ದೆಹಲಿ: ತಮ್ಮ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ-ಎ) ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿದ್ದ ಆಹ್ವಾನಕ್ಕೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಆರ್‌ಪಿಐ (ಎ) ನಾಯಕನ ಆಹ್ವಾನದ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದೀಪ್ಕೆ, “ಆದರೆ ಕೇವಲ ಒಂದು ತಿಂಗಳ ಹಿಂದಷ್ಟೇ ನಾನು ನಿಮ್ಮ ಪಾಲಿಗೆ ದೇಶದ್ರೋಹಿ (ಆ್ಯಂಟಿ-ನ್ಯಾಷನಲ್) ಆಗಿರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡಲು ಹಾಗೂ ಸಮಾಜ ಮತ್ತು ಆರ್‌ಪಿಐ (ಎ) ಪಕ್ಷವನ್ನು ಬಲಪಡಿಸಲು ಯುವ ಅಂಬೇಡ್ಕರ್‌ವಾದಿಯಾಗಿರುವ ಅಭಿಜೀತ್ ದೀಪ್ಕೆ ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವುದನ್ನು ಪರಿಗಣಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿಕೆ ನೀಡಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ದೀಪ್ಕೆ ಮತ್ತು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ತೀವ್ರತೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ರಾಜೀನಾಮೆಯ ಸಂದರ್ಭದಲ್ಲಿ ಪ್ರಧಾನ್ ಅವರು ‘ದೇಶವಿರೋಧಿ ಶಕ್ತಿಗಳು’ ಇದರ ಲಾಭ ಪಡೆಯುವುದನ್ನು ತಡೆಯಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು.
ಈ ಹಿನ್ನೆಲೆಯನ್ನು ನೆನಪಿಸಿರುವ ದೀಪ್ಕೆ, ಈ ಹಿಂದೆ ಬಿಜೆಪಿ ನಾಯಕರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ದೇಶದ್ರೋಹಿಗಳು’, ‘ಭಯೋತ್ಪಾದಕರ ಬಿ-ಟೀಮ್’ ಹಾಗೂ ‘ವೈರಸ್’ ಎಂದು ಕರೆದಿದ್ದರು ಎಂದು ಕಿಡಿಕಾರಿದ್ದಾರೆ. ನೈಜ ಸಮಸ್ಯೆಗಳಿಗಾಗಿ ಧ್ವನಿಯೆತ್ತುವ ಯುವಜನತೆಯನ್ನು (ಜೆನ್-ಝೀ) ದೇಶದ್ರೋಹಿಗಳೆಂದು ಕರೆಯಬಾರದು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ದೀಪ್ಕೆ ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರದ ಹಿಂಗೋಲಿಯಲ್ಲಿ ತಮ್ಮ ಸಂಘಟನೆಯ ‘ಶಾಲೆ ಸರಿಪಡಿಸಿ’ ಅಭಿಯಾನದ ಭಾಗವಾಗಿ ಶಾಲೆಯೊಂದರ ಎದುರು ದೀಪ್ಕೆ ಧರಣಿ ನಡೆಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳ ಎದುರೇ ಮದ್ಯಪಾನ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
