ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಕೇಂದ್ರ ಸರ್ಕಾರವು ಹಂತ-ಹಂತವಾಗಿ ಇಲ್ಲವಾಗಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೋಟೆಲ್ ಅಶೋಕಾದಲ್ಲಿ ನಡೆದ ಶಾಸಕರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ನರೇಗಾ ಯೋಜನೆಯನ್ನು ಮರುಜಾರಿಗೊಳಿಸುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಲಾಗುವುದು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಈ ಯೋಜನೆಯು ಗ್ರಾಮೀಣ ಭಾಗದ ದಲಿತರು, ಮಹಿಳೆಯರು ಮತ್ತು ರೈತರಿಗೆ ವರ್ಷದಲ್ಲಿ ನೂರು ದಿನಗಳ ಉದ್ಯೋಗದ ಹಕ್ಕನ್ನು ನೀಡಿತ್ತು. ಈಗ ಕೇಂದ್ರ ಸರ್ಕಾರ ಜನರ ಉದ್ಯೋಗದ ಹಕ್ಕನ್ನೇ ಕಸಿದುಕೊಳ್ಳುತ್ತಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
“ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಗೊಂದಲ ಸೃಷ್ಟಿಸುವುದು ಬಿಜೆಪಿಯ ಹುನ್ನಾರವಾಗಿದೆ. ಈ ಮೂಲಕ ಗಾಂಧೀಜಿಯವರನ್ನು ಮತ್ತೊಮ್ಮೆ ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರ ಹೇಳಿಕೊಟ್ಟಿರುವ ಪಾಠ,” ಎಂದು ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದರು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಹಿಸದ ಶಕ್ತಿಗಳು ಈ ಕೆಲಸಕ್ಕೆ ಕೈಹಾಕಿವೆ ಎಂದು ಅವರು ಕಿಡಿಕಾರಿದರು.
ಈ ಯೋಜನೆಯ ರದ್ದತಿಯಿಂದ ದೇಶದ ಸುಮಾರು 28 ಕೋಟಿ ದಲಿತರಿಗೆ ಅನ್ಯಾಯವಾಗಿದೆ. ಕೇಂದ್ರದ ಈ ಸಂವಿಧಾನ ಬಾಹಿರ ಕ್ರಮದ ವಿರುದ್ಧ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಯಬೇಕಿದೆ. ಈ ಹೋರಾಟ ಕೇವಲ ಪ್ರತಿಭಟನೆಯಾಗದೆ ಒಂದು ಜನಾಂದೋಲನವಾಗಿ ರೂಪಗೊಳ್ಳಬೇಕು ಎಂದು ಶಾಸಕರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರು ನರೇಗಾ ಯೋಜನೆಯಡಿ ಕೆಲಸ ಮಾಡುವವರನ್ನು ತಲುಪಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಶಾಸಕರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿ ಸೂಚಿಸಿದರು.
