Home ದೇಶ ಅಮೆರಿಕ, ಜಪಾನ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತಿಲ್ಲವೇ?: ಬಿಹಾರ ಸಚಿವನಿಂದ ವಿವಾದಾತ್ಮಕ ಹೇಳಿಕೆ

ಅಮೆರಿಕ, ಜಪಾನ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತಿಲ್ಲವೇ?: ಬಿಹಾರ ಸಚಿವನಿಂದ ವಿವಾದಾತ್ಮಕ ಹೇಳಿಕೆ

0

ಪಾಟ್ನಾ: ಬಿಹಾರದಲ್ಲಿ ಹೆಣ್ಣುಮಕ್ಕಳ ಮೇಲಿನ ಸರಣಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ನಿತೀಶ್ ಕುಮಾರ್ ಸಂಪುಟದ ಸಚಿವರೊಬ್ಬರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಇತ್ತೀಚೆಗಷ್ಟೇ ಜಮುಯಿ ಜಿಲ್ಲೆಯಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಪುಂಡರು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಸಮಸ್ತಿಪುರ ಜಿಲ್ಲೆಯ ಜಗತ್‌ಸಿಂಗ್‌ಪುರ ಗ್ರಾಮದಲ್ಲಿ ಯುವಕನೊಂದಿಗೆ ರಸ್ತೆಯಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸ್ಥಳೀಯ ಪುಂಡರು ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಅಶೋಕ್ ಚೌಧರಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಅವರು ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ. “ಅಪರಾಧಗಳು ಹೊಸದೇನಲ್ಲ; ಇಂತಹ ಘಟನೆಗಳು ಕೇವಲ ಬಿಹಾರದಲ್ಲಿ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ಅಮೆರಿಕ ಮತ್ತು ಜಪಾನ್‌ನಲ್ಲೂ ನಡೆಯುತ್ತಿವೆ. ಆದರೂ ನಾವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ,” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಬೇಜವಾಬ್ದಾರಿಯುತವಾಗಿ ಮಾತನಾಡಿದ ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾಗುತ್ತಿವೆ. ಕಳೆದ ಐದು ತಿಂಗಳುಗಳಲ್ಲಿ ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

You cannot copy content of this page

Exit mobile version