ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲು ಸೋಮವಾರ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಪ್ರಮುಖ ಚರ್ಚೆ ನಡೆಸಿದರು.
ಸಭೆಯ ನಂತರ ದೆಹಲಿ ಸಚಿವ ಮತ್ತು ಎಎಪಿ ನಾಯಕ ಗೋಪಾಲ್ ರಾಯ್ ಸಭೆಯ ವಿವರಗಳನ್ನು ಬಹಿರಂಗಪಡಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವ ಕಾರಣ, ಈ ಸಭೆಯಲ್ಲಿ ಆಗಸ್ಟ್ 15ರಂದು ಸರ್ಕಾರದ ಪರವಾಗಿ ದೆಹಲಿ ಸಚಿವ ಅತಿಶಿ ರಾಷ್ಟ್ರ ಧ್ವಜಾರೋಹಣ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದರು.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿದುಬಂದಿದೆ. ಪಕ್ಷವು ಸಾಮೂಹಿಕವಾಗಿ ಜನರ ಮುಂದೆ ಹೋಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಆಗಸ್ಟ್ 14ರಂದು ದೆಹಲಿಯಲ್ಲಿ ಪಾದಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಗತ್ಯ ಬಿದ್ದಾಗ ಸುನೀತಾ ಕೇಜ್ರಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ತಲುಪಿಸುತ್ತಾರೆ ಮತ್ತು ಕೇಜ್ರಿವಾಲ್ ಅವರ ಸೂಚನೆಗಳೊಂದಿಗೆ ಪಕ್ಷವು ಸಾಮೂಹಿಕವಾಗಿ ಮುನ್ನಡೆಯುತ್ತದೆ ಎಂದು ಗೋಪಾಲ್ ರಾಯ್ ಹೇಳಿದರು.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನವೂ ಸಿಗುವುದಿಲ್ಲ ಎಂದು ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ನಂತರ ಪಕ್ಷದ ಕಾರ್ಯಕರ್ತರು ಮತ್ತು ದೆಹಲಿಯ ಜನರು ಸಂತೋಷಪಟ್ಟಿದ್ದಾರೆ. ಭಾನುವಾರ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಲಾಯಿತು ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಸಚಿವರು ಬಹಿರಂಗಪಡಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ ಎಂದು ಸೌರಭ್ ಭಾರದ್ವಾಜ್ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಆಪ್ ಸಂಸದ ಸಂದೀಪ್ ಪಾಠಕ್ ಸ್ವಾಗತಿಸಿದ್ದರು.