ದೆಹಲಿ: ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ (ಪಿಎಂ ಕೇರ್ಸ್ ಫಂಡ್) 2024-25ರ ಆರ್ಥಿಕ ವರ್ಷದಲ್ಲಿ ಹರಿದುಬಂದ ಒಟ್ಟು ದೇಣಿಗೆಯು 479.96 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಅಧಿಕೃತ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಈ ಮೊತ್ತದಲ್ಲಿ 479.04 ಕೋಟಿ ರೂ. ದೇಶೀಯ ದೇಣಿಗೆಯಾಗಿದ್ದರೆ, ವಿದೇಶಿ ದೇಣಿಗೆಯ ಪಾಲು ಕೇವಲ 92 ಲಕ್ಷ ರೂಪಾಯಿ.
ಇದೇ ಹಣಕಾಸು ವರ್ಷದಲ್ಲಿ ನಿಧಿಗೆ ಸ್ಥಿರ ಠೇವಣಿ ಮತ್ತು ನಿಯಮಿತ ಖಾತೆಗಳಿಂದ ಬಡ್ಡಿ ರೂಪದಲ್ಲಿ 475.14 ಕೋಟಿ ರೂ., ಟಿಡಿಎಸ್ ಮರುಪಾವತಿಯಿಂದ ಸುಮಾರು 13.49 ಲಕ್ಷ ರೂ. ಹಾಗೂ ಅನುಷ್ಠಾನ ಸಂಸ್ಥೆಗಳಿಂದ ಮರುಪಾವತಿಯಾಗಿ 324.65 ಕೋಟಿ ರೂ. ಜಮೆಯಾಗಿದೆ. ದೇಣಿಗೆ ಸಂಗ್ರಹ ಕಡಿಮೆಯಾಗಿದ್ದರೂ, ನಿಧಿಯಿಂದ ಮಾಡಲಾದ ವೆಚ್ಚವು ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಕಾರಣ, ಆರ್ಥಿಕ ವರ್ಷದ ಅಂತ್ಯಕ್ಕೆ ಪಿಎಂ ಕೇರ್ಸ್ ಫಂಡ್‌ನಲ್ಲಿರುವ ಒಟ್ಟು ಮೊತ್ತವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 8,452.06 ಕೋಟಿ ರೂಪಾಯಿಗೆ ತಲುಪಿದೆ.
2024-25ರಲ್ಲಿ ನಿಧಿಯ ಒಟ್ಟು ವೆಚ್ಚವು ಕೇವಲ 87.85 ಲಕ್ಷ ರೂಪಾಯಿಗೆ ಕುಸಿದಿದೆ. ಇದರಲ್ಲಿ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಗೆ 87.84 ಲಕ್ಷ ರೂ. ಹಾಗೂ ಬ್ಯಾಂಕ್ ಶುಲ್ಕ/ಎಸ್‌ಎಂಎಸ್ ಶುಲ್ಕವಾಗಿ 451 ರೂ. ವ್ಯಯಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ವೆಚ್ಚದ ಪ್ರಮಾಣ ಗಮನಾರ್ಹವಾಗಿತ್ತು; 2023-24ರಲ್ಲಿ 15.59 ಕೋಟಿ ರೂ., 2022-23ರಲ್ಲಿ 437.87 ಕೋಟಿ ರೂ., 2021-22ರಲ್ಲಿ 3,716.29 ಕೋಟಿ ರೂ. ಹಾಗೂ 2020-21ರಲ್ಲಿ 3,976.17 ಕೋಟಿ ರೂ. ವೆಚ್ಚ ಮಾಡಲಾಗಿತ್ತು.
2023-24ರ ಅಂತ್ಯಕ್ಕೆ 7,173.03 ಕೋಟಿ ರೂ. ಇದ್ದ ಉಳಿಕೆ ಮೊತ್ತವು, 2024-25ರ ಅಂತ್ಯಕ್ಕೆ ಶೇ. 17.83ರಷ್ಟು ಏರಿಕೆಯಾಗಿ 8,452.06 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಆರಂಭಿಕ ವರ್ಷವಾದ 2020-21ರಲ್ಲಿ ಪಿಎಂ ಕೇರ್ಸ್‌ಗೆ ಗರಿಷ್ಠ ಪ್ರಮಾಣದ ದೇಣಿಗೆ ಹರಿದುಬಂದಿದ್ದು, ಆಗ ದೇಶೀಯ ದೇಣಿಗೆಯಾಗಿ 7,183.77 ಕೋಟಿ ರೂ. ಮತ್ತು ವಿದೇಶಿ ದೇಣಿಗೆಯಾಗಿ 494.93 ಕೋಟಿ ರೂ. ಸಂಗ್ರಹವಾಗಿತ್ತು.
ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ, 2020ರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ಅನ್ನು ನೋಂದಣಿ ಕಾಯ್ದೆ 1908ರ ಅಡಿಯಲ್ಲಿ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾಯಿತು. ಪ್ರಧಾನಮಂತ್ರಿಯವರು ಈ ಟ್ರಸ್ಟ್‌ನ ಪದನಿಮಿತ್ತ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಪದನಿಮಿತ್ತ ಟ್ರಸ್ಟಿಗಳಾಗಿದ್ದಾರೆ.
