Home ದೇಶ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ: ಯೂಟ್ಯೂಬರ್ ಅಜಿತ್ ಭಾರತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ...

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ: ಯೂಟ್ಯೂಬರ್ ಅಜಿತ್ ಭಾರತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

0

ದೆಹಲಿ: ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಜಾತಿ ನಿಂದನೆ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಯೂಟ್ಯೂಬರ್ ಮತ್ತು ನಿರೂಪಕ ಅಜಿತ್ ಭಾರತಿಗೆ ದೆಹಲಿ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದ್ದು, ಮೇಲ್ನೋಟಕ್ಕೆ ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧ ಎಸಗಿರುವುದು ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ನಿರೀಕ್ಷಣಾ ಜಾಮೀನಿಗೆ ಇರುವ ಶಾಸನಬದ್ಧ ನಿರ್ಬಂಧವನ್ನು ಉಲ್ಲೇಖಿಸಿದ ನ್ಯಾಯಾಲಯವು, ಅಜಿತ್ ಭಾರತಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಇದಕ್ಕೂ ಮುನ್ನ ಸೆಪ್ಟೆಂಬರ್ 7 ರಂದು ವಿಚಾರಣಾ ನ್ಯಾಯಾಲಯವು ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹಾಲಿ ಸಂಸದರ ಜಾತಿ ಹಾಗೂ ಅವರ ವಿವಾಹದ ಅರ್ಹತೆಯ ಕುರಿತು ಮಾತನಾಡುತ್ತಾ, ಮೇಲ್ಜಾತಿಯ ಮಹಿಳೆಯನ್ನು ಮದುವೆಯಾಗಲು ಸಂಸದರು ಮೊದಲು “ಯೋಗ್ಯತೆ” ಬೆಳೆಸಿಕೊಳ್ಳಬೇಕು ಎಂದು ಅಜಿತ್ ಭಾರತಿ ನೀಡಿರುವ ಹೇಳಿಕೆಯು ನಿರ್ದಿಷ್ಟವಾಗಿ ಜಾತಿಯನ್ನು ಉದ್ದೇಶಿಸಿ ಮಾಡಲಾಗಿದೆ ಎಂದು ವಿಚಾರಣಾ ನ್ಯಾಯಾಲಯ ತಿಳಿಸಿತ್ತು.

ಈ ಹೇಳಿಕೆಗಳು ಮೇಲ್ನೋಟಕ್ಕೆ ಜಾತಿ ಶ್ರೇಣೀಕರಣವನ್ನು ಸಮರ್ಥಿಸುವಂತಿವೆ ಹಾಗೂ ವ್ಯಕ್ತಿಯೊಬ್ಬರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿವೆ ಎಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅಜಿತ್ ಭಾರತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲಿ ಭಾರತಿ ಪರ ವಾದ ಮಂಡಿಸಿದ ವಕೀಲ ಜೈ ಅನಂತ್ ದೇಹದ್ರಾಯ್, ಜಾತಿಯ ಆಧಾರದ ಮೇಲೆ ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆ ಎಂದು ಸಾಬೀತುಪಡಿಸದ ಹೊರತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(1)(r) ಅನ್ವಯಿಸುವುದಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರತಿ ಅವರ ಸಹೋದರಿಯನ್ನು ಗುರಿಯಾಗಿಸಿಕೊಂಡು ಬಂದಿದ್ದ ಆಕ್ಷೇಪಾರ್ಹ ಕಾಮೆಂಟ್‌ಗಳ ಹಿನ್ನೆಲೆಯಲ್ಲಿ ಈ ಮಾತುಗಳು ಹೊರಬಂದಿವೆ ಎಂದು ಪ್ರತಿಪಾದಿಸಿದರು.

ಆದರೆ ದೆಹಲಿ ಪೊಲೀಸರು ಮತ್ತು ದೂರುದಾರರ ಪರ ವಕೀಲರು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. ಈ ಹೇಳಿಕೆಗಳು ನಿರ್ದಿಷ್ಟ ಜಾತಿಯನ್ನು ಗುರಿಯಾಗಿಸಿಕೊಂಡು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ನೀಡಲಾಗಿದ್ದು, ಲಕ್ಷಾಂತರ ವೀಕ್ಷಕರನ್ನು ತಲುಪಿದೆ. ಆದ್ದರಿಂದ ಇದು ಕೇವಲ ವೈಯಕ್ತಿಕ ಸಂಭಾಷಣೆಯಲ್ಲ ಎಂದು ವಾದಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಆಗಸ್ಟ್ ತಿಂಗಳಲ್ಲಿ ಅಪ್‌ಲೋಡ್ ಮಾಡಲಾದ ಅಜಿತ್ ಭಾರತಿ ಅವರ ಕಾರ್ಯಕ್ರಮದ ವಿಡಿಯೋ ಹೇಳಿಕೆಗಳ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ ದೆಹಲಿಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 23 ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196(1)(ಸಿ) ಮತ್ತು 351(3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

You cannot copy content of this page

Exit mobile version