Home ದೇಶ ಯುಪಿಐ ಎಂಡಿಆರ್ ಶುಲ್ಕ ವಿರೋಧಿಸಿ ಅಕ್ಟೋಬರ್ 2ರಂದು ದೇಶವ್ಯಾಪಿ ‘ನೋ ಯುಪಿಐ ಡೇ’ ಆಚರಿಸಲು ವ್ಯಾಪಾರಿಗಳ...

ಯುಪಿಐ ಎಂಡಿಆರ್ ಶುಲ್ಕ ವಿರೋಧಿಸಿ ಅಕ್ಟೋಬರ್ 2ರಂದು ದೇಶವ್ಯಾಪಿ ‘ನೋ ಯುಪಿಐ ಡೇ’ ಆಚರಿಸಲು ವ್ಯಾಪಾರಿಗಳ ಕರೆ

0

ದೆಹಲಿ: ಯುಪಿಐ (UPI) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಲು ಉದ್ದೇಶಿಸಿರುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಾರಿಗಳ ಆಕ್ರೋಶ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ದೇಶವ್ಯಾಪಿಯಾಗಿ ‘ನೋ ಯುಪಿಐ ಡೇ’ (No UPI Day) ಆಚರಿಸಲು ವಿವಿಧ ವ್ಯಾಪಾರ ಸಂಘಟನೆಗಳು ನಿರ್ಧರಿಸಿವೆ.

ಈ ದೇಶವ್ಯಾಪಿ ಪ್ರತಿಭಟನೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ವ್ಯಾಪಾರ ಸಂಘಟನೆಗಳು ಹಾಗೂ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂದು ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸ್ಥಗಿತಗೊಳಿಸಲಿದ್ದು, ತಮ್ಮ ಅಂಗಡಿಗಳಲ್ಲಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನರ್‌ಗಳು, ಸೌಂಡ್‌ಬಾಕ್ಸ್‌ಗಳು ಹಾಗೂ ಇತರ ಡಿಜಿಟಲ್ ಪಾವತಿ ಯಂತ್ರಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚುವ ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ವಿರೋಧವನ್ನು ದಾಖಲಿಸಲಿದ್ದಾರೆ. ಈ ಪ್ರತಿಭಟನೆಯ ಕುರಿತು ದೇಶದ ಹಲವು ವಾಣಿಜ್ಯ ಮಂಡಳಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ ಅಂಡ್ ಅಗ್ರಿಕಲ್ಚರ್ (MACCIA) ಅಧ್ಯಕ್ಷ ರವೀಂದ್ರ ಮಂಗ್ವೆ ತಿಳಿಸಿದ್ದಾರೆ.

ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟದ (AICPDF) ರಾಷ್ಟ್ರೀಯ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್ ಮಾತನಾಡಿ, ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ಅತ್ಯಂತ ಕಡಿಮೆ ಲಾಭದ (ಮಾರ್ಜಿನ್) ಆಧಾರದ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ ಎಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಹೆಚ್ಚುವರಿ ಶುಲ್ಕಗಳನ್ನು ಹೇರಿದರೆ ವ್ಯಾಪಾರ ನಡೆಸುವುದು ಆರ್ಥಿಕವಾಗಿ ಭಾರಿ ಹೊರೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅಖಿಲ ಭಾರತ ಖಾದ್ಯ ತೈಲ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಠಕ್ಕರ್ ಎಚ್ಚರಿಸಿದ್ದಾರೆ. ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘಗಳ ಒಕ್ಕೂಟ (FRTWA), ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ (AIMRA), ಅಖಿಲ ಭಾರತ ಆಭರಣ ಮತ್ತು ಚಿನ್ನದ ವ್ಯಾಪಾರಿಗಳ ಒಕ್ಕೂಟ (AIJGF) ಹಾಗೂ ಖಾದ್ಯ ತೈಲ ವ್ಯಾಪಾರಿಗಳ ಒಕ್ಕೂಟ ಸೇರಿದಂತೆ ಪ್ರಮುಖ ವಾಣಿಜ್ಯ ಸಂಸ್ಥೆಗಳು ಅಕ್ಟೋಬರ್ 2 ರ ‘ನೋ ಯುಪಿಐ ಡೇ’ ಹೋರಾಟಕ್ಕೆ ಅಧಿಕೃತ ಬೆಂಬಲ ಘೋಷಿಸಿವೆ.

You cannot copy content of this page

Exit mobile version