದಾರೆ.
ಪ್ರಧಾನಿ ಮೋದಿಯವರು ಬೇನಾಮಿ ಕಂಪನಿಯಲ್ಲಿನ ಸೆಬಿ ಮುಖ್ಯಸ್ಥರ ಹೂಡಿಕೆಯನ್ನು ಜೆಪಿಸಿ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಜನರು ತಪ್ಪು ತಿಳಿಯುತ್ತಾರೆ ಎಂದು ಅವರು ಹೇಳಿದ್ದಾರೆ.
ಮೋದಿಯವರದು ಯಾವ ಮಟ್ಟದ ಪ್ರಾಮಾಣಿಕತೆಯೆಂದರೆ ಅವರು ಬರ್ಮುಡಾ ಮತ್ತು ಮಾರಿಷಸ್‌ನ ಬೇನಾಮಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವ ಮಾಧವಿ ಬುಚ್ ಅವರನ್ನು ಸೆಬಿ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ. ಬೇನಾಮಿ ಎಂದರೆ ಉದ್ಯೋಗಿಗಳ ವಿಳಾಸ ಅಥವಾ ಆದಾಯದ ಮೂಲವನ್ನು ಹೊಂದಿರದ ಕಂಪನಿಗಳು. ಅಂತಹ ಕಂಪನಿಗಳು ಭಾರತದಲ್ಲಿ ಅದಾನಿ ಕಂಪನಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಷೇರಿನ ಬೆಲೆಯನ್ನು ಮೋಸದಿಂದ ಹೆಚ್ಚಿಸುತ್ತಿವೆ ಎಂದು ಸಂಜಯ್ ಸಿಂಗ್ ತಮ್ಮ ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಗರಣಗಳ ತನಿಖೆ ನಡೆಸಬೇಕಿದ್ದ ಸೆಬಿ ಮುಖ್ಯಸ್ಥರೇ ಬೇನಾಮಿ ಫಂಡುಗಳಲ್ಲಿ ಹೂಡಿಕೆ ಮಾಡಿರುವಾಗ ಅವರಿಂದ ಎಂತಹ ಪ್ರಾಮಾಣಿಕತೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿರುವರ ಸಂಜಯ್ ಸಿಂಗ್, ಜನರು ಚೌಕಿದಾರನೇ (ಮೋದಿ) ಕಳ್ಳ ಎಂದು ತೀರ್ಮಾನಕ್ಕೆ ಬರುವ ಮೊದಲು ಈ ಹಗರಣವನ್ನು ಜೆಪಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.