Home ರಾಜಕೀಯ ಪಶ್ಚಿಮ ಬಂಗಾಳ ಚುನಾವಣೆಗೆ 289.99 ಖರ್ಚು ಮಾಡಿದ ಬಿಜೆಪಿ: ಇದು ಕಾಂಗ್ರೆಸ್‌ ಒಟ್ಟಾರೆ ಐದು ರಾಜ್ಯಗಳಲ್ಲಿ...

ಪಶ್ಚಿಮ ಬಂಗಾಳ ಚುನಾವಣೆಗೆ 289.99 ಖರ್ಚು ಮಾಡಿದ ಬಿಜೆಪಿ: ಇದು ಕಾಂಗ್ರೆಸ್‌ ಒಟ್ಟಾರೆ ಐದು ರಾಜ್ಯಗಳಲ್ಲಿ ಮಾಡಿ ಖರ್ಚಿಗಿಂತಲೂ ಹೆಚ್ಚು!

0

ದೆಹಲಿ: ಈ ವರ್ಷದ ಆರಂಭದಲ್ಲಿ ನಡೆದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟಾರೆಯಾಗಿ 248.55 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇವಲ ಪಶ್ಚಿಮ ಬಂಗಾಳ ಒಂದರಲ್ಲೇ ಬರೋಬ್ಬರಿ 289.99 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ಸಲ್ಲಿಸಿರುವ ವೆಚ್ಚದ ವರದಿಗಳ ಪ್ರಕಾರ, ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ಸೇರಿ ಒಟ್ಟು ಐದು ಚುನಾವಣೆಗಳಿಗಾಗಿ ಬಿಜೆಪಿ ಒಟ್ಟು 529.38 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು ಪಶ್ಚಿಮ ಬಂಗಾಳಕ್ಕೇ ಬಳಕೆಯಾಗಿದೆ. ಬಂಗಾಳದಲ್ಲಿ ಸಾಮಾನ್ಯ ಪ್ರಚಾರಕ್ಕಾಗಿ 217.16 ಕೋಟಿ ರೂಪಾಯಿ ಮತ್ತು ಅಭ್ಯರ್ಥಿಗಳಿಗಾಗಿ 69.83 ಕೋಟಿ ರೂಪಾಯಿಗಳನ್ನು ಬಿಜೆಪಿ ವೆಚ್ಚ ಮಾಡಿದೆ.

2011ರಲ್ಲಿ ಅಧಿಕಾರ ಕಳೆದುಕೊಳ್ಳುವ ಮುನ್ನ ದಶಕಗಳ ಕಾಲ ಬಂಗಾಳವನ್ನು ಆಳಿದ್ದ ಸಿಪಿಐ(ಎಂ), 197 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು. ಅಭ್ಯರ್ಥಿಗಳ ವೆಚ್ಚವೂ ಸೇರಿದಂತೆ ಒಟ್ಟು 8.23 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ಸಿಪಿಐ(ಎಂ) ರಾಜ್ಯ ಘಟಕ ತಿಳಿಸಿದೆ. ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಚುನಾವಣಾ ವೆಚ್ಚದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಕೇರಳದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಪಕ್ಷಗಳು ಘೋಷಿಸಿರುವ ವೆಚ್ಚದ ಆಧಾರದಲ್ಲಿ ಕೇರಳದಲ್ಲಿ ವಿಭಿನ್ನ ಚಿತ್ರಣ ಕಂಡುಬಂದಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಅನ್ನು ಮಣಿಸಿದ್ದು, ಇದರಲ್ಲಿ ಕಾಂಗ್ರೆಸ್ 63 ಸ್ಥಾನಗಳು, ಸಿಪಿಐ(ಎಂ) 26 ಸ್ಥಾನಗಳು ಮತ್ತು ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿವೆ. ಕೇರಳದಲ್ಲಿ ಕಾಂಗ್ರೆಸ್ ತನ್ನ ಕೇಂದ್ರ ಕಚೇರಿ ಮತ್ತು ರಾಜ್ಯ ಘಟಕದ ಮೂಲಕ 105.34 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇದು ಬಿಜೆಪಿ ಅಲ್ಲಿ ಖರ್ಚು ಮಾಡಿದ 82.67 ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಕೇರಳದ ಪ್ರಮುಖ ಶಕ್ತಿಯಾಗಿರುವ ಸಿಪಿಐ(ಎಂ) ತನ್ನ ರಾಜ್ಯ ಘಟಕದ ಮೂಲಕ 28.60 ಕೋಟಿ ರೂಪಾಯಿ ಖರ್ಚು ಮಾಡಿದೆ.

ಬಂಗಾಳ ಮತ್ತು ಕೇರಳದಲ್ಲಿ ಮಾಡಿದ ವೆಚ್ಚಗಳ ಹೊರತಾಗಿ, ಅಸ್ಸಾಂನಲ್ಲಿ 96.27 ಕೋಟಿ ರೂಪಾಯಿ, ತಮಿಳುನಾಡಿನಲ್ಲಿ 51.56 ಕೋಟಿ ರೂಪಾಯಿ ಹಾಗೂ ಪುದುಚೇರಿಯಲ್ಲಿ 11.90 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

You cannot copy content of this page

Exit mobile version