Home ದೇಶ ಚುನಾವಣಾ ಆಯೋಗ ಹಗರಣ | ಫಿಕ್ಸ್ ಆಗಿರೋ ಮ್ಯಾಚಿನಲ್ಲೂ ಆಡಿ ಆಟ ನ್ಯಾಯಯುತ ಅನ್ನಿಸುವ ಹಾಗೆ...

ಚುನಾವಣಾ ಆಯೋಗ ಹಗರಣ | ಫಿಕ್ಸ್ ಆಗಿರೋ ಮ್ಯಾಚಿನಲ್ಲೂ ಆಡಿ ಆಟ ನ್ಯಾಯಯುತ ಅನ್ನಿಸುವ ಹಾಗೆ ಮಾಡಿದ್ದೀರಿ: ವಿಪಕ್ಷಗಳ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ

0

ದೆಹಲಿ: ಚುನಾವಣಾ ಆಯೋಗದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಮತಗಳ್ಳತನದ ಆರೋಪಗಳ ನಡುವೆಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿರೋಧ ಪಕ್ಷಗಳ ನಿಲುವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಕಟುವಾಗಿ ಪ್ರಶ್ನಿಸಿದ್ದಾರೆ. ಚುನಾವಣೆಗಳು ಮೊದಲೇ ನಿರ್ಧಾರವಾಗಿದ್ದರೆ, ಅಂತಹ ಅಕ್ರಮ ಚುನಾವಣೆಗಳಲ್ಲಿ ಭಾಗವಹಿಸಿ ಅವುಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡುವುದನ್ನು ವಿಪಕ್ಷಗಳು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ಆಯೋಗದ ಇತರ ಆಯುಕ್ತರನ್ನು ಕಡೆಗಣಿಸಿದ್ದಾರೆ ಎಂಬ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರಕಟವಾದ ಬೆನ್ನಲ್ಲೇ, ಜ್ಞಾನೇಶ್ ಕುಮಾರ್ 48 ಗಂಟೆಗಳಲ್ಲಿ ರಾಜೀನಾಮೆ ನೀಡದಿದ್ದರೆ ‘ಜಂತರ್ ಮಂತರ್ 2.0’ ಪ್ರತಿಭಟನೆ ನಡೆಸುವುದಾಗಿ ದೀಪ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ತಮ್ಮ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಿಪಕ್ಷಗಳ ನಡೆಯನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

“ಹೌದು, ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಆದರೆ ಅಂತಹ ಮೋಸದ ಚುನಾವಣೆಗಳಲ್ಲಿ ನೀವೇ ಭಾಗವಹಿಸುತ್ತಾ ಹೋದರೆ, ಆ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿದೆ ಎಂದು ತೋರಿಸಲು ನೀವೇ ಸ್ವತಃ ಮಾನ್ಯತೆ ನೀಡಿದಂತಾಗುತ್ತದೆ” ಎಂದು ದೀಪ್ಕೆ ಹೇಳಿದ್ದಾರೆ.

ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ವಿಪಕ್ಷಗಳು ಇಂತಹ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆಯೇ ಎಂದು ಪ್ರಶ್ನಿಸಿದ ಅವರು, “ಮತಗಳು ಕಳ್ಳತನವಾಗುತ್ತಿರುವಾಗ, ನಿಮ್ಮದೇ ಶಾಸಕರು ಮತ್ತು ಸಂಸದರು ಬೇರೆ ಪಕ್ಷಗಳಿಗೆ ಜಿಗಿಯುತ್ತಿರುವಾಗ ಮತ್ತು ನಿಮ್ಮ ಪಕ್ಷಗಳೇ ಒಡೆಯುತ್ತಿರುವಾಗ ನೀವು ಯಾವ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದೀರಿ? ಇದು ರಾಜಕೀಯ ಅಸ್ತಿತ್ವದ ಪ್ರಶ್ನೆಯಲ್ಲ; ತನ್ನಿಷ್ಟದಂತೆ ನಿಮ್ಮ ಪಕ್ಷವನ್ನು ಒಡೆಯುವ, ನಿಮ್ಮ ಜನಪ್ರತಿನಿಧಿಗಳನ್ನು ಸೆಳೆದುಕೊಳ್ಳುವ ವ್ಯವಸ್ಥೆಯಲ್ಲಿ ನೀವು ಕೇವಲ ಜೀವಹಿಡಿದುಕೊಂಡು ಕೂರಲು ಪ್ರಯತ್ನಿಸುತ್ತಿದ್ದೀರಿ ಅಷ್ಟೇ,” ಎಂದಿದ್ದಾರೆ. ಯಾವುದೇ ರಾಜ್ಯ ಅಥವಾ ಪಕ್ಷಕ್ಕೆ ಸಂಬಂಧಿಸಿದ್ದರೂ ಚುನಾವಣಾ ಅಕ್ರಮಗಳ ವಿರುದ್ಧ ಸ್ಪಷ್ಟ ನಿಲುವು ತಳೆಯಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ಪ್ರಕ್ರಿಯೆಯನ್ನು ಮ್ಯಾಚ್ ಫಿಕ್ಸಿಂಗ್‌ಗೆ ಹೋಲಿಸಿದ ದೀಪ್ಕೆ, “ಫಿಕ್ಸ್ ಆದ ಪಂದ್ಯದಲ್ಲೂ ಆಟಗಾರರು ಒಂದು ಕ್ಯಾಚ್ ಕೂಡಾ ಬಿಡುವುದಿಲ್ಲ. ಪಂದ್ಯ ಸಮಬಲದಿಂದ ಕೂಡಿದೆ ಎಂದು ಜನರನ್ನು ನಂಬಿಸಲು ಕೆಲವು ಕ್ಯಾಚ್‌ಗಳನ್ನು ಹಿಡಿಯಲಾಗುತ್ತದೆ ಮತ್ತು ಆಟವನ್ನು ಕೊನೆಯ ಓವರ್‌ವರೆಗೂ ಕೊಂಡೊಯ್ಯಲಾಗುತ್ತದೆ. ಅದೇ ರೀತಿ, ನೀವು ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಲಿ ಮತ್ತು ಪೈಪೋಟಿ ನೈಜವಾಗಿದೆ ಎಂದು ಜನರಿಗೆ ಭಾಸವಾಗಲಿ ಎಂಬ ಕಾರಣಕ್ಕಾಗಿಯೇ ವಿಪಕ್ಷಗಳಿಗೆ ಕೆಲವೇ ಕೆಲವು ಗೆಲುವುಗಳನ್ನು ನೀಡಲಾಗುತ್ತದೆ. ಈ ಸಣ್ಣ ಪುಟ್ಟ ಗೆಲುವುಗಳೇ ನಿಮ್ಮನ್ನು ಈ ಆಟದಲ್ಲಿ ಉಳಿಸಿಕೊಂಡು ಇಡೀ ಚುನಾವಣಾ ಪ್ರಕ್ರಿಯೆಯನ್ನು ನ್ಯಾಯಸಮ್ಮತವೆಂದು ಬಿಂಬಿಸಲು ಬಳಕೆಯಾಗುತ್ತಿವೆ. ರಾಜಕೀಯ ಅಸ್ತಿತ್ವದ ಬಗ್ಗೆ ಯೋಚಿಸುವ ಮೊದಲು ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

You cannot copy content of this page

Exit mobile version